ಶನಿವಾರ, ಮೇ 15, 2021
24 °C
‌‘ಗ್ರ್ಯಾಂಡ್‌ ಫಿನಾಲೆ’

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್: ದಕ್ಷ್‌ ಚಾಂಪಿಯನ್‌, ಚಿನ್ಮಯ್‌ ದ್ವಿತೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತಮ ಪೈಪೋಟಿ ಕಂಡುಬಂದ ‘ಪ್ರಜಾವಾಣಿ’ ಆನ್‌ಲೈನ್‌ ಕ್ವಿಜ್‌ ಚಾಂಪಿಯನ್‌ಷಿಪ್‌ನ ‘ಗ್ರ್ಯಾಂಡ್‌ ಫಿನಾಲೆ’ಯಲ್ಲಿ ಬೆಂಗಳೂರು ವಲಯದ ವಿದ್ಯಾರ್ಥಿ ದಕ್ಷ್‌ ಶೆಟ್ಟರ್ ವಿಜೇತರಾದರು. ಶನಿವಾರ ನಡೆದ ಈ ಫೈನಲ್‌ನಲ್ಲಿ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದ ದಕ್ಷ್‌ ಕೊನೆಯವರೆಗೆ ಅದನ್ನು ಉಳಿಸಿಕೊಂಡು ಚಾಂಪಿಯನ್‌ ಎನಿಸಿದರು.

ಧಾರವಾಡ ವಲಯದ ಚಿನ್ಮಯ್ ಸುತಗಟ್ಟಿ ಅವರಿಗೆ ಎರಡನೇ ಮತ್ತು ದಾವಣಗೆರೆ ವಲಯದ ಆತ್ಮೀಕ್‌ ಟಿ.ಸೊಗೇದ್‌ ಅವರಿಗೆ ಮೂರನೇ ಸ್ಥಾನ ಒಲಿಯಿತು.

ಮೊದಲ ಮೂರು ಸ್ಥಾನ ಗಳಿಸಿದ ಈ ವಿದ್ಯಾರ್ಥಿಗಳು ಕ್ರಮವಾಗಿ ₹25 ಸಾವಿರ, ₹15 ಸಾವಿರ ಮತ್ತು ₹10 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಕುಲದೀಪ್ ಮಲ್ಯ (ಮೈಸೂರು ವಲಯ), ನಿಧಿ ನರೊನ್ಹಾ (ಮಂಗಳೂರು ವಲಯ), ದಿಶಾ (ಕಲಬುರ್ಗಿ ವಲಯ) ಮತ್ತು ಆರ್.ಎಸ್.ಜೀವಿತಾ (ತುಮಕೂರು ವಲಯ) ಅವರೂ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಇವರಿಗೆ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಕಳೆದ ತಿಂಗಳು ಪೂರ್ವಭಾವಿ ಹಂತದ ಸ್ಪರ್ಧೆಗಳು ಮತ್ತು ಈ ತಿಂಗಳ ಆರಂಭದಲ್ಲಿ ವಲಯ ಮಟ್ಟದ ಫೈನಲ್ ಸ್ಪರ್ಧೆಗಳು ನಡೆದಿದ್ದವು.

ಕ್ವಿಜ್ ಮಾಸ್ಟರ್‌ ಮೇಘವಿ ಮಂಜುನಾಥ್‌ ಅವರು ಸ್ಪರ್ಧೆಯನ್ನು ನಡೆಸಿಕೊಟ್ಟರು. 

ಅಂತಿಮ ಸುತ್ತಿನಲ್ಲಿ ಸ್ಪರ್ಧಿಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಮೊದಲ ಸುತ್ತಿನಲ್ಲೇ 10 ಪಾಯಿಂಟ್‌ ಮುನ್ನಡೆ ಸಾಧಿಸಿದ್ದ ದಕ್ಷ್‌ ಒಟ್ಟಾರೆ 85 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಚಿನ್ಮಯ್ ಹಾಗೂ ಆತ್ಮೀಕ್, ಅಂತಿಮ ಸುತ್ತಿನ ನಂತರ ತಲಾ 70 ಅಂಕ ಗಳಿಸಿದ್ದರು. ಎರಡನೇ ಸ್ಥಾನ ನಿರ್ಧಾರಕ್ಕಾಗಿ ಇವರಿಬ್ಬರಿಗೆ ಟೈಬ್ರೇಕ್‌ ರೂಪದಲ್ಲಿ ಮತ್ತೊಂದು ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಚಿನ್ಮಯ್ ಎರಡನೇ ಸ್ಥಾನ ಗಳಿಸಿದರು.

ಪ್ರತಿ ವರ್ಷ ವೇದಿಕೆ ಮೇಲೆ ನಡೆಯುತ್ತಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ಅನ್ನು, ಕೋವಿಡ್‌ ಸಾಂಕ್ರಾಮಿಕದ ಕಾರಣ ಈ ಬಾರಿ ಆನ್‌ಲೈನ್‌ ಮೂಲಕ ನಡೆಸಲಾಯಿತು. ಈ ಹಿಂದೆ, ತಲಾ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವು. ಆದರೆ, ಈ ಬಾರಿ ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕುತೂಹಲಕ್ಕೆ ಕಾರಣವಾಗಿತ್ತು.

ಝೂಮ್‌ ಆ್ಯಪ್‌ ಮೂಲಕ ಗ್ರ್ಯಾಂಡ್‌ ಫಿನಾಲೆಯ ವೀಕ್ಷಕರಾಗಿ ಭಾಗವಹಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿತ್ತು. ಆಗಾಗ ಅವರಿಗೂ ಪ್ರಶ್ನೆಗಳನ್ನು ಕೇಳಲಾಯಿತು. ಸರಿಯಾದ ಉತ್ತರಗಳನ್ನು ನೀಡಿದವರು ಬಹುಮಾನ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು