ಭಾನುವಾರ, ಆಗಸ್ಟ್ 25, 2019
28 °C

ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ‘ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕರು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಬ್ಯಾಂಕ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಇಂಡಿಯನ್ ಬ್ಯಾಂಕ್ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಧಿಕ್ಕಾರ ಕೂಗಿ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.

ಚಾಮರಾಜನಗರ ಗಡಿ ಕನ್ನಡಿಗರ ಪ್ರದೇಶವಾಗಿದೆ. ಜಿಲ್ಲಾ ಕೇಂದ್ರದ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕರು ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಿಲ್ಲ. ನಮ್ಮ ಭಾಷೆಗೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು  ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ವಾರದೊಳಗೆ ಬ್ಯಾಂಕ್ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಸಾಲಸೌಲಭ್ಯಗಳನ್ನು ಬ್ಯಾಂಕ್ ಮೂಲಕ ನೀಡುತ್ತಿದೆ. ಅದರಂತೆ ಇಂಡಿಯನ್ ಬ್ಯಾಂಕಿಗೆ ಈಗಾಗಲೇ ಇದರ ಸಹಾಯಧನ ನೀಡಿದರೂ ಇಲ್ಲಿನ ವ್ಯವಸ್ಥಾಪಕರು ಫಲಾನುಭವಿಗಳಿಗೆ ಸಹಾಯಧನ ನೀಡಿಲ್ಲ. ಇದರಿಂದ ಫಲಾನುಭವಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಬೇಜಾವಾಬ್ದಾರಿತನದಿಂದ ವರ್ತಿಸುತ್ತಾರೆ. ಆದ್ದರಿಂದ, ಜಿಲ್ಲಾಡಳಿತ ಕೂಡಲೇ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ಸಿ.ಕೆ. ಮಂಜುನಾಥ್, ಸ್ವಾಮಿ, ಬಿ.ಎಲ್.ಮಹದೇವಸ್ವಾಮಿ, ಶಿವಣ್ಣ, ಗುಡ್ಡಯ್ಯ, ಕೇಶವ, ವೀರಭದ್ರ, ತಾಂಡವಮೂರ್ತಿ, ರವಿಚಂದ್ರ ಪ್ರಸಾದ್, ಚಾ.ರಾ.ಕುಮಾರ್, ದೊರೆ, ಪಾಪು ಪಾಲ್ಗೊಂಡಿದ್ದರು.

Post Comments (+)