ಸುದೀರ್ಘ ವಾರಾಂತ್ಯ ಕಳೆಯಲುಪುದುಚೆರಿ ಪ್ರವಾಸ

7

ಸುದೀರ್ಘ ವಾರಾಂತ್ಯ ಕಳೆಯಲುಪುದುಚೆರಿ ಪ್ರವಾಸ

Published:
Updated:
Deccan Herald

ಕರ್ನಾಟಕದ ಕರಾವಳಿ ನಿವಾಸಿಯಾದ ನನಗೆ ಸಮುದ್ರರಾಜನೆಂದೂ ಒಲುಮೆಯ ಸಖ. ಖುಷಿಗೂ. ದುಃಖಕ್ಕೂ ಜೊತೆಗಾರ. ಸೂರ್ಯಾಸ್ತದ ಸಮಯದಲ್ಲಿ ಉರಿಯುವ ಬೆಂಕಿಯುಂಡೆಯೊಂದು ನೀರಿನಲ್ಲಿ ಮುಳುಗುವಾಗ ‘ಚುಂಯ್’ ಎಂದು ಸದ್ದಾಗುವುದೆಂದು ಕಿವಿಯರಳಿಸಿ ಕೇಳಿಸಿಕೊಳ್ಳುತ್ತಿದೆ. ಅಲೆಗಳ ತೀರ ಎಂದೂ ನನಗೆ ಏಕತಾನತೆ ತರಲಿಲ್ಲ.

ಕೋವಲಂ ಕಡಲ ತೀರದ ಮನುಷ್ಯ ಮುಳುಗುವಂಥ ಆಳ ಮತ್ತು ಇದಕ್ಕೆ ತದ್ವಿರುದ್ಧವಾದ ಕಣ್ಣು ಹಾಯಿಸುವಷ್ಟು ದೂರ ನಡೆದು ಹೋದರೂ ಮೊಣಕಾಲವರೆಗೆ ಮಾತ್ರ ತೋಯಿಸಿಬಲ್ಲ ರಾಮೇಶ್ವರದ ತೀರ ಎರಡರಲ್ಲೂ ಮಿಂದಾಡಿದ್ದೆ.

ಬೆಂಗಳೂರಿನಿಂದ 320 ಕಿಮೀ ದೂರದಲ್ಲಿರುವ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಫ್ರೆಂಚ್ ವಸಾಹತುಗಳು ಪುದುಚೆರಿಯ ವಿಶೇಷ ಆಕರ್ಷಣೆ. ಫ್ರೆಂಚ್ ಭಾಷೆಯ ಬರಹದ ಅಂಗಡಿಯ ಬೋರ್ಡ್‌ಗಳು ಪೊಲೀಸರ ತಲೆಯ ಮೇಲಿನ ಕೆಂಪು ಟೊಪ್ಪಿ ಅವರ ಹೆಜ್ಜೆ ಗುರುತುಗಳಾಗಿ ಇನ್ನೂ ಉಳಿದಿವೆ.

ಈ ಕಾಲೊನಿಯ ಅಂಚಿನಲ್ಲಿಯೇ ಸುಮಾರು 1.5 ಕಿಮೀ ಉದ್ದದ ಬಂಗಾಳಕೊಲ್ಲಿ ಸಮುದ್ರ ತೀರವಿದೆ. ರಾಕ್ ಬೀಚ್. ಪ್ರೊಮನೇಡ್ ಬೀಚ್, ಪ್ಯಾರಡೈಸ್ ಬೀಚ್ ಎಂದರೆ ಎಲ್ಲವೂ ಇದೇ. ತೀರದುದ್ದಕ್ಕೂ ಸುಂದರವಾದ ರಸ್ತೆ ಮತ್ತು ರಸ್ತೆಯ ಅಂಚಿಗೇ ಅಂಗಡಿ ಮುಂಗಟ್ಟುಗಳು ಇರುವುದರಿಂದ ಮರಳಿನ ತೀರ ಇಲ್ಲಿಲ್ಲ. ಹಾಗಾಗಿ ಸಮುದ್ರದಲ್ಲಿ ಅಲೆಗಳ ತೆಕ್ಕೆಯಲ್ಲಿ ತೇಲಲು ಇಲ್ಲಿ ಸರ್ವಥಾ ಸಾಧ್ಯವಿಲ್ಲ. ಅಲ್ಲದೆ ಪೊಲೀಸ್ ಕಣ್ಣು ಪ್ರವಾಸಿಗರನ್ನು ಕಾಯುತ್ತಿರುತ್ತದೆ. ಫ್ರೆಂಚ್ ಸೈನಿಕರ ಬಲಿದಾನದ ನೆನಪಿನ ವಾರ್ ಮ್ಯೂಸಿಯಂ, ಫ್ರಾನ್ಸ್ ಗವರ್ನರ್ ಜನರಲ್‍ ಆಗಿದ್ದ ಜೋಸೆಫ್ ಫ್ರಾಂಕೋಯಿಸ್‍ ಡ್ಯೂಪ್ಲಿಕ್ಸ್‍ನ ಪುತ್ಥಳಿ, ಗಾಂಧಿ ತಾತನ ಪ್ರತಿಮೆ, ಈಗ ಕಾರ್ಯನಿರ್ವಹಿಸದಿದ್ದರೂ ತನ್ನ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿರುವ ದೀಪಸ್ತಂಭ ಕೂಡ ಇದೇ ತೀರದಲ್ಲಿದೆ.

12 ಕಿ.ಮೀ ದೂರದಲ್ಲಿರುವ ಚುನ್ನಂಬಾರ್ ಕಡಲ ಕಿನಾರೆಯಲ್ಲಿ ಮನದಣಿಯೆ ಆಡಬಹುದು. ಚುನ್ನಂಬಾರ್ ಹಿನ್ನೀರಿನ ಬೋಟ್‌ನಲ್ಲಿ 3 ಕಿ.ಮೀ. ಪಯಣಿಸಿದರೆ ಈ ಕಿನಾರೆಯನ್ನು ತಲುಪಬಹುದು. ಬೀಸುವ ತಂಗಾಳಿ, ಆಗಾಗ್ಗೆ ಮೇಲಕ್ಕೆ ನೆಗೆಯುವ ಮೀನುಗಳನ್ನು ನೋಡುತ್ತಾ ದೋಣಿಯಲ್ಲಿ ಪ್ರಯಾಣಿಸುವ ಸುಖವೇ ಬೇರೆ.  2004ರಲ್ಲಿ ಸುನಾಮಿಗೆ ಒಳಗಾದ ಕಡಲೂರು ಕಿನಾರೆ ಕೂಡ 
ಸಮುದ್ರ ಸ್ನಾನಕ್ಕೆ ಉತ್ತಮ ಸ್ಥಳ. ಮಕ್ಕಳಿಗೆ ಆಟ ಆಡುವ ವ್ಯವಸ್ಥೆ, ಕುದುರೆ, ಒಂಟೆ ಸವಾರಿಯ ಅವಕಾಶವೂ ಇಲ್ಲಿ ಉಂಟು.

ಬೀಚ್‌ ಹೊರತು ಇಲ್ಲಿ ಅರಬಿಂದೊ ಆಶ್ರಮ, ‘ಅರುವಿಲ್ಲೈ’ ಎಂಬ ಪ್ರಾರ್ಥನಾ ಮಂದಿರ, ಲಾಲ್‌ಬಾಗ್ ನೆನಪಿಸುವ ಬೊಟಾನಿಕಲ್ ಗಾರ್ಡನ್, ಸಾಹಸೀ ಮನೋಭಾವದವರಿಗೆ ಸ್ಕೂಬಾ ಡೈವಿಂಗ್, ಭಕ್ತಜನ ಸಮೂಹಕ್ಕೆ ಐತಿಹಾಸಿಕ, ಪೌರಾಣಿಕ ಮಹತ್ವವಿರುವ ದೇವಸ್ಥಾನಗಳು, ಚರ್ಚ್‌ಗಳು ಇವೆ. ಇಲ್ಲಿಂದ ಪ್ರತ್ಯೇಕ 100 ಕಿ.ಮೀ. ಅಂತರದಲ್ಲಿ ಮಹಾಬಲಿಪುರಂ, ಕಾಂಚೀಪುರಂ ಪ್ರವಾಸಿ ತಾಣಗಳಿವೆ. ಸಮಯಾವಕಾಶ ಇದ್ದರೆ ಇವೆರಡಕ್ಕೂ ಭೇಟಿ ಕೊಡಬಹುದು.

ನೆನಪಿರಲಿ; ‘ಕರ್ನಾಟಕದ ಕರಾವಳಿ ಸೂರ್ಯಾಸ್ತಮಾನಕ್ಕೆ ಹೆಸರುವಾಸಿಯಾದರೆ ಪುದುಚೆರಿ ಸೂರ್ಯೋದಯಕ್ಕೆ ಪ್ರಸಿದ್ಧಿ. ಹೇಗೂ ರಜೆ ನಿಧಾನವಾಗಿ ಎದ್ದರಾಯಿತು ಎಂದು ಮುಸುಕು ಹಾಕಿ ಮಲಗಿದರೆ ಅಂತಹ ಸುಂದರ ಕ್ಷಣದಿಂದ ವಂಚಿತರಾಗುವುದು ಖಚಿತ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !