ಬುಧವಾರ, ಆಗಸ್ಟ್ 21, 2019
22 °C
ಕಂದಕೂರಿನಲ್ಲಿ ವಿಶೇಷ ಆಚರಣೆ

ನಾಗಪ್ಪನ ಹಬ್ಬದಂದು ಚೇಳಿನ ಜಾತ್ರೆ

Published:
Updated:

ನಾಗರಪಂಚಮಿ ಹಬ್ಬದಂದು ಎಲ್ಲರೂ ಹಾವಿನ ಪೂಜೆ ಮಾಡುತ್ತಾರೆ. ಆದರೆ, ಯಾದಗಿರಿ ಜಿಲ್ಲೆಯ ಕಂದಕೂರ ಗ್ರಾಮದ ಕೊಂಡ್ಯೆಮ್ಮಾಯಿ ದೇವಸ್ಥಾನದಲ್ಲಿ ಚೇಳಿಗೆ ಪೂಜೆ ಮಾಡುತ್ತಾರೆ.

ಅಷ್ಟೇ ಅಲ್ಲ ಜನ ಚೇಳಿನ ಜತೆ ಆಟವಾಡುತ್ತಾರೆ. ಮಕ್ಕಳು ಬಿಳಿ ಚೇಳನ್ನು ಮೈಮೇಲೆ ಬಿಟ್ಟುಕೊಳ್ಳುತ್ತಾರೆ. ದೊಡ್ಡವರು ಕಪ್ಪು ಚೇಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಾರೆ. ಇದು ಆ ಊರಿನಲ್ಲಿ ವಾರ್ಷಿಕವಾಗಿ ನಡೆಯುವ ‘ಚೇಳಿನ ಜಾತ್ರೆ‘. ನಿನ್ನೆ (ಆಗಸ್ಟ್ 5ರಂದು) ಈ ಜಾತ್ರೆ ನಡೆದಿದೆ.

ಅರೆ, ಇವರಿಗೆ ಚೇಳು ಕುಟುಕುವುದಿಲ್ಲವೇ– ಎಂಬುದು ನಿಮ್ಮ ಮುಂದಿನ ಪ್ರಶ್ನೆ, ಅಲ್ಲವೇ. ‘ಖಂಡಿತಾ ಇಲ್ಲ’ ಎನ್ನುತ್ತಾರೆ ಚೇಳಿನ ಜತೆ ಆಟವಾಡುವ ಮಂದಿ!

ಹೌದು, ಪಂಚಮಿ ಹಬ್ಬದಂದು ಚೇಳು ಯಾರಿಗೂ ಕುಟುಕುವುದಿಲ್ಲವಂತೆ. ಹೀಗಾಗಿ ಮಕ್ಕಳು ಅವುಗಳೊಂದಿಗೆ ಆಟವಾಡುತ್ತಾರೆ. ಗ್ರಾಮಸ್ಥರು ಈ ದಿನದಂದು ಕೊಂಡ್ಯೆಮ್ಮಾಯಿ(ಚೇಳು) ದೇವಸ್ಥಾನಕ್ಕೆ ಬಂದು ಚೇಳು ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ದೇಶ ಪೂರ್ತಿ ನಾಗರಪಂಚಮಿಯಲ್ಲಿ ಮಗ್ನವಾಗಿದ್ದರೆ, ಕಂದಕೂರ ಗ್ರಾಮಸ್ಥರು ಮಾತ್ರ ಚೇಳಿನ ಆರಾಧನೆಯಲ್ಲಿ ನಿರತರಾಗಿರುತ್ತಾರೆ. 


ದೇವಸ್ಥಾನದ ಕೊಂಡ್ಯೆಮ್ಮಾಯಿ ವಿಗ್ರಹ (ಚೇಳಿನ ವಿಗ್ರಹ).

ಈ ಜಾತ್ರೆಯಲ್ಲಿ ದೊಡ್ಡವರಿಗಿಂತ ಮಕ್ಕಳದ್ದೇ ಸಡಗರದ ಓಡಾಟ. ಅವರು ಚೇಳುಗಳನ್ನು ತಮ್ಮ ತಲೆ, ಬಾಯಿ, ಮೂಗು, ಕೈ-ಕಾಲುಗಳೆನ್ನದೆ ಎಲ್ಲೆಂದರಲ್ಲಿ ಹಾಯಿಸಿಕೊಂಡು ಆಟವಾಡುತ್ತಾರೆ. ಇದೆಲ್ಲ ಕಂಡು ಹೊಸಬರು ಬೆಚ್ಚಿಬೀಳುವುದು ಗ್ಯಾರೆಂಟಿ.

ವಿಶೇಷವೆಂದರೆ, ಈ ದಿನದಂದು ಮಾತ್ರವೇ ಬೆಟ್ಟಗುಡ್ಡಗಳಲ್ಲಿ ಚೇಳುಗಳು ಕಾಣಸಿಗುತ್ತವೆ. ಅಂದು ಯಾವುದೇ ಕಲ್ಲು ತೆಗೆದರೂ ಅಲ್ಲಿಂದ ಚೇಳುಗಳು ಹೊರಬರುತ್ತವೆ. ಇದೇನು ವಿಚಿತ್ರವೆಂದು ಕಲ್ಬುರ್ಗಿಯ ಸಂಶೋಧಕರ ತಂಡವೊಂದು ಕಂದಕೂರ ಗ್ರಾಮದಲ್ಲಿ ಬೇರೆ ದಿನಗಳಲ್ಲಿ ಚೇಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಅವು ಪತ್ತೆಯಾಗಲಿಲ್ಲ. ಇದನ್ನು ಭೌಗೋಳಿಕ ಮತ್ತು ಹವಾಮಾನ ವೈಚಿತ್ರ್ಯ ಎಂದು ಹೇಳಲಾಗುತ್ತದೆ.

ಕೊಂಡ್ಯೆಮ್ಮಾಯಿಯ ಕಥೆ
ಚೇಳಿನ ಪೂಜೆಯ ಹಿಂದೆ ಆಸಕ್ತಿಕರ ಕತೆಯಿದೆ. 90 ವರ್ಷಗಳ ಹಿಂದೆ  ಬೆಟ್ಟದ ಮೇಲೆ ಇದ್ದ ಕಲ್ಲಿನ ದಿಬ್ಬವನ್ನೇ ಕೊಂಡ್ಯೆಮ್ಮಾಯಿ ಎಂದು ಪೂಜಿಸುತ್ತಿದ್ದರು. ಹೊಸದಾಗಿ ಬಂದಿದ್ದ ಅರಣ್ಯಾಧಿಕಾರಿ ಅದನ್ನು ತೆರವುಗೊಳಿಸಿದ ನಂತರ ಅವರಿಗೆ ಕಣ್ಣು ಕಾಣದಂತಾಗಿ ಹಲವು ಸಮಸ್ಯೆ ಎದುರಿಸಿದರಂತೆ. ತನ್ನ ತಪ್ಪನ್ನು ಕ್ಷಮಿಸುವಂತೆ ಬೇಡಿ ಚಿಕ್ಕದೊಂದು ದೇಗುಲ ಕಟ್ಟಿಸಿದ ನಂತರ, ಅವರಿಗೆ ಕಣ್ಣು ಕಾಣುವಂತಾದವು ಎಂದು ಸ್ಥಳೀಯರು ಹೇಳುತ್ತಾರೆ. ‘ಈ ಹಿನ್ನೆಲೆಯಲ್ಲಿ ಅಲ್ಲೊಂದು ದೊಡ್ಡ ದೇವಸ್ಥಾನ ನಿರ್ಮಿಸಲಾಗಿದೆ’ ಎಂದು ಗ್ರಾಮದ ಜಲಾಲೂದ್ಧೀನ್, ಭೀಮಶಪ್ಪ ನಂದೆಪಲ್ಲಿ ಹೇಳುತ್ತಾರೆ.

ಕಂದಕೂರಗೆ ಬರುವುದು ಹೇಗೆ?
ಕಲಬುರ್ಗಿ, ಸೇಡಂ, ತೆಲಂಗಾಣದ ಕೋಡಂಗಲ್, ಹೈದರಾಬಾದ್, ಮೆಹಬೂಬ್ ನಗರದಿಂದ ಗುರುಮಠಕಲ್ ಪಟ್ಟಣಕ್ಕೆ ಬಸ್ ಸೌಕರ್ಯವಿದೆ. ಪಟ್ಟಣದಿಂದ ಯಾದಗಿರಿಗೆ ಹೋಗುವ ಬಸ್‌ಗಳು ಈ ಗ್ರಾಮದ ಮಾರ್ಗವನ್ನೇ ಹಾದು ಹೋಗುತ್ತವೆ. ಪ್ರತಿ 30 ನಿಮಿಷಕ್ಕೆ ಒಂದು ಬಸ್ ಸೌಲಭ್ಯವಿದೆ.

ರೈಲು ಮಾರ್ಗವಾಗಿ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಬಂದರೆ, ಇಲ್ಲಿಂದ 30 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಬಸ್‌ ಅಥವಾ ಖಾಸಗಿ ವಾಹನಗಳ ಮೂಲಕ ಬರಬಹುದು.


ಗುರುಮಠಕಲ್ ಹತ್ತಿರದ ಕಂದಕೂರ ಗ್ರಾಮದ ಬೆಟ್ಟದ ಮೇಲಿನ ಕೊಂಡ್ಯೆಮ್ಮಾಯಿ (ಚೇಳಿನ) ದೇವಸ್ಥಾನ.  

 

Post Comments (+)