ಮೆಟ್ರೊದತ್ತ ಬಿಡಲಿಲ್ಲ, ಜೈಕಾರ ನಿಲ್ಲಲಿಲ್ಲ

7
ರಾಹುಲ್‌ಗಾಗಿ ಚಪ್ಪಲಿ ತ್ಯಜಿಸಿದ ಹರಿಯಾಣ ಯುವಕ

ಮೆಟ್ರೊದತ್ತ ಬಿಡಲಿಲ್ಲ, ಜೈಕಾರ ನಿಲ್ಲಲಿಲ್ಲ

Published:
Updated:
Deccan Herald

ಬೆಂಗಳೂರು: ರಾಹುಲ್ ಗಾಂಧಿಯ ಕಾರ್ಯಕ್ರಮಕ್ಕಾಗಿ ಕಬ್ಬನ್ ಪಾರ್ಕ್‌ ಮೆಟ್ರೊ ನಿಲ್ದಾಣದ (ಬಿಎಸ್‌ಎನ್‌ಎಲ್‌ ಕಚೇರಿ ದ್ವಾರ) ಎದುರಿನ ಮಿನ್ಕ್ಸ್‌ ವೃತ್ತದ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿತ್ತು. ಮೆಟ್ರೊಕ್ಕೆ ಹೋಗಬೇಕಿದ್ದ ಪ್ರಯಾಣಿಕರು, ನಿಲ್ದಾಣಕ್ಕೆ ಹೋಗಲಾರದೇ ರಸ್ತೆಯಲ್ಲೇ ಕಾಯುತ್ತ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಕಬ್ಬನ್‌ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಇನ್ಫೆಂಟ್ರಿ ರಸ್ತೆ ಮೂಲಕ ಬಂದ ಪ್ರಯಾಣಿಕರು, ನಿಲ್ದಾಣದತ್ತ ಹೋಗಲು ಮುಂದಾಗಿದ್ದರು. ಪೊಲೀಸರು, ಅವರನ್ನು ನಿಲ್ದಾಣದಿಂದ ದೂರದಲ್ಲೇ ತಡೆದು ನಿಲ್ಲಿಸಿದರು. ಅರ್ಧ ಗಂಟೆ ರಸ್ತೆಯಲ್ಲೇ ಕಾಯುತ್ತ ನಿಂತಿದ್ದ ಪ್ರಯಾಣಿಕರು, ರಾಹುಲ್ ಸ್ಥಳದಿಂದ ನಿರ್ಗಮಿಸಿದ ಬಳಿಕವೇ ನಿಲ್ದಾಣಕ್ಕೆ ಹೋದರು. ಜೊತೆಗೆ, ಈ ರಸ್ತೆಗಳಲ್ಲಿ ಸಂಚಾದ ದಟ್ಟಣೆಯೂ ಉಂಟಾಗಿತ್ತು.

ಮಕ್ಕಳು– ವೃದ್ಧರೊಂದಿಗೆ ಬಂದಿದ್ದ ಸಾರ್ವಜನಿಕರು, ಸಂಚಾರ ನಿರ್ಬಂಧದಿಂದಾಗಿ ತೊಂದರೆ ಅನುಭವಿಸಿದರು. ಕೆಲವರು, ರಸ್ತೆ ಪಕ್ಕದಲ್ಲೇ ಕುಳಿತುಕೊಂಡು, ’ಪೊಲೀಸರು ಯಾವಾಗ ಬಿಡುತ್ತಾರೆ‘ ಎಂದು ಕಾಯುತ್ತಿದ್ದದ್ದು ಕಂಡುಬಂತು.

ಮಧ್ಯಾಹ್ನ 3.55 ಗಂಟೆಗೆ ರಾಹುಲ್,  ಮಿನ್ಕ್ಸ್‌ ವೃತ್ತದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ಸ್ಥಳಕ್ಕೆ ಬಂದರು. ಅದಕ್ಕೂ ಮುನ್ನ 15 ನಿಮಿಷ, ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಯಿತು. ರಾಹುಲ್, ಕಾರ್ಯಕ್ರಮಕ್ಕೆ ಹೋದ ನಂತರ ಪುನಃ ಸಂಚಾರಕ್ಕೆ ಅವಕಾಶ ನೀಡಲಾಯಿತು. ಕಾರ್ಯಕ್ರಮ ಮುಗಿಯುವ ವೇಳೆಯಲ್ಲೂ 15 ನಿಮಿಷ ಸಂಚಾರ ನಿರ್ಬಂಧಿಸಿದ್ದರಿಂದಾಗಿ ವೃತ್ತದಲ್ಲೇ ದಟ್ಟಣೆಯೂ ಕಂಡುಬಂತು.

ಇನ್ನು ರಾಹುಲ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಜೈಕಾರವೂ ಜೋರಾಗಿತ್ತು. ಭದ್ರತೆ ಕಾರಣಕ್ಕಾಗಿ ಕಾರ್ಯಕರ್ತರನ್ನು ಕಾರ್ಯಕ್ರಮದ ಸ್ಥಳದಿಂದ 100 ಮೀಟರ್ ದೂರದಲ್ಲಿ ನಿಲ್ಲಿಸಲಾಗಿತ್ತು. 

ರಾಹುಲ್ ಗಾಂಧಿ ಮುಖವಾಡ ಧರಿಸಿದ್ದ ಕಾರ್ಯಕರ್ತರು, ‘ಜಸ್ಟಿಸ್‌ ಫಾರ್ ಎಚ್‌ಎಎಲ್ – ರಫೆಲ್‘ ಎಂಬ ನಾಮಫಲಕ ಪ್ರದರ್ಶಿಸಿ ಘೋಷಣೆ ಕೂಗಿದರು. ಕಾರಿನಲ್ಲೇ ಕುಳಿತು ಅವರತ್ತ ಕೈ ಬೀಸಿದ ರಾಹುಲ್, ಮುಂದೆ ಸಾಗಿದರು.  

ಕಬ್ಬನ್ ಉದ್ಯಾನ ಪ್ರವೇಶ ಬಂದ್‌:  ಮಿನ್ಕ್ಸ್‌ವೃತ್ತಕ್ಕೆ ಹೊಂದಿಕೊಂಡಿರುವ ಕಬ್ಬನ್ ಉದ್ಯಾನದ ಕೆಲವು ದ್ವಾರಗಳಲ್ಲಿ ಸಾರ್ವಜನಿಕರ ಪ್ರವೇಶ (ಹೈಕೋರ್ಟ್‌ ಮುಂಭಾಗ, ಹಿಂಭಾಗ ಹಾಗೂ ಬಾಲಭವನ ಎದುರಿನ ಪ್ರವೇಶ ದ್ವಾರ) ನಿರ್ಬಂಧಿಸಲಾಗಿತ್ತು. ಆ ಮಾರ್ಗವಾಗಿ ಹೊರಟಿದ್ದ ಪ್ರಯಾಣಿಕರು, ಸುತ್ತಿ ಬಳಸಿ ಉದ್ಯಾನಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. 

ರಾಹುಲ್ ಪ್ರಧಾನಿ ಆಗುವವರೆಗೂ ಚಪ್ಪಲಿ ಧರಿಸಲ್ಲ: ಕಾರ್ಯಕರ್ತನ ಶಪಥ

ಕಾಂಗ್ರೆಸ್ ಪಕ್ಷದ ಬಾವುಟ ಹೋಲುವ ಬಟ್ಟೆ ಧರಿಸಿ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದ ಹರಿಯಾಣದ ದಿನೇಶ್‌ ಶರ್ಮಾ, ಬಾವುಟ ಹಿಡಿದು ಕಾರ್ಯಕ್ರಮಕ್ಕೆ ಬಂದಿದ್ದರು. ಪೊಲೀಸರು, ಅವರಿಗೆ ಕಾರ್ಯಕ್ರಮಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಕಣ್ತಪ್ಪಿಸಿ ಹೊರಟಿದ್ದ ಅವರನ್ನು ಗಮನಿಸಿದ ಪೊಲೀಸರು, ಎಳೆದುಕೊಂಡು ಹೋಗಿ ಸ್ಥಳದಿಂದ ಬೇರೆಡೆ ಕಳುಹಿಸಿದರು. 

‘ಪ್ರಜಾವಾಣಿ’ ಜೊತೆ ಮಾತನಾಡಿದ ದಿನೇಶ್, ‘ರಾಹುಲ್‌ ಗಾಂಧಿ ಅವರು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಕ್ಕೂ ನಾನು ಹೋಗುತ್ತೇನೆ. ಅವರು ಪ್ರಧಾನಿ ಆಗುವವರೆಗೂ ಚಪ್ಪಲಿ ಧರಿಸುವುದಿಲ್ಲವೆಂದು ಶಪಥ ಮಾಡಿದ್ದೇನೆ’ ಎಂದರು.

’ನಮ್ಮ ದೇಶಕ್ಕೆ ರಾಹುಲ್‌ ಅವರಂಥ ನಾಯಕ ಬೇಕು. ಮನೆ, ಜಮೀನು, ಕುಟುಂಬ ತೊರೆದು ಅವರನ್ನು ಹಿಂಬಾಲಿಸುತ್ತಿದ್ದೇನೆ. ಈಗಾಗಲೇ 13 ರಾಜ್ಯಗಳನ್ನು ಸುತ್ತಿದ್ದೇನೆ’ ಎಂದು ಹೇಳಿದರು. 

‘ರಫೇಲ್‌ ಎಚ್‌ಎಎಲ್‌ ಹಕ್ಕು’

‘ರಫೇಲ್‌ ಯುದ್ಧವಿಮಾನ ತಯಾರಿಸುವ ಹೊಣೆ ಎಚ್‌ಎಎಲ್‌ಗೆ ಸಿಗಬೇಕಿತ್ತು. ಅದು ಎಚ್‌ಎಎಲ್‌ ಹಕ್ಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಪಾದಿಸಿದರು.

‘ದೇಶದಲ್ಲಿ ರಫೇಲ್‌ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹಾಗೂ ಅನುಭವ ಇರುವುದು ಎಚ್‌ಎಎಲ್‌ಗೆ ಮಾತ್ರ’ ಎಂದು ಅವರು ಹೇಳಿದರು.

‘ಆಡಳಿತ ಮಂಡಳಿಯ ಒತ್ತಡದ ಕಾರಣದಿಂದ ಅನೇಕ ಮಂದಿ ಸಂವಾದಕ್ಕೆ ಬರಲಿಲ್ಲ. ಎಚ್‌ಎಎಲ್‌ ಆಡಳಿತ ಮಂಡಳಿಯ ಮೇಲೂ ಒತ್ತಡ ಇರುವುದು ನನಗೆ ಗೊತ್ತು. ಆದರೆ, ನಿಮಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂಬುದು ಆಡಳಿತ ಮಂಡಳಿಗೆ ಗೊತ್ತಿರಲಿ’ ಎಂದರು.

ಅಂಬೇಡ್ಕರ್‌ ಜಯಂತಿಗೆ ಬನ್ನಿ: ರಾಹುಲ್‌ಗೆ ಆಹ್ವಾನ

ಎಚ್‌ಎಎಲ್‌ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫೆಡರೇಷನ್‌ ವತಿಯಿಂದ ಇದೇ 27ರಂದು ಅಂಬೇಡ್ಕರ್‌ ಜಯಂತಿ ಆಯೋಜಿಸಲಾಗಿದ್ದು, ಅದಕ್ಕೆ ರಾಹುಲ್‌ ಗಾಂಧಿ ಬರಬೇಕು ಎಂದು ಅಧ್ಯಕ್ಷ ಶಿವಲಿಂಗಯ್ಯ ಮನವಿ ಮಾಡಿದರು. ಇದಕ್ಕೆ ರಾಹುಲ್‌ ಅವರದ್ದು ನಗುವೇ ಉತ್ತರವಾಗಿತ್ತು.

***

ಎಚ್‌ಎಎಲ್‌ನ ವಿಮಾನ ತಯಾರಿಕೆ ವಿಭಾಗದಲ್ಲಿ 3 ಸಾವಿರ ನೌಕರರು ಇದ್ದಾರೆ. ಕೇಂದ್ರ ಸರ್ಕಾರದ ಧೋರಣೆಯಿಂದ ಒಂದು ವರ್ಷದಿಂದ ಕೆಲಸವಿಲ್ಲದೆ ಕುಳಿತಿದ್ದಾರೆ. 

ಶಿವಲಿಂಗಯ್ಯ, ಎಚ್‌ಎಎಲ್‌ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫೆಡರೇಷನ್‌ ಅಧ್ಯಕ್ಷ 

ಎಚ್‌ಎಎಲ್‌ ಶ್ರೇಷ್ಠ ದರ್ಜೆಯ ವಿಮಾನಗಳನ್ನು ತಯಾರಿಸಿದೆ. ರಷ್ಯಾ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ. ಎಚ್‌ಎಎಲ್‌ಗೆ ಆದ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಜತೆಗಿದ್ದೇವೆ. 

ಎಚ್‌.ಮಹದೇವನ್‌, ವರ್ಲ್ಡ್‌ ಫೆಡರೇಷನ್‌ ಆಫ್‌ ಟ್ರೇಡ್‌ ಯೂನಿಯನ್‌ನ ಉಪ ಪ್ರಧಾನ ಕಾರ್ಯದರ್ಶಿ 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !