ಪೊಲೀಸ್‌: ಅತ್ಯಂತ ಶಿಸ್ತಿನ ಇಲಾಖೆ: ಬಾಲಚಂದ್ರ ಅಭಿಮತ

ಶನಿವಾರ, ಏಪ್ರಿಲ್ 20, 2019
32 °C
ಪೊಲೀಸ್‌ ಧ್ವಜ ದಿನಾಚರಣೆ

ಪೊಲೀಸ್‌: ಅತ್ಯಂತ ಶಿಸ್ತಿನ ಇಲಾಖೆ: ಬಾಲಚಂದ್ರ ಅಭಿಮತ

Published:
Updated:
Prajavani

ಚಾಮರಾಜನಗರ: ‘ಪೊಲೀಸ್‌ ಇಲಾಖೆಯ ಕರ್ತವ್ಯಗಳು ಅತ್ಯಂತ ಸವಾಲಿನದ್ದಾಗಿದ್ದು‌, ಅಧಿಕಾರಿ ಮತ್ತು ಸಿಬ್ಬಂದಿ ಕೆಲವು ಬಾರಿ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ’ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಬಾಲಚಂದ್ರ ಅವರು ಮಂಗಳವಾರ ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್‌ ಇಲಾಖೆಯು ನಗರದಲ್ಲಿರುವ ಪೊಲೀಸ್‌ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ವಿವಿಧ ಇಲಾಖೆಗಳ ಪೈಕಿ ಅತ್ಯಂತ ಶಿಸ್ತುಬದ್ಧ ಇಲಾಖೆ ಎಂದರೆ ಅದು ಪೊಲೀಸ್‌ ಇಲಾಖೆ. ಈಗಿನ ಕಾಲದಲ್ಲಿ ಪೊಲೀಸ್‌ ಸಿಬ್ಬಂದಿ ಪ್ರತಿದಿನ ವಿವಿಧ ರೀತಿಯ ವ್ಯಕ್ತಿಗಳೊಂದಿಗೆ ಪ್ರತಿದಿನ ವ್ಯವಹರಿಸಬೇಕಾಗುತ್ತದೆ’ ಎಂದು ಹೇಳಿದರು. 

‘ನಮ್ಮ ಆಧುನಿಕ ಜೀವನ ಶೈಲಿಯಿಂದಾಗಿ ರಕ್ತದೊತ್ತಡ, ಮಧುಮೇಹ, ಹೃದ್ರೋಗದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಈ ಬಗ್ಗೆ ಪೊಲೀಸ್‌ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ನಾವು ಸೇವಕರು: ‘ಆಸೆಪಟ್ಟೋ ಅಥವಾ ಹೊಟ್ಟೆಪಾಡಿಗಾಗಿಯೋ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸರ್ಕಾರಿ ನೌಕರಿಯಲ್ಲಿರುವ ನಾವು ಜನರ ಸೇವಕರು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಹುದ್ದೆ, ಅಧಿಕಾರ ಯಾವತ್ತೂ ಜನಸೇವೆಗೆ ಅಡ್ಡಿಯಾಗಬಾರದು. ಸೇವಾಭಾವನೆಯಿಂದ ಕೆಲಸ ಮಾಡಿದರೆ ಜಯ ಸಿಕ್ಕೇ ಸಿಗುತ್ತದೆ’ ಎಂದು ಬಾಲಚಂದ್ರ ಹೇಳಿದರು.

‘ನಮ್ಮ ಯೋಗ್ಯತೆಗೆ ಅನುಗುಣವಾಗಿ ಸಿಕ್ಕಿದ ವೃತ್ತಿಯನ್ನು ಶ್ರದ್ಧೆ ಮತ್ತು ಪೂಜ್ಯ ಭಾವನೆಯಿಂದ ಮಾಡಿದರೆ ಸಂತೋಷ ಸಿಗುವುದರಲ್ಲಿ ಅನುಮಾನವಿಲ್ಲ’ ಎಂದರು.

‘ಸೇವೆಯಿಂದ ನಿವೃತ್ತರಾದ ಪೊಲೀಸ್‌ ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿರುವುದು ಅತ್ಯಂತ ಶ್ಲಾಘನೀಯ ಕೆಲಸ’ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಚಾಮರಾಜನಗರದ ಡಿಸಿಆರ್‌ಬಿ ನಿವೃತ್ತ ಎಎಸ್‌ಐ ಸಿ.ಪುಟ್ಟುಸ್ವಾಮಿ ಆರಾಧ್ಯ  ಮಾತನಾಡಿ, ‘ಪೊಲೀಸ್‌ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಪ್ರತ್ಯೇಕ ಆರೋಗ್ಯ ಕೇಂದ್ರ ತೆರೆಯುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಗಮನ ಹರಿಸಬೇಕು. ಇದರಿಂದ ಪೊಲೀಸ್‌ ಕುಟುಂಬದವರಿಗೆ ಅನುಕೂಲವಾಗಲಿದೆ’ ಎಂದು ಮನವಿ ಮಾಡಿದರು.

ಸನ್ಮಾನ: 2018–19ರ ಅವಧಿಯಲ್ಲಿ ಜಿಲ್ಲೆಯಲ್ಲಿ ಸೇವೆಯಿಂದ ನಿವೃತ್ತರಾದ 19 ಎಎಸ್‌ಐಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಐದು ಪೊಲೀಸ್‌ ತಂಡಗಳು ನಡೆಸಿದ ಪಥಸಂಚಲನ ಗಮನಸೆಳೆಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ, ಡಿವೈಎಸ್‌ಪಿಗಳಾದ ಸಿ.ಟಿ. ಜಯಕುಮಾರ್‌, ಪುಟ್ಟಮಾದಯ್ಯ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಇದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !