ಒಂದು ಸಳ್ಳೆಯ ಕ್ರಾಂತಿ

ಭಾನುವಾರ, ಜೂಲೈ 21, 2019
28 °C

ಒಂದು ಸಳ್ಳೆಯ ಕ್ರಾಂತಿ

Published:
Updated:
Prajavani

ಸುದೀರ್ಘ ಬೇಸಿಗೆ ರಜೆ ಬಳಿಕ ಶಾಲೆ ಆರಂಭವಾಗಿತ್ತು. ತಿಂಗಳುಗಳಿಂದ ವನ್ಯಮೃಗಗಳಂತೆ ಕಾಡು ಹಣ್ಣು ತಿನ್ನುತ್ತ ಕಾಲ ಕಳೆದಿದ್ದವರಿಗೆ ಶಾಲೆ ದಾರಿಯ ನೇರಳೆ ಮರ ಕರೆಯಿತು. ಯರ್ಥೇಚ್ಚ ತಿಂದು ಶಾಲೆಗೆ ಹೊರಟರೆ ನಾಲಿಗೆಯೆಲ್ಲ ಬಣ್ಣ. ಕಾಡು ಸುತ್ತಾಡಿ ಅನುಭವವಿದ್ದ ಮಕ್ಕಳು ಬಹಳ ಕಿಲಾಡಿಗಳು, ತಕ್ಷಣ ಅಲ್ಲೇ ಪಕ್ಕದ ಸಳ್ಳೆ ಹಣ್ಣು ತಿಂದರು. ಹುಳಿ ಸಿಹಿ ರಸದಿಂದ ನಾಲಿಗೆಯಲ್ಲಿದ್ದ ನೇರಳೆ ಬಣ್ಣ ಮಾಯವಾಗಿ ಮೇಷ್ಟ್ರ ಎದುರು ಬಾಯ್ತೆರೆಯುವಷ್ಟು ನಾಲಿಗೆ ಸ್ವಚ್ಛವಾಯ್ತು. ನೀರಿಲ್ಲದೇ ನೇರಳೆ ಬಣ್ಣ ಬದಲಿಸಿಕೊಂಡ ಮಾಯೆಯಲ್ಲಿ ಮಲೆನಾಡಿನ ಮಕ್ಕಳ ಬಾಲ್ಯ ಸಾಗಿ ಬಂದಿದೆ.

ಏಪ್ರಿಲ್-ಮೇ ತಿಂಗಳ ಬಿಸಿಲಿನಲ್ಲಿ ಬಾಯಾರಿದ ಎಲ್ಲರನ್ನೂ ಸಳ್ಳೆ ಸೆಳೆಯುತ್ತದೆ. ತಿಳಿ ಹಳದಿ ಬಣ್ಣದ ಹಣ್ಣು, ಪುಟ್ಟ ಬೀಜ ಆವರಿಸಿದ ಪಾರದರ್ಶಕ ಕವಚದಲ್ಲಿ ಮಧುರ ರಸ. ಬೇಸಿಗೆಯ ಒಂದು ಮಳೆ ಸುರಿದರೆ ಟೊಂಗೆ ಟಿಸಿಲಿನ ಭರ್ತಿ ಪುಟಾಣಿ ಹಣ್ಣು. ಕಾಯಿಯ ಕವಚ ಒಡೆದು ಕಣ್ಸೆಳೆಯುತ್ತದೆ. ಮಕ್ಕಳಿಗೆ ಹೇಳಿ ಮಾಡಿಸಿದ ಮಧ್ಯಮ ಗಾತ್ರದ ಮರ, ಸಲೀಸಾಗಿ ನೆಲದಲ್ಲಿ ನಿಂತು ಕೊಯ್ಯಬಹುದು, ಮರವೇರಿಯೂ ಮೆಲ್ಲಬಹುದು. ಪಕ್ಷಿ ಸಂಕುಲಗಳು ಉರಿಬಿಸಿಲಲ್ಲಿ ಹಣ್ಣು ತಿನ್ನುತ್ತವೆ. ಜಲಕ್ಷಾಮದಲ್ಲಿ ಪಕ್ಷಿಗಳಿಗೆ ನೀರಿಡಬೇಕೆಂದು ಜಾಗೃತಿ ಮೂಡಿಸುವ ಕಾಲಕ್ಕೆ ಈ ಕಾಡು ಮರ ಪುಟ್ಟ ಹಣ್ಣಿನ ಮೂಲಕ ನೀರು, ಆಹಾರ ಒದಗಿಸುತ್ತದೆ.

ಕಾಡಿನಲ್ಲಿ ಕ್ರಾಂತಿ

ಸಳ್ಳೆಯ ವಿಚಾರದಲ್ಲಿ ಗಮನಿಸಿದ ಕಾಡು ಕ್ರಾಂತಿಯ ವಿಶೇಷವಿದೆ. ಅಲ್ಲೊಂದು ಇಲ್ಲೊಂದು ಮರವಿರುತ್ತಿದ್ದ ನೆಲೆಯಲ್ಲಿ ಈಗ ಎಲ್ಲಿ ನೋಡಿದರಲ್ಲಿ ಸಂಭ್ರಮ ಕಾಣಿಸುತ್ತಿದೆ. ಉತ್ತರಕನ್ನಡದ ಕಾಳಿ ನದಿ ಕಣಿವೆಯ ಬೀಸಗೋಡು, ಬೇಡ್ತಿ ಕಣಿವೆಯ ಮಾಗೋಡು, ಶಿರಸಿ ಸೀಮೆಯ ಹಲವೆಡೆ ಸಳ್ಳೆ ಬೆಟ್ಟಗಳು ಮೇಳೈಸಿವೆ. ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವೆಂಪು ಮನೆ ಸುತ್ತವೂ ಇದೇ ಸಸ್ಯಗಳಿವೆ. ಕರಾವಳಿಯಿಂದ ಅರೆಮಲೆನಾಡು ಅಂಚಿನವರೆಗೂ ಸಸ್ಯ ಸರಹದ್ದು. ಹಿಂದೆ ಇಲ್ಲಿ ಈ ವೃಕ್ಷಜಾತಿ ಇರಲಿಲ್ಲವೆಂದಲ್ಲ, ಈಗ 25-30 ವರ್ಷಗಳೀಚೆಗೆ ಸಳ್ಳೆಗೆ ಅನುಕೂಲ ವಾತಾವರಣ ದೊರೆತು ವೃದ್ಧಿಸಿದೆ. ಎಲೆ ಉದುರಿಸುವ ಕಾಡಿನ ಮತ್ತಿ, ಹೊನ್ನೆ, ಕವಲು, ಕಿಂದಳು, ಹಿಪ್ಪೆ, ನುರುಕಲು, ಕಾರೆಕಂಟಿಗಳ ನೆಲೆಯಲ್ಲಿದ್ದ ಅಲ್ಲೊಂದು ಇಲ್ಲೊಂದು ಮರಗಳ ಬೀಜಗಳು ಪಕ್ಷಿ ಸಂಕುಲಗಳ ನೆರವಿನಿಂದ ಬಿತ್ತನೆಯಾಗಿ ವ್ಯಾಪಿಸಿದೆ.

ಬಯಲಿನಲ್ಲಿ ಸಸಿ ಜನಿಸಿ ಎರಡು ಮೂರು ವರ್ಷಕ್ಕೆ ಮೂರು ನಾಲ್ಕು ಅಡಿಯೆತ್ತರಕ್ಕೆ ಎದ್ದು ನಿಲ್ಲುತ್ತದೆ. ಮರ ಜಾತಿಯಾದರೂ ನೇರ ಕಾಂಡಕ್ಕೆ ಪೂರಕವಾಗಿ ನಾಲ್ಕಾರು ಟಿಸಿಲುಗಳಿರುತ್ತವೆ. ಪೊದೆ ಸ್ವರೂಪದಲ್ಲಿ ಬೆಳೆಯುವುದರಿಂದ ಗುಣದಿಂದ ಛತ್ರಿಯಂತೆ ನೆರಳು ರೂಪಿಸಿಕೊಂಡು, ನೆಲದಲ್ಲಿ ತೇವ ಉಳಿಯಲು ಸಹಾಯಕವಾಗಿದೆ. ವರ್ಷವಿಡೀ ತರಗೆಲೆ ಉದುರಿಸಿ ಮಣ್ಣು ಫಲವತ್ತಾಗಿಸುತ್ತ ಸಂಕುಲ ಹಬ್ಬಿಸುತ್ತಿದೆ. ಬೇಸಿಗೆಯಲ್ಲಿ ಸಳ್ಳೆ ಮರಗಳಡಿ ಹೋದರೆ ಹೊಂಗೆಯ ತಂಪು ಕಾಡುತ್ತದೆ. ಮೇಲ್ನೋಟಕ್ಕೆ ನಿಸರ್ಗ ಪೋಷಿಸಿದ ಏಕಜಾತಿ ಸಮೂಹವಾದರೂ ಅಕೇಶಿಯಾ ಸಸ್ಯದಷ್ಟು ಆಕ್ರಮಣಕಾರಿ ಗುಣವಲ್ಲ. ಕುಂಟುನೇರಳೆ, ನೇರಳೆ, ಕುಮುಸಲು, ಬನಾಟೆ, ಹೊಳೆಗೇರು ಸಸ್ಯಸಂಕುಲಗಳೂ ಸಹಜವಾಗಿ ಜೊತೆಯಲ್ಲಿ ಬೆಳೆಯುತ್ತವೆ.

ನಾಟಿ ಬೇಡ, ಬೇಲಿಯ ರಕ್ಷಣೆ ಅಗತ್ಯವಿಲ್ಲ. ಹಣ್ಣು ತಿಂದ ಹಕ್ಕಿಗಳ ಹಿಕ್ಕೆಯಲ್ಲಿ ಬೀಜೋಪಚಾರ ಪಡೆದು ವ್ಯಾಪಿಸಿದ ರೀತಿಯಲ್ಲಿ ನಿಸರ್ಗ ನೀತಿಯಿದೆ. ಮಲೆನಾಡಿನ ಉಷ್ಣತೆ ಏರುತ್ತಿರುವ ಗಳಿಗೆಯಲ್ಲಿ ಸಸ್ಯ ಎದ್ದು ನಿಂತಿದೆ. ಕೃಷಿಕರು ತೋಟ ಉಳಿಸಲು ಸಾವಿರಾರು ಅಡಿ ಆಳದ ಕೊಳವೆ ಬಾವಿಯಿಂದ ನೀರೆತ್ತುವ ಸಾಮರ್ಥ್ಯವಿದ್ದೂ ಅಂತರ್ಜಲ ದೊರೆಯದೇ ಸೋಲುತ್ತಾರೆ. ಆದರೆ, ಈ ಕಾಡು ಸಸ್ಯ ಮಳೆ ನಂಬಿ ಆರಾಮ ಬೆಳೆಯುತ್ತಿದೆ. ಆಳಕ್ಕೆ ಬೇರಿಳಿಸಿ, ತೊಗಟೆಯಲ್ಲಿ ನೀರು ಶೇಖರಿಸಿಕೊಂಡು ನೀರಿಲ್ಲದ ಹೊತ್ತಿನಲ್ಲಿ ಫಲ ಬಿಟ್ಟು ಹಕ್ಕಿಗಳಿಗೆ ಹಣ್ಣು ನೀಡಿ ಸಂತೈಸುತ್ತದೆ. ಉರುವಲಾಗಿ, ದೊಡ್ಡಿಗೆ ಹಸಿಸೊಪ್ಪಾಗಿ, ಗೊಬ್ಬರಕ್ಕೆ ತರಗೆಲೆಯಾಗಿ ಬಳಕೆಯಾಗುವ ವೃಕ್ಷವಿದು. ಹೂವರಳಿದ ಕಾಲಕ್ಕೆ ಜೇನುಗಳನ್ನು ಸೆಳೆಯುತ್ತದೆ.

‘ಚಳ್ಳೆ’ ಅಲ್ಲ ಇದು ‘ಸಳ್ಳೆ’ ಹಣ್ಣು

‘ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿದರು’ ಮಾತು ಕೇಳಿದ್ದೀರಿ. ಅದು ಬಯಲು ನೆಲದಲ್ಲಿ ಕಾಡು, ಬೇಲಿಗಳಲ್ಲಿರುವ ಹಣ್ಣು, ತಕ್ಷಣಕ್ಕೆ ಉಳುಚಿಕೊಳ್ಳುವ ಬೀಜ ಗುಣದ್ದು ! ಇದು ಅದಲ್ಲ, ಮಲೆನಾಡಿನ ಸಳ್ಳೆ (Cordia myxa). ರಾಜ್ಯದ ಎಲ್ಲರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಇದು ಚಿರಪರಿಚಿತವಾಗಿದೆ. ಸನ್ಮಾನ ಸಮಾರಂಭಗಳಲ್ಲಿ ಶ್ರೀಗಂಧದ ಹಾರ ಹಾಕುತ್ತಾರಲ್ಲವೇ? ಆ ಹಾರ ತಯಾರಿಗೆ ಸಾಮಾನ್ಯವಾಗಿ ಇದೇ ಮರ ಬಳಕೆಯಾಗುತ್ತದೆ. ಕೃತಕ ಪರಿಮಳ ಸಿಂಪಡಿಸಿಕೊಂಡು ವೇದಿಕೆಯಲ್ಲಿ ‘ಛಾಯಾ ಗಂಧ’ ವಾಗಿ ಮೆರೆಯುತ್ತಿದೆ.

ಶಿರಸಿಯ ಹಳ್ಳಿಗರೊಬ್ಬರ ಮನೆಯ ಪಕ್ಕ ತೇಗದ ಏಕಜಾತಿಯ ತೋಟವಿತ್ತು. ಅದು ಬೇಸಿಗೆಯಲ್ಲಿ ಸಂಪೂರ್ಣ ಎಲೆ ಉದುರಿಸುವುದರಿಂದ ಬೆಂಕಿ ಬೀಳುತ್ತಿತ್ತು. ಫೆಬ್ರುವರಿ-ಮಾರ್ಚ್ ವೇಳೆಯಲ್ಲಂತೂ ಆ ಮನೆಯವರಿಗೆ ಅಸಾಧ್ಯ ಧಗೆ! ಧಗೆಯ ವಿರುದ್ಧ ದಂಗೆ ಎದ್ದಂತೆ ಒಂದೆರಡು ವರ್ಷಗಳಲ್ಲಿ ಸುತ್ತಮುತ್ತ ನಾಲ್ಕಾರು ಸಳ್ಳೆ ಗಿಡಗಳು ಜನಿಸಿದವು. ನಿತ್ಯಹರಿದ್ವರ್ಣ ಸಸ್ಯ ಬಿಸಿಲು ಮನೆಯ ಬೇಸಿಗೆಯ ಅಕ್ಕರೆಯಾಯ್ತು. ಹಣ್ಣು ತಿಂದು ಹಕ್ಕಿ ಗಳು ಖುಷಿಪಟ್ಟವು. 20 ವರ್ಷಗಳ ಹಿಂದೆ ಬೆರಳೆಣಿಕೆಯಿದ್ದ ಸಳ್ಳೆ ಇಂದು ಆ ಮನೆಯ ಸುತ್ತ ಸಂಪೂರ್ಣ ಆವರಿಸಿದೆ. ಮರ ದಟ್ಟಣೆ ಹೆಚ್ಚಿದಂತೆ ಬೇಸಿಗೆ ಬೆಂಕಿ ಸಮಸ್ಯೆ ನಿವಾರಣೆಯಾಗಿದೆ. ಸಾಮಾನ್ಯ
ವಾಗಿ ತೇಗದ ಸಾಂದ್ರತೆ ಹೆಚ್ಚಿರುವಲ್ಲಿ ನಡುವೆ ಬೇರೊಂದು ಸಸ್ಯ ಬೆಳೆಯುವುದು ಕಡಿಮೆ. 20-25 ಅಡಿ ಎತ್ತರ ಬೆಳೆಯುವ ಸಳ್ಳೆ ಇಲ್ಲಿ ಹೊಸ ಕ್ರಾಂತಿ ಮಾಡಿ ವಾತಾವರಣ ಬದಲಿಸಿದೆ.

ಅಕೇಶಿಯಾ, ಗಾಳಿ, ತೇಗ ಸಸ್ಯಗಳನ್ನು ವ್ಯಾಪಕವಾಗಿ ಬೆಳೆಸುತ್ತಿದ್ದ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಸ್ಥಳೀಯ ಸಳ್ಳೆಯೂ ಸ್ಥಾನ ಪಡೆದಿದೆ. ಇದನ್ನು ಶಾಲೆ, ರಸ್ತೆಯಂಚಿನ ಸಾಲಿನಲ್ಲಿ, ಅರಣ್ಯದ ಅಗಳ, ಬೇಲಿಗೆ ಬೆಳೆಸಬಹುದು. ಮನೆ ಸುತ್ತ ಒಂದಿಷ್ಟು ಸಳ್ಳೆ ಸಸಿ ಹಚ್ಚುವ ಕೆಲಸ ನಡೆದರೆ ಬೇಸಿಗೆಯಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ, ತಾಜಾ ತಂಗಾಳಿ ದೊರೆಯುತ್ತದೆ. ಮನೆಯ ಉಷ್ಣತೆ ತಗ್ಗಿಸಲು ಸಳ್ಳೆಯೇ ಸೈ ಎನ್ನುವ ‘ಹಕ್ಕಿ ಶಕುನ’ ನನಗಂತೂ ಅರ್ಥವಾಗಿದೆ.

ಸಳ್ಳೆ ಹಣ್ಣು ; ಬಾಲ್ಯದ ನೆನಪು..!

ಏಳನೆಯ ತರಗತಿಯಲ್ಲಿ ಪರೀಕ್ಷೆ ತಯಾರಿಗೆ ಬೇಣದ ಹುನಾಲು ಗಿಡದಡಿ ಪುಸ್ತಕ ಹಿಡಿದು ಕೂಡುತ್ತಿದ್ದೆ. ಸಣ್ಣಸಣ್ಣ ಕಲ್ಲುಹರಳಿನ ಗುಡ್ಡದ ನೆಲೆಯ ಗಿಡಗಳು ಓದಿನ ನೆರಳಾಗಿದ್ದವು.  ಅವತ್ತು ಮತ್ತಿ, ಕಿಂದಳು, ಕೌಲು, ಅಣಲೆ ಗಿಡಗಳಿದ್ದ ನೆಲೆಯಲ್ಲಿ ಇಂದು ಸಳ್ಳೆಯ ಹಸಿರಾಡುತ್ತಿದೆ. ಐದಾರು ಎಕರೆಯಲ್ಲಿ ಸಣ್ಣಪುಟ್ಟ ಸಸ್ಯಗಳೆಲ್ಲ ಸೇರಿ ಪಾರುಪತ್ಯ ಮೆರೆದಿವೆ. ಕೆಲವೆಡೆ ಒಳ ನುಸುಳಲಾರದಷ್ಟು ದಟ್ಟಣೆಯಿದೆ. ಗಿಡಗಳಲ್ಲಿ ಹಣ್ಣು ಬಿಡುತ್ತಿದೆ, ಹಕ್ಕಿಗಳ ಕಲರವವಿದೆ. ಅಲ್ಲಿ ಕಲ್ಲು ಕಾಣದಂತೆ ತರಗೆಲೆಗಳು ಭೂಮಿ ಮುಚ್ಚಿದ್ದು ಪರಿಸರ ಓದಿನಲ್ಲಿ ಅರಿವಾಗುತ್ತಿದೆ. ಸಳ್ಳೆ ಹಿಂಡಿನ ದಟ್ಟ ಹಸಿರಿನಲ್ಲಿ ನುಸುಳಿ ಈಚೆ ಬರುವಾಗೆಲ್ಲ ಬಿಸಿ ಭೂಮಿಗೆ ತಂಪೆರೆವ ಸುಖ ಅನುಭವಕ್ಕೆ ನಾಟುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !