ಸೋಮವಾರ, ಸೆಪ್ಟೆಂಬರ್ 16, 2019
22 °C

ಸಿಂದಗಿಯಲ್ಲಿ ನೀರಿಗಾಗಿ ಪರಿತಪಿಸುವಿಕೆ

Published:
Updated:
Prajavani

ಸಿಂದಗಿ: ‘ಪಟ್ಟಣಿಗರ ತಾಳ್ಮೆ, ಸಹನೆಗೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಬೇಕು. ಆದರೆ ಅತಿ ಉದಾರಿತನವೂ ಒಳ್ಳೆಯದಲ್ಲ. ಮಗು ಅತ್ತರೆ ತಾನೇ ತಾಯಿ ಹಾಲು ಉಣಿಸುತ್ತಾಳೆ. ಹಾಗೇ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ದರೂ; ಅದನ್ನು ಸಹಿಸಿಕೊಂಡವರಿಗೆ ಏನನ್ನಬೇಕು... ಎಂಬುದೇ ತೋಚದಾಗಿದೆ...’

ನೀರಿನ ತ್ರಾಸಿನ ಬಗ್ಗೆ ಸಿಂದಗಿಯ ಕಲ್ಯಾಣ ನಗರದ ಮಹಿಳೆಯರ ಆಕ್ರೋಶದ ನುಡಿಗಳಿವು.

‘ಸಿಂದಗಿ ಕೆರೆಗೆ ನೀರು ಬಂದಿವೆ. ಇನ್ನೇನು ನೀರಿನ ಸಮಸ್ಯೆ ಉಂಟಾಗಲ್ಲ ಎಂದು ಜನತೆ ಸಂತಸದಲ್ಲಿರುತ್ತಿದ್ದಂತೆ, ಪುರಸಭೆಯ ದಿವ್ಯ ನಿರ್ಲಕ್ಷ್ಯತನದಿಂದಾಗಿ, ಆಲಮಟ್ಟಿ ಜಲಾಶಯದಿಂದ ಬಂದ ನೀರು ವ್ಯರ್ಥವಾದಂತಾಗಿದೆ.

ಪುರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿಯಿದ್ದಿದ್ದರೆ, ಜನರು ಸದಸ್ಯರ ಕೊರಳಪಟ್ಟಿ ಹಿಡಿದು ಕೇಳುತ್ತಿದ್ದರು. ಆದರೆ ಈಗ ಆಡಳಿತಾಧಿಕಾರಿ ಅವಧಿ ಇದ್ದ ಕಾರಣ ಮುಖ್ಯಾಧಿಕಾರಿಯಾಗಲಿ, ಆಡಳಿತಾಧಿಕಾರಿಯಾಗಲಿ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಾಧಿಕಾರಿಯ ಪ್ರತಿಕ್ರಿಯೆ ಯಾವತ್ತೂ ಉಡಾಫೆ ರೀತಿಯಲ್ಲಿರುತ್ತವೆ’ ಎಂಬ ಗಂಭೀರ ಆರೋಪ ಪುರಸಭೆ ಮಾಜಿ ಸದಸ್ಯ ಎಸ್.ಎಸ್.ಬಿರಾದಾರ ಅವರದ್ದು.

ಪಟ್ಟಣದಲ್ಲಿ ಒಂದೂವರೆ ವರ್ಷದ ಹಿಂದೆ ವಾರ್ಡ್ ನಂಬರ್‌ 6, 8, 9ರಲ್ಲಿ ತಲಾ ₹ 5.50 ಲಕ್ಷ ವೆಚ್ಚದಲ್ಲಿ ಪುರಸಭೆಯ 14ನೇ ಹಣಕಾಸು ಯೋಜನೆಯಡಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಯಿತು.

6, 9ನೇ ವಾರ್ಡ್‌ಗಳ ಘಟಕಗಳು ಆರಂಭಗೊಂಡ ಎರಡ್ಮೂರು ದಿನಗಳಲ್ಲಿಯೇ ಸ್ಥಗಿತಗೊಂಡವು. 6ನೇ ವಾರ್ಡ್ ಘಟಕಕ್ಕೆ ನೀರಿಲ್ಲ ಅಂತ ಬಂದ್ ಆಯ್ತು. ಈ ಘಟಕದ ಗ್ಲಾಸುಗಳನ್ನು ಒಡೆದು ಮೋಟರ್‌, ನೀರು ಸಂಗ್ರಹಣೆ ಸಿಂಟೆಕ್ಸ್ ಕಳ್ಳತನವಾಗಿದೆ. 9ನೇ ವಾರ್ಡ್ ಘಟಕದ ಕೊಳವೆಬಾವಿಯನ್ನು ವ್ಯಕ್ತಿಯೊಬ್ಬರು ತನ್ನ ಕಬ್ಜಾಗೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇವರೆಡರ ಪರಿಸ್ಥಿತಿ ಹೀಗಾದರೆ, ಇನ್ನೂ 8ನೇ ವಾರ್ಡ್ ಘಟಕವನ್ನು ವ್ಯಕ್ತಿಯೊಬ್ಬರು ತಮ್ಮ ಒಡೆತನಕ್ಕೆ ತೆಗೆದುಕೊಂಡಿದ್ದು, ನೀರು ಮಾರಾಟ ಮಾಡುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿರುವ ಸುದ್ದಿ.

ವಾರ್ಡ್ ನಂಬರ್‌ 21, 2ರಲ್ಲಿ ಖಾಸಗಿ ಶುದ್ಧ ನೀರಿನ ಘಟಕದ ಮಾಲೀಕರು, ಪುರಸಭೆಯ ಕೊಳವೆಬಾವಿಯ ನೀರು ಜೋಡಣೆ ಮಾಡಿಕೊಂಡು, ನೀರು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಾಪಕವಾಗಿದೆ.

ಕೆರೆ ಖಾಲಿಯಾಗಿದ್ದರಿಂದ, ಕಳೆದ ವಾರದಿಂದ ಪಟ್ಟಣಕ್ಕೆ ಪುರಸಭೆ ನೀರು ಪೂರೈಕೆ ಸ್ಥಗಿತಗೊಳಿಸಿದೆ. ಮತ್ತೆ ಟ್ಯಾಂಕರ್ ನೀರು ಆರಂಭಿಸುವರೋ... ಇಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತೆ ಆಲಮಟ್ಟಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವರೋ ನೋಡಬೇಕಿದೆ ಎಂಬ ಆಶಾಭಾವನೆ ಸಿಂದಗಿ ಪಟ್ಟಣಿಗರದ್ದಾಗಿದೆ.

Post Comments (+)