ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ಉಪ ಚುನಾವಣೆ: ಹಾವು–ಏಣಿಯಾಟ

* ಆರಂಭದಲ್ಲಿ ಹಿನ್ನಡೆ, ಕೊನೆಯಲ್ಲಿ ಮುನ್ನಡೆ * ಗೆದ್ದ ನಂತರವೇ ಕೇಂದ್ರಕ್ಕೆ ಬಂದ ಬಿಜೆಪಿ ಅಭ್ಯರ್ಥಿ
Last Updated 9 ಡಿಸೆಂಬರ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ವೇಳೆ ಒಮ್ಮೆ ಜೆಡಿಎಸ್‌, ಮಗದೊಮ್ಮೆ ಬಿಜೆಪಿ ಅಭ್ಯರ್ಥಿ ಮುನ್ನಡೆ ಗಳಿಸಿದರು. ಅಭ್ಯರ್ಥಿಗಳ ನಡುವಿನ ಹಾವು–ಏಣಿ ಆಟದಿಂದಾಗಿ ಈ ಕ್ಷೇತ್ರದ ಫಲಿತಾಂಶ ಕೊನೆ ಕ್ಷಣದವರೆಗೂ ಕುತೂಹಲದ ಕಣಜವಾಗಿತ್ತು.

ಆರಂಭದ 10 ಸುತ್ತುಗಳಲ್ಲಿ ಹಿಂದೆ ಉಳಿದು ಸೋಲುವ ಭೀತಿಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್‌, ಅಂತಿಮ 13 ಸುತ್ತುಗಳ ಎಣಿಕೆಯಲ್ಲಿ ಮುನ್ನಡೆ ಸಾಧಿಸಿ ಕೊನೆಗೂ ಗೆಲುವಿನ ನಗೆ ಬೀರಿದರು.

ಮೈಸೂರು ರಸ್ತೆಯ ಆರ್‌.ವಿ. ಎಂಜಿನಿಯರಿಂಗ್ ಕಾಲೇಜಿನ ಕೇಂದ್ರದಲ್ಲಿ ನಡೆದ ಮತ ಎಣಿಕೆ ಪ್ರತಿ ಸುತ್ತು ಮುಗಿದಾಗಲೂ ಹೊರ ಬೀಳುತ್ತಿದ್ದ ಮತಗಳ ವಿವರಗಳು ಅಭ್ಯರ್ಥಿಗಳ ಹಾಗೂ ಅವರ ಬೆಂಬಲಿಗರ ಎದೆ ಢವಗುಡುವಂತೆ ಮಾಡುತ್ತಿದ್ದವು.

ಮೊದಲೆರಡು ಸುತ್ತಿನ ಎಣಿಕೆ ಮುಕ್ತಾಯವಾಗುತ್ತಿದ್ದಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಟಿ.ಎನ್.ಜವರಾಯಿ ಗೌಡ ಅವರು ಸೋಮಶೇಖರ್ ಅವರಿಗಿಂತ 2,000 ಮತಗಳ ಮುನ್ನಡೆ ಸಾಧಿಸಿದ್ದರು. ಐದನೇ ಸುತ್ತಿನಲ್ಲೂ 3,632 ಮತಗಳ ಅಂತರ ಕಾಯ್ದುಕೊಂಡಿದ್ದರು. ನಂತರದ ಸುತ್ತುಗಳಲ್ಲಿ ಈ ಮುನ್ನಡೆ ಕಡಿಮೆಯಾಗುತ್ತಾ ಸಾಗಿತು. ಹತ್ತನೇ ಸುತ್ತಿನ ಅಂತ್ಯಕ್ಕೆ ಕೇವಲ 96 ಮತಗಳ ಮುನ್ನಡೆ ಇತ್ತು.

11ನೇ ಸುತ್ತಿನಲ್ಲಿ ಸೋಮಶೇಖರ್ ಅವರ ಗೆಲುವಿನ ಓಟ ಶುರುವಾಯಿತು. ಆ ಒಂದೇ ಸುತ್ತಿನಲ್ಲಿ ಅವರು ಪ್ರತಿಸ್ಪರ್ಧಿಗಿಂತ 2,698 ಮತಗಳ ಮುನ್ನಡೆ ಸಾಧಿಸಿದರು. ಬಳಿಕ, ಪ್ರತಿ ಸುತ್ತಿನಲ್ಲೂ ಅವರೇ ಮುಂದಿದ್ದರು.

ಕೊನೆಯ 23ನೇ ಸುತ್ತಿನ ಎಣಿಕೆ ಮುಗಿದಾಗ ಸೋಮಶೇಖರ್ 27,699 ಮತಗಳ ಅಂತರದಿಂದ ಎದುರಾಳಿ
ಯನ್ನು ಮಣಿಸಿ ಸತತ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾದರು.

ಗೆದ್ದ ನಂತರ ಕೇಂದ್ರಕ್ಕೆ ಬಂದರು: ಮತ ಎಣಿಕೆ ಆರಂಭಕ್ಕೂ ಮುನ್ನವೇ ಅಭ್ಯರ್ಥಿಗಳ ಏಜೆಂಟರು ಹಾಗೂ ಬೆಂಬಲಿಗರು ಕೇಂದ್ರಕ್ಕೆ ಬಂದಿದ್ದರು. ಜೆಡಿಎಸ್‌ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿಯ ಕೆಲವು ಕಾರ್ಯಕರ್ತರು ಕೇಂದ್ರದಿಂದ ಹೊರಟು ಹೋಗಿದ್ದರು. ಸೋಮಶೇಖರ್ ಅವರೂ ಕೇಂದ್ರದತ್ತ ಸುಳಿದಿರಲಿಲ್ಲ.

ಬಿಜೆಪಿ ಮುನ್ನಡೆ ಪಡೆಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪುನಃ ಕೇಂದ್ರದತ್ತ ಬರಲಾರಂಭಿಸಿದ್ದರು. ಮಧ್ಯಾಹ್ನ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಕೇಂದ್ರಕ್ಕೆ ಧಾವಿಸಿದಸೋಮಶೇಖರ್ ಕಾರ್ಯಕರ್ತರ ಜೊತೆ ಸೇರಿ ವಿಜಯೋತ್ಸವ ಆಚರಿಸಿದರು. ‌

ಬಿಜೆಪಿ ಧ್ವಜ ಹಿಡಿದು ಕೇಸರಿ ಶಾಲು ಧರಿಸಿದ್ದ ಕಾರ್ಯಕರ್ತರು, ಪಟಾಕಿ ಸಿಡಿಸಿ ಸೋಮಶೇಖರ್ ಅವರಿಗೆ ಹೂವು ಎರಚಿ ‘ಯಶವಂತಪುರದ ಹುಲಿ’ ಎಂದು ಘೋಷಣೆ ಕೂಗಿದರು. ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೇಂದ್ರದ ಆವರಣದಲ್ಲೇ ನೃತ್ಯ ಮಾಡಿ ಬಿಜೆಪಿ ಹಾಗೂ ಸೋಮಶೇಖರ್‌ ಪರ ಜೈಕಾರ ಹಾಕಿದರು.

ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿಗಳ ಏಜೆಂಟರು ಹಾಗೂ ಕಾರ್ಯಕರ್ತರು ಕೇಂದ್ರದಿಂದ ಒಬ್ಬೊಬ್ಬರಾಗಿ ಕಾಲ್ಕಿತ್ತರು.

ಮೂರು ಚುನಾವಣೆಯಲ್ಲೂ ಮುಖಾಮುಖಿ

ಸೋಮಶೇಖರ್ ಹಾಗೂ ಜವರಾಯಿ ಗೌಡ ಅವರು ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲೂ ಮುಖಾಮುಖಿ ಆಗಿದ್ದಾರೆ. ಮೂರರಲ್ಲೂ ಸೋಮಶೇಖರ್ ಅವರೇ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT