ಸಂಯಮವೇ ಶಕ್ತಿ

ಭಾನುವಾರ, ಮಾರ್ಚ್ 24, 2019
34 °C
ನೀತಿಕಥೆ

ಸಂಯಮವೇ ಶಕ್ತಿ

Published:
Updated:
Prajavani

ಒಂದೂರಿನಲ್ಲಿ ಒಂದು ಕೊಳ. ಅದರಲ್ಲಿ ಒಂದು ಆಮೆ ಮತ್ತು ಎರಡು ಪಕ್ಷಿಗಳು ತುಂಬ ಆತ್ಮೀಯವಾಗಿದ್ದವು. ಆಮೆಗೆ ಯಾವಾಗಲೂ ಮಾತನಾಡುವ ಚಟ.

ಒಮ್ಮೆ ಆ ಪ್ರದೇಶದಲ್ಲಿ ಬರಗಾಲ ತಲೆದೋರಿತು. ಆ ಕೊಳವೂ ಒಣಗುತ್ತಬಂದು ಅಲ್ಲಿ ವಾಸವಾಗಿದ್ದ ಜೀವಿಗಳೆಲ್ಲ ಪ್ರಾಣವನ್ನು ಕಳೆದುಕೊಳ್ಳುವ ಸಂದರ್ಭ ಎದುರಾಯಿತು. ಆ ಎರಡು ಪಕ್ಷಿಗಳು ನೀರಿರುವ ಬೇರೊಂದು ಪ್ರದೇಶಕ್ಕೆ ಹಾರಿ ಹೋಗಲು ಸಿದ್ಧವಾದವು. ಆಗ ಆಮೆ ತನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗುವಂತೆ ತನ್ನ ಮಿತ್ರರನ್ನು ಕೇಳಿಕೊಂಡಿತು. ಅವು ಒಪ್ಪಿಕೊಂಡವು.

ಆದರೆ ಹಾರಲು ಸಾಧ್ಯವಾಗದ ಆಮೆಯನ್ನು ಹೇಗೆ ಕರೆದೊಯ್ಯುವುದು? ಪಕ್ಷಿಗಳಿಗೆ ಉಪಾಯವೊಂದು ಹೊಳೆಯಿತು. ಒಂದು ಕೋಲನ್ನು ತಂದವು. ಅದರ ಮಧ್ಯಭಾಗವನ್ನು ಬಾಯಿಂದ ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಆಮೆಗೆ ಸೂಚಿಸಿದವು. ಕೋಲಿನ ಎರಡೂ ಬದಿಯನ್ನು ಒಂದೊಂದು ಹಕ್ಕಿ ಅವುಗಳ ಕೊಕ್ಕಿನಿಂದ ಹಿಡಿದುಕೊಂಡು ಹಾರಲು ತೊಡಗಿದವು. ಸುರಕ್ಷಿತ ಸ್ಥಳವನ್ನು ತಲುಪುವ ತನಕ ಬಾಯಿ ಬಿಡದಿರುವಂತೆ ಆಮೆಗೆ ಅವು ಎಚ್ಚರಿಕೆಯನ್ನೂ ಕೊಟ್ಟವು.

ಆಕಾಶದಲ್ಲಿ ಆಮೆಯೊಂದು ‘ಹಾರುತ್ತಿರುವ’ ದೃಶ್ಯವನ್ನು ಊರಿನ ಜನರು ತಲೆ ಎತ್ತಿ ಅಚ್ಚರಿಯಿಂದ ನೋಡುತ್ತಿದ್ದರು. ಅವರು ಇದುವರೆಗೂ ಅಂಥ ಘಟನೆಯನ್ನು ನೋಡಿಯೇ ಇರಲಿಲ್ಲ. ಅವರು ಈ ಅಚ್ಚರಿಯ ಬಗ್ಗೆ ಬಗೆಬಗೆಯಾಗಿ ಮಾತನಾಡತೊಡಗಿದರು. ಕೆಲವರು ಅರಚಿದರು, ಕೆಲವರು ಕೂಗಿದರು. ಈ ಕೋಲಾಹಲವನ್ನು ಕೇಳಿಸಿಕೊಂಡ ಆಮೆಗೆ ಸುಮ್ಮನಿರುಲು ಸಾಧ್ಯವೆ? ಆ ಜನರಿಗೆಲ್ಲ ಅದು ಉತ್ತರಿಸಲು ತವಕ ಪಟ್ಟು ತನ್ನ ಬಾಯನ್ನು ತೆಗೆಯಿತು. ಆ ಕೂಡಲೇ ಅದು ಮೇಲಿನಿಂದ ಬಿದ್ದು ಸತ್ತುಹೋಯಿತು.

* * *

ನಾವು ಕೂಡ ಆ ಆಮೆಯಂತೆ ಎಷ್ಟೋ ಸಲ ನಡೆದುಕೊಳ್ಳುತ್ತೇವೆ. ಮಾತನ್ನೇ ನಾವು ನಿಜವಾದ ಸಂವಹನ ಎಂದು ಭಾವಿಸಿಕೊಳ್ಳುತ್ತೇವೆ. ಆದರೆ ಮಾತಿಗಿಂತಲೂ ಮೌನವೇ ಹೆಚ್ಚಿನ ಸಂದರ್ಭದಲ್ಲಿ ಸಮರ್ಥ ಸಂವಹನವಾಗಿರುತ್ತದೆ. ಅಷ್ಟೇ ಅಲ್ಲ, ಸಂದರ್ಭದ ಸೂಕ್ಷ್ಮತೆಯನ್ನು ಅರಿಯದೆ ಆಡಿದ ಮಾತುಗಳು ನಮಗೆ ಅಪಾಯವನ್ನೂ ಉಂಟುಮಾಡಬಹುದು. ‘ಜನರು ಏನಾದರೂ ಮಾತನಾಡಿಕೊಳ್ಳಲಿ; ನನಗೆ ನನ್ನ ಜೀವ ಮುಖ್ಯವೇ ಹೊರತು ಅವರೆಲ್ಲರಿಗೂ ಉತ್ತರ ಕೊಡುವುದಲ್ಲ’ ಎಂಬ ವಿವೇಕವನ್ನು ಆ ಆಮೆಗೆ ಇದ್ದಿದ್ದರೆ ಅದು ಪ್ರಾಣವನ್ನು ಉಳಿಸಿಕೊಳ್ಳುತ್ತಿತ್ತು. 

ಮಾತನ್ನು ಆಡುವುದೇ ಮುಖ್ಯವಾಗದು; ಯಾವಾಗ ಆಡಬೇಕು ಎನ್ನುವುದು ಕೂಡ ತುಂಬ ಮುಖ್ಯ. ‘ಮಾತು ಬೆಳ್ಳಿ, ಮೌನ ಬಂಗಾರ’ ಎನ್ನುವ ಮಾತು ಕೂಡ ಉಂಟಲ್ಲವೆ? ನಾವು ದಿನವೂ ಸಾವಿರಾರು ಮಾತುಗಳನ್ನು ಆಡುತ್ತಲೇ ಇರುತ್ತೇವೆ. ಹೀಗೆ ಆಡಿದ ಮಾತುಗಳು ನಿಜವಾಗಿಯೂ ಅನಿವಾರ್ಯವಾಗಿತ್ತೆ – ಎಂದು ನಾವೇ ಪ್ರಶ್ನೆ ಮಾಡಿಕೊಳ್ಳ ಬೇಕಾಗುತ್ತದೆ. ಅನಗತ್ಯವಾಗಿ ಆಡಿದ ಮಾತು ನಮಗೆ ಶತ್ರುಗಳನ್ನು ಸೃಷ್ಟಿಸಬಹುದು ಎನ್ನುವುದನ್ನೂ ಮರೆಯುವಂತಿಲ್ಲ. ಹಲವೊಮ್ಮೆ ಅದು ನಮ್ಮ ಪ್ರಾಣಕ್ಕೂ ಸಂಚಕಾರವನ್ನು ಉಂಟುಮಾಡುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !