ಆರು ದಶಕದ ಕಟ್ಟಡ ಇತಿಹಾಸದ ಪುಟಕ್ಕೆ..!

7
₹ 3 ಕೋಟಿ ವೆಚ್ಚದಲ್ಲಿ ನೂತನ ಚರ್ಚ್‌ ನಿರ್ಮಾಣದ ನೀಲನಕ್ಷೆ

ಆರು ದಶಕದ ಕಟ್ಟಡ ಇತಿಹಾಸದ ಪುಟಕ್ಕೆ..!

Published:
Updated:
Prajavani

ವಿಜಯಪುರ: ವಿಜಯಪುರದ ಸಂತ ಅನ್ನಮ್ಮನವರ ಚರ್ಚ್‌ಗೆ ಶತಮಾನದ ಐತಿಹ್ಯವಿದೆ. ಕ್ರೈಸ್ತ ಧರ್ಮ ಪ್ರಸಾರಕ್ಕಾಗಿ 1882ರಲ್ಲಿ ಕ್ಯಾಥೋಲಿಕ್‌ ಕ್ರಿಶ್ಚಿಯನ್ನರು ನಗರದಲ್ಲಿ ನಿರ್ಮಿಸಿದ ಚರ್ಚ್‌ ತನ್ನದೇಯಾದ ವೈಶಿಷ್ಟ್ಯ ಹೊಂದಿದೆ.

137 ವರ್ಷದ ಇತಿಹಾಸ ಹೊಂದಿರುವ ಸಂತ ಅನ್ನಮ್ಮ ಚರ್ಚ್‌ಗೆ, ಇದೀಗ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅನುಮತಿಯ ಮುದ್ರೆಯೊತ್ತಿದ್ದು, ಫೆ.15ರ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

‘400ಕ್ಕೂ ಹೆಚ್ಚು ಜನರು ಏಕ ಕಾಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಚರ್ಚ್‌ ನಿರ್ಮಾಣದ ನೀಲ ನಕ್ಷೆ ರೂಪಿಸಲಾಗಿದೆ. ಇದರ ಜತೆಗೆ ಸಮುದಾಯದ ಜನರು ವಿವಿಧ ಸಮಾರಂಭ ಹಮ್ಮಿಕೊಳ್ಳಲು ಸಭಾಂಗಣ ನಿರ್ಮಿಸುವ ಯೋಜನೆಯೂ ಇದರೊಳಗೆ ಅಡಕಗೊಂಡಿದೆ’ ಎಂದು ಚರ್ಚ್‌ನ ಫಾದರ್‌ ಜಾನ್ ತಿಳಿಸಿದರು.

‘ಕಟ್ಟಡದ ಕೆಳ ಭಾಗದಲ್ಲಿ ಸಭಾಂಗಣ, ಮೇಲ್ಭಾಗದಲ್ಲಿ ಪ್ರಾರ್ಥನಾ ಮಂದಿರವಿರಲಿದೆ. ಕನಿಷ್ಠ ₹ 3 ಕೋಟಿ ಮೊತ್ತದ ಯೋಜನೆಯಿದು. ನಮ್ಮ ಸಂಸ್ಥೆ ನಿರ್ಮಾಣ ವೆಚ್ಚ ಭರಿಸುವ ಜತೆ, ಜನರಿಂದಲೂ ದೇಣಿಗೆ ಸ್ವೀಕರಿಸಲಾಗುವುದು. ನಗರ ಶಾಸಕರು ತಮ್ಮ ಅನುದಾನದಲ್ಲಿ ₹ 10 ಲಕ್ಷ ನೀಡುವ ಭರವಸೆ ನೀಡಿದ್ದಾರೆ’ ಎಂದು ಜಾನ್‌ ಮಾಹಿತಿ ನೀಡಿದರು.

ಅನುಮತಿಗಾಗಿ ಎರಡು ವರ್ಷ

‘ಐತಿಹಾಸಿಕ ಬುಖಾರಿ ಮಸೀದಿಯಿಂದ 200 ಮೀಟರ್‌ ವ್ಯಾಪ್ತಿಯೊಳಗೆ ಈ ಚರ್ಚ್‌ ಬರಲಿದೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆ ಆಡಳಿತಕ್ಕೆ ಎರಡು ವರ್ಷದ ಹಿಂದೆ ಮನವಿ ಮಾಡಿಕೊಂಡಾಗ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿ ಪಡೆಯುವಂತೆ ಸೂಚಿಸಿದ್ದರು.

ಆಗಿನಿಂದಲೂ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆದಿದ್ದವು. ಇದೀಗ ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಅನುಮತಿ ದೊರೆತು, ಮುಂದಿನ ಪ್ರಕ್ರಿಯೆಗೆ ಬೆಂಗಳೂರು ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ. ವಾರದೊಳಗೆ ಅನುಮತಿ ಪತ್ರ ನಮ್ಮ ಕೈ ಸೇರುವ ನಿರೀಕ್ಷೆಯಿದೆ. ನಂತರ ಹಳೆಯ ಶಿಥಿಲ ಕಟ್ಟಡ ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು’ ಎಂದು ಜಾನ್‌ ಹೇಳಿದರು.

‘ಚರ್ಚ್‌ ಮುಂಭಾಗದ ಮಹಾತ್ಮ ಗಾಂಧಿ ರಸ್ತೆ ಅಭಿವೃದ್ಧಿಗೊಂಡು ಎತ್ತರವಾಯ್ತು. ಚರ್ಚ್‌ ಆವರಣ ತಗ್ಗಾಯಿತು. ಮಳೆ ಬಂದರೆ ರಸ್ತೆಯ ನೀರು ಚರ್ಚ್‌ ಆವರಣಕ್ಕೆ ನುಗ್ಗುತ್ತಿತ್ತು. ಹೊರಹೋಗಲು ಸ್ಥಳವಿಲ್ಲದೆ ಭಾಳ ತ್ರಾಸು ಪಡಬೇಕಿತ್ತು. ಇದರ ಜತೆಗೆ ಹಾಲಿ ಕಟ್ಟಡವೂ ಶಿಥಿಲಾವಸ್ಥೆಗೆ ತಳಲ್ಪಟ್ಟಿತು.

ಚರ್ಚ್‌ ಕಟ್ಟಡದ ಮೇಲ್ಛಾವಣಿ ಎತ್ತರದಲ್ಲಿರಲಿಲ್ಲ. ಬೇಸಿಗೆ ದಿನಗಳಲ್ಲಿ ಬಿಸಿಲ ಝಳ ತಾಳುವುದು ಕಷ್ಟವಾಗುತ್ತಿತ್ತು. ಇದರ ಜತೆಯಲ್ಲೇ ಮೇಲ್ಛಾವಣಿ ಅಲ್ಲಲ್ಲೇ ಕುಸಿದು ಬೀಳುತ್ತಿದೆ. ಪ್ರಾರ್ಥನೆಗೆ ಬರುವ ಜನರ ಸಂಖ್ಯೆಯೂ ಹೆಚ್ಚಿದ್ದರಿಂದ ನೂತನ ಚರ್ಚ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಈಗಾಗಲೇ ಕಟ್ಟಡದ ತೆರವು ಆರಂಭಗೊಂಡಿದೆ. ಸುತ್ತಲಿನ ಮರಗಳನ್ನು ತೆಗೆಯಲಾಗಿದೆ. ಈ ಹಿಂದಿದ್ದ ಕಟ್ಟಡದ ಅಡಿಪಾಯ ಭದ್ರವಿರಲಿಲ್ಲ. ಈ ಬಾರಿ ಬಹು ವರ್ಷ ಬಾಳಿಕೆ ಬರುವಂಥ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ’ ಎಂದರು.

ಸಂತ ಅನ್ನಮ್ಮ ಚರ್ಚ್‌ ಐತಿಹ್ಯ..!

‘1882ರಲ್ಲಿ ಆಗಿನ ಮುನಿಸಿಪಾಲಿಟಿ ವತಿಯಿಂದ ಜಾಗ ಖರೀದಿಸಿ ಪುಟ್ಟ ಕಟ್ಟಡ ನಿರ್ಮಿಸಲಾಗಿತ್ತು. ಅದರೊಳಗೆ 20 ಜನರಿಗಷ್ಟೇ ಪ್ರಾರ್ಥನೆ ಸಲ್ಲಿಸಲು ಅವಕಾಶವಿತ್ತು.’

‘ಜನಸಂಖ್ಯೆ ಹೆಚ್ಚಿದಂತೆ 1956ರಲ್ಲಿ ಈಗಿನ ಕಟ್ಟಡ ನಿರ್ಮಿಸಲಾಗಿತ್ತು. ಕಟ್ಟಡದ ತಳಪಾಯ ಭದ್ರವಿಲ್ಲ. ಇದರ ಜತೆ ಹಲವು ಸಮಸ್ಯೆ ಸೇರಿಕೊಂಡಿದ್ದವು. 150 ಜನರ ಪ್ರಾರ್ಥನೆಗಷ್ಟೇ ಈ ಕಟ್ಟಡದಲ್ಲಿ ಅವಕಾಶವಿತ್ತು.’

‘ನಮ್ಮ ಚರ್ಚ್‌ ಮುಕ್ತ. ದೇವನ ಪ್ರಾರ್ಥನೆಗೆ ಇಲ್ಲಿ ಎಲ್ಲರಿಗೂ ಅವಕಾಶವಿದೆ. ಕ್ರಿಶ್ಚಿಯನ್ನರು ಹೊರತುಪಡಿಸಿ ಅನ್ಯ ಧರ್ಮೀಯರು ಬರುತ್ತಿದ್ದಾರೆ. ಪ್ರತಿ ಭಾನುವಾರ 400 ಜನರು ಜಮಾಯಿಸಲಿದ್ದಾರೆ. ಇಂದಿನ ಅಗತ್ಯಕ್ಕೆ ತಕ್ಕಂತೆ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಚರ್ಚ್‌ನ ಫಾದರ್‌ ಜಾನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !