ಭಾನುವಾರ, ಮಾರ್ಚ್ 7, 2021
19 °C

ವಿವಿಧೆಡೆ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಗುರುವಾರ ಸಿದ್ದಗಂಗಾ ಡಾ.ಶಿವಕುಮಾರಸ್ವಾಮಿಗಳವರ ಪುಣ್ಯಸ್ಮರಣೆ ನಡೆಯಿತು.

ಜಿಲ್ಲಾ ಆಸ್ಪತ್ರೆ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ನಂದಿನಿ ಕ್ಷೀರ ಕೇಂದ್ರದ ಬಳಿ ಡೈರಿ ಸ್ವಾಮಿ ಹಾಗೂ ಭಕ್ತರು ಶ್ರೀಗಳವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ರಾಜೇಂದ್ರ, ಜಿಲ್ಲಾ ವೈದ್ಯಾಧಿಕಾರಿ ಡಾ. ರಘುರಾಮ್, ಡಾ.ಮಹೇಶ್ ಡಾ.ಮಾರುತಿ. ರೈತ ಮುಖಂಡ ಸಿದ್ದರಾಜು, ಆಲೂರು ಮಲ್ಲು, ರಾಮಸಮುದ್ರ ಬಾಬು, ಜಿ.ಎಂ.ಶಂಕರ್, ಶಿವು, ವೀರಭದ್ರಸ್ವಾಮಿ, ಚಂದನ್, ಸೋಮು ಇದ್ದರು.

ಬೂದಂಬಳ್ಳಿ ಗ್ರಾಮ: ತಾಲ್ಲೂಕಿನ ಬೂದಂಬಳ್ಳಿಯಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಶ್ರೀಬಸವೇಶ್ವರ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ರೇಚಂಬಳ್ಳಿ ಮಠದ ಮಹದೇವಸ್ವಾಮಿ ಅವರು ಮಾತನಾಡಿ, ‘ಸಿದ್ದಗಂಗಾ ಶ್ರೀಗಳು ದೇಶ, ನಾಡು ಕಂಡಂತಹ ಶ್ರೇಷ್ಠ ಸಂತರಾಗಿದ್ದರು. ಶ್ರೀಗಳು ಹಲವು ವರ್ಷಗಳ ಕಾಲ ಲಕ್ಷಾಂತರ ಬಡವರಿಗೆ ಹಾಗೂ ಎಲ್ಲ ವರ್ಗದವರಿಗೆ ಆಶ್ರಯಕೊಟ್ಟು ವಿದ್ಯಾದಾನ, ಅನ್ನದಾನ ಮಾಡಿದ್ದಾರೆ’ ಎಂದರು.

ನಡೆದಾಡುವ ದೇವರರಾದ ಶ್ರೀಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪ್ರತಿಹಳ್ಳಿಯಲ್ಲೂ ಆಚರಣೆ ಮಾಡುವ ಮೂಲಕ ಸಮಾನತೆ, ಸಹಬಾಳ್ವೆ, ಸೋದರತೆ ಗುಣ ಹಳ್ಳಿಗಳಲ್ಲಿ ಬೇರೂರಬೇಕು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೂದಂಬಳ್ಳಿ ಶಂಕರ್, ಗೌಡಿಕೆ ಮಹದೇವಪ್ಪ, ಶಿವರುದ್ರ, ಮಲ್ಲು, ಬಸವರಾಜು, ವೈ.ಸಿ.ಮಹದೇವಪ್ಪ, ಪಟೇಲ್‌ ಬಸವಣ್ಣ, ರಾಜೇಶ್ ಇದ್ದರು.

ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸ್ನೇಹ ಬಳಗ: ‘ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿಗಳು ಇಡೀ ವಿಶ್ವಕ್ಕೆ ಪ್ರಸಿದ್ದವಾದ ದಾಸೋಹ ಮಾಡಿದ್ದಾರೆ. ಬಡಮಕ್ಕಳಿಗೆ ಆಶ್ರಯಕೊಟ್ಟ ಹೆಗ್ಗಳಿಕೆ ಶ್ರೀಗಳಿಗೆ ಸಲುತ್ತದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿರುವ ವಿಶ್ವಹಿಂದು ಪರಿಷತ್ ಶಾಲೆಯ ಸಮೀಪದ ಮೈದಾನದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸ್ನೇಹ ಬಳಗದ ವತಿಯಿಂದ ಗುರುವಾರ ನಡೆದ ಡಾ.ಶಿವಕುಮಾರಸ್ವಾಮಿಗಳವರ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶ, ನಾಡಿನ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುವುದನ್ನು ಶ್ರೀಗಳು ತಿಳಿದುಕೊಂಡು ವಿದ್ಯಾದಾನ, ಅನ್ನದಾನ ಸೇವೆಯನ್ನು ನಿರಂತರವಾಗಿ ಮಾಡುವ ಮೂಲಕ ಯಾವುದೇ ಜಾತಿ, ಧರ್ಮ ನೋಡದೆ ಅಪಾರ ಸೇವೆ ಮಾಡಿದ್ದಾರೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು. ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಶ್ರೀ, ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ಮಲ್ಲು, ಸಾಧನ ಸಂಸ್ಥೆ ಟಿ.ಜೆ.ಸುರೇಶ್, ಮುಖಂಡರಾದ ಸುರೇಶ್‌ಎನ್. ಋಗ್ವೇದಿ, ನೂರೊಂದು ಶೆಟ್ಟಿ, ಆರ್.ಸುಂದರ್,  ಡಾ.ಸುಗಂಧರಾಜು, ಸುರೇಶ್‌ ನಾಗ್, ಶಿವು, ಹರಿಪ್ರಸಾದ್, ಸಿ.ಡಿ.ಪ್ರಕಾಶ್, ಕರಿನಂಜನಪುರ ಕೂಸಣ್ಣ, ಅಂಬಳೆ ನಂಜುಂಡಸ್ವಾಮಿ, ಜನ್ನೂರು ಪುಟ್ಟು, ಹೊಸೂರು ಬಸವಣ್ಣ ಇದ್ದರು.

ಸಿದ್ದಗಂಗಾ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಗುರು ನಮನ: ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಗುರುವಾರ ಲಿಂಗೈಕ್ಯ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಎಲ್ಲ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು. ಬಾಳೆಕಂದು, ತಳಿರು, ತೋರಣಗಳನ್ನು ಕಟ್ಟಿ, ಬಣ್ಣ ಬಣ್ಣ ಚಿತ್ತಾರವನ್ನು ಬಿಡಿಸಿ ಶೃಂಗರಿಸಲಾಗಿತ್ತು.

ಬಡಾವಣೆ ಮತ್ತು ಮುಖ್ಯ ರಸ್ತೆಯಲ್ಲಿ ಶಿವಕುಮಾರಸ್ವಾಮಿಗಳ ಭಾವಚಿತ್ರ ರಾರಾಜಿಸುತ್ತಿತ್ತು. ಸಂಜೆ ಹೂವಿನ ಪಲ್ಲಕ್ಕಿಯಲ್ಲಿ ಶಿವಕುಮಾರಸ್ವಾಮಿಗಳ ಭಾವಚಿತ್ರವಿಟ್ಟು ನಂದಿಕಂಬ, ಡೋಲು ಕುಣಿತ, ಶಿವ ಭಜನೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಿತು. 

ದೀಕ್ಷೆ: 74 ಮಂದಿ ಶಿವ ದೀಕ್ಷೆಯನ್ನು ಶ್ರೀಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ನೀಡಲಾಯಿತು. 111 ವರ್ಷದ ಅಂಗವಾಗಿ ಗ್ರಾಮಸ್ಥರಿಗೆ 111 ಸಸಿಗಳನ್ನು ವಿತರಣೆ ಮಾಡಲಾಯಿತು.

ಧಾರ್ಮಿಕ ಸಭೆ : ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಗುರು ನಮನ ಕಾರ್ಯಕ್ರಮವನ್ನು ವಾಟಾಳ್ ಮಠದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಹರವೆ ಮಠದ ಸರ್ಪಭೂಷಣಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಮಾತನಾಡಿದರು.

ದೇವನೂರು ಮಠದ ಮಹಾಂತಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವಸ್ವಾಮೀಜಿ, ಜೆಎಸ್‌ಎಸ್ ಧಾರ್ಮಿಕ ದತ್ತಿಯ ಸೋಮಶೇಖರ ಸ್ವಾಮೀಜಿ, ಮೇಲಾಜಿಪುರದ ಮಹದೇವಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಧ್ಯಾಹ್ನ ಗ್ರಾಮಸ್ಥರು ಹಾಗೂ ಭಕ್ತರಿಗೆ ಸಹ ಪಂಕ್ತಿ ಭೋಜನಾ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಉಮ್ಮತ್ತೂರು ಗ್ರಾಮಸ್ಥರು, ಮುಖಂಡರು ಹಾಗೂ ಬಸವ ಬಳಗದ ಪದಾಧಿಕಾರಿಗಳು ಇದ್ದರು.

ಕಾಗಲವಾಡಿ ಗ್ರಾಮ: ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿ ಡಾ.ಶಿವಕುಮಾರಸ್ವಾಮಿಗಳವರ ಪುಣ್ಯ ಸ್ಮರಣೆಯನ್ನು ಗ್ರಾಮಸ್ಥರು ಹಾಗೂ ವೀರಶೈವ -ಲಿಂಗಾಯತ ಯುವ ಬಳಗದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಮುಖ್ಯ ವೃತ್ತದಲ್ಲಿ ಶ್ರೀಗಳ ಬೃಹತ್ ಭಾವಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಸ್ಥರು ಭಜನೆ ನೆರವೇರಿಸಿಕೊಟ್ಟರು. ಗ್ರಾಮಸ್ಥರು ಪೂಜೆ ಸಲ್ಲಿಸುವ ಮೂಲಕ ನಡೆದಾಡುವ ದೇವರಿಗೆ ಭಕ್ತಿ ಭಾವದಿಂದ ಸ್ಮರಣೆ ಮಾಡಿಕೊಂಡರು. ಬಳಿಕ ಗ್ರಾಮಸ್ಥರು ಮತ್ತು ಭಕ್ತರಿಗೆ ಸಹ ಪಂಕ್ತಿ ಭೋಜನಾ ವ್ಯವಸ್ಥೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ವೀರಶೈವ-ಲಿಂಗಾಯತ ಯುವ ಬಳಗ ಪದಾಧಿಕಾರಿಗಳು ಎಲ್ಲ ಕೋಮಿನ ಯಜಮಾನರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ದೊಡ್ಡರಾಯಪೇಟೆ ಗ್ರಾಮ: ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಶ್ರೀಗಳವರ ಪುಣ್ಯಸ್ಮರಣೆ ನಡೆಸಲಾಯಿತು. ಗುರುವಾರ ರಾತ್ರಿ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶುಕ್ರವಾರ ಮುಂಜಾನೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜಾಕೈಂಕರ್ಯ ನೆರವೇರಿತು. ಗ್ರಾಮದ ಬೀದಿಗಳಲ್ಲಿ ಎತ್ತಿನ ಗಾಡಿಯಲ್ಲಿ ಶ್ರೀಗಳವರ ಭಾವಚಿತ್ರವನ್ನು ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು