ಲೈಂಗಿಕ ಚಿಕಿತ್ಸೆಯಲ್ಲಿ ತಂತ್ರಜ್ಞಾನ: ಬೆಳೆದದ್ದು, ಉಳಿದದ್ದು...

7

ಲೈಂಗಿಕ ಚಿಕಿತ್ಸೆಯಲ್ಲಿ ತಂತ್ರಜ್ಞಾನ: ಬೆಳೆದದ್ದು, ಉಳಿದದ್ದು...

Published:
Updated:

2019ರಲ್ಲಿ ಲೈಂಗಿಕ ಆರೋಗ್ಯದ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿದೆ. ಅದರಲ್ಲಿ ಈ ವರ್ಷ ಕೆಲವು ಸಂಶೋಧನೆಗಳು, ಚಿಕಿತ್ಸೆಗಳು ಮುನ್ನೆಲೆಗೆ ಬರುವ, ಇನ್ನೂ ಕೆಲವು ಯಶಸ್ಸು ಕಾಣದ ಮುನ್ಸೂಚನೆಯನ್ನು ನೀಡಿವೆ. ಆ ತಂತ್ರಜ್ಞಾನಗಳು ಇಂತಿವೆ...

ತ್ರೀ ಪೇರೆಂಟ್ ಎಂಬ್ರೋಸ್: ಮೈಟೊ ಕಾಂಡ್ರಿಯಲ್ (ಜೀವಕೋಶಗಳ ಶಕ್ತಿ ಉತ್ಪಾದನಾ ಅಂಗ) ಸಮಸ್ಯೆ ಎದುರಿಸುತ್ತಿರುವ ಮಹಿಳೆಯು ನಿರಾತಂಕವಾಗಿ ಮಗುವನ್ನು ಪಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಸಹಾಯ ಮಾಡಲಿದೆ. ಮೂರು ಮಂದಿಯ ವಂಶವಾಹಿಯನ್ನು ಬಳಸಿ ಮಗುವನ್ನು ಪಡೆಯುವ ‘ತ್ರೀ ಪೇರೆಂಟ್ ಎಂಬ್ರೋಸ್' ಎಂಬ ಈ ತಂತ್ರಜ್ಞಾನ ಸದ್ಯಕ್ಕೆ ಸುದ್ದಿಯಲ್ಲಿದೆ.

ಮಹಿಳೆಯ ಅಂಡಾಣುವನ್ನು ಆರೋಗ್ಯವಂತ ಮೈಟೊಕಾಂಡ್ರಿಯಾದೊಂದಿಗೆ ಸೇರಿಸಿ ಬಲಪಡಿಸಲಾಗುತ್ತದೆ. ಹೀಗೆ ಮಾಡುವುದರ ಮೂಲಕ ಮಹಿಳೆಯು ತನ್ನ ಸಮಸ್ಯೆಯನ್ನು ಮಗುವಿಗೆ ದಾಟಿಸುವುದನ್ನು ತಡೆಯಬಹುದಾಗಿದೆ. ಮೈಟೊಕಾಂಡ್ರಿಯಲ್ ಸಮಸ್ಯೆಯಿರುವ ಮಹಿಳೆಯರಿಗೆ ಇದು ಜೀವನವನ್ನೇ ಬದಲಿಸುವ ತಂತ್ರಜ್ಞಾನವಾಗಿದೆ. ಆದರೆ ಇದು ಅಪರೂಪವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದ್ದು, ಇದರ ಬಳಕೆ ಕೂಡ ಸೀಮಿತವಾಗಿರುತ್ತದೆ.

ಇದೇ ತಂತ್ರಜ್ಞಾನವನ್ನು ವಯಸ್ಸಾದ ಅಂಡಾಣುವಿನ ಗುಣಮಟ್ಟವನ್ನು ವೃದ್ಧಿಸುವಲ್ಲೂ ಬಳಸಬಹುದು ಎಂದು ಕೆಲವು ಸಂಶೋಧಕರು ಸಿದ್ಧಾಂತವನ್ನು ಮಂಡಿಸಿದ್ದಾರೆ. ಆದರೆ ಈ ಅಂಶ ಇನ್ನೂ ಸಾಬೀತಾಗಿಲ್ಲ. ಇದಾಗ್ಯೂ ಈ ವರ್ಷ ಈ ತಂತ್ರಜ್ಞಾನದ ಮೇಲೆ ನಿರೀಕ್ಷೆಗಳು, ಪ್ರಯೋಗಗಳೂ ಹೆಚ್ಚಿವೆ.

ಇನ್ ವಿಟ್ರೊ ಮೆಚುರೇಷನ್ (ಐವಿಎಂ): ಈ ಐವಿಎಂ ತಂತ್ರಜ್ಞಾನದ ಮೂಲಕ ವೈದ್ಯರು ಮಹಿಳೆಯ ಅಂಡಾಶಯದಿಂದ ಅಪಕ್ವ ಅಂಡಾಣುಗಳನ್ನು ತೆಗೆದು, ಹೊರಗೆ, ಅಂದರೆ ದೇಹದ ಹೊರಗೂ ಅಂಡಾಣುಗಳು ಪಕ್ವವಾಗುವಂಥ ವಾತಾವರಣವನ್ನು ಸೃಷ್ಟಿಸು ತ್ತಾರೆ. ಸಾಮಾನ್ಯವಾಗಿ, ಮಹಿಳೆಯರಿಗೆ ದೇಹದ ಒಳಗೇ ಅಂಡಾಣುಗಳು ಪಕ್ವಗೊಳ್ಳುವಂತೆ ಉತ್ತೇ ಜಿಸುವ ಔಷಧಗಳನ್ನು ನೀಡಲಾಗುತ್ತದೆ. ನಂತರ ಪಕ್ವಗೊಂಡ ಅಂಡಾಣುಗಳನ್ನು ತೆಗೆದುಕೊಂಡು ಭ್ರೂಣದ ಅಭಿವೃದ್ಧಿ ಮಾಡಲಾಗುತ್ತದೆ.

ಇದಕ್ಕಾಗಿಯೇ, ಸಂತಾನೋತ್ಪತ್ತಿ ಸಂಬಂಧಿತ ಈ ತಂತ್ರಜ್ಞಾನವು ದೊಡ್ಡಮಟ್ಟದಲ್ಲಿ ಅನವಶ್ಯಕವೆನಿಸುತ್ತದೆ. ಕೆಲವು ಸಂಶೋಧಕರು, ಈ ಐವಿಎಂ ಸಾಧ್ಯತೆಗಳನ್ನು ಬೆಂಬಲಿಸಿ ಸಲಹೆ ನೀಡಿದ್ದಾರೆ. ಐವಿಎಫ್‍ಗೆ ಹೋಲಿಸಿದರೆ ಇದು ದುಬಾರಿಯಲ್ಲದ ಅಥವಾ ಕಡಿಮೆ ಖರ್ಚಿನ ಬದಲಿ ದಾರಿ ಎಂದು ವಾದಿಸಿದ್ದಾರೆ. ಆದರೆ ಲ್ಯಾಬ್‍ನಲ್ಲಿ ಅಂಡಾಣು ಪಕ್ವಗೊಳಿಸುವ ಪ್ರಕ್ರಿಯೆಯಲ್ಲೇ ಹಣ ಖರ್ಚಾಗುತ್ತದೆ, ಜೊತೆಗೆ ಮಹಿಳೆ ಮತ್ತು ವೈದ್ಯರಿಗೆ ಈ ವಿಧಾನವೂ ಕ್ಲಿಷ್ಟವಾಗಿದೆ ಎಂದು ಕೆಲವು ವೈದ್ಯರು ವಾದಿಸಿದ್ದಾರೆ.

ಮಹಿಳೆಯ ಅಂಡಾಶಯದಲ್ಲೇ ಅಂಡಾಣುವನ್ನು ಪಕ್ವಗೊಳಿಸುವುದು ಕಷ್ಟಕರವಾದ ವಿಷಯವಲ್ಲ. ಹಾಗಾಗಿ ಐವಿಎಂ ಸೈದ್ಧಾಂತಿಕವಾಗಿ ಸಾಧ್ಯವಾದರೂ ಭವಿಷ್ಯದಲ್ಲಿ ಇದು ಪರಿಣಾಮಕಾರಿ ಸಾಧನ ಎಂಬುದನ್ನು ಒಪ್ಪುವುದು ಕಷ್ಟ. ಹಾಗಾಗಿ ಈ ಕುರಿತು ಪ್ರಯೋಗಗಳಿಗೆ ಸದ್ಯಕ್ಕೆ ಚಾಲ್ತಿ ಇಲ್ಲ.

ಫಲವಂತಿಕೆಯ ಸಂರಕ್ಷಣೆ: ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗ ಸಾಕಷ್ಟು ತಂತ್ರಜ್ಞಾನಗಳ ಅನ್ವೇಷಣೆಗಳು ನಡೆಯುತ್ತಿವೆ. ಹಾಗೆಯೇ ಮಹಿಳೆಯರಿಗೆ ತಮ್ಮ ಫಲವಂತಿಕೆಯನ್ನು ಸಂರಕ್ಷಿಸಿ ಇಟ್ಟುಕೊಳ್ಳಲೂ ಆಯ್ಕೆಗಳಿವೆ. ಅದರಲ್ಲಿ ಅಂಡಾಣು ಶೀತಲಿಕರಣ ಪ್ರಕ್ರಿಯೆಯೂ ಒಂದು.

ಕೆಲವು ನಿರ್ದಿಷ್ಟ ಕಾರಣಗಳಿಗೆ ಮಹಿಳೆಯರು ತಮ್ಮ ಸಂತಾನಶಕ್ತಿಯನ್ನು ಸಂರಕ್ಷಿಸಿಕೊಳ್ಳುವ ಆಯ್ಕೆ ಇದಾಗಿದೆ. ಮಧ್ಯವಯಸ್ಸು ಮೀರುತ್ತಿರುವ, ಆದರೆ ಇನ್ನೂ ಸಂಗಾತಿ ದೊರೆಯದ ಮಹಿಳೆಯರು ಅಥವಾ ತಮ್ಮ ವೃತ್ತಿ ಭವಿಷ್ಯದಲ್ಲಿ ಇನ್ನಷ್ಟು ಮುನ್ನಡೆ ಸಾಧಿಸುವ ಹಂಬಲ ಹೊತ್ತ ಮಹಿಳೆಯರು, ತಡವಾಗಿ ಕುಟುಂಬ ಹೊಂದುವ ಯೋಜನೆ ಇರುವ ಮಹಿಳೆಯರು ಈ ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಳ್ಳಬಹುದು.

ನೈಸರ್ಗಿಕವಾಗಿ ಮಗುವನ್ನು ಪಡೆಯಲು ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಈ ಆಯ್ಕೆಯನ್ನು ಈಚೆಗೆ ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಕ್ಯಾನ್ಸರ್ ಇರುವ ಮಹಿಳೆ, ಚಿಕಿತ್ಸೆಗೆ ಒಳಗಾಗುವ ಮುನ್ನ ತನ್ನ ಅಂಡಾಣುವನ್ನು ಸಂರಕ್ಷಿಸಿಕೊಂಡು, ಮುಂದೆ ಗುಣವಾದ ನಂತರ ಆರೋಗ್ಯವಂತ ಮಗುವನ್ನು ಪಡೆಯಬಹುದು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಕಿರಣಗಳಿಂದ ಹಾಗೂ ಕೀಮೋಥೆರಪಿ ಚಿಕಿತ್ಸೆಯಿಂದ ಸಂತಾನ ಸಾಮರ್ಥ್ಯದ ಮೇಲೆ ಉಂಟಾಗುವ ಪರಿಣಾಮಗಳ ಹೊರತಾಗಿಯೂ ಆರೋಗ್ಯವಂತ ಮಗುವನ್ನು ಪಡೆಯಲು ಈ ಪ್ರಕ್ರಿಯೆಯಿಂದ ಸಾಧ್ಯವಿದೆ. ಪ್ರಸ್ತುತ, ವೈದ್ಯರು ಹಲವು ವಿಧಗಳಲ್ಲಿ ಅಂಡಾಣು ಅಥವಾ ಫಲವಂತಿಕೆಯನ್ನು ಸಂರಕ್ಷಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಐವಿಎಫ್ (ಕೃತಕ ಗರ್ಭಧಾರಣೆ) ವಿಧಾನದಲ್ಲಿ ಉತ್ತೇಜಕ ಅಂಡಾಣು ಉತ್ಪತ್ತಿಯನ್ನು ನಡೆಸಿ, ಅದನ್ನು ಶೀತಲೀಕರಣವಿಧಾನದಿಂದ ಕಾಪಿಡುವುದು ರೂಢಿ.

ಅಂಡಾಶಯದ ಅಂಗಾಂಶದ ಮೂಲಕ ಅಂಡಾಣುವಿನ ಸಂಗ್ರಹ ಸಾಧ್ಯ ಮಾಡುವಂಥ ಅನ್ವೇಷಣೆಗಳು ಈಚೆಗೆ ಸಾಕಷ್ಟು ನಡೆದಿವೆ. ಈ ಪ್ರಕ್ರಿಯೆಯು ಪರಿಣಾಮಕಾರಿ ಹಾಗೂ ಸುಲಭವೂ ಎನಿಸಿದೆ. ಯುವತಿಯರಿಗೆ ಅಥವಾ ಪ್ರೌಢಾವಸ್ಥೆ ತಲುಪುವ ಮುನ್ನ ಕ್ಯಾನ್ಸರ್ ಅಥವಾ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ, ಇದರಿಂದ ಭವಿಷ್ಯದಲ್ಲಿ ಸಂತಾನ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿಯುಳ್ಳ ಬಾಲಕಿಯರಿಗೆ ಮುಂಜಾಗ್ರತಾ ಕ್ರಮವಾಗಿ ಅಂಡಾಶಯದ ಅಂಗಾಂಶದ ಮೂಲಕ ಶೇಖರಣಾ ಪ್ರಕ್ರಿಯೆಯು ಪ್ರಯೋಜನಕಾರಿ ಎನಿಸಿದೆ.

ಈ ಅಂಗಾಂಶವನ್ನು ಶೇಖರಿಸುವ ಮೂಲಕ ಭವಿಷ್ಯದಲ್ಲಿ ಐವಿಎಫ್ ಪ್ರಕ್ರಿಯೆಗೆ ಒಳಪಡಿಸಿ ತಾಯಿಯಾಗುವ ಸಾಧ್ಯತೆ ಈ ತಂತ್ರಜ್ಞಾನದ ಧನಾತ್ಮಕ ಅಂಶವಾಗಿದ್ದು, ಹೆಚ್ಚು ಪ್ರಚಲಿತದಲ್ಲಿದೆ.

ಮುಂಬರುವ ವರ್ಷಗಳಲ್ಲಿ, ಈ ತಂತ್ರಗಳ ಅಳವಡಿಕೆಯ ಪ್ರಮಾಣವೂ ಹೆಚ್ಚುವುದಾಗಿ ನಿರೀಕ್ಷೆಯಿದೆ. ಈ ವಿಷಯದ ಕುರಿತು ತಜ್ಞರು ಹೆಚ್ಚು ಸಂಶೋಧನೆಗಳನ್ನು ನಡೆಸಿದಂತೆ, ಇದರ ಯಶಸ್ಸಿನ ಪ್ರಮಾಣವೂ ಏರುವ ಭರವಸೆ ವ್ಯಕ್ತವಾಗಿದೆ.

ಸಂತಾನೋತ್ಪತ್ತಿ ತಂತ್ರಜ್ಞಾನ, ಅನ್ವೇಷಣೆಗಿದೆ ಉಜ್ವಲ ಭವಿಷ್ಯ: ಸಂತಾನಶಕ್ತಿ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ಯಶಸ್ವಿಯಾಗಿ ಮಗುವನ್ನು ಪಡೆಯಲು ಸಹಕರಿಸುವ ತಂತ್ರಜ್ಞಾನಗಳನ್ನು ಇನ್ನಷ್ಟು ಪರಿಷ್ಕರಿಸುವ ಅವಶ್ಯಕತೆಯಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ, ವೈದ್ಯಕೀಯ ತಂತ್ರಜ್ಞಾನಗಳು ಈ ಗುರಿಯನ್ನು ತಲುಪುವಲ್ಲಿ ಇನ್ನಷ್ಟು ಎಚ್ಚೆತ್ತುಕೊಳ್ಳಬೇಕಿದೆ. 2019 ಮತ್ತು ಭವಿಷ್ಯದಲ್ಲಿ ಲೈಂಗಿಕ ಆರೋಗ್ಯ ಹಾಗೂ ಸಂಬಂಧಿತ ತಂತ್ರಜ್ಞಾನದಲ್ಲಿ ಯಶಸ್ಸು ಕಾಣುವ ಗುರಿಯೂ ವೈದ್ಯಕೀಯ ಕ್ಷೇತ್ರದ ಮುಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !