ಶುಕ್ರವಾರ, ಫೆಬ್ರವರಿ 26, 2021
31 °C

ಅನಾಥ ರಾಸುಗಳ ಆಶ್ರಯಧಾಮ

ಭಾಗ್ಯ.ಆರ್‌ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ ಪಟ್ಟಣ ಹಾಗೂ ತಾಲ್ಲೂಕಿನ ಸುತ್ತ ಅನಾಥವಾಗಿ ರಾಸುಗಳು ಓಡಾಡುವುದನ್ನು ಕಂಡರೆ, ಅವುಗಳನ್ನು ಕರೆತಂದು ತಮ್ಮ ಗೋಶಾಲೆಯಲ್ಲಿ ಆಶ್ರಯ ನೀಡುತ್ತಾರೆ ಮಹೇಶ ಬಿದರ್‌ಕರ್‌. ವಾರಸುದಾರರಿಲ್ಲದ ಅಶಕ್ತ, ಅಪಘಾತದಲ್ಲಿ ಗಾಯಗೊಂಡ, ರೋಗಗ್ರಸ್ಥ ರಾಸುಗಳಿಗೂ ಸೂರು ಕಲ್ಪಿಸಿ, ಚಿಕಿತ್ಸೆ ಕೊಡಿಸುತ್ತಾರೆ.

‘ಈ ಗೋವುಗಳನ್ನು ಸಾಕಲು ಸಾಧ್ಯವಿಲ್ಲ’ ಎಂದು ಗೋಶಾಲೆಗೆ ತಂದು ಬಿಟ್ಟ ಗೋವುಗಳನ್ನು ಇವರು ಪೋಷಿಸುತ್ತಿದ್ದಾರೆ. ‘ರಾಸುಗಳನ್ನು ಸಾಕುತ್ತೇವೆ. ನಮಗೆ ಕೊಡಿ’ ಎಂದು ಕೇಳಿದವರಿಗೂ ನಿಬಂಧನೆಗಳ ಮೇಲೆ ಗೋವುಗಳನ್ನು ದಾನ ಮಾಡುತ್ತಾರೆ.

ಹೀಗೆ ರಾಸುಗಳ ಪೋಷಣೆಗೆ ನಿಂತಿರುವ ಮಹೇಶ ವೃತ್ತಿಯಲ್ಲಿ ಉಪನ್ಯಾಸಕರು. ಗೋರಕ್ಷಣೆ ಇವರಿಗೆ ಪ್ರವೃತ್ತಿ. ಇದಕ್ಕಾಗಿಯೇ ಕಲಬುರ್ಗಿ ತಾಲ್ಲೂಕಿನ ಕುಸನೂರು ಗ್ರಾಮದ ಹೊರವಲಯದಲ್ಲಿ 4 ಎಕರೆ 5 ಗುಂಟೆ ಜಮೀನಿನಲ್ಲಿ ಶ್ರೀಮಾಧವ ಗೋಶಾಲೆ ತೆರೆದಿದ್ದಾರೆ. 40ಕ್ಕೂ ಹೆಚ್ಚು ರಾಸುಗಳಿಗೆ ಆಶ್ರಯ ನೀಡಿದ್ದಾರೆ. ದೇವಣಿ, ಕಿಲಾರಿಯಂತಹ ಜವಾರಿ ತಳಿಗಳು ಇವೆ. ಇವರ ಕಾರ್ಯಕ್ಕೆ ಕುಟುಂಬ ವರ್ಗದವರು, ಕೆಲ ಸಾರ್ವಜನಿಕರು ಬೆಂಬಲವಾಗಿ ನಿಂತಿದ್ದಾರೆ. ಎರಡು ವರ್ಷಗಳಿಂದ ಈ ಕಾಯಕ ಕೈಗೊಂಡಿದ್ದಾರೆ. ಕಲಬುರ್ಗಿ ನಗರ ಮತ್ತು ಗ್ರಾಮೀಣ ಸುತ್ತಮುತ್ತಲ ತಾಲ್ಲೂಕು ಮತ್ತು ಆಸುಪಾಸಿನ ಜಿಲ್ಲೆಗಳಿಂದ ರೈತರು ರಾಸುಗಳನ್ನು ತಂದು ಬಿಡುತ್ತಾರೆ.

ಇವರ ಗೋಸೇವೆಗೆ ಪೂಜಾರಿ ಶಿವಣ್ಣ ಮತ್ತು ಲಕ್ಷ್ಮಿ ದಂಪತಿ ನೆರವಾಗುತ್ತಾರೆ. ರಾಸುಗಳನ್ನು ಮೇಯಿಸುವುದು, ಮೈ ತೊಳೆಯುವುದು, ಆನಾರೋಗ್ಯದ ಸಂದರ್ಭದಲ್ಲಿ ಉಪಚರಿಸುವ ಕಾಯಕ ಶಿವಣ್ಣ ಪೂಜಾರಿ ಮಾಡುತ್ತಾರೆ. ಪತ್ನಿ ಲಕ್ಷ್ಮಿ ಕೊಟ್ಟಿಗೆ ಶುಚಿಗೊಳಿಸಿ, ಹೊಲದಲ್ಲಿನ ಮೇವನ್ನು ಕತ್ತರಿಸಿ ತರುತ್ತಾರೆ. ಮೇವಿನ ಬೀಜಗಳನ್ನು ನಾಟಿ ಮಾಡುತ್ತಾರೆ. ಬಿಡಾರದಲ್ಲಿರುವ ಹಸುಗಳಿಗೆ ಸಕಾಲಕ್ಕೆ ಮೇವು ನೀರು ಒದಗಿಸುವುದು ನಿತ್ಯದ ಕಾಯಕ. ಗೋಶಾಲೆಯ ಎದುರುಗಡೆ ಹಸುಗಳಿಗೆ ನೀರಿನ ವ್ಯವಸ್ಥೆಗೆ ಒಂದು ತೊಟ್ಟಿಯನ್ನು ನಿರ್ಮಿಸಲಾಗಿದೆ. ಆಗಾಗ ಆ ತೊಟ್ಟಿಗೆ ಸುಣ್ಣವನ್ನು ಬಳಿಯುವ ಮೂಲಕ ಹಸುಗಳಲ್ಲಿರುವ ಕ್ಯಾಲ್ಸಿಯಂ ಕೊರತೆ ನೀಗಿಸಬಹುದು ಎನ್ನುತ್ತಾರೆ ಮಹೇಶ ಬೀದರ್‌ಕರ್.

ಇಲ್ಲಿಯವರೆಗೆ 78 ಗೋವುಗಳನ್ನು 10 ಷರತ್ತುಗಳ ಮುಚ್ಚಳಿಕೆ ಪತ್ರದೊಂದಿಗೆ ರೈತರಿಗೆ ನೀಡಿದ್ದಾರೆ. ಹಸುಗಳನ್ನು ಮಾರುವಂತಿಲ್ಲ. ಮನೆಗಷ್ಟೇ ಉಪಯೋಗಿಸಿಕೊಳ್ಳಬೇಕು. ಬೇರೆ ಊರಿಗೆ ಕಳುಹಿಸುವ ಹಾಗಿಲ್ಲ. ಅವುಗಳನ್ನು ಜೋಪಾನ ಮಾಡಬೇಕು ಎಂಬಂತಹ ಪ್ರಮುಖ ಅಂಶಗಳನ್ನು ಷರತ್ತಿನಲ್ಲಿ ಸೇರಿಸಿದ್ದಾರೆ. ದಾನ ಕೊಟ್ಟ ಹಸುಗಳ ಮಾಲೀಕರ ಬಳಿಗೆ 3 ತಿಂಗಳಿಗೊಮ್ಮೆ ಭೇಟಿ ನೀಡಿ, ಅವುಗಳ ಆರೋಗ್ಯ ವಿಚಾರಿಸುತ್ತಾರೆ. ಏನಾದರೂ ಲೋಪವಿದ್ದರೆ ಅವುಗಳನ್ನು ಮತ್ತೆ ವಾಪಸ್ ಗೋಶಾಲೆಗೆ ಕರೆತರುತ್ತಾರೆ. ‘ಅಫ್ಜಲಪುರದ ನಾಗಣ್ಣ, ಮಲ್ಲಿನಾಥ, ಮಹಾಂತು, ರಾಮಚಂದ್ರ, ರುದ್ರಯ್ಯ, ಶಿವರಾಜ, ಸಂಗಣ್ಣ, ಅಜಯ್‌, ಬಸವಕಲ್ಯಾಣದ ಸಂಜೀವರೆಡ್ಡಿ, ನಾಗನಾಥ ನಾರಾಯಣಪುರೆ..ಹೀಗೆ ಆಕಳು ದಾನ ಪಡೆದವರನ್ನು ಪಟ್ಟಿ ಮಾಡಿದರೆ, ಅದು ಬೆಳೆಯುತ್ತಲೇ ಇರುತ್ತದೆ’ ಎಂದು ಮಹೇಶ ಸಂತಸದಿಂದ ಪಟ್ಟಿ ಮಾಡುತ್ತಾರೆ.

ಗೋಶಾಲೆಗೆ ಬಾಡಿಗೆ ಹಾಗೂ ನಿರ್ವಹಣೆ ಮಾಡುವ ದಂಪತಿಗೆ ವೇತನ ಸೇರಿ ತಿಂಗಳಿಗೆ ₹ 20 ಸಾವಿರಕ್ಕಿಂತ ಹೆಚ್ಚು ಖರ್ಚಾಗುತ್ತದೆ. ಕೆಲವೊಮ್ಮೆ ಸಂಘಟನೆಗಳು, ರೈತರು ಸಹಾಯ ಮಾಡುತ್ತಾರೆ. ನಗರದ  ಕೆಲ ಅಂಗಡಿಗಳಲ್ಲಿ ಹುಂಡಿಗಳ ರೂಪದಲ್ಲಿ ಡಬ್ಬಿಗಳನ್ನು ಇಟ್ಟಿದ್ದೇವೆ. ಅವುಗಳಿಂದ ಹೆಚ್ಚಾಗಿ ಏನು ದೊರೆಯುವುದಿಲ್ಲ. ಇನ್ನುಳಿದಂತೆ ನಾನೇ ಖರ್ಚನ್ನು ಭರಿಸುತ್ತೇನೆ. ನಾನು ಸರ್ಕಾರಿ ನೌಕರಿಯಲ್ಲಿರುವುದರಿಂದ ಏನು ಸಮಸಮ್ಯೆಯಾಗಿಲ್ಲ ಎಂದು ಮಹೇಶ ಹೇಳುತ್ತಾರೆ. ಗಣೇಶ ಗೆಳೆಯರ ಬಳಗ, ರಾಜಸ್ಥಾನಿ ಸಮಾಜ, ದಾಲ್‌ಮಿಲ್‌ ಅಸೋಷಿಯೇಶನ್‌, ಜೈನ್‌ ಯುಥ್‌ ಫೋರಂ ಹೀಗೆ ಅನೇಕ ಸಂಘ,ಸಂಸ್ಥೆಗಳು ಹಣದ ಸಹಾಯವನ್ನು ಮಾಡುತ್ತವೆ.

ರಾಸುಗಳಿಗೆ ಪ್ರತಿದಿನ ಬೆಳಿಗ್ಗೆ ಗೋವಿನ ಜೋಳದ ಹಿಂಡಿ ಕೊಡುತ್ತಾರೆ. ಒಂದು ಎಕರೆಯಲ್ಲಿ ಎಲಿಫೆಂಟಾ, ನೇಪಿಯರ್ ಹುಲ್ಲು, ಕುದುರೆ ಮೆಂತೆ ಹೀಗೆ ವಿವಿಧ ಮೇವಿನ ಬೆಳೆಗಳನ್ನು ಬೆಳೆಸಿದ್ದಾರೆ. ನಾಗನಳ್ಳಿಯ ತವನಿಧಿ ಗೋದಾಮಿನಿಂದ, ಗುಂಡಪ್ಪ ಎನ್ನುವ ರೈತರು ಉಚಿತವಾಗಿ ಮೇವಿನ ಬೀಜಗಳನ್ನು ಕೊಡುತ್ತಾರೆ. ಹೊಲದ ಮಾಲೀಕರೇ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್‌ ಕೊರೆಸಿಕೊಟ್ಟಿದ್ದಾರೆ. ನೀರಿಗೆ ತೊಂದರೆಯೂ ಇಲ್ಲ. ಕಲಬುರ್ಗಿ ಆಸುಪಾಸಿನ ಅಫ್ಜಲಪುರ, ಚಿತ್ತಾಪುರ, ಹುಮನಾಬಾದ್‌, ಜೇವರ್ಗಿ, ಸೇಡಂ ತಾಲ್ಲೂಕು ಗ್ರಾಮಗಳ ರೈತರು ಗೋವುಗಳಿಗೆ ಮೇವನ್ನು ಉಚಿತವಾಗಿ ಕೊಡುತ್ತಾರೆ. ಕಲಬುರ್ಗಿಯ ಕೆಲವು ದಾಲ್‌ ಮಿಲ್‌ ಮಾಲೀಕರು ತೊಗರಿ ಚಿನ್ನಿ(ತೊಗರಿ ಬೇಳೆಯ ಪುಡಿ ಮಿಶ್ರಿತ ಹೊಟ್ಟು) ಕೊಡುತ್ತಾರೆ.

ರಾಜೀವ್‌ ದೀಕ್ಷಿತ್ ಪ್ರೇರಣೆ

ಮಾಧವ ಗುರೂಜಿಯವರು 1954ರಲ್ಲಿ ಭಾರತದಾದ್ಯಂತ ಸಂಚರಿಸಿ ಗೋವುಗಳ ರಕ್ಷಣೆಗೆ 3 ಲಕ್ಷ ಸಹಿ ಸಂಗ್ರಹಿಸಿದ್ದರು. ಗೋವುಗಳ ರಕ್ಷಣೆಗೆ ಹೋರಾಡಿದರು. ರಾಜೀವ ದೀಕ್ಷಿತರು ಗೋವುಗಳ ಕುರಿತು ಇದ್ದ ಕಾಳಜಿಯಿಂದ ನಾನು ಪ್ರೇರಿತವಾದೆ. ರಸ್ತೆಯಲ್ಲಿ ಓಡಾಡುವ ಬೀಡಾಡಿ ದನಗಳ ಕಷ್ಟ ನೋಡಿ ಗೋಶಾಲೆ ಆರಂಭಿಸಬೇಕೆನಿಸಿತು. ಮಾತ್ರವಲ್ಲ, ಅಶಕ್ತ ಗೋವುಗಳನ್ನು ಪೋಷಿಸುವುದು ಮತ್ತು ಅವುಗಳಿಂದ ಉಪಯೋಗ ಪಡೆಯುವದನ್ನು ರೈತರಿಗೆ ತಿಳಿಸುವ ನಿಟ್ಟಿನಲ್ಲಿ ಗೋಶಾಲೆ ನಡೆಸುತ್ತಿದ್ದೇನೆ ಎನ್ನುತ್ತಾರೆ ಮಹೇಶ ಬೀದರ್‌ಕರ್‌.

ಗೊಬ್ಬರ, ವಿಭೂತಿ ತಯಾರಿಕೆ

‌ಗೋಶಾಲೆ ಕೇವಲ ರಾಸುಗಳ ಆಶ್ರಯ ತಾಣವಷ್ಟೇ ಅಲ್ಲ. ಗೋವುಗಳ ಪೋಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಅಶಕ್ತ ಹಸುಗಳನ್ನು ಪೋಷಿಸುತ್ತಾ ಕೃಷಿ ಚಟುವಟಿಕೆಗಳಿಗೆ ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸಗಣಿ, ಗೋಮೂತ್ರದಿಂದ ಗೊಬ್ಬರ ಹಾಗೂ ಕೀಟನಿಯಂತ್ರಕ ಹಾಗೂ ಶುದ್ಧ ವಿಭೂತಿಯನ್ನು ತಯಾರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಆಸಕ್ತ ರೈತರಿಗೆ ಎರೆಹುಳು ಗೊಬ್ಬರದ ಕುರಿತು ತರಬೇತಿಯನ್ನು ನೀಡುತ್ತಾರೆ. ಎರೆಹುಳುಗಳನ್ನು ಉಚಿತವಾಗಿ ನೀಡುತ್ತಾರೆ. ಮಹೇಶ ಅವರ ಸಂಪರ್ಕಕ್ಕೆ: 9242868095

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು