ಚಿಕ್ಕಬಳ್ಳಾಪುರ: ಜೈಲ್ ಭರೋ - ಪ್ರತಿಭಟನಾಕಾರರ ಬಂಧನ

7

ಚಿಕ್ಕಬಳ್ಳಾಪುರ: ಜೈಲ್ ಭರೋ - ಪ್ರತಿಭಟನಾಕಾರರ ಬಂಧನ

Published:
Updated:
Deccan Herald

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಬುಧವಾರ ಜೈಲ್ ಭರೋ ಚಳವಳಿ ನಡೆಸಿದ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲಾಡಳಿತ ಭವನದ ಮುಂದೆ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ, 'ದೇಶದಲ್ಲಿ ಕಾರ್ಪೊರೇಟ್ ಕಂಪನಿಗಳ ಸಿಇಒ ರೀತಿ ವರ್ತಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು' ಎಂದು ಆಗ್ರಹಿಸಿದರು.

'ಚುನಾವಣೆ ಪೂರ್ವದಲ್ಲಿ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ, ಅಧಿಕಾರ ಸಿಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಸಾಧ್ಯವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ' ಎಂದು ಆರೋಪಿಸಿದರು.

'ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಘ ಪರಿವಾರದ ನೆರವಿನೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಗಾಳಿಗೆ ತೂರಿದೆ. ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದ ಅದೇ ಹಳಸಲು ಜಾಗತೀಕರಣ ನೀತಿಗಳನ್ನು ಮತ್ತಷ್ಟು ವೇಗವಾಗಿ ಜಾರಿಗೆ ತರುತ್ತಿದೆ' ಅಸಮಾಧಾನ ವ್ಯಕ್ತಪಡಿಸಿದರು.

'ಮಾತೆತ್ತಿದರೆ ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲಮನ್ನಾ ವಿಚಾರದಲ್ಲಿ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡಿದ್ದಾರೆ. ಪರಿಣಾಮ, ಸಾಲ ಮನ್ನಾ ಘೋಷಣೆ ನಂತರ ರಾಜ್ಯದಲ್ಲಿ 38 ರೈತರ ಆತ್ಮಹತ್ಯೆಗಳು ನಡೆದಿವೆ' ಎಂದು ಆಪಾದಿಸಿದರು.

ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರಾಕರಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿರುವ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರೇ ಖುದ್ದಾಗಿ ಬಂದು ನಮ್ಮ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು, ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.

ಬಳಿಕ ಸಚಿವರು ಪ್ರತಿಭಟನಾಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಅಹವಾಲು ಆಲಿಸಿದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ವಾಹನಗಳಲ್ಲಿ ಕರೆದೊಯ್ದು ನಗರ ಠಾಣೆ ಆವರಣದಲ್ಲಿ ಬಿಡುಗಡೆ ಮಾಡಿದರು.

***

ಬರಗಾಲ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಜೈಲ್‌ ಭರೋ
ರಾಯಚೂರು:
ಮುಂಗಾರು ವೈಫಲ್ಯದಿಂದ ರೈತರ ಸಂಕಷ್ಟಗಳು ಹೆಚ್ಚಾಗಿದ್ದು, ರಾಯಚೂರು ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಿಸಿ ಕೂಡಲೇ ಬರಗಾಲ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಸದಸ್ಯರು ಗುರುವಾರ ಜೈಲ್‌ಭರೋ ಹೋರಾಟ ನಡೆಸಿದರು.

ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಬೀಳುತ್ತಿಲ್ಲ. ಹೀಗಾಗಿ ಬಡವರು, ಸ್ತ್ರೀ ಸಂಘಗಳು ಪಡೆದಿರುವ ಸಾಲವನ್ನೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕರೆಪ್ಪ ಹಚ್ಚೊಳ್ಳಿ, ಎಚ್‌.ಪದ್ಮಾ, ಕೆ.ಜಿ. ವೀರೇಶ, ಎಂ.ಶರಣಗೌಡ, ಡಿ.ಎಸ್‌. ಶರಣಬಸವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !