ಮರಗಳಿಗೆ ಮರುಜೀವ

ಬುಧವಾರ, ಜೂನ್ 19, 2019
25 °C

ಮರಗಳಿಗೆ ಮರುಜೀವ

Published:
Updated:
Prajavani

ಜೆಸಿಬಿ, ಟಿಪ್ಪರ್‌, ಕೊಡಲಿ, ಗುದ್ದಲಿ, ಸಲಿಕೆ, ಹಾರೆ, ಗರಗಸ ಮೊದಲಾದ ಪರಿಕರಗಳ ಜತೆ ಬಂದ ಗುಂಪೊಂದು, ಅಲ್ಲಿ ರಸ್ತೆ ಬದಿಯಲ್ಲಿದ್ದ ಮರಗಳನ್ನು ಒಂದೊಂದಾಗಿ ಕತ್ತರಿಸಲು ಶುರು ಮಾಡಿತು. ನೋಡ ನೋಡುತ್ತಿದ್ದಂತೆಯೇ ಒಂದು ಮರದ ರೆಂಬೆ–ಕೊಂಬೆಗಳು ಧರೆಗುರುಳಿದವು. ಮರ ಬೋಳಾಯಿತು. ‘ಅಯ್ಯೋ, ಅಷ್ಟೊಂದು ಚೆನ್ನಾಗಿ ಬೆಳೆದಿದ್ದ ಮರವನ್ನು ಕತ್ತರಿಸುತ್ತಿದ್ದರಲ್ಲಾಪ್ಪಾ!’ ಎಂದುಕೊಳ್ಳುವ ಹೊತ್ತಿಗೆ, ಆ ಗುಂಪು ಮರ ಕತ್ತರಿಸುವುದನ್ನು ಅರ್ಧಕ್ಕೆ ನಿಲ್ಲಿಸಿ, ಮುಂದಿದ್ದ ಮರಗಳನ್ನು ಕತ್ತರಿಸಲು ಶುರು ಮಾಡಿತು.

ಮಾರನೆಯ ದಿನ ವಾಹನಗಳು ಹಾಗೂ ಗರಗಸದಂತಹ ಪರಿಕರಗಳೊಂದಿಗೆ ಬಂದ ಅದೇ ಗುಂಪು, ಅರ್ಧ ಕತ್ತರಿಸಿ ಬಿಟ್ಟಿದ್ದ ಮರಗಳ ಸುತ್ತಲೂ ಗುಂಡಿ ತೆಗೆಯಲಾರಂಭಿಸಿತು. ಬಹಳ ಹೊತ್ತು ನಡೆದ ಈ ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಮರಗಳನ್ನು ಬುಡಸಮೇತ ಕಿತ್ತು ಟಿಪ್ಪರ್‌ನಲ್ಲಿ ನಿಲ್ಲಿಸಿಕೊಂಡು ಸಾಗಿಸಲು ಶುರು ಮಾಡಿದರು. ಆಗಲೇ ಗೊತ್ತಾಗಿದ್ದು ‘ಅವರು ಆ ಮರಗಳನ್ನು ಕತ್ತರಿಸುತ್ತಿಲ್ಲ. ಅವುಗಳಿಗೆ ಮರು ಜೀವ ಕೊಡುತ್ತಿದ್ದಾರೆ’ ಎಂದು.

ನಿಜ. ಆ ತಂಡದಲ್ಲಿದ್ದವರು ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಹತ್ತು–ಹನ್ನೆರಡು ವರ್ಷಗಳ ವಯಸ್ಸಿನ ಮರಗಳನ್ನು ಬುಡಸಹಿತ ಕಿತ್ತು ಬೇರೆ ಕಡೆ ಮರು ನಾಟಿ (ನೆಡುವ) ಮಾಡುವ ಪ್ರಯತ್ನದಲ್ಲಿದ್ದರು. ಅದಕ್ಕಾಗಿ ಆ ಮರಗಳನ್ನು ವಾಹನಗಳಲ್ಲಿ ಸಾಗಿಸುತ್ತಿದ್ದರು. ಈ ಘಟನೆ ನಡೆದಿದ್ದು ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ.

ನಾಡಿನ ವಿವಿಧೆಡೆ ಈಗಾಗಲೇ ಇಂಥ ಪ್ರಯತ್ನಗಳು ನಡೆದಿವೆ. ಆದರೆ, ಇಲ್ಲಿ ನಡೆಯುತ್ತಿದ್ದ ‘ಮರ ಸ್ಥಳಾಂತರ’ ಪ್ರಕ್ರಿಯೆಗೆ ಸರ್ಕಾರಿ ಇಲಾಖೆ ಜತೆಗೆ, ಪರಿಸರ ಪ್ರಿಯ ಸಂಘಟನೆಗಳು ಕೈ ಜೋಡಿಸಿದ್ದು ವಿಶೇಷವಾಗಿತ್ತು.

ಇಲಾಖೆ–ಸಂಸ್ಥೆ–ಕಂಪನಿ ಪ್ರಯತ್ನ

ಬೆಳಗಾವಿಯ ಬಾಕ್ಸೈಟ್‌ ರಸ್ತೆ ವಿಸ್ತರಣೆಗಾಗಿ 20ರಿಂದ 25 ಮರಗಳನ್ನು ಕಡಿಯಬೇಕಿತ್ತು. ಲೋಕೋಪಯೋಗಿ ಇಲಾಖೆಯವರು ಈ ಮರಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸುತ್ತಿದ್ದರು. ಈ ವಿಚಾರ, ಬೆಳಗಾವಿಯ ಜಯಭಾರತ ಪ್ರತಿಷ್ಠಾನ, ಪಾಲಿ ಹೈಡ್ರಾನ್‌ ಪ್ರತಿಷ್ಠಾನ, ವೇಗಾ ಹೆಲ್ಮೆಟ್‌ ಕಂಪನಿ, ಬೆಳಗಾವಿ ಫೆರ‍್ರೋಕಾಸ್ಟ್‌ ಕಂಪನಿ, ಅಭಿಷೇಕ್ ಅಲ್ಲೈಸ್ ಹಾಗೂ ಸ್ನೇಹಂ ಇಂಟರ್‌ನ್ಯಾಷನಲ್‌ ಕಂಪನಿಗಳವರ ಕಿವಿಗೆ ಬಿತ್ತು. ಈಗಾಗಲೇ ಈ ಸಂಘ–ಸಂಸ್ಥೆ–ಕಂಪನಿಗಳು ಸೇರಿ ಬೆಳಗಾವಿ ಹೊರವಲಯದಲ್ಲಿ ಕಸದ ಡಂಪಿಂಗ್ ಯಾರ್ಡ್‌ನಂತಾಗಿದ್ದ ಪೀರನವಾಡಿ ಕೆರೆ ಅಭಿವೃದ್ಧಿ
ಪಡಿಸಲು ಮುಂದಾಗಿದ್ದರು. ಅದೇ ತಂಡ ಈಗ ಮರ ಸ್ಥಳಾಂತರಿಸುವಂತಹ ಕಾರ್ಯಕ್ಕೆ ಕೈ ಜೋಡಿಸಲು ಮುಂದಾಯಿತು.

ಈ ಕಂಪನಿಗಳು–ಸಂಸ್ಥೆಗಳು ರೂಪಿಸಿದ್ದ ಕೆರೆ ಅಭಿವೃದ್ಧಿ ಯೋಜನೆಗೆ ಕಿರಣ್ ನಿಪ್ಪಾಣಿಕರ್ ಸಂಯೋಜಕರಾಗಿದ್ದಾರೆ. ಅವರೇ ಮರ ಸ್ಥಳಾಂತರಿಸುವ ವಿಷಯದಲ್ಲೂ ಮುಂದಡಿ ಇಟ್ಟರು. ಮೊದಲ ಹಂತವಾಗಿ ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ‘ನೀವು ಮರಗಳನ್ನು ಕೊಡಿ. ನಾವು ವಾಹನದ ವ್ಯವಸ್ಥೆ ಮಾಡಿ ಸಾಗಿಸುತ್ತೇವೆ’ ಎಂದು ಕಿರಣ್ ಹೇಳಿದರು. ಅಧಿಕಾರಿಗಳು ಸಮ್ಮತಿಸಿದರು.

ಮೇ 19ರಂದು ಭಾನುವಾರ ಮರಗಳ ಸ್ಥಳಾಂತ ರಕ್ಕೆ ಚಾಲನೆ ದೊರೆಯಿತು. ಮರಗಳನ್ನು ಸ್ಥಳಾಂತರಿಸಲು ಒಂದು ಜೆಸಿಬಿ, ಕ್ರೇನ್, 8 ಟಿಪ್ಪರ್‌ಗಳು, 2 ಟ್ರಾಲಿಗಳು ಬಂದವು. 50ಕ್ಕೂ ಹೆಚ್ಚು ಮಂದಿ ಮರ ಕಿತ್ತು, ವಾಹನಗಳಲ್ಲಿ ಸಾಗಿಸುವ ಹಾಗೂ ಪುನರ್ ನೆಡುವ ಕಾರ್ಯದಲ್ಲಿ ಕೈ ಜೋಡಿಸಿದರು.

ಬುಡಸಹಿತ ಕಿತ್ತ ಮರಗಳನ್ನು ಪೊಲೀಸ್ ವಾಹನ, ಕೆಲವು ಪರಿಸರ ಪ್ರೇಮಿಗಳ ವಾಹನಗಳ ‘ಎಸ್ಕಾರ್ಟ್‌’ನಲ್ಲಿ ಪುನರ್ ನಾಟಿ ಮಾಡಲು ಮೆರವಣಿಗೆಯಲ್ಲಿ ಸಾಗಿಸಲಾಯಿತು. ಬೆಳಗಾವಿ ಬೈಸನ್‌ ತಂಡದವರು ಕಾರುಗಳಲ್ಲಿ, ಜೀಪ್ ಕ್ಲಬ್‌ನವರು ಜೀಪ್‌ಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಈ ‘ಮರ ಮೆರವಣಿಗೆ’ಯ ಮೆರುಗು ಹೆಚ್ಚಿಸಿ
ದರು. ನಗರದ ನಾಗರಿಕರು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸವಾರರು, ಈ ವಿದ್ಯಮಾನವನ್ನು ಕುತೂಹಲದಿಂದ ವೀಕ್ಷಿಸಿದರು.

ಹೊರವಲಯದ ಕೆರೆಗೆ ಸ್ಥಳಾಂತರ

ಮರಗಳನ್ನು ಕಿತ್ತು ಹೆದ್ದಾರಿಯಿಂದ 12 ಕಿ.ಮೀ. ದೂರದಲ್ಲಿರುವ ಪೀರನವಾಡಿ ಹೊರವಲಯದ ಕೆರೆಯ ಏರಿ ಮೇಲೆ ನಾಟಿ ಮಾಡಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳ ನೆರವಿನೊಂದಿಗೆ ಪರಿಸರ ಕಾರ್ಯಕರ್ತರು ಈ ಕಾರ್ಯವನ್ನು ಪೂರೈಸಿದರು. ಅಲ್ಲಿಗೆ, ರಸ್ತೆ ವಿಸ್ತರಣೆಯಿಂದ ತೆರವಾಗಿ ‘ಎಲ್ಲೋ’ ಸೇರಬೇಕಿದ್ದ ಮರಗಳು ಪೀರನವಾಡಿ ಕೆರೆಯಲ್ಲಿ ಜಾಗ ಕಂಡುಕೊಂಡವು.

ಈ ಕಾರ್ಯದಲ್ಲಿ ಪಿಡಬ್ಲ್ಯುಡಿ, ಹೆಸ್ಕಾಂ, ಪೊಲೀಸ್, ನಗರಪಾಲಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪರಿಸರ ಕಾಳಜಿಯುಳ್ಳ ಸಂಘಟನೆಯವರು ಕೈಜೋಡಿಸಿದ್ದರಿಂದ, ಮರಗಳನ್ನು ಉಳಿಸಿಕೊಳ್ಳುವ ಪ್ರಯತ್ನದ ಜತೆಗೆ ಪೀರನವಾಡಿ ಕೆರೆಯ ಏರಿ ಭದ್ರಗೊಳಿಸುವ ಕೆಲಸವೂ ನಡೆಯಿತು.

ಮರಗಳು ಚಿಗುರುವ ವಿಶ್ವಾಸ

‘₹ 16 ಲಕ್ಷ ವೆಚ್ಚದಲ್ಲಿ ಪುನಶ್ಚೇತನ ಕಾಣುತ್ತಿರುವ ಕೆರೆಯ ಏರಿಯಲ್ಲಿ ನಾಟಿ ಮಾಡಿರುವ ಮರಗಳು ಶೀಘ್ರದಲ್ಲೇ ಚಿಗುರೊಡೆದು ನಳನಳಿಸುವ ವಿಶ್ವಾಸವಿದೆ’ ಎನ್ನುತ್ತಾರೆ ಕಿರಣ್.

ಈ ‘ಆಪರೇಷನ್ ಮರ’ದ ಮೂಲಕ ಈಗಾಗಲೇ 15 ಮರಗಳನ್ನು ಸ್ಥಳಾಂತರಿ ಸಲಾಗಿದೆ. ಇನ್ನೂ 17 ಮರಗಳನ್ನು ಸ್ಥಳಾಂತರಿಸುವ ಉದ್ದೇಶ ಈ ತಂಡದ್ದು. ಈಗಾಗಲೇ ಸ್ಥಳಾಂತರಗೊಂಡು ನಾಟಿಯಾಗಿರುವ ಕೆಲವು ಮರಗಳಲ್ಲಿ ಹೊಸ ಚಿಗುರು ಕಾಣಿಸುತ್ತಿದೆ. ಅದು ತಂಡದವರಲ್ಲಿ ಸಂತಸ ಮೂಡಿಸಿದೆ.

‘ಸಾರ್ವಜನಿಕರಿಗೆ ಕೆರೆಯ ಮಹತ್ವ ತಿಳಿಸುವುದು, ಕೆರೆಯಲ್ಲಿ ನೀರು ಸಂಗ್ರಹಿಸುವ ಜತೆಗೆ, ಇನ್ನು ಏನೆಲ್ಲ ಮಾಡಲು ಸಾಧ್ಯವಿದೆ ಎಂದು ತೋರಿ
ಸಲು ಸಮಾನ ಮನಸ್ಕರು ಮುಂದಾಗಿದ್ದೇವೆ. ಇದಕ್ಕೆ ಪೂರಕವಾಗಿ ಮರಗಳ ಸ್ಥಳಾಂತರ ಪ್ರಕ್ರಿಯೆಯೂ ಜತೆಯಾಗಿದ್ದು, ನಮ್ಮ ಪ್ರಯತ್ನಕ್ಕೆ ಇನ್ನಷ್ಟು ಶಕ್ತಿ ತುಂಬಿದೆ’ ಎನ್ನುತ್ತಾರೆ ಕಿರಣ್‌.

ಸದ್ಯ ಈ ತಂಡದ ಸದಸ್ಯರು ಪೀರನವಾಡಿ ಗ್ರಾಮ ಪಂಚಾಯ್ತಿಯಿಂದ ಕೆರೆ ದತ್ತು ಪಡೆದು ‘ಜೀವ ಕಳೆ’ ತುಂಬುವ ಕೆಲಸ ಮಾಡುತ್ತಿದ್ದಾರೆ. ಮೊದಲ ಹಂತವಾಗಿ ಹೂಳೆತ್ತುವ ಕೆಲಸ ನಡೆದಿದೆ. ಏರಿ ನಿರ್ಮಾಣ ಮಾಡಿದ್ದಾಗಿದೆ. ಬರುವ ಮಳೆಗಾಲದಲ್ಲಿ ಈ ಕೆರೆ ಮತ್ತಷ್ಟು ಕಂಗೊಳಿಸಲಿದೆ.

ಕೆರೆ ಏರಿ ಮೇಲೆ ಪುನರ್‌ ನಾಟಿ ಮಾಡಿರುವ ಮರಗಳು ಚಿಗುರಿದರೆ, ಕಸದ ತೊಟ್ಟಿಯಾಗಿದ್ದ ಕೆರೆ ಜನಾಕರ್ಷಣೆಯ ಕೇಂದ್ರವಾಗಲಿದೆ. ‘ಈ ಮಳೆಗಾಲದಲ್ಲಿ ಮರಗಳ ಜತೆಗೆ ಇನ್ನೊಂದಿಷ್ಟು ಹಣ್ಣಿನ ಗಿಡಗಳನ್ನು ಬೆಳೆಸುತ್ತೇವೆ. ಪಕ್ಷಿಗಳಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿಸುತ್ತೇವೆ’ ಎನ್ನುತ್ತಾರೆ ಕಿರಣ್.

‌ನಿರ್ವಹಣೆಯೂ ನಮ್ಮ ಜವಾಬ್ದಾರಿ

ಧಾರವಾಡದಲ್ಲಿ ಇದೇ ರೀತಿ ಮರ ಸ್ಥಳಾಂತರ ನಡೆದಿತ್ತು. ಆಗ ಈ ಕಾರ್ಯದಲ್ಲಿ ಭಾಗವಹಿಸಿದ್ದ ಕಿರಣ್ ಅವರಿಗೆ ಅಸ್ಲಂ ಎಂಬುವವರು ಮಾರ್ಗದರ್ಶನ ನೀಡಿದ್ದರು. ಅದೇ ಅನುಭವದಿಂದ ಇಲ್ಲಿಯೂ ಮರ ಸ್ಥಳಾಂತರಕ್ಕೆ ಕೈ ಜೋಡಿಸಿದ್ದಾರೆ.

‘ಮಣ್ಣಿನ ಸವಕಳಿ ತಡೆಯುವುದಕ್ಕೆ ಮರಗಳಿಗಿಂತ ಮತ್ತೊಂದು ಮದ್ದಿಲ್ಲ. ಹೀಗಾಗಿ, ಮರಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎನ್ನುವ ಸಂದೇಶವನ್ನು ಪರಿಣಾಮಕಾರಿಯಾಗಿ ತಿಳಿಸುವ ಉದ್ದೇಶ ನಮ್ಮದು. ಈ ಕೆರೆ ದಂಡೆಯಲ್ಲಿ ಮಕ್ಕಳಿಗೆ ಕೃಷಿ ಪಾಠ ಹೇಳಿಕೊಡಲು ಕೈತೋಟ ಅಭಿವೃದ್ಧಿಪಡಿಸುತ್ತೇವೆ’ ಎಂದು ಅವರು ತಂಡದ ಭವಿಷ್ಯದ ಕನಸುಗಳನ್ನು ಬಿಚ್ಚಿಟ್ಟರು.

‘ಮರ ಸ್ಥಳಾಂತರಿಸುವ ವೇಳೆ ತುಂಬಾ ಎಚ್ಚರವಹಿಸಿದ್ದೇವೆ. ಪುನರ್ ನಾಟಿ ವೇಳೆ 7ರಿಂದ 8 ಅಡಿ ಆಳದ ಗುಂಡಿ ತೆಗೆದು ನೆಟ್ಟಿದ್ದೇವೆ. ಇದರಿಂದಾಗಿ, ಮರಗಳ ಆರೋಗ್ಯವಾಗಿರುತ್ತವೆ. ಯಾವುದೇ ಸಂದೇಹವಿಲ್ಲ’ ಎಂದು ಭರವಸೆ ನೀಡುತ್ತಾರೆ ಕಿರಣ್. ಕಿರಣ್ ಅವರ ಸಂಪರ್ಕಕ್ಕೆ: 97426 67777.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !