ಪ್ರತಿಮೆ ವಿವಾದ ಮತ್ತು ಪ್ರಬುದ್ಧತೆ

ಬುಧವಾರ, ಮೇ 22, 2019
34 °C

ಪ್ರತಿಮೆ ವಿವಾದ ಮತ್ತು ಪ್ರಬುದ್ಧತೆ

Published:
Updated:
Prajavani

‘ಮುನ್ನಾಭಾಯಿ ಎಂಬಿಬಿಎಸ್’ ಎಂಬ ಹಿಂದಿ ಚಲನಚಿತ್ರದಲ್ಲಿ ಒಂದು ಸನ್ನಿವೇಶವಿದೆ. ಕೆಲವು ಹಿರಿಯರು ಮುನ್ನಾಭಾಯಿಗೆ ‘ಗಾಂಧೀಜಿಯವರನ್ನು ಗೌರವಿಸಬೇಕು ಎಂದರೆ ಏನು ಮಾಡಬೇಕು?’ ಎಂದು ಕೇಳುತ್ತಾರೆ. ಮುನ್ನಾಭಾಯಿಗೆ ಕಾಣಿಸಿಕೊಳ್ಳುವ ಗಾಂಧೀಜಿ ಸ್ವತಃ ಹೇಳುವುದು ಹೀಗೆ, ‘ದೇಶದಲ್ಲಿರುವ ನನ್ನ ಎಲ್ಲಾ ಪ್ರತಿಮೆಗಳನ್ನು ಒಡೆಯಬೇಕು. ನನ್ನ ಎಲ್ಲಾ ಭಾವಚಿತ್ರಗಳನ್ನು ಇಳಿಸಬೇಕು. ರಸ್ತೆ, ಊರು, ಸಂಸ್ಥೆಗಳಿಗೆ ಇಟ್ಟಿರುವ ನನ್ನ ಹೆಸರನ್ನು ಅಳಿಸಿಹಾಕಬೇಕು’.

ಇದರಿಂದ ಅಚ್ಚರಿಗೊಂಡ ಹಿರಿಯರು, ‘ಹಾಗಾದರೆ ನಾವು ಏನು ಮಾಡಬೇಕು’ ಎಂದು ಕೇಳಿದಾಗ, ‘ನನ್ನನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಹೊರಗಿಡಬಾರದು. ನನ್ನ ಬೋಧನೆ ನಿಮಗೆ ಪ್ರಯೋಜನಕಾರಿಯಾಗಿದ್ದರೆ ಅದನ್ನು ಮನನ ಮಾಡಿಕೊಳ್ಳಬೇಕು, ಪ್ರಸಾರ ಮಾಡಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು’ ಎನ್ನುತ್ತಾರೆ ಗಾಂಧೀಜಿ. ಇದಕ್ಕಾಗಿ ನಮಗೆ ಬೇಕು ಉನ್ನತ ಮಟ್ಟದ ಪ್ರ‘ಬುದ್ಧ’ತೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರತಿಮೆ–ಮೂರ್ತಿಗೆ ಸಂಬಂಧಿಸಿದ ವಿವಾದವೊಂದು ನಡೆದಿದೆ. ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಪ್ರವೇಶ ದ್ವಾರದಲ್ಲಿ ಸರಸ್ವತಿಯ ಮೂರ್ತಿ ಇರಬೇಕು ಎಂದು ಕೆಲವರು, ಬುದ್ಧನ ಪ್ರತಿಮೆ ಇರಬೇಕು ಎಂದು ಇನ್ನು ಕೆಲವರು; ವಾದ ವಿವಾದ ನಡೆದು ಪರಿಸ್ಥಿತಿ ಪ್ರಕೋಪಕ್ಕೆ ಹೋಗುವ ಮುನ್ನ ಒಂದು ಹಂತದ ಸಂಧಾನವಾಗಿರುವುದು ಸಮಾಧಾನದ ವಿಚಾರ. ಆದರೆ ಇದು ಬೂದಿ ಮುಚ್ಚಿದ ಕೆಂಡ. ಸರಸ್ವತಿಯ ಮೂರ್ತಿ ಒಂದು ಬಗೆಯ ‘ಭಕ್ತಿ’ಯಾದರೆ, ಬುದ್ಧನ ಪ್ರತಿಮೆ ಇನ್ನೊಂದು ಬಗೆಯ ‘ಭಕ್ತಿ’. ಎರಡೂ ಮಾನಸಿಕತೆಗಳಿಗೆ ಪ್ರತಿಮೆ ಬೇಕು. ಪ್ರತ್ಯೇಕವಾಗಿದ್ದರೆ ತಂಟೆಯಿರಲಿಲ್ಲ, ಆದರೆ ಇವೆರಡೂ ಸಂಘರ್ಷಕ್ಕೆ ಇಳಿದಾಗ ಒಡಕು ಉಂಟಾಗುತ್ತದೆ.

ಮೂಲಭೂತ ಪ್ರಶ್ನೆ: ‘ವಿಶ್ವ’ವಿದ್ಯಾಲಯದಂಥ ಪ್ರಬುದ್ಧ ಮಟ್ಟದ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಬಗೆಯ ಪ್ರತಿಮೆಯ ಅಗತ್ಯವಿದೆಯೇ? ಯಾವುದೇ ಧರ್ಮವನ್ನು ಪ್ರತಿನಿಧಿಸುವ ಮೂರ್ತಿಗಳು, ಚಿತ್ರಗಳು, ಜಯಂತಿ, ಪುಣ್ಯತಿಥಿಯಂಥ ಆಚರಣೆಗಳು ಬೇಕೇ? ಜನಸತ್ತಾತ್ಮಕ ಗಣರಾಜ್ಯದಲ್ಲಿ ವಿಶ್ವವಿದ್ಯಾಲಯದಂಥ ಸಂಸ್ಥೆಗಳು ಜಾತ್ಯತೀತ, ಧರ್ಮ ನಿರಪೇಕ್ಷವಾಗಿರಬೇಕು. ಸಂವಿಧಾನದ ಆಶಯ ಅದೇ ಆಗಿದೆ. ಸಮಾಜದಲ್ಲಿ ಜಾತಿ, ಪಂಥ, ವರ್ಗ, ಲಿಂಗ ಇತ್ಯಾದಿ ಆಧಾರದ ಮೇಲೆ ತಾರತಮ್ಯ, ಶೋಷಣೆ ನಡೆದೇ ಇದೆ. ಸಮುದಾಯಗಳು ಮಾನವತೆಗೆ ಮಾರಕವಾದ ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗಿವೆ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಜನರನ್ನು ವಿಭಜಿಸುವ ಹುನ್ನಾರಗಳನ್ನು ಹೂಡುತ್ತಾರೆ. ಈ ದುಷ್ಟಕೂಟದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯರಿಗೆ ಆಗುತ್ತಿಲ್ಲ; ಕಲಿಯಲು, ಅನುಸರಿಸಲು ಸಮಾಜದಲ್ಲಿ ಉತ್ತಮ ಮಾದರಿಗಳು ಎದ್ದು ಕಾಣುತ್ತಿಲ್ಲ. ಪ್ರಜಾಸತ್ತಾತ್ಮಕ  ಸಂಸ್ಥೆಗಳೇ ಇದಕ್ಕೊಂದು ಪರಿಹಾರ.

ಆದರೆ ನಾವು ಇಂದು ಅಂಗನವಾಡಿಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಯಾವುದೇ ಶೈಕ್ಷಣಿಕ ಸಂಸ್ಥೆ, ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸೌಧದವರೆಗಿನ ಸರ್ಕಾರಿ ಕಚೇರಿಗಳು, ಸರ್ಕಾರಿ ವಾಹನಗಳು, ಸೌಕರ್ಯಗಳು ಎಲ್ಲೆಲ್ಲೂ ಹತ್ತಾರು ಬಗೆಯ ಧರ್ಮ, ಜಾತಿ, ನಂಬಿಕೆಗಳನ್ನು ಪ್ರತಿನಿಧಿಸುವ ದೇವದೇವತೆಯರ ಮೂರ್ತಿಗಳು, ಫೋಟೊಗಳನ್ನು ನೋಡುತ್ತೇವೆ. ದಿನಕ್ಕೊಂದರಂತೆ ಸೇರುತ್ತಿರುವ ‘ಜಯಂತಿ’ಗಳ ಆಚರಣೆಗಾಗಿ ಶಾಲೆಕಾಲೇಜುಗಳಲ್ಲಿ ಆಯಾ ವ್ಯಕ್ತಿಗಳು, ರಾಷ್ಟ್ರನಾಯಕರ ಫೋಟೊಗಳು- ಹೀಗೆ ಇರುವಷ್ಟರಲ್ಲಿಯೇ ಜಾಗಕ್ಕಾಗಿ ಪೈಪೋಟಿ ನಡೆಸಿವೆ. ಇವು ಕೇವಲ ವಸ್ತುಗಳಲ್ಲ, ಮನೋಭಾವಗಳು ಮತ್ತು ಸ್ಪಷ್ಟವಾಗಿ ಜಾತಿ, ಧರ್ಮ, ಪಂಥಗಳನ್ನು ಇಲ್ಲಿಯೂ ಪ್ರತಿಪಾದಿಸಲು ಹೆಣಗಾಡುವ ಮಾನಸಿಕತೆಗಳು ಎಂಬುದನ್ನು ಮರೆಯಬಾರದು.

ಶೈಕ್ಷಣಿಕ ಸಂಸ್ಥೆಗಳ ಪಾತ್ರದ ಮಹತ್ವ ಇರುವುದು ಇಲ್ಲಿಯೇ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಆವರಣಗಳು ಅಪ್ಪಟ ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿನಿಧಿಸುವ ತಾಣಗಳಾಗಬೇಕು. ಭವಿಷ್ಯದ ಭಾರತದ ಪರಿಪೂರ್ಣ ನಾಗರಿಕರನ್ನು ಸಜ್ಜುಗೊಳಿಸುವ ಗರಡಿ ಮನೆಗಳಾಗಬೇಕು. ಬೇರೆಲ್ಲೂ ಇಂಥ ಉತ್ತೇಜಿತ ಅವಕಾಶ ಇರುವುದಿಲ್ಲ. ಆದ್ದರಿಂದ, ಈ ದೇಶವನ್ನು ಕಟ್ಟಲು ಮಾದರಿಯನ್ನಾಗಿ ನಾವು ಆಯ್ಕೆ ಮಾಡಿಕೊಂಡಿರುವ ಸಾರ್ವಭೌಮತೆ, ಸಮಾಜವಾದ, ಜಾತ್ಯತೀತತೆ, ಜನತಂತ್ರಾತ್ಮಕ ಗಣರಾಜ್ಯ- ಈ ಮೌಲ್ಯಗಳನ್ನು ಶೈಕ್ಷಣಿಕ ಸಂಸ್ಥೆಗಳು ಸೈದ್ಧಾಂತಿಕವಾಗಿ ಅಧ್ಯಯನ ಮಾಡುವುದಷ್ಟೇ ಅಲ್ಲ, ಹೆಜ್ಜೆ ಹೆಜ್ಜೆಗೂ ಅನುಷ್ಠಾನಕ್ಕೆ ತರಬೇಕು. ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತಂದರೆ ಅವು ವಿವಿಧ ಸನ್ನಿವೇಶದಲ್ಲಿ ಹೇಗೆ ಪ್ರಕಟವಾಗುತ್ತವೆ ಎಂಬಂಥ ಮಾದರಿಗಳನ್ನು ರೂಪಿಸಿಕೊಡಬೇಕು. ಅವು ಹೊರಗಿನ ಸಮುದಾಯಗಳಿಗೂ ನಾಗರಿಕರಿಗೂ ಪಾಠವಾಗಬೇಕು.

ಸಂವಿಧಾನದಲ್ಲಿ ನಾವು, ‘ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದನ್ನು’ ನಮ್ಮ ಮೂಲಭೂತ ಕರ್ತವ್ಯವನ್ನಾಗಿ ಒಪ್ಪಿಕೊಂಡಿದ್ದೇವೆ. ಆದರೆ ಅದನ್ನು ಮರೆತಿದ್ದೇವೆ. ನಿಜವಾಗಿಯೂ ಎಲ್ಲೆಡೆ ರಾರಾಜಿಸಬೇಕಾದ ಒಂದೇ ಒಂದು ಭಾವಚಿತ್ರ ಅಥವಾ ಫಲಕವೆಂದರೆ ಸಂವಿಧಾನದ ಪ್ರಸ್ತಾವನೆ. ಇದು ಸಂವಿಧಾನದ ಮೌಲ್ಯಗಳನ್ನು ತಾತ್ಪರ್ಯ ರೂಪದಲ್ಲಿ ಹೇಳುತ್ತದೆ. ನೋಡಿದಾಗಲೆಲ್ಲಾ ಇದು ಸಾಂವಿಧಾನಿಕ ಆದರ್ಶಗಳನ್ನು, ಆ ಕುರಿತು ನಮ್ಮ ಕರ್ತವ್ಯಗಳನ್ನು ನೆನಪಿಸುತ್ತಲೇ ಇರುವಂತಾಗಬೇಕು. ಪ್ರಬುದ್ಧ ಸಂಸ್ಥೆಗಳು ಇದನ್ನು ಮಾಡಿ ತೋರಿಸಲಿ ಎಂಬುದು ಎಲ್ಲರ ಆಶಯ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !