ಮಳೆ ಕೊರತೆ: ಬಿತ್ತನೆ ಪ್ರಮಾಣ ಕುಂಠಿತ

ಮಂಗಳವಾರ, ಜೂನ್ 18, 2019
24 °C
ಮುಂಗಾರು ಹಂಗಾಮು: ಜಿಲ್ಲೆಯಾದ್ಯಂತ ಶೇ 29.53ರಷ್ಟು ಬಿತ್ತನೆ

ಮಳೆ ಕೊರತೆ: ಬಿತ್ತನೆ ಪ್ರಮಾಣ ಕುಂಠಿತ

Published:
Updated:
Prajavani

ಚಾಮರಾಜನಗರ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಹಿನ್ನಡೆಯಾಗಿದೆ. 

ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ (ಹನೂರು ಸೇರಿ) ನಿಗದಿತ ಗುರಿಯಷ್ಟು ಬಿತ್ತನೆಯಾಗಿಲ್ಲ. ಶೇ 29.53ರಷ್ಟು ಪ್ರಮಾಣದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ 1,37,770 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಈ ಪೈಕಿ ಜೂನ್‌ 3ರ ವರೆಗೆ 40,688 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. 

ರೈತರು ಉದ್ದು, ಹೆಸರು, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಹತ್ತಿ ಮತ್ತು ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ಮಳೆಯಾಶ್ರಿತ ಜಮೀನು ಹೊಂದಿರುವ ರೈತರು ಸರಿಯಾಗಿ ಮಳೆ ಬಾರದೆ ಇರುವುದರಿಂದ ಕೃಷಿ ಚಟುವಟಿಕೆಗೆ ಇಳಿಯಲು ಮುಂದಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 

ಗುಂಡ್ಲುಪೇಟೆಯಲ್ಲಿ ಹೆಚ್ಚು, ಕೊಳ್ಳೇಗಾಲದಲ್ಲಿ ಕಡಿಮೆ: ನಾಲ್ಕು ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಅಂದರೆ ಶೇ 62.5ರಷ್ಟು ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿಗದಿತ ಗುರಿಯ ಶೇ 83ರಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ತಾಲ್ಲೂಕಿನಲ್ಲಿ 42,465 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ನಡೆಸುವ ಗುರಿ ಹೊಂದಲಾಗಿದೆ. 26,100 ಹೆಕ್ಟೇರ್‌ ಜಾಗದಲ್ಲಿ ಬಿತ್ತನೆ ಪೂರ್ಣಗೊಂಡಿದೆ. 

ಹನೂರನ್ನೂ ಒಳಗೊಂಡ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 8.4ರಷ್ಟು ಪ್ರದೇಶದಲ್ಲಿ ರೈತರು ಬಿತ್ತಿದ್ದಾರೆ. ಕಳೆದ ವರ್ಷ ಇ‌ದೇ ಸಮಯದಲ್ಲಿ ನಿಗದಿತ ಗುರಿಯ ಶೇ 10.50ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ವರ್ಷದ ಮುಂಗಾರು ಅವಧಿಯಲ್ಲಿ ತಾಲ್ಲೂಕಿನಲ್ಲಿ 55,045 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಜೂನ್‌ 3ರ ವರೆಗೆ 4,643 ಹೆಕ್ಟೇರ್‌ನಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ. 

ಉಳಿದಂತೆ ಯಳಂದೂರು ತಾಲ್ಲೂಕಿನಲ್ಲಿ ಶೇ 34ರಷ್ಟು ಮತ್ತು ಚಾಮರಾಜನಗರದಲ್ಲಿ ಶೇ 21.2ರಷ್ಟು ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.

ಬೀಜ ದಾಸ್ತಾನು: ಮುಂಗಾರು ಪೂರ್ವ ಮಳೆ ಆರಂಭವಾಗುವುದಕ್ಕೂ ಮುನ್ನ ಕೃಷಿ ಇಲಾಖೆಯು ಎಲ್ಲ 16 ಹೋಬಳಿಗಳ ರೈತ ಸಂಪರ್ಕ ಕೇಂದ್ರದಲ್ಲಿ 2,356 ಕ್ವಿಂಟಲ್‌ ಬಿತ್ತನೆ ಬೀಜವನ್ನು ದಾಸ್ತಾನು ಇಟ್ಟಿತ್ತು. ಇದುವರೆಗೆ 1,531 ಕ್ವಿಂಟಲ್‌ ಬೀಜವನ್ನು ರೈತರಿಗೆ ವಿತರಣೆ ಮಾಡಿದೆ. 

‘ಸದ್ಯಕ್ಕೆ ಬಿತ್ತನೆ ಬೀಜಗಳ ಕೊರತೆ ಇಲ್ಲ. ಇನ್ನಷ್ಟು ಬೀಜ ಪೂರೈಸಲು ಇಲಾಖೆಗೆ ಪತ್ರ ಬರೆಯಲಾಗಿದೆ. ಸಾಕಷ್ಟು ರಸಗೊಬ್ಬರವೂ ದಾಸ್ತಾನು ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೇ 11ರಷ್ಟು ಮಳೆ ಕೊರತೆ

ಜನವರಿ 1ರಿಂದ ಜೂನ್‌ 3ರ ವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಲೆಕ್ಕ ಹಾಕಿದರೆ ಶೇ 11ರಷ್ಟು ಮಳೆಯ ಕೊರತೆ ಉಂಟಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಸರಾಸರಿ 242.8 ಮಿ.ಮೀ ಮಳೆಯಾಗುತ್ತದೆ. ಈ ವರ್ಷ 216.8 ಮಿ.ಮೀನಷ್ಟು ಮಳೆ ಬಿದ್ದಿದೆ. 

ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ಇಲ್ಲಿ ಶೇ 1ರಷ್ಟು ಕೊರತೆ ಉಂಟಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಕೊರತೆಯಾಗಿದೆ. ಹೊಸ ವರ್ಷಾರಂಭದಿಂದ ಇದುವರೆಗೆ ಶೇ 19ರಷ್ಟು ಕಡಿಮೆ ಮಳೆ ಸುರಿದಿದೆ. 

ಜೂನ್‌ ತಿಂಗಳ ಮೊದಲ ಐದು ದಿನಗಳಲ್ಲಿ ಜಿಲ್ಲೆಯಾದ್ಯಂತ ಹೆಚ್ಚು ಮಳೆಯಾಗಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಶೇ 44ರಷ್ಟು ಮಳೆ ಕಡಿಮೆಯಾಗಿದೆ. ಈ ಐದು ದಿನಗಳಲ್ಲಿ ವಾಡಿಕೆ 15.40 ಮಿ.ಮೀ ಮಳೆಯಾಗುತ್ತದೆ. ಈ ವರ್ಷ 8.57 ಮಿ.ಮೀ ಮಾತ್ರ ಮಳೆ ಬಿದ್ದಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !