ದಾನಿಗಳ ಒಲವು ಶಾಲೆಯ ಗೆಲುವು

ಭಾನುವಾರ, ಜೂಲೈ 21, 2019
28 °C

ದಾನಿಗಳ ಒಲವು ಶಾಲೆಯ ಗೆಲುವು

Published:
Updated:
Prajavani

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಒಳಗೆ ಹೋಗಲು ಗೇಟ್‌ ತೆಗೆದೆ. ಆದರೆ, ಶಾಲೆಯ ಕಟ್ಟಡವೇ ಕಾಣಿಸದಷ್ಟು ಮರ–ಗಿಡಗಳು ಬೆಳೆದು ನಿಂತಿದ್ದವು. ಗಿಡ–ಮರಗಳ ಟೊಂಗೆಗಗಳನ್ನು ಸರಿಸಿದಾಗ, ಅಂಗಳದಲ್ಲಿದ್ದ ಸಸ್ಯ ಶಾಮಲೆಯರ ಅವಿಭಕ್ತ ಕುಟುಂಬ ಕಂಡು ಮತ್ತಷ್ಟು ಬೆರಗಾದೆ !

ಇಂಥ ಅಪರೂಪದ ಶಾಲೆಯ ಅಂಗಳ ಪ್ರವೇಶಿಸಿದ್ದಂತೆ ಮುಖ್ಯಶಿಕ್ಷಕ ಹುಲ್ಮನಿ ಎದುರಾದರು. ಅವರು ಶಾಲೆಯ ತೋಟವನ್ನೊಮ್ಮೆ ಸುತ್ತು ಹಾಕಿಸಿದರು. ಸುತ್ತಾಟದ ಹೆಜ್ಜೆ ಹೆಜ್ಜೆಯಲ್ಲೂ ವಿವಿಧ ಬಗೆಯ ಸಸ್ಯಗಳು. ಅವುಗಳಲ್ಲಿ ಮೊದಲು ಕಾಣಿಸಿದ್ದು ಕಾಯಿಗಳು ತುಂಬಿಕೊಂಡಿದ್ದ ತೆಂಗಿನ ಮರಗಳು. ಪಕ್ಕದ ತಾಕಿನಲ್ಲಿ ಬಣ್ಣದ ಕ್ರೋಟನ್, ಗುಲಾಬಿ, ಮಲ್ಲಿಗೆ, ಜರಿ ಗಿಡ, ಅಶೋಕ, ಬೆಕ್ಕಿನ ಬಾಲ ಮೊದಲಾದ ಅಲಂಕಾರಿಕ ಸಸ್ಯಗಳಿದ್ದವು. ಇನ್ನೊಂದು ಕಡೆ ಅಡಿಕೆ, ಉತ್ತತ್ತಿ, ಹಣ್ಣು ತುಂಬಿದ ಪಪ್ಪಾಯಿ, ನಿಂಬೆ, ಚಿಕ್ಕು, ಪೇರಲ, ನೇರಳೆ ಹಣ್ಣಿನ ಗಿಡಗಳ ಜತೆಗೆ, ಬೇಲಿಯಲ್ಲಿ ಸಾಗವಾನಿ, ಹೆಬ್ಬೇವು ಜತೆಯಾಗಿದ್ದವು.

ಕೈತೋಟದ ತುಂಬಾ ನುಗ್ಗೆ, ಕರಿಬೇವು, ಪುದಿನ, ಹಾಗಲ, ಸೌತೆ, ಬೆಂಡೆ, ಹೀರೆ, ಗೋಡೆಗೆಲ್ಲ ಹಬ್ಬಿದ ಬಸಳೆ, ಕುಂಬಳ ಬಳ್ಳಿ, ಪಾಲಕ, ಮೆಂತೆ ಮೂಲಂಗಿ, ಕೊತ್ತಂಬರಿ ಸೊಪ್ಪು ಕಂಡಿತು. ಒಂದು ಗುಂಟೆಯಲ್ಲಿ ರಾಜಗೀರವನ್ನೂ ಬೆಳೆದಿದ್ದರು. ‘ಇದನ್ನೆಲ್ಲ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುತ್ತೇವೆ’ ಎಂದರು ಹುಲ್ಮನಿ. ಶಾಲೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಬಳಸಿ ಎರೆಹುಳು ಗೊಬ್ಬರ ತಯಾರಿಸುತ್ತಾರಂತೆ.  ಮುಂದೆ ಎರಡು ಮೂರು ಕಡೆ ಗೊನೆ ಬಿಟ್ಟ ಬಾಳೆ ಗಿಡಗಳು ಕಂಡವು. ‘ಇದೂ ಮಕ್ಕಳಿಗಾಗಿಯೇ’ ಎಂದರು ಅವರು. ಹಣ್ಣಿನ ಗಿಡಗಳ ಜತೆಗೆ ಚಕ್ರಮುನಿ, ಅಲೋವೆರಾದಂತಹ ಔಷಧಿ ಸಸ್ಯಗಳಿದ್ದವು.

ಶಾಲೆಯಲ್ಲಿರುವ ಕೈತೋಟದಷ್ಟೇ ಸುಸಜ್ಜಿತವಾಗಿ ಎರಡು ಕೊಠಡಿಗಳು, ಒಂದು ಬಿಸಿಯೂಟ ಕೋಣೆಯೂ ಇವೆ. ಸುಸಜ್ಜಿತ ಶೌಚಾಲಯಗಳಿವೆ. ಒಂದರಿಂದ ಐದನೇ ತರಗತಿಯವರೆಗೆ 30 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮಕ್ಕಳ ಸಂಖ್ಯೆ ಎಂದೆಂದೂ ಕಡಿಮೆಯಾಗಿಲ್ಲ ಎನ್ನುವುದು ಶಿಕ್ಷಕರ ಅಭಿಪ್ರಾಯ.

ಎಂಟು ವರ್ಷಗಳ ಹಿಂದೆ..

ಮುಖ್ಯ ಶಿಕ್ಷಕ ಹುಲ್ಮನಿಯವರು ಎಂಟು ವರ್ಷಗಳ ಹಿಂದೆ ಶಾಲೆಗೆ ಬಂದಾಗ ಸ್ವಂತ ಕಟ್ಟಡವಿರಲಿಲ್ಲ. ಅಂಜುಮಾನ ಸಂಸ್ಥೆಯ ಕಟ್ಟಡದಲ್ಲಿ ನಡೆಯುತ್ತಿತ್ತು. ಆ ಊರಿನ ಮಾಳಗಿಮನಿ ಎಂಬ ಕುಟುಂಬದವರಿಗೆ ಮನವಿ ಮಾಡಿ, 9 ಗುಂಟೆ ಜಾಗವನ್ನು ದಾನವಾಗಿ ಪಡೆದರು. ಅಲ್ಲಿದ್ದ ವಿದ್ಯುತ್‌ ಪರಿವರ್ತಕವನ್ನು ಸ್ಥಳಾಂತರಿಸಿ ಸರ್ವ ಶಿಕ್ಷಣ ಅಭಿಯಾನದ ಅನುದಾನದಲ್ಲಿ ಎರಡು ವರ್ಗದ ಕೋಣೆಗಳನ್ನೂ, ಅಕ್ಷರ ದಾಸೋಹದಿಂದ ಬಿಸಿಯೂಟ ಕೊಠಡಿಯನ್ನೂ ಕಟ್ಟಿಸಿದರು. ಬಿಸಿಯೂಟಕ್ಕೆ ನೀರಿನ ಕೊರತೆ ಕಾಡಿದಾಗ, ಜಿ.ಪಂ ಎಂಜಿನಿಯರ್ ನಾಸೀರ ಅಹ್ಮದ್‌ ಅವರ ನೆರವಿನಿಂದ ಕೊಳವೆ ಬಾವಿಯನ್ನೂ ಕೊರೆಸಿದ್ದಾಯಿತು. ಅಲ್ಲಿಂದಲೇ ಶಾಲೆಯ ಬೆಳವಣಿಗೆ ಆರಂಭವಾಯಿತು.

ದಾನಿಗಳ ಮಹಾಪೂರ!

ಗ್ರಾಮ ಪಂಚಾಯಿತಿ ಮತ್ತು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ₹4 ಲಕ್ಷ ಅನುದಾನದಲ್ಲಿ ಶಾಲೆಗೆ ಕಾಂಪೌಂಡ್‌ ನಿರ್ಮಾಣವಾದರೆ, ಕೆಲವು ದಾನಿಗಳು ಕುರ್ಚಿ, ಟೇಬಲ್‌, ಡೆಸ್ಕ್‌ಗಳನ್ನು ಕೊಡಿಸಿದರು. ತೋಟಗಾರಿಕಾ ಇಲಾಖೆ ಹೂವು –ಹಣ್ಣಿನ ಗಿಡಗಳನ್ನು ಕೊಟ್ಟರೆ, ಸಿದ್ದಲಿಂಗೇಶ್ವರ ಮಠದ ನಿರಂಜನ ಸ್ವಾಮೀಜಿ ಪೀಠೋಪಕರಣಗಳ ಜತೆಗೆ, ಮೈಕ್‌ಸೆಟ್‌, ಫ್ಯಾನು ಕೊಡಿಸಿ, ಸ್ಮಾರ್ಟ್‌ಕ್ಲಾಸ್, ರಾಷ್ಟ್ರ ಲಾಂಛನ ಮಾಡಿಸಿಕೊಟ್ಟರು. ಒಂದಷ್ಟು ಮಂದಿ ಶಾಲೆಯ ಅಭಿವೃದ್ಧಿ ಹಣ ನೀಡಿದ್ದರೆ, ಇನ್ನೂ ಕೆಲವರು ಕಂಪ್ಯೂಟರ್, ಅದಕ್ಕೆ ಬೇಕಾದ ಕುರ್ಚಿಗಳನ್ನು ಕೊಡಿಸಿದರು. ಶಾಲೆಯ ಅಂಗಳದಲ್ಲಿ ಸುರಕ್ಷತೆಗಾಗಿ ಅಳವಡಿಸಿರುವ ಸಿಸಿ ಟಿವಿ ಕೂಡ ದಾನಿಗಳ ಕೊಡುಗೆಯೇ. ಇದರ ಜತೆಗೆ, ಕೋಟಿಹಾಳದ ಚಂದ್ರು ಎಂಬುವವರು ‘ನಲಿಕಲಿ’ಗೆ ಬೇಕಾದ ಸೌಲಭ್ಯಗಳನ್ನು ಕೊಡಿಸಿದ್ದಾರೆ. ಒಬ್ಬರು ರೇಡಿಯೊ, ಮತ್ತೊಬ್ಬರು ಡ್ರಮ್‌ ಸೆಟ್‌, ಕೈ ತೊಳೆಯುವ ತಟ್ಟೆ.. ಹೀಗೆ ದಾನ ನೀಡಿದವರ ಹೆಸರು ಬರೆಯುತ್ತಿದ್ದರೆ, ಪಟ್ಟಿ ಬೆಳೆಯುತ್ತ ಹೋಗುತ್ತದೆ. ಆ ಪಟ್ಟಿಗೆ ಅಕ್ಕಪಕ್ಕದ ಊರಿನ ದಾನಿಗಳು ಸೇರುತ್ತಾರೆ.

ಶೈಕ್ಷಣಿಕವಾಗಿಯೂ ‘ಸ್ಮಾರ್ಟ್‌’

ಭೌತಿಕವಾಗಿ ಅಭಿವೃದ್ಧಿ ಹೊಂದಿರುವ ಈ ಸರ್ಕಾರಿ ಉರ್ದು ಶಾಲೆ, ಶೈಕ್ಷಣಿಕವಾಗಿಯೂ ಅಷ್ಟೇ ‘ಸ್ಮಾರ್ಟ್‌’ ಆಗಿದೆ ಈ ಶಾಲೆ. ಮಕ್ಕಳ ಹಾಜರಾತಿ ಉತ್ತಮವಾಗಿದೆ. ‘ನಲಿಕಲಿ’ಗೆ ಬೇಕಾದ ಪರಿಕರಗಳನ್ನು ಮಕ್ಕಳೇ ತಯಾರಿಸಿದ್ದಾರೆ. ಮಕ್ಕಳು ಸ್ವಯಂ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಕೊಠಡಿಯಲ್ಲಿ ಮಕ್ಕಳೇ ರಚಿಸಿದ ವಿಜ್ಞಾನದ ಮಾದರಿಗಳನ್ನು ಜೋಡಿಸಿದ್ದಾರೆ. ಅದು ಪುಟ್ಟ ಮ್ಯೂಸಿಯಂನಂತೆ ಕಾಣುತ್ತದೆ. ಇಬ್ಬರು ಶಿಕ್ಷಕರು ಸ್ಮಾರ್ಟ್‌ಕ್ಲಾಸ್‌ನೊಂದಿಗೆ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ‘ಶಾಲೆಯಲ್ಲಿರುವ ಶಿಕ್ಷಕರೇ ದಾನಿಗಳನ್ನು ಹುಡುಕಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸ್ಪಷ್ಟಪಡಿಸುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್.

ಶಿಕ್ಷಣದ ಜತೆಗೆ, ಪರಿಸರ ಪಾಠ, ರಾಷ್ಟ್ರಪ್ರೇಮ ಮತ್ತು ಕೋಮು ಸೌಹಾರ್ದದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ. ಇಂಥ ಉತ್ತಮ ಪರಿಸರಕ್ಕಾಗಿ ಈ ಶಾಲೆಗೆ 2017-18 ರಲ್ಲಿ ‘ಹಸಿರು ಶಾಲೆ’ ಪ್ರಶಸ್ತಿ ಸಂದಿದೆ. 2018–19ನೇ ಸಾಲಿನಲ್ಲಿ ’ಜಿಲ್ಲಾ ಪರಿಸರ ಮಿತ್ರ’ ಶಾಲೆ ಪ್ರಶಸ್ತಿಯೂ ಬಂದಿದೆ. ಇಷ್ಟೆಲ್ಲ ಸಾಧಿಸಲು ಕಾರಣರಾದ ಮುಖ್ಯಶಿಕ್ಷಕ ಹುಲ್ಮನಿಯರೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !