ಗುರುವಾರ , ನವೆಂಬರ್ 21, 2019
24 °C
ಸಂತೇಮರಹಳ್ಳಿ–ಮೂಗೂರು ಕ್ರಾಸ್‌ : ವರ್ಷದಿಂದಲೂ ಕಾಣದ ದುರಸ್ತಿ, ಗಮನಹರಿಸದ ಅಧಿಕಾರಿಗಳು

ಹದಗೆಟ್ಟ ರಸ್ತೆ, ಸಂಚಾರ ದುಸ್ತರ

Published:
Updated:
Prajavani

‌ಸಂತೇಮರಹಳ್ಳಿ: ಹೋಬಳಿ ಕೇಂದ್ರದಿಂದ ಮೂಗೂರು ಕ್ರಾಸ್‌ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ. 

‘ಈ ಮಾರ್ಗ ಹಾಳಾಗಿ ವರ್ಷ ಕಳೆಯುತ್ತಾ ಬಂದರೂ ಲೋಕೋಪಯೋಗಿ ಇಲಾಖೆ ಗಮನ ಹರಿಸಿಲ್ಲ. ಇದರಿಂದಾಗಿ ನಾವು ತೊಂದರೆ ಅನುಭವಿಸುವಂತಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂತೇಮರಹಳ್ಳಿಯಿಂದ ತಿ.ನರಸೀಪುರ ಮತ್ತು ಕೊಳ್ಳೇಗಾಲಕ್ಕೆ ಸಂಪರ್ಕ ಕಲ್ಪಿಸುವ ಮೂಗೂರು ಕ್ರಾಸ್‍ವರೆಗಿನ ರಸ್ತೆ 8 ಕಿ.ಮೀ ಉದ್ದ ಇದೆ. 8 ಕಿ.ಮೀ ಉದ್ದಕ್ಕೂ ಹಳ್ಳಕೊಳ್ಳಗಳು ಸೃಷ್ಟಿಯಾಗಿವೆ. ರಸ್ತೆಯ ಅಂಚಿನಲ್ಲಿ ಕೊರಕಲು ಉಂಟಾಗಿವೆ.

ಮಳೆಗಾಲವಾಗಿರುವುದರಿಂದ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡಿದೆ. ರಸ್ತೆ ಎಂದು ತಿಳಿದು ವಾಹನ ಚಲಾಯಿಸಿದರೆ ಅಪಘಾತ ಕಟ್ಟಿಟ್ ಟಬುತ್ತಿ. ದಿನೇ ದಿನೇ ರಸ್ತೆಯಲ್ಲಿ ಡಾಂಬರು ಕಿತ್ತು ಬರುತ್ತಿದೆ. ಜಲ್ಲಿಕಲ್ಲುಗಳು ಸ್ಪರ್ಧೆಯಂತೆ ಮೇಲೇಳುತ್ತಿವೆ. ಈ ರಸ್ತೆ ತಿ.ನರಸೀಪುರ, ಮೈಸೂರು, ಬನ್ನೂರು ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವುದರಿಂದ ನೂರಾರು ವಾಹನಗಳು ಸಂಚರಿಸುತ್ತವೆ. ವಿರುದ್ಧ ದಿಕ್ಕಿನಲ್ಲಿ ವಾಹನಗಳು ಬಂದಾಗ ರಸ್ತೆಯ ಅಗಲ ಕಿರಿದಾಗಿರುವುದರಿಂದ ಚಾಲಕರಿಗೆ ಚಲಾಯಿಸಲು ಕಷ್ಟವಾಗುತ್ತದೆ.

ರಸ್ತೆಯ ಉದ್ದಕ್ಕೂ ಸೇತುವೆಗಳು ಇರುವ ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಆಗುತ್ತಿವೆ. ಈಗಾಗಲೇ ವಾಹನಗಳು ಅಪಘಾತಗೊಂಡು ಪ್ರಯಾಣಿಕರು ಮೃತಪಟ್ಟಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ಗಮನ ಹರಿಸಿಲ್ಲ.

ಪ್ರತಿಭಟನೆಗೆ ಜಗ್ಗದ ಅಧಿಕಾರಿಗಳು: ಈ ರಸ್ತೆ ದುರಸ್ತಿಗಾಗಿ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿವೆ. ಈ ಮುಖ್ಯರಸ್ತೆಯ ಕಾವುದವಾಡಿ ಗೇಟ್‍ನಿಂದ ಸಂತೇಮರಹಳ್ಳಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಲೋಕೋಪಯೋಗಿ ಅಧಿಕಾರಿಗಳು ಹಾಗೂ ಸೂಪರಿಂಡೆಂಡೆಂಟ್ ಆಗಮಿಸಿ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದ್ದಾರೆಯೇ ಹೊರತು ಕಾಮಗಾರಿ ಆರಂಭವಾಗಿಲ್ಲ.

ಟೆಂಡರ್‌ ಕರೆಯಲಾಗಿದೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಮಧುಸೂದನ್‌ ಅವರು, ‘₹ 10 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ಟೆಂಡರ್ ಕರೆಯಲಾಗಿದೆ. ಅನುಮೋದನೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು. 

ಶಾಸಕರ ವಿರುದ್ಧ ಅಸಮಾಧಾನ

ವಿಧಾನಸಭಾ ಚುನಾವಣೆಗೂ ಮುನ್ನ ಈಗಿನ ಶಾಸಕ ಎನ್.ಮಹೇಶ್ ಅವರು ರಸ್ತೆ ದುರಸ್ತಿಗೆ ಆಹ್ರಹಿಸಿ ಬಿಎಸ್‍ಪಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದರು. ಜತೆಗೆ, ಸ್ವತಃ ಮಣ್ಣು ತರಿಸಿ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿಸಿದ್ದರು.

‘ಶಾಸಕನಾಗಿ ಆಯ್ಕೆಯಾದರೆ ಮೊದಲು ಈ ರಸ್ತೆಯನ್ನೇ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅವರು ಈಗ ಈ ಭಾಗದ ಶಾಸಕರಾಗಿದ್ದಾರೆ. ಇದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಕೊಟ್ಟ ಮಾತು ಅವರಿಗೆ ಮರೆತುಹೋಗಿದೆ’ ಎಂದು ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಾರದೊಳಗೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ಸಂತೇಮರಹಳ್ಳಿ ವೃತ್ತದಲ್ಲಿ ನಾಲ್ಕು ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು 

ಪ್ರತಿಕ್ರಿಯಿಸಿ (+)