ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಆ ಬೆಟ್ಟದಲ್ಲಿ… ಪುಟಾಣಿ ರೈಲಿನಲ್ಲಿ..

ಶ್ರೀಧರ್. ಎಸ್. ಸಿದ್ದಾಪುರ Updated:

ಅಕ್ಷರ ಗಾತ್ರ : | |

ಹಳಿಗಳ ಮೇಲೆ ಮೆಲ್ಲಗೆ ತೆವಳುತ್ತಿದ್ದ ರೈಲು. ರೈಲಿಗೂ ತಮಗೂ ಸಂಬಂಧವೇ ಇಲ್ಲವೇನೊ ಎಂಬಂತೆ ಹಳಿಯ ಮೇಲೆಯೇ ನಿಶ್ಚಿಂತೆ ಯಿಂದ ಹೆಜ್ಜೆ ಹಾಕುವ ಜನ. ಹೂ ಪಕಳೆಗಳಿಂದ ಶೃಂಗಾರಗೊಂಡ ಬೀದಿ. ಬೀದಿ ಬದಿಯಲ್ಲಿ ಬೆಟ್ಟಕ್ಕೆ ಜೋತುಬಿದ್ದಂತಿರುವ ಮನೆಗಳ ಸಮುಚ್ಚಯ. ಮನೆಯ ಮುಂದೆ ಯಾರನ್ನೋ ಸ್ವಾಗತಿಸಲು ಕಾಯುತ್ತಿರುವಂತೆ ಕಾಣುವ ಬಣ್ಣ ಬಣ್ಣಗಳ ಹೂ ಕುಂಡಗಳ ಮೆರವಣಿಗೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಕಣಿವೆಯ ಸೌಂದರ್ಯ. ಅದಕ್ಕೆ ಮೀರಿಸುವಂತೆ ಟಿಬೇಟಿಯನ್ ಚಹರೆಯ ಸ್ಪುರದ್ರೂಪಿ ಹುಡುಗಿಯರ ಹಿಂಡು. ಮಂಜಿನ ಮುಸುಕಿನಿಂದ ಹೊಗೆ ಹೊಮ್ಮಿಸಿ ಹೊರ ಬರುವ ‘ಹಿಮಾಲಯನ್ ಕ್ವೀನ್’ ರೈಲು. ದೂರದಲ್ಲಿ ನಿರುಮ್ಮಳವಾಗಿ ಕುಳಿತಿದ್ದಂತೆ ಕಾಣುವ ಕಾಂಚನಗಂಗಾ ಪರ್ವತ…

ಪಶ್ಚಿಮಬಂಗಾಳದ ಡಾರ್ಜಿಲಿಂಗ್‌ನಲ್ಲಿ ಮುಂಜಾನೆ ಪುಟಾಣಿ ರೈಲಿನಲ್ಲಿ ಪಯಣಿಸುತ್ತಿದ್ದಾಗ ಕಂಡ ದೃಶ್ಯ ಗಳಿವು. ಆಗಲೇ ಅರ್ಥವಾಗಿದ್ದು ಈ ಸ್ಥಳವನ್ನು ‘ಬೆಟ್ಟದ ರಾಣಿ’ ಎಂದು ಏಕೆ ಕರೆಯುತ್ತಾರೆ ಎಂದು.

ಜಲಪಾಯ್‌ಗುರಿ ನಿಲ್ದಾಣದಿಂದ ಹೊರಟ ಆ ರೈಲಿನಲ್ಲಿ ಸಾಗುತ್ತಾ. ಸುತ್ತಲಿನ ಸುಂದರ ದೃಶ್ಯಗಳನ್ನು ಕಣ್ತುಂಬಿ ಕೊಳ್ಳುತ್ತಿದ್ದೆವು. ಸಮಯ ಉರುಳುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಹೊಟ್ಟೆ ಚುರುಗುಟ್ಟಲು ಆರಂಭಿ ಸಿತು. ಹಾಗಾಗಿ ಅಲ್ಲೇ ಸಿಕ್ಕಿದ ಮೊಮೊ (ಪ.ಬಂಗಾಳದ ವಿಶೇಷ ತಿನಿಸು) ಹೊಟ್ಟೆಗಿಳಿ ಸಿದೆವು. ಐದು ಗಂಟೆ ಪ್ರಯಾಣ ಮಾಡಿ, ಮಧ್ಯಾಹ್ನ 3ರ ಹೊತ್ತಿಗೆ ಡಾರ್ಜಿಲಿಂಗ್ ತಲುಪಿದೆವು. ತುಂತುರು ಮಳೆ ಶುರುವಾಯಿತು. ಜನ ಛತ್ರಿ ಹಿಡಿದು ಓಡಾಡುತ್ತಿದ್ದರು. ನಾವೂ ಒಂದೊಂದು ಛತ್ರಿ ಕೊಂಡೆವು.

ಮಳೆಯಿಂದಾಗಿ ಮೊದಲ ದಿನದ ನಮ್ಮೆಲ್ಲಾ ಯೋಜನೆ ತಲೆಕೆಳಗಾಗಿತ್ತು. ಆದರೂ 3 ಕಿ.ಮೀ ದೂರವಿರುವ ತೇನ್‌ಸಿಂಗ್ ಮತ್ತು ಎಡ್ಮಂಡ್ ಹಿಲರಿಗೆ ಸಂಬಂಧಿಸಿದ ಚಾರಣ ಪರಿಕರಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. 1953ರಲ್ಲಿ ಪ್ರಥಮಬಾರಿಗೆ ಮೌಂಟ್ ಎವರೆಸ್ಟ್ ಏರಿದ ತೇನ್‌ಸಿಂಗ್ ಹಾಗೂ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಬಳಸಿದ ಕೈಗವಸು, ಪಿಕಾಸಿ, ಹಗ್ಗ, ಟೆಂಟ್, ನೀರು ತುಂಬುವ ಬಾಟಲಿ.. ಎಲ್ಲವೂ ಅಲ್ಲಿದ್ದವು. ಪೈನ್ ಮರಗಳಿಂದ ಕೂಡಿದ ಈ ಜಾಗ ಒಂಥರಾ ಖುಷಿಕೊಟ್ಟಿತು.

ಅಲ್ಲಿಂದ ಹಿಮಾಲಯದಲ್ಲಿ ಮಾತ್ರ ವಾಸವಿರುವ ವಿಶಿಷ್ಟ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಹಿಮ ಚಿರತೆ, ಟಿಬೆಟಿನ್ ತೋಳ, ಹಿಮ ನಾಯಿ, ನೀಲಿ ಕುರಿ (ಬ್ಲೂ ಶಿಪ್, ಹೆಸರು ಮಾತ್ರ ನೀಲಿ) ಹುಲಿ ಸೇರಿದಂತೆ ಇನ್ನೂ ಅನೇಕ ಪ್ರಾಣಿಗಳನ್ನು ‘ಮಾತನಾಡಿಸಿ’ಕೊಂಡು ಬಂದೆವು. ಹುಲಿ ಯಂತೂ ನಮ್ಮ ಹತ್ತಿರವೇ ಬಂದಿದ್ದರಿಂದ, ಅದರ ಗಾಂಭೀರ್ಯ ವದನ, ರಾಜ ನಡಿಗೆ ಕಂಡು ನಿಬ್ಬೆರಗಾದೆವು.

ಗೂಮ್ ರೈಲು ನಿಲ್ದಾಣದಲ್ಲಿ...

ವಸಾಹುತು ಶಾಹಿ ಬ್ರಿಟಿಷ್ ಆಡಳಿತ ತಮ್ಮ ಅನುಕೂಲಕ್ಕೆ 1879 ರಲ್ಲಿ ಸ್ಥಾಪಿಸಿದ 610 ಮಿ. ಮೀಟರ್‌ನ ನ್ಯಾರೋಗೇಜ್ ರೈಲು ಇಲ್ಲಿನ ವಿಶೇಷ. ಡಾರ್ಜಿಲಿಂಗ್ ಮತ್ತು ಕಣಿವೆ ತಳದ ಜಲಪಾಯಿಗುರಿ ನಡುವೆ ಇದು ಸಂಚರಿಸುತ್ತದೆ. ಬಟೇಸಿಯಾ ಲೂಪ್‍ಗೆ ರೈಲು ಬಂದು ಒಂದು ಸುತ್ತು ಹಾಕಿ ಹೋಗುತ್ತೆ. ಇಲ್ಲೊಂದು ಸೈನಿಕ ಸ್ಮಾರಕವಿದೆ. ಒಬ್ಬರಿಗೆ ₹1200 ಚಾರ್ಜ್‌. ಮೋಡವಿಲ್ಲದ ದಿನಗಳಲ್ಲಿ ರೈಲಿನಲ್ಲಿನ ಪ್ರಯಾಣಾನುಭೂತಿ ಅದ್ಭುತ. ರೈಲಿನಲ್ಲಿ ಪ್ರಯಾಣಿಸುತ್ತಾ, ಎದುರಿಗೆ ಕಾಣುವ ಕಾಂಚನಗಂಗ ಪರ್ವತವನ್ನು ಕಣ್ತುಂಬಿಕೊಳ್ಳುವ ಅನುಭವ ವರ್ಣಿಸಲಸದಳ. ಸುತ್ತಲೂ ಮಂಜಿನ ಬೆಟ್ಟಗಳು, ಕೈಗೆಟುವ ಮೋಡಗಳು.. ನಾವು ಅಲ್ಲಿ ಇದ್ದಷ್ಟು ದಿನ ಮಂಜಿನ ಮೇಲೆಯೇ ತೇಲಿದ ಅನುಭವ.

ರೈಲು ತುಲುಪುವ ‘ಗೂಮ್’ ಸ್ಟೇಷನ್ ಭಾರತದ ಅತಿ ಎತ್ತರದ ನಿಲ್ದಾಣವೂ ಹೌದು. ಇದು ಸಮುದ್ರ ಮಟ್ಟದಿಂದ ಬರೋಬ್ಬರಿ 7,407 ಅಡಿ ಎತ್ತರದಲ್ಲಿದೆ. ಆ ನಿಲ್ದಾಣ, ಬಿಸಿಲ ಕೋಲುಗಳ ಬೀಳುವ ಬೆಳಗಿನ ಹೊತ್ತು ಮಂಜಿನ ರಗ್ ಹೊದ್ದು ಕುಳಿತಿತ್ತು. ಬಣ್ಣ ಬಳಿದುಕೊಂಡ ತರುಣ, ತರುಣಿಯರ ತಂಡ ನಮ್ಮ ಸ್ವಾಗತಕ್ಕಿದ್ದಂತೆ ಭಾಸವಾಯಿತು. ಬೀಡಿ ಸೇದಿದಂತೆ ಹೊಗೆಯುಗುಳುವ ಬೋಗಿಗಳು ನಿಂತಿದ್ದವು.

ನಿಲ್ದಾಣದ ಸನಿಹದಲ್ಲೇ ವಿಶೇಷ ರೈಲು ಸಂಗ್ರಾಹಲಯವಿದೆ. ಅಲ್ಲಿಗೆ ಇಣುಕಿ ಬಂದೆವು. ಬೆಟ್ಟದ ರೈಲಿನ (Mountain Railway) ಸಂಪೂರ್ಣ ಚರಿತ್ರೆಯ ಪರಿಚಯವಾಯ್ತು.

ಬೌದ್ಧ ಮಂದಿರದಲ್ಲಿ...

ಮಂಜಿನಿಂದ ಆಗಷ್ಟೇ ಎದ್ದಂತೆ ಕಾಣುತ್ತಿದ್ದ ಮಾನೆಸ್ಟ್ರಿ ನಮ್ಮನ್ನು ನೋಡಿ ನಗುತ್ತಿತ್ತು. ಇದು ಬುದ್ದ ನಡೆದಾಡಿದ ನಾಡು. ಮಾನೆಸ್ಟ್ರಿಗಳ ಬೀಡು. ಇಲ್ಲಿನ ವಿಚಿತ್ರ ವಿಶಿಷ್ಟ ಪದ್ದತಿಗಳು ಜಗತ್ತಿನ ಯಾವ ಭಾಗದಲ್ಲೂ ಕಾಣಲಾರೆವು. ದಾರಿಗುಂಟ ಶಾಲ್ ಮಾರುವವರು, ನೇಪಾಳಿ ಕುರ್ಫಿ (ಒಂದು ವಿಧಧ ಕತ್ತಿ) ಮಾರುವವರ ಮೆರವಣಿಗೆ. ಇವರನ್ನೆಲ್ಲಾ ದಾಟಿ ಬುದ್ಧನಿದ್ದಲ್ಲಿಗೆ ಹೋದರೆ ಕಣ್ಣು ಭಿನ್ನ ಕುಸರಿಯಿದ್ದ ಕುರ್ಫಿಯ ಮೇಲೆ ಬಿತ್ತು. ಕೊನೆಗೊಂದು ಕುರ್ಫಿ ಕೊಂಡು ಮನಸ್ಸಿಗೆ ಸಮಾಧಾನ ಮಾಡಿದೆ. ಮನೆಯ ಗೋಡೆಯ ಮೇಲೆ ರಾರಾಜಿಸಿದ ಆ ಕುರ್ಫಿ ಡಾರ್ಜಲಿಂಗ್‍ನ ನೆನಪಿನ ಚಿತ್ತಾರ ತರುತ್ತಲೇ ಇದೆ.

ಆದರೆ, ವಿಮಾನದೊಳಗೆ ಕುರ್ಫಿ ಒಯ್ಯಲು ಬಿಡುವುದಿಲ್ಲ ಎಂದು ಅರಿತಿದ್ದೆ. ಹಾಗಾಗಿ ಬಂಗಾಳಿ ಗೆಳೆಯನಿಗೆ ಅದನ್ನು ದಾಟಿಸಿ ಕೊರಿಯರ್ ಮಾಡಲು ತಿಳಿಸಿ ಬಚಾವಾದೆ.

ಓಹ್.. ನಿಮಗೆ ಮಾನೆಸ್ಟ್ರಿ, ಅಂದರೆ ಬೌದ್ಧಮಂದಿರದ ಬಗ್ಗೆ ಹೇಳಲೇ ಇಲ್ಲ. ಅದೊಂದು ವಿಶಾಲವಾದ ಒಳಾಂಗಣ ಹೊಂದಿರುವ ಮಂದಿರ. ಒಳಗೆ ಶಾಂತಚಿತ್ತನಾಗಿ ಕುಳಿತಿರುವ ಬುದ್ಧನ ವಿಗ್ರಹವಿತ್ತು. ದುಡ್ಡು ಹಿಡಿದು ನಗುವ ಪುಟಾಣಿ ಬುದ್ಧ ವಿಗ್ರಹವೂ ಜೊತೆಯಲ್ಲಿತ್ತು. ‌ಆ ಮಂದಿರಕ್ಕೆ ಬಂದಿದ್ದ ಕೆಲವರು ಬುದ್ದನಿಗೆ ‘7 ಅಪ್’ ಅರ್ಪಣೆ ಮಾಡಿದ್ದು ವಿಚಿತ್ರವೆನಿಸಿತು.

ಇಡೀ ಮಂದಿರ ವೀಕ್ಷಿಸಲು ಅರ್ಧ ದಿನವೇ ಬೇಕು. ಬುದ್ಧನ ಜೊತೆಗೆ ಧ್ಯಾನಿಸಿ, ಧರ್ಮ ಚಕ್ರ ತಿರುಗಿಸಿ ಪ್ರಾರ್ಥನೆ ಸಲ್ಲಿಸಿದೆವು. ಭಾಷೆ ತೊಡಕಿನಿಂದ ಹೆಚ್ಚೇನು ಕೇಳದೆ ಬೌದ್ಧ ಸ್ತೂಪ ನೋಡಲು ಅಲ್ಲಿಂದ ಹೊರಟು ನಿಂತೆವು.

ಹೋಗುವುದು?

ಬೆಂಗಳೂರಿನಿಂದ ಬಾಗ್ ಡೋಗ್ರಕ್ಕೆ ವಿಮಾನದಲ್ಲಿ ಪ್ರಯಾಣಿಸಬಹುದು. ಇಲ್ಲಿಂದ ಜಲಪಾಯಿಗುರಿ ರೈಲು ನಿಲ್ದಾಣಕ್ಕೆ 70 ಕಿ.ಮೀ ದೂರ. ಅಲ್ಲಿಂದ ರಸ್ತೆ ಮಾರ್ಗವನ್ನು ಹಿಡಿಯಬೇಕು.ದೇಶದ ಎಲ್ಲ ಕಡೆಯಿಂದ ಇಲ್ಲಿಗೆ ರೈಲು ಸಂಪರ್ಕವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು