ಗುರುವಾರ , ನವೆಂಬರ್ 21, 2019
26 °C
ಮಾರಕಾಸ್ತ್ರಗಳಿಂದ ಕ್ಯಾಂಟರ್‌ ಚಾಲಕ ಮಹೇಶ್‌ ಕೊಲೆ ಪ್ರಕರಣ

ಇಬ್ಬರು ಹಂತಕರ ಕಾಲಿಗೆ ಗುಂಡೇಟು

Published:
Updated:
Prajavani

ಬೆಂಗಳೂರು: ಕಾಮಾಕ್ಷಿಪಾಳ್ಯದ ಕೆಬ್ಬೆಹಳ್ಳ ನಿವಾಸಿ, ಕ್ಯಾಂಟರ್ ಚಾಲಕ ಮಹೇಶ್‌ (35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಇಬ್ಬರು ಹಂತಕರನ್ನು ಕಾಲಿಗೆ ಗುಂಡು ಹೊಡೆದು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯದ ನಿವಾಸಿಗಳಾದ ಅಭಿ (24) ಮತ್ತು ಪ್ರವೀಣ್ (24) ಗುಂಡೇಟು ತಿಂದವರು.

ಹತ್ಯೆಯಾಗಿರುವ ಮಹೇಶ್ 2014ರಲ್ಲಿ ರಾಮನಗರದ ತಾವರಕೆರೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸೂರಿ ಮತ್ತು ಬಾಬು ಎಂಬುವರ ಕೊಲೆ ನಡೆದಿತ್ತು. ಅಣ್ಣನ ಜತೆಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಜೈಲುಸೇರಿದ್ದ. ಕಳೆದ ವರ್ಷ ಜೈಲಿನಿಂದ ಬಿಡುಗಡೆ ಆಗಿದ್ದು, ನಗರದಲ್ಲಿ ಕ್ಯಾಂಟರ್ ಚಾಲಕನಾಗಿದ್ದ.

ಮಹೇಶ್‌ ವಿರುದ್ಧ ದ್ವೇಷ ಸಾಧಿಸಲು ಸೂರಿ ಸಹಚರರಾದ ಅಭಿ, ಪ್ರವೀಣ್, ಸತೀಶ್, ಸ್ಲಂ ಭರತ ಕಾಯುತ್ತಿದ್ದರು. ಶುಕ್ರವಾರ (ಸೆ. 6) ರಾತ್ರಿ 10ಗಂಟೆ ಸುಮಾರಿಗೆ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಕೆಬ್ಬೆಹಳ್ಳಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಮಹೇಶ್‌ನನ್ನು ಎರಡು ಬೈಕ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಪೊಲೀಸರು, ಶನಿವಾರ ರಾತ್ರಿ ಆರೋಪಿ ಸತೀಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಮಾಹಿತಿ ಆಧರಿಸಿ ಭಾನುವಾರ ನಸುಕಿನಲ್ಲಿ ಕಾಮಾಕ್ಷಿಪಾಳ್ಯ ಕಾವೇರಿಪುರದ ಪೇಟೆ ಚಿನ್ನಪ್ಪ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ಅಭಿ ಮತ್ತು ಪ್ರವೀಣ್‍ನನ್ನು ಪತ್ತೆ ಹಚ್ಚಿದ್ದರು.

ಬಂಧಿಸಲು ತೆರೆಳಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಕಾನ್‌ಸ್ಟೆಬಲ್‌ ವಸಂತ್‌ ಕುಮಾರ್‌ ಕೈಗೆ ಇಬ್ಬರೂ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ಗಮನಿಸಿದ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಗೌತಮ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ, ಆರೋಪಿಗಳು ಮಾತು ಲೆಕ್ಕಿಸದೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.

ಆಗ ಗೌತಮ್ ಅವರು ಪ್ರವೀಣ್‌ನ ಎಡಕಾಲಿಗೆ ಗುಂಡು ಹಾರಿಸಿದರೆ, ಸಬ್ ಇನ್‌ಸ್ಪೆಕ್ಟರ್‌ ಅಂದಾನಿಗೌಡ ಆರೋಪಿ ಅಭಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಆರೋಪಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.

ರೌಡಿಶೀಟರ್‌ಗಳ ಕೃತ್ಯ

‌‘ಅಭಿ ಮತ್ತು ಪ್ರವೀಣ್‌ ಹೆಸರು ರಾಜಗೋಪಾಲನಗರ ಪೊಲೀಸ್‌ ಠಾಣೆಯ ರೌಡಿ ಶೀಟರ್‌ಗಳ ಪಟ್ಟಿಯಲ್ಲಿದೆ. ಇವರ ವಿರುದ್ಧ ಮೂರು ಕೊಲೆ, ಕೊಲೆಯತ್ನ ಸೇರಿ 12 ಪ್ರಕರಣಗಳು ದಾಖಲಾಗಿವೆ.

‘ಸತೀಶ್ ವಿರುದ್ಧವೂ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಮಹೇಶ್‌ ಕೊಲೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸ್ಲಂ ಭರತನಿಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)