ಜಾತಿಯೋ ಜೀವನವೋ?

ಶನಿವಾರ, ಏಪ್ರಿಲ್ 20, 2019
30 °C

ಜಾತಿಯೋ ಜೀವನವೋ?

Published:
Updated:
Prajavani

* ನನಗೆ ಮನೆಯಲ್ಲಿ 11 ವರ್ಷದ ಕೆಳಗೆ ಮದುವೆ ಮಾಡಿದ್ದರು. ಆದರೆ ನಾನು ಮದುವೆಯಾದ ಹುಡುಗನಿಗೆ ಮದುವೆಗೆ ಮೊದಲೇ ಬೇರೆ ಹುಡುಗಿ ಜೊತೆ ಸಂಬಂಧ ಇತ್ತು. ಆ ಕಾರಣದಿಂದ ಅವನು ನನಗೆ ತುಂಬಾ ಹಿಂಸೆ ನೀಡುತ್ತಿದ್ದ. ಈ ವಿಷಯ ನನ್ನ ಮನೆಯಲ್ಲಿ ತಿಳಿದು ನನನ್ನು ತವರು ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಡೈವೊರ್ಸ್‌ ಕೊಡಿಸಿದರು. ಈಗ ನನಗೆ 42 ವರ್ಷ. ನನ್ನ ಬಾಲ್ಯ ಸ್ನೇಹಿತ ನನ್ನ ಪರಿಸ್ಥಿತಿ ನೋಡಿ ನನಗೆ ಬಾಳು ಕೊಡಲು ಮುಂದೆ ಬಂದಿದ್ದಾನೆ. ಆದರೆ ಆ ಹುಡುಗನ ಜಾತಿ ಬೇರೆ. ನಮ್ಮ ಮನೆಯಲ್ಲಿ ಹೆಣ್ಣಿಗೆ ಒಂದೇ ಸಾರಿ ಮದುವೆ ಎನ್ನುವುದು, ಮತ್ತೆ ಮದುವೆ ಬೇಡ ಎನ್ನುತ್ತಿದ್ದಾರೆ. ನನಗೆ ಮುಂದಿನ ಜೀವನಕ್ಕೆ ಸಂಗಾತಿ ಬೇಕು ಎನ್ನಿಸುತ್ತಿದೆ. ಆದರೆ ಮನೆಯವರು ಇದಕ್ಕೆ ಒಪ್ಪುತ್ತಿಲ್ಲ. ನಾನು ಬಿಎ ಓದಿದ್ದೇನೆ. ನನಗೆ ಸಮಾಜವನ್ನು ಹೇಗೆ ಎದುರಿಸಬೇಕು ಎಂದು ತಿಳಿಯುತ್ತಿಲ್ಲ. ನನ್ನ ಇಷ್ಟದಂತೆ ಹೋಗಿ ಆ ಹುಡುಗನನ್ನು ಮದುವೆಯಾದರೆ ನಾನು ಮನೆಯವರಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಏನು ಮಾಡಲಿ ಸಲಹೆ ಕೊಡಿ.

ಹೆಸರು, ಊರು ಬೇಡ

ನಿಮ್ಮ ಬಾಲ್ಯದ ಸ್ನೇಹಿತ ನಿಮಗೆ ಜೀವನ ಕೊಡಲು ಮುಂದೆ ಬಂದಿರುವುದು ನಿಜಕ್ಕೂ ಶ್ಲಾಘನೀಯ. ನೀವು ಅವರನ್ನು ಸ್ವೀಕರಿಸಬಹುದು. ಈ ವಿಷಯದ ಬಗ್ಗೆ ನಿಮ್ಮ ಮನೆಯ ಹಿರಿಯರ ಜೊತೆ ಮಾತನಾಡಿ ಅವರ ಮನವೊಲಿಸಿ. ವರ್ಷಗಳು ಉರುಳಿದಂತೆ ನಿಮಗೆ ಸಂಗಾತಿಯ ಸಾನಿಧ್ಯ ಬೇಕು. ಹಾಗಾಗಿ ನೀವು ಮರುಮದುವೆ ಆಗಬಹುದು. ನಾವು ಹೇಳುವುದೇನೆಂದರೆ ಈ ವಯಸ್ಸಿನಲ್ಲಿ ನಿಮ್ಮ ಒಳ್ಳೆಯದಕ್ಕಾಗಿ ನೀವು ನಿರ್ಧಾರ ತೆಗೆದುಕೊಳ್ಳಿ . ಆದರೆ ಆ ಹುಡುಗನ ಹಿನ್ನೆಲೆಯ ಬಗ್ಗೆ ಸರಿಯಾಗಿ ವಿಚಾರಿಸಿ. ಅವರು ಕೆಲಸದಲ್ಲಿ ಸೆಟಲ್ ಆಗಿದ್ದಾರಾ ಮತ್ತು ಮದುವೆಗೆ ಅವರ ಕುಟುಂಬದವರ ಸಹಕಾರವಿದೆಯೇ ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ಎಲ್ಲವೂ ಸರಿಯಿದೆ ಎನ್ನಿಸಿದರೆ ನಿಮ್ಮ ಪೋಷಕರನ್ನು ಒಪ್ಪಿಸಿ ಮರುಮದುವೆಯಾಗಿ.  ಅದರ ಜೊತೆ ನೀವು ಸ್ವತಂತ್ರರಾಗಿರುವುದರ ಬಗ್ಗೆಯೂ ಯೋಚಿಸಿ. ನಿಮಗಾಗಿ ಒಂದು ಕೆಲಸವನ್ನು ಹುಡುಕಿಕೊಳ್ಳಿ. ಈ ವಯಸ್ಸಿನಲ್ಲಿ ಅದು ನಿಮಗೆ ಸುಲಭವಲ್ಲ. ಆದರೆ ಪ್ರಯತ್ನ ಮಾಡುವುದನ್ನು ಬಿಡಬೇಡಿ.

* ನಾನು 3 ತಿಂಗಳ ಗರ್ಭಿಣಿ. ನನಗೆ ಯಾವಾಗಲೂ ನೆಗೆಟಿವ್ ಯೋಚನೆಗಳೇ ತಲೆಯಲ್ಲಿ ತುಂಬಿರುತ್ತವೆ. ನನ್ನ ಅತ್ತೆ ಒಂಥರಾ ಆಡುತ್ತಾರೆ. ನನಗೆ ಅಪ್ಪ ಅಮ್ಮ ಯಾರೂ ಇಲ್ಲ. ಸಂಬಂಧಿಕರ ನೆರವು ಇಲ್ಲ. ನನ್ನ ಗಂಡನೇ ನನಗೆ ಎಲ್ಲ. ಅತ್ತೆ ಎಲ್ಲದ್ದಕ್ಕೂ ಲೆಕ್ಕ ಹಾಕುತ್ತಾರೆ. ಸುಮ್ಮನೆ ದುಡ್ಡು ಖರ್ಚು ಎನ್ನುತ್ತಾರೆ. ನನಗೆ ತುಂಬಾ ಬೇಸರವಾಗಿ ಆಳುತ್ತೇನೆ. ಎಷ್ಟು ಕಂಟ್ರೋಲ್ ಮಾಡಿಕೊಂಡರೂ ಸಾಧ್ಯವಾಗುವುದಿಲ್ಲ. ನಾನು ಏನು ಮಾಡಬೇಕು?

ರಾಣಿ, ಊರು ಬೇಡ

ನೀವು ಜೀವನದ ತುಂಬಾ ಸುಂದರವಾದ ಹಂತದಲ್ಲಿದ್ದೀರಿ. ಆ ಹಂತವನ್ನು ಪೂರ್ತಿಯಾಗಿ ಅನುಭವಿಸಬೇಕು. ಗರ್ಭಿಣಿಯಾಗುವುದು ವರವಿದ್ದಂತೆ. ಆದರೆ ಈಗ ನಿಮಗೆ ತವರಿನ ಸಹಾಯವಿಲ್ಲ. ನಿಮಗೆ ಇರುವುದು ಗಂಡ ಮಾತ್ರ. ಅವರೇ ನಿಮಗೆ ಎಲ್ಲವೂ ಆಗಿದ್ದಾರೆ. ನಿಮಗೆ ನಿಮ್ಮ ಗಂಡನಿಂದ ಸಂಪೂರ್ಣ ಪ್ರೀತಿ, ಕಾಳಜಿ ಹಾಗೂ ಸಹಕಾರ ದೊರೆಯುತ್ತಿದೆ. ಆ ಕಾರಣದಿಂದ ನೀವು ಖುಷಿಯಿಂದ ಇರಬೇಕು. ಕುಟುಂಬ ಎಂದರೆ ಹೊಂದಾಣಿಕೆ ಹಾಗೂ ಸಣ್ಣಪುಟ್ಟ ಸಂಧಾನ ಮಾಡಿಕೊಳ್ಳುವುದು. ಸಣ್ಣ ಪುಟ್ಟ ವಿಷಯಗಳ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಹಂತದಲ್ಲಿ ನೀವು ಆರೋಗ್ಯವಂತರಾಗಿರುವುದು ತುಂಬಾ ಮುಖ್ಯ. ಸದಾ ಖುಷಿಯಿಂದಿರಲು ಪ್ರಯತ್ನಿಸಿ. ಈ ಸಮಯದಲ್ಲಿ ಒಳ್ಳೆಯ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು ಮಾಡಿ. ಇದು ನಿಮ್ಮ ಮಗುವಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಸದಾ ಒಳ್ಳೆಯ ಮಾತುಗಳನ್ನಾಡಿ, ಒಳ್ಳೆಯದನ್ನೇ ಕೇಳಿಸಿಕೊಳ್ಳಿ, ಒಳ್ಳೆಯದನ್ನೇ ನೋಡಿ. ಮನೆಯಲ್ಲಿನ ಅಸಹಜ ವಿಷಯಗಳ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ. ಸದಾ ಚಟುವಟಿಕೆಯಿಂದ ಇರಿ, ದೈನಂದಿನ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಯ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ಒಮ್ಮೆ ಮನೆಗೆ ಮಗು ಬಂದರೆ ಎಲ್ಲರೂ ಸಂತೋಷದಿಂದ ಇರುತ್ತಾರೆ ಹಾಗೂ ಬ್ಯುಸಿಯಾಗುತ್ತಾರೆ.

* ನನಗೆ 30 ವರ್ಷ. ಸ್ವಯಂ ಉದ್ಯೋಗಿ. ನನ್ನ ಸಮಸ್ಯೆ ಎಂದರೆ ನನಗೆ ಇಂದು ಮಾಡಿದ ಕೆಲಸವನ್ನು ನಾಳೆ ಮಾಡಲು ಮನಸ್ಸು ಬರುವುದಿಲ್ಲ. ಊಟ ಮಾಡುವುದು ಒಂದು ಬಿಟ್ಟು ಯಾವುದೇ ಕೆಲಸವನ್ನು ನಾಳೆ ಮಾಡಲು ಇಷ್ಟವಾಗುವುದಿಲ್ಲ. ಇದಕ್ಕೆ ಕಾರಣ ಏನು?

ಹೆಸರು, ಊರು ಬೇಡ

ಸೋಮಾರಿತನ ಹಾಗೂ ನಿರಾಸಕ್ತಿ ಈ ಎಲ್ಲದ್ದಕ್ಕೂ ಮುಖ್ಯ ಕಾರಣ. ನೀವು ಸ್ವ ಉದ್ಯೋಗಿಯಾಗಿದ್ದೀರಿ. ಈಗ ನೀವು ನಿಮ್ಮ ಉದ್ಯೋಗವನ್ನು ಬೆಳೆಸಲು ಹಾಗೂ ಸುಧಾರಿಸುವತ್ತ ಗಮನ ಹರಿಸಿ. ನೀವು ಈಗಾಗಲೇ ನಿಮ್ಮ ಉದ್ಯೋಗದಲ್ಲಿ ನೆಲೆ ಕಂಡುಕೊಂಡಿದ್ದರೆ ಆಗ ನೀವು ಉದ್ಯೋಗದ ಮೇಲೆ ಹೆಚ್ಚು ಗಮನ ಹರಿಸುವ ಅಗತ್ಯವಿಲ್ಲ. ಸಮಾಜಕ್ಕೆ ಏನಾದರೂ ಮಾಡುವತ್ತ ನಿಮ್ಮ ಚಿತ್ತವಿರಲಿ. ಹೊಸ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಿ. ಸಾಮಾಜಿಕವಾಗಿ ತೆರೆದುಕೊಳ್ಳುವುದರಿಂದ ನೀವು ಸೋಮಾರಿತನದಿಂದ ಹೊರ ಬರಲು ಸಾಧ್ಯವಾಗುತ್ತದೆ. ಜೊತೆಗೆ ಹೊಸ ಹೊಸ ಯೋಜನೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ಬೇಸರ ನಿಮ್ಮ ಬಳಿ ಸುಳಿಯುವುದಿಲ್ಲ. ನಿರಾಸಕ್ತಿಗೆ ಇರುವ ಇನ್ನೂ ಒಂದು ಕಾರಣವೆಂದರೆ ಅಸಮತೋಲಿತ ಡಯೆಟ್‌ ಹಾಗೂ ಫಿಟ್‌ನೆಸ್‌. ನೀವು ಎಷ್ಟು ಆರೋಗ್ಯಕರ ಆಹಾರವನ್ನು ಸೇವಿಸುತ್ತೀರಿ ಹಾಗೂ ನೀವು ದೈಹಿಕವಾಗಿ ಎಷ್ಟು ಫಿಟ್‌ ಇದ್ದೀರಿ ಎಂಬುದನ್ನು ಪರಿಶೀಲಿಸಿ. ಇಡೀ ದಿನ ಉಲ್ಲಾಸದಾಯಕರಾಗಿರಲು ಪ್ರತಿದಿನ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ. ಹಾಗಾಗಿ ಪ‍್ರತಿದಿನ ವ್ಯಾಯಾಮ ಹಾಗೂ ಆರೋಗ್ಯಕರ ಡಯೆಟ್‌ ಅನ್ನು ಪಾಲಿಸಿ. ಆಗ ಖಂಡಿತ ನೀವು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಗುರುತಿಸುತ್ತೀರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !