ಮಂಗಳವಾರ, ಮಾರ್ಚ್ 31, 2020
19 °C
2016ರ ಸೆಪ್ಟೆಂಬರ್‌ನಲ್ಲಿ ಹೊಸ ಕಟ್ಟಡ ಉದ್ಘಾಟನೆಯಾಗಿದ್ದರೂ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಣೆ

ಕೊನೆಗೂ ಆರ್‌ಟಿಒ ಕಚೇರಿ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಗುಂಡ್ಲುಪೇಟೆ ರಸ್ತೆಯ ಮಲ್ಲಯ್ಯನಪುರದ ಬಳಿ ಇರುವ ಗಾಳಿಪುರ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಕಟ್ಟಡದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲು ಕೊನೆಗೂ ಮುಹೂರ್ತ ಕೂಡಿ ಬಂದಿದೆ. 

ಗುಂಡ್ಲುಪೇಟೆ ರಸ್ತೆಯಲ್ಲಿರುವ ವಕ್ಫ್‌ ಮಂಡಳಿಯ ಕಟ್ಟಡದಿಂದ ಆರ್‌ಟಿಒ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಸೋಮವಾರದಿಂದ (ಜೂನ್‌ 3) ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.  

ಹಳೆಯ ಕಟ್ಟಡವನ್ನು ಈಗಾಗಲೇ ಖಾಲಿ ಮಾಡಲಾಗಿದ್ದು, ಕಡತಗಳು, ಕಂಪ್ಯೂಟರ್‌ ಸೇರಿದಂತೆ ಎಲ್ಲ  ಸಾಮಗ್ರಿಗಳನ್ನು ಹೊಸ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.

ಮಲ್ಲಯ್ಯನಪುರದಲ್ಲಿ ನಾಲ್ಕೂವರೆ ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ 2013ರ ಅಕ್ಟೋಬರ್‌ 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು 2016ರ ಸೆಪ್ಟೆಂಬರ್‌ 19ರಂದು ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು. 

ಕಟ್ಟಡ ಉದ್ಘಾಟನೆಗೊಂಡಿದ್ದರೂ ಇದುವರೆಗೂ ಕಚೇರಿ ಸ್ಥಳಾಂತರ ಆಗಿರಲಿಲ್ಲ. ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಚಾಲನೆ ಪರೀಕ್ಷೆ ಟ್ರ್ಯಾಕ್‌, ಇಂಟರ್‌ನೆಟ್‌, ವಿದ್ಯುತ್‌ ಸಂಪರ್ಕ ಆಗಿಲ್ಲ ಎಂಬ ಕಾರಣಕ್ಕೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಅಧಿಕಾರಿಗಳು ಮನಸ್ಸು ಮಾಡಿರಲಿಲ್ಲ. ಇಕ್ಕಟ್ಟಾಗಿದ್ದ ಹಳೆ ಕಚೇರಿಯಲ್ಲಿ ಸಿಬ್ಬಂದಿ ಮಾತ್ರವಲ್ಲದೇ ಸಾರ್ವಜನಿಕರೂ ತೊಂದರೆ ಅನುಭವಿಸುತ್ತಿದ್ದರು.

‘ಈಗಲೂ ಬಿಎಸ್‌ಎನ್‌ಎಲ್‌ ಸಂಪರ್ಕ ಸರಿಯಾಗಿಲ್ಲ. ಒಂದು ವಾರದಿಂದೀಚೆಗೆ ಪ್ರಯತ್ನ ಪಡುತ್ತಿದ್ದೇವೆ. ಮಾಡಿಕೊಡುತ್ತೇವೆ ಎಂದು ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹೇಳಿದ್ದಾರೆ’ ಎಂದು ಆರ್‌ಟಿಒ ಕಚೇರಿ ಸೂಪರಿಂಟೆಂಡೆಂಟ್‌ ಕಮರಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಳೆ ಕಟ್ಟದಲ್ಲಿ ಜಾಗದ ಕೊರತೆ ಇತ್ತು. ಹೊಸ ಕಟ್ಟಡ ಸುಸಜ್ಜಿತವಾಗಿದೆ. ಬೇಕಾದಷ್ಟು ಸ್ಥಳಾವಕಾಶ ಇದೆ. ಸಿಬ್ಬಂದಿ ಅಲ್ಲದೆ, ಜನರಿಗೂ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು