ಸೋಮವಾರ, ಜೂನ್ 21, 2021
29 °C
ರಫೇಲ್‌ ವಿಚಾರದಲ್ಲಿನ ಗೋ‍ಪ್ಯತೆಯು ಆತಂಕ ಉಂಟುಮಾಡುತ್ತದೆ

ರಫೇಲ್‌ ಖರೀದಿ ಒಪ್ಪಂದ: ದಾರಿ ತಪ್ಪಿಸಿದ್ದಲ್ಲ, ತಪ್ಪಿಹೋಗಿದ್ದು

ಕೆ.ವಿ. ಧನಂಜಯ್ Updated:

ಅಕ್ಷರ ಗಾತ್ರ : | |

ಫ್ರಾನ್ಸ್‌ನ ಡಾಸೊ ಕಂಪನಿಯಿಂದ 36 ಯುದ್ಧ ವಿಮಾನಗಳನ್ನು ಖರೀದಿಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಕೋರ್ಟ್‌ ತೀರ್ಪಿನ 25ನೇ ಪ್ಯಾರಾದಲ್ಲಿ, ‘ಬೆಲೆಯ ವಿವರಗಳನ್ನು ಮಹಾಲೇಖಪಾಲರ (ಸಿಎಜಿ) ಜೊತೆ ಈಗಾಗಲೇ ಹಂಚಿಕೊಳ್ಳಲಾಗಿದೆ.

ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲಿಸಿದೆ. ವರದಿಯ ಪರಿಷ್ಕೃತ ರೂಪವನ್ನು ಮಾತ್ರ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಅದು ಸಾರ್ವಜನಿಕ ಅವಗಾಹನೆಗೆ ಲಭ್ಯವಿದೆ’ ಎಂದು ಹೇಳಲಾಗಿದೆ. ಆದರೆ, ಇದರಲ್ಲಿ ಯಾವುದೂ ಸತ್ಯವಲ್ಲ. ಈ ಭಾಗವನ್ನು ತೆಗೆಯುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ.

‘ಬೆಲೆಯ ವಿವರಗಳನ್ನು ಸರ್ಕಾರ ಸಿಎಜಿ ಜೊತೆ ಹಂಚಿಕೊಂಡಿದೆ. ಸಿಎಜಿ ವರದಿಯನ್ನು ಪಿಎಸಿ ಅಧ್ಯಯನ ಮಾಡಿ, ‍ಪರಿಷ್ಕೃತ ಆವೃತ್ತಿಯನ್ನು ಸಂಸತ್ತಿನ ಹಾಗೂ ಸಾರ್ವಜನಿಕರ ಮುಂದೆ ಇರಿಸಲಾಗುತ್ತದೆ’ ಎಂದಷ್ಟೇ ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟನ್ನು ತಪ್ಪುದಾರಿಗೆ ಎಳೆಯಲಿಲ್ಲ ಎಂಬುದು ಸ್ಪಷ್ಟ. ‘ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸುತ್ತದೆ’ ಎಂಬುದು ಸಿಎಜಿ ವರದಿ ವಿಚಾರದಲ್ಲಿ ಸಾಮಾನ್ಯವಾಗಿ ಏನಾಗುತ್ತದೆ ಎಂಬುದನ್ನು ತಿಳಿಸುವ ಹೇಳಿಕೆ. ಪರಿಷ್ಕೃತ ಆವೃತ್ತಿಯನ್ನು ಸಂಸತ್ತಿನ ಮುಂದೆ ಇರಿಸಲಾಗುತ್ತದೆ ಮತ್ತು ಅದು ಸಾರ್ವಜನಿಕರ ಅವಗಾಹನೆಗೆ ಲಭ್ಯವಾಗುತ್ತದೆ ಎನ್ನುವುದು ಮುಂದೆ ಆಗುವುದಕ್ಕೆ ಸಂಬಂಧಿಸಿದ್ದು. ಅಲ್ಲಿ ಹೇಳಿದ್ದನ್ನು ‘ಸುಳ್ಳು’ ಎಂದು ಪರಿಗಣಿಸುವುದು ಕಷ್ಟ.

ಇದನ್ನೂ ಓದಿ: ಸುದೀರ್ಘ ಕಥನ, ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಸಾಮಾನ್ಯವಾಗಿ ಕೋರ್ಟ್‌ನಲ್ಲಿನ ಮನವಿಗಳಿಗೆ ಅರ್ಥ ಬರುವುದು, ಆ ಮನವಿಯನ್ನು ಯಾವ ಸಂದರ್ಭದಲ್ಲಿ ಮಾಡಲಾಯಿತು ಎಂಬುದನ್ನು ಆಧರಿಸಿ. ಇಲ್ಲಿ ಸರ್ಕಾರ ಆಡಿದ ಮಾತು ಸುಳ್ಳನ್ನು ಧ್ವನಿಸುವುದಿಲ್ಲ.

ಆದರೆ, ಕೋರ್ಟ್‌ ತನ್ನ ತೀರ್ಪಿನ 25ನೇ ಪ್ಯಾರಾದಲ್ಲಿ ಹೇಳಿರುವುದು ಇಡೀ ತೀರ್ಪಿನ ಆಧಾರ ಸ್ತಂಭಗಳಲ್ಲಿ ಒಂದು. ಹಾಗಾಗಿ, ಎಂದೂ ನಡೆಯದ ‘ಘಟನೆ’ಗಳನ್ನು ಆಧರಿಸಿರುವ ಸುಪ್ರೀಂ ಕೋರ್ಟ್‌ ತೀರ್ಪು ತನ್ನ ಆಧಾರ ಕಳೆದುಕೊಳ್ಳುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್‌ ತಾನು ನೀಡಿರುವ ತೀರ್ಪನ್ನು ಹಿಂಪಡೆದು, ಪ್ರಕರಣವನ್ನು ಪುನಃ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಾಗುತ್ತದೆ.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಾಗ ಇದ್ದ ಕಾನೂನಿನ ಕಾಲಘಟ್ಟಕ್ಕೆ ಈ ತೀರ್ಪು ಭಾರತವನ್ನು ಕೊಂಡೊಯ್ದಿದೆ. ಬೊಫೋರ್ಸ್‌ ಹಗರಣದ ನಂತರ ರಕ್ಷಣಾ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಕಾನೂನನ್ನು ದೇಶದಲ್ಲಿ ಬಲಪಡಿಸಲಾಯಿತು. ಖರೀದಿ ಪ್ರಕ್ರಿಯೆಗಳನ್ನು ವಿವಿಧ ಹಂತಗಳ ಆಡಳಿತಾತ್ಮಕ ಮತ್ತು ಸಂಸದೀಯ ಪರಿಶೀಲನೆಗಳಿಗೆ ಒಳಪಡಿಸಲಾಗಿದೆ.

ಆಶ್ಚರ್ಯದ ಸಂಗತಿಯೆಂದರೆ ಸರ್ಕಾರವು ಈ ಪ್ರಕರಣದಲ್ಲಿ ಸಿಎಜಿ ಎಂಬುದು ತನ್ನ ಒಂದು ಇಲಾಖೆ, ಅದು ತಾನು ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂಬ ಧಾಟಿಯಲ್ಲಿ ಮಾತನಾಡುತ್ತಿದೆ. ಆದರೆ, ಸಿಎಜಿ ಎಂಬುದು ಒಂದು ಸ್ವತಂತ್ರ ಸಂಸ್ಥೆ. ಸರ್ಕಾರ ಮಾಡಿದ ವೆಚ್ಚಗಳ ಪರಿಶೀಲನೆ ವೇಳೆ ಅದು ಸ್ವತಂತ್ರವಾಗಿ ಕೆಲಸ ಮಾಡಬೇಕು.

ರಹಸ್ಯ?: ಅಂತರರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾ ಉಪಕರಣಗಳ ಮಾರುಕಟ್ಟೆಗೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿ ಹೊರಹೊಮ್ಮಿದೆ. ಇದೇ ಸಂದರ್ಭದಲ್ಲಿ ಪಾರದರ್ಶಕತೆಯ ಅಳತೆಗೋಲಿನಲ್ಲಿ ಕಡಿಮೆ ಅಂಕವನ್ನೂ ಗಿಟ್ಟಿಸಿಕೊಂಡಿದೆ. ನಿರೀಕ್ಷಿತವಾಗಿಯೇ, ರಕ್ಷಣಾ ಒಪ್ಪಂದಗಳಲ್ಲಿನ ‘ಗೋಪ್ಯತೆ’ಯು ಭ್ರಷ್ಟಾಚಾರವು ದೊಡ್ಡ ಮಟ್ಟದಲ್ಲಿ ನಡೆಯಬಹುದಾದ ಸಾಧ್ಯತೆಯನ್ನು ತೆರೆದಿಡುತ್ತದೆ.

ಇದನ್ನೂ ಓದಿ: ಅಂತಿಮ ದರ ನಿಗದಿ ವೇಳೆ ನಿಯಮ ಕಡೆಗಣಿಸಿದ್ರಾ ಮೋದಿ?

ರಕ್ಷಣಾ ಒಪ್ಪಂದಗಳನ್ನು ಪರಿಶೀಲಿಸುವ ವೇಳೆ ನ್ಯಾಯಾಲಯಗಳ ವ್ಯಾಪ್ತಿ ಬೇರೆ ಕಡೆಗಳಲ್ಲಿ ಏನಿದೆ ಎಂಬುದರ ಬಗ್ಗೆ ನಮ್ಮ ಸುಪ್ರೀಂ ಕೋರ್ಟ್‌ಗೆ ಅರಿವಿದ್ದಂತಿಲ್ಲ. ಯುರೋಪಿನ ಅತಿದೊಡ್ಡ ರಕ್ಷಣಾ ಗುತ್ತಿಗೆದಾರ ಕಂಪನಿ ಬಿಎಇ ಸಿಸ್ಟಮ್ಸ್‌, ಸಾಗರೋತ್ತರ ರಕ್ಷಣಾ 
ವ್ಯವಹಾರಗಳಲ್ಲಿ ಭ್ರಷ್ಟಾಚಾರ ನಡೆಸಿದ್ದನ್ನು ಅಮೆರಿಕದ ನ್ಯಾಯಾಲಯವೊಂದರಲ್ಲಿ ಒಪ್ಪಿಕೊಂಡಿತು. ಅದಕ್ಕಾಗಿ ಆ ಕಂಪನಿಗೆ ದಂಡವನ್ನೂ ವಿಧಿಸಲಾಯಿತು. ಭಾರತಕ್ಕೆ ಸಂಬಂಧಿಸಿದಂತೆ ನಡೆಯುವ ರಕ್ಷಣಾ ವ್ಯವಹಾರಗಳ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವ ವಿಚಾರದಲ್ಲಿ ಬೇರೆ ದೇಶಗಳ ಕೋರ್ಟ್‌ಗಳ ಹಿನ್ನೆಲೆ ಹೆಚ್ಚು ಉತ್ತಮವಾಗಿದೆ. ಇಟಲಿಯ ಸರ್ಕಾರ ಶೇಕಡ 30ರಷ್ಟು ಪಾಲು ಹೊಂದಿರುವ ಫಿನ್‌ಮೆಕ್ಯಾನಿಕಾ ಕಂಪನಿಯ ಎರಡು ಉಪ ಕಂಪನಿಗಳಿಗೆ 2014ರಲ್ಲಿ ಇಟಲಿ ನ್ಯಾಯಾಲಯವೊಂದು ದಂಡ ವಿಧಿಸಿತು. ಉಪ ಕಂಪನಿಯ ಹೆಸರು ಓದುಗರಿಗೆ ಪರಿಚಿತ ಆಗಿರಬಹುದು – ಅಗಸ್ಟಾ ವೆಸ್ಟ್‌ಲ್ಯಾಂಡ್‌!

ಲಂಡನ್ನಿನ ನ್ಯಾಯಾಲಯವೊಂದು 2017ರಲ್ಲಿ ರೋಲ್ಸ್‌ ರಾಯ್ಸ್‌ ಕಂಪನಿಗೆ ದಾಖಲೆಯ ಮೊತ್ತದ ದಂಡ ವಿಧಿಸಿತು. ಕಂಪನಿಯು ಭಾರತ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿನ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಇದಕ್ಕೆ ಕಾರಣ.

ಇದನ್ನೂ ಓದಿ: ‘ರಫೇಲ್‌ ಖರೀದಿಯಲ್ಲಿ ಅಕ್ರಮವಿಲ್ಲ’ ಕಿಡಿ ಹಚ್ಚಿದ ಡಾಸೋ ಸಿಇಒ, ಸಮರಕ್ಕೆ ಮರುಜೀವ

ಅದಿರಲಿ, ರಫೇಲ್‌ ಒಪ್ಪಂದದಲ್ಲಿನ ಷರತ್ತುಗಳು ಏನಿದ್ದವು? ‘ರಾಷ್ಟ್ರದ ಹಿತಾಸಕ್ತಿ’ಯ ಕಾರಣದಿಂದಾಗಿ ಈ ಬಗ್ಗೆ ನಾವು ಅಜ್ಞಾನಿಗಳಾಗಿ ಇರಬೇಕು ಎಂದು ಕೇಂದ್ರ ಸರ್ಕಾರ – ಈಗ ಸುಪ್ರೀಂ ಕೋರ್ಟ್‌ ಕೂಡ– ಬಯಸುತ್ತಿದೆ. ನೀವು ಒಂದು ಅಂಗಡಿಯಿಂದ ಆ್ಯಪಲ್‌ ಐಫೋನ್‌ ಖರೀದಿಸಿದಿರಿ ಎಂದು ಭಾವಿಸೋಣ. ಆದರೆ, ಐಫೋನ್‌ ಮಾದರಿ ಯಾವುದು ಎಂಬುದು ಬಹಿರಂಗಪಡಿಸುವುದಿಲ್ಲ. ಐಫೋನ್‌ನ ಬೇರೆ ಬೇರೆ ಮಾದರಿಗಳ ಬೆಲೆ ನಿಗದಿಗೆ ಒಂದು ಮಾನದಂಡ ಇರುವ ಕಾರಣ, ಬೆಲೆ ಎಷ್ಟು ಎಂಬುದನ್ನು ಊಹಿಸಬಹುದು. ಆದರೆ, ಯುದ್ಧ ವಿಮಾನಗಳ ಬೆಲೆ ವಿಚಾರದಲ್ಲಿ ಮಾನದಂಡಗಳು ಇರುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ರಕ್ಷಣಾ ಒಪ್ಪಂದಗಳಲ್ಲಿ ಯುದ್ಧ ವಿಮಾನಗಳ ಬೆಲೆ ಒಂದು ರೀತಿಯಲ್ಲಿ ಮಾಪನ ಇಲ್ಲದೆ ನಿಗದಿಯಾಗುತ್ತದೆ.

ಅಲ್ಲದೆ, ರಕ್ಷಣಾ ತಂತ್ರಜ್ಞಾನಗಳಿಗೆ ಇಂದು ಬೇರೆಯವೇ ಆದ ಕಾನೂನು ಹಾಗೂ ಸಾಂಸ್ಥಿಕ ಚೌಕಟ್ಟು ಇವೆ. ರಕ್ಷಣಾ ಉಪಕರಣಗಳ ತಯಾರಕ ಕಂಪನಿಯೊಂದರ ಬಳಿ ನಿರ್ದಿಷ್ಟ ತಂತ್ರಜ್ಞಾನ ಇದೆಯೇ ಎಂಬುದು ನ್ಯಾಯಾಲಯಗಳ ಗ್ರಹಿಕೆಗೆ ನಿಲುಕದ ವಿಷಯವೇನೂ ಅಲ್ಲ.

ಡಾಸೊ ಏವಿಯೇಷನ್ ಎಂಬುದು ಕೂಡ ತನ್ನ ಷೇರುದಾರರಿಂದ ಹೆಚ್ಚಿನ ಡಿವಿಡೆಂಡ್‌ಗೆ ಬೇಡಿಕೆ ಇರಿಸಿಕೊಳ್ಳುವ ಒಂದು ಕಂಪನಿ. ಆ ಕಾರಣದಿಂದಾಗಿ, ಭಾರತ ವಿರೋಧಿ ಶಕ್ತಿಗಳಾದ ಪಾಕಿಸ್ತಾನ ಅಥವಾ ಚೀನಾದ ಜೊತೆ ಡಾಸೊ ಕಂಪನಿ ರಕ್ಷಣಾ ವ್ಯವಹಾರ ನಡೆಸುವುದನ್ನು ತಡೆಯುವ ನಿಯಮಗಳೇನಾದರೂ ಒಪ್ಪಂದದಲ್ಲಿ ಇವೆಯೇ ಎಂಬುದನ್ನು ತಿಳಿಯುವ ಕುತೂಹಲ ಭಾರತದ ಯೋಧರಲ್ಲೂ ಮೂಡಬಹುದು. ಬೇರೆ ದೇಶಗಳಲ್ಲಿ ಆಗಿರುವುದನ್ನು ಕಂಡಾಗ, ರಫೇಲ್‌ ವಿಚಾರದಲ್ಲಿನ ಗೋ‍ಪ್ಯತೆಯು ತೀರಾ ಆತಂಕ ಉಂಟುಮಾಡುವಂಥದ್ದು. ಉದಾಹರಣೆಗೆ, ರಕ್ಷಣಾ ಒಪ್ಪಂದಗಳಲ್ಲಿ ಅಕ್ರಮ ನಡೆದರೆ ಅಮೆರಿಕದಲ್ಲಿ ಕಠಿಣ ಶಿಕ್ಷೆ ಇದೆ. ಹೀಗಿದ್ದರೂ, ಅಕ್ರಮ ಎಸಗಿದ್ದಕ್ಕಾಗಿ ಹಿಂದೆ ದಂಡ ಪಾವತಿಸಿದ ಕಂಪನಿಗಳಿಗೇ ಪುನಃ ರಕ್ಷಣಾ ಗುತ್ತಿಗೆ ಸಿಕ್ಕಿದೆ ಎಂಬುದು 2011ರ ಅಮೆರಿಕ ಸರ್ಕಾರದ ವರದಿಯೊಂದು ಹೇಳುತ್ತದೆ. ಭಾರತದ ವಿಚಾರದಲ್ಲಿ ತಮಾಷೆಯ ದನಿಯಲ್ಲಿ ಒಂದು ಮಾತು ಹೇಳಬೇಕು. ಗಣರಾಜ್ಯೋತ್ಸವದ ದಿನ ನಡೆಯುವ ಪಥಸಂಚಲನದಲ್ಲಿ ರಫೇಲ್ ಯುದ್ಧ ವಿಮಾನಗಳು ಪಾಲ್ಗೊಳ್ಳುತ್ತವೆಯೇ? ಅವುಗಳ ಸಾಮರ್ಥ್ಯ ಹಾಗೂ ಬೆಲೆಯ ಬಗ್ಗೆ ಆಗ ಊಹೆ ಮಾಡುವ ಕೆಲಸಗಳು ಶುರುವಾಗಿಬಿಡುವುದಿಲ್ಲವೇ?!

ರಫೇಲ್‌ ವಿಚಾರವಾಗಿ, ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸ್ವೀಕರಿಸಬೇಕು. ಸರ್ಕಾರವನ್ನು ಟೀಕಿಸುವ ಕೆಲಸ ಮಾಡಬಾರದು. ಮತ್ತು ಈಗಿರುವ ತೀರ್ಪನ್ನು ಹಿಂಪಡೆಯಬೇಕು.

(ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು