ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಬೇಡ ‘ಸಾವಿನ ಸಬ್ಸಿಡಿ’

ತಂಬಾಕು ವಿವಾದ
Last Updated 8 ಮೇ 2015, 19:32 IST
ಅಕ್ಷರ ಗಾತ್ರ

ತಂಬಾಕು ಉತ್ಪನ್ನಗಳ ಮೇಲಿನ ಎಚ್ಚರಿಕೆಯ ಸಂದೇಶವನ್ನು ಇನ್ನಷ್ಟು ದೊಡ್ಡದಾಗಿ ಮುದ್ರಿಸಬೇಕೆಂಬ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಯು, ತಂಬಾಕು ಸೇವನೆ ಕುರಿತು ಜನಪ್ರತಿನಿಧಿಗಳಲ್ಲಿ ಇರುವ ಅಜ್ಞಾನ, ಸರ್ಕಾರದ ನಡುವೆಯೇ ಇರುವ ಹಿತಾಸಕ್ತಿಗಳ ಸಂಘರ್ಷ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುತ್ತಿದೆ.

ಪ್ರಸ್ತುತ, ತಂಬಾಕು ಉತ್ಪನ್ನದ ಪೊಟ್ಟಣದ ಒಂದು ಬದಿಯ ಶೇಕಡ 40ರಷ್ಟು ಜಾಗದಲ್ಲಿ ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಸಚಿತ್ರ ಸಂದೇಶ ಇರುತ್ತದೆ. ಅಂದರೆ, ಅದೇ ಬದಿಯ ಇನ್ನುಳಿದ ಶೇ 60ರಷ್ಟು ಜಾಗ ಮತ್ತು ಮತ್ತೊಂದು ಬದಿಯ ಶೇ 100ರಷ್ಟು ಜಾಗವು ಆ ಉತ್ಪನ್ನದ ಮಾರಾಟಕ್ಕೆ ಇಂಬು ನೀಡುವ ಸಂದೇಶಗಳನ್ನು ಮುದ್ರಿಸಲು ದೊರೆಯುತ್ತದೆ.

ಇನ್ನು ಮುಂದೆ, ಎಚ್ಚರಿಕೆಯನ್ನುಳ್ಳ ಸಚಿತ್ರ ಸಂದೇಶವು ಪೊಟ್ಟಣದ ಎರಡೂ ಬದಿಯ ಶೇ 85ರಷ್ಟು ಜಾಗದಲ್ಲಿ ಇರುವಂತೆ ನಿಯಮ ರೂಪಿಸಲು ಬದ್ಧ ಎಂದು ನರೇಂದ್ರ ಮೋದಿ ಅವರ ಸರ್ಕಾರ ಹೇಳಿರುವುದು ಒಂದು ದಿಟ್ಟ ಹೆಜ್ಜೆ. ಇದರಿಂದ ಈ ಉತ್ಪನ್ನಗಳ ಮಾರಾಟ ಮತ್ತು ಜಾಹೀರಾತಿಗೆ ಕೇವಲ ಶೇ 15ರಷ್ಟು ಸ್ಥಳಾವಕಾಶ ದೊರೆತಂತೆ ಆಗುತ್ತದೆ.

‘ನೀವು ಖರೀದಿಸುತ್ತಿರುವ ಉತ್ಪನ್ನಕ್ಕೆ ನಿಮ್ಮನ್ನು ಕೊಲ್ಲುವ ತಾಕತ್ತೂ ಇದೆ’ ಎಂಬುದನ್ನು ಗ್ರಾಹಕರಿಗೆ ತಿಳಿಸಬೇಕು. ಇದಕ್ಕೆ ಯಾವುದೇ ಸಂಶೋಧನೆಯ ಅಥವಾ ವಿಜ್ಞಾನಿಗಳ ಮಾತಿನ ಆಧಾರ ಬೇಕಿಲ್ಲ. ಎಚ್ಚರಿಕೆ ದೊಡ್ಡದಾಗಿ ಇದ್ದಷ್ಟೂ  ಹಾನಿಯ ಬಗೆಗಿನ ಸಂದೇಶ ಸ್ಪಷ್ಟವಾಗಿ ಅರ್ಥವಾಗುತ್ತದೆ, ಜೊತೆಗೆ ಆ ಉತ್ಪನ್ನ ಗ್ರಾಹಕರನ್ನು ಅತಿಯಾಗಿ ಆಕರ್ಷಿಸುವುದಿಲ್ಲ.

ಸಚಿತ್ರ ಎಚ್ಚರಿಕೆ ಸಂದೇಶದ ಗಾತ್ರ ಹೆಚ್ಚಿಸಬೇಕೆಂಬ ನಿಯಮ ಏಪ್ರಿಲ್ 1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ ಇದಕ್ಕೆ ತುಸು ಮುನ್ನ ‘ತಂಬಾಕಿನಿಂದ ಭಾರತೀಯರಿಗೆ ಕ್ಯಾನ್ಸರ್ ಬರುತ್ತಿದೆಯಾ, ಇದಕ್ಕೆ ಯಾವುದಾದರೂ ವೈಜ್ಞಾನಿಕ ಆಧಾರ ಇದೆಯಾ’ ಎಂಬ ಪ್ರಶ್ನೆ ತಂಬಾಕು ಉತ್ಪನ್ನಗಳ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷರ ಬಾಯಿಂದ ಬಂತು. ನೀತಿ ನಿರೂಪಣೆ ವಿಚಾರದಲ್ಲಿ ದೇಶದ ಅತ್ಯುನ್ನತ ಸಮಿತಿಯೊಂದರ ಮುಖ್ಯಸ್ಥರಿಂದ ಬಂದ ಈ ಪ್ರಶ್ನೆ ತೀವ್ರ ಕುತೂಹಲ ಕೆರಳಿಸಿತು.

ಭಾರತೀಯರು ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ಅಮೆರಿಕನ್ನರು ಉಸಿರಾಡುವ ಗಾಳಿ, ಕುಡಿಯುವ ನೀರಿನ ಗುಣ ಬೇರೆ ಬೇರೆಯಾಗಿ ಇರುತ್ತದೆಯೇ? ಇದಕ್ಕೆ ಉತ್ತರ ‘ಇಲ್ಲ’ ಎನ್ನುವುದಾದರೆ, ಕ್ಯಾನ್ಸರ್ ಬಗೆಗೆ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಐಎಆರ್‌ಸಿ) ಹೇಳಿರುವ ಮಾತು ಭಾರತಕ್ಕೂ ಅನ್ವಯಿಸಲೇಬೇಕು. ಈ ಸಂಸ್ಥೆಯ ಪ್ರಕಾರ, ತಂಬಾಕಿನಲ್ಲಿ ಶೇ 70ಕ್ಕಿಂತಲೂ ಹೆಚ್ಚು ನೈಟ್ರೊಸೆಮೈನ್‌್ಸ, ಆರ್ಸೆನಿಕ್‌ನಂತಹ ಕ್ಯಾನ್ಸರ್‌ಕಾರಕ ಅಂಶಗಳು ಇರುತ್ತವೆ. ಹಾಗಿದ್ದ ಮೇಲೆ ಭಾರತದ ತಂಬಾಕಿನಲ್ಲಿ ಇರುವುದೂ ಇವೇ ರಾಸಾಯನಿಕಗಳು.

ದೇಶದಲ್ಲಿ 1937ರಿಂದ 2012ರ ನಡುವೆ ನಡೆದ 82 ಅಧ್ಯಯನಗಳು ತಂಬಾಕು ಮತ್ತು ಕ್ಯಾನ್ಸರ್ ನಡುವೆ ನೇರ ಸಂಬಂಧ ಇರುವುದನ್ನು ದಾಖಲಿಸಿವೆ. ಈ ಅಧ್ಯಯನ ಆಧರಿಸಿ ಬರೆದ ಲೇಖನಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅನಕ್ಷರಸ್ಥರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಲು ಚಿತ್ರ ಸಹಿತ ಎಚ್ಚರಿಕೆ ಸಂದೇಶಗಳನ್ನು ಪ್ರಕಟಿಸುವುದು ಬಹಳಷ್ಟು ಪರಿಣಾಮಕಾರಿ.

ಅದರಲ್ಲೂ ಬಹು ಭಾಷಿಕರಿಂದ ತುಂಬಿರುವ ನಮ್ಮ ದೇಶದಲ್ಲಿ, ಸಾವಿರ ಪದಗಳಲ್ಲಿ ಹೇಳಬಹುದಾದದ್ದನ್ನು ಒಮ್ಮೆಗೇ ಹೇಳಬಲ್ಲಂಥ ಪರಿಣಾಮಕಾರಿ ಚಿತ್ರ ಸಹಿತ ಸಂದೇಶಗಳು ಖಂಡಿತಾ ಬೇಕು. ಕರ್ನಾಟಕದಲ್ಲಿ 20ರಿಂದ 30 ವರ್ಷ ವಯಸ್ಸಿನವರಲ್ಲಿ ಬಾಯಿ ಕ್ಯಾನ್ಸರ್  ಪ್ರಮಾಣ  ತೀವ್ರ ಹೆಚ್ಚಳ ಕಂಡಿದೆ. ಜಗಿಯುವ ತಂಬಾಕನ್ನು ಅತಿ ಹೆಚ್ಚು ಬಳಸುವ ಪ್ರದೇಶಗಳಲ್ಲಿ ಉತ್ತರ ಕರ್ನಾಟಕ ಕೂಡ ಒಂದು. ಜಗಿಯುವ ತಂಬಾಕು ಉತ್ಪನ್ನಗಳನ್ನು ಕೇಂದ್ರ  ನಿಷೇಧಿಸಿದೆ.

ಅದರ ಪ್ರಕಾರ, 15ಕ್ಕೂ ಹೆಚ್ಚು ರಾಜ್ಯಗಳು ಇದನ್ನು ಪಾಲಿಸುತ್ತಿವೆ. ಆದರೆ ಕರ್ನಾಟಕದಲ್ಲಿ ನಿಷೇಧ ಆಗಿಲ್ಲ. ದೇಶದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಶೇಕಡ 80ರಷ್ಟು ಪಾಲನ್ನು ಖಾಸಗಿಯವರೇ ಹೊಂದಿದ್ದಾರೆ. ಅಂದರೆ, ತನ್ನದೇ ಜೇಬಿನಿಂದ ಹಣ ಖರ್ಚು ಮಾಡಿ ತಂಬಾಕು ಸೇವಿಸುವ ವ್ಯಕ್ತಿ, ಅದನ್ನು ಸೇವಿಸಿದ ತಪ್ಪಿಗೆ ಪುನಃ ತನ್ನದೇ ಜೇಬಿನಿಂದ ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಆ ವ್ಯಕ್ತಿ ಮತ್ತು ಆತನ ಕುಟುಂಬದ ಮೇಲೆ ಮತ್ತಷ್ಟು ಹಣಕಾಸಿನ ಹೊರೆ ಬೀಳುತ್ತದೆ.

ತಂಬಾಕು ಉತ್ಪನ್ನಗಳ ಮೇಲೆ ವಿಧಿಸುವ ಸುಂಕ ಮತ್ತು ತಂಬಾಕು ರಫ್ತಿನಿಂದ ಕೇಂದ್ರ ಸರ್ಕಾರ ವಾರ್ಷಿಕವಾಗಿ ಸಾವಿರ ಕೋಟಿಗಳಲ್ಲಿ ಆದಾಯ ಗಳಿಸುತ್ತದೆ. ಆದರೆ  ತಂಬಾಕು ಸೇವನೆಯಿಂದ ಬರುವ ರೋಗಗಳ ಚಿಕಿತ್ಸೆಗೆ ಅಂದಾಜು 1 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. 

ತಂಬಾಕು ನಿಷೇಧದ ವಿಚಾರದಲ್ಲಿ ಸರ್ಕಾರಗಳ ನಿಷ್ಕ್ರಿಯತೆಗೆ ಕಾರಣ ತಂಬಾಕು ಬೆಳೆಯುವ ರೈತನ ಹಿತ ಕಾಯುವುದು ಎನ್ನಲಾಗುತ್ತಿದೆ. ಆದರೆ ರೈತನ ಹಿತ ಕಾಯುವುದು ಎಷ್ಟು ಮುಖ್ಯವೋ, ತಂಬಾಕು ಸೇವನೆಯಿಂದ ಕೆಟ್ಟ ಪರಿಣಾಮ ಅನುಭವಿಸುವ ವ್ಯಕ್ತಿಗಳ ಬಗ್ಗೆ ಕಾಳಜಿ ವಹಿಸುವುದೂ ಅಷ್ಟೇ ಮುಖ್ಯವಲ್ಲವೇ?

ತಂಬಾಕು ಸೇವಿಸಿ ರೋಗ ಬರಿಸಿಕೊಳ್ಳುವ ವ್ಯಕ್ತಿ ಚಿಕಿತ್ಸೆಗೆ ಒಳಗಾದರೆ, ಆತನ ಇಡೀ ಕುಟುಂಬ ಆರ್ಥಿಕ ಮತ್ತು ಮಾನಸಿಕ ಸಂಕಟಕ್ಕೆ ತುತ್ತಾಗುತ್ತದೆ. ಒಬ್ಬ ವ್ಯಕ್ತಿ ಚಿಕ್ಕ ವಯಸ್ಸಿನಲ್ಲೇ ತಂಬಾಕಿನ ದಾಸನಾದರೆ, ಆತ ಇತರ ಮಾದಕ ವಸ್ತುಗಳ ದಾಸನಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಮಾದಕ ವಸ್ತು ಸೇವನೆಯ ದಾಸರಾಗಿರುವ ಶೇಕಡ 80ಕ್ಕೂ ಹೆಚ್ಚು ಮಂದಿ ತಂಬಾಕು ಸೇವನೆಯಿಂದಲೇ ತಮ್ಮ ‘ಚಟ’ಗಳನ್ನು ಆರಂಭಿಸಿದವರು. ಹಾಗಾಗಿ, ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ತಂಬಾಕು ವಿರೋಧಿ ನಿಲುವೂ ಇರಬೇಕಾಗುತ್ತದೆ.

ಸಿಗರೇಟಿಗೆ ಹೋಲಿಸಿದರೆ ಅತ್ಯಂತ ಅಗ್ಗವಾಗಿರುವ ಬೀಡಿಯು ‘ಬಡವರ ಸಿಗರೇಟು’ ಎಂಬ ಹಣೆಪಟ್ಟಿ ಹೊತ್ತಿದೆ. ಹೀಗಾಗಿ ನಮ್ಮ

ದೇಶದಲ್ಲಿ ಬೀಡಿಯ ಮೂಲಕ ತಂಬಾಕು ಸೇವಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೀಡಿ ಉತ್ಪಾದನೆಗೆ ಬಳಸುವ ತೆಂಡು ಎಲೆಗಳು ಕಡಿಮೆ ದಹನಶೀಲ ಗುಣವನ್ನು ಹೊಂದಿವೆ ಮತ್ತು ರಂಧ್ರರಹಿತವಾಗಿ ಇರುತ್ತವೆ. ಹೀಗಾಗಿ ಬೀಡಿ ಸೇದುವಾಗ ಹೆಚ್ಚು ಬಲ ಬಿಟ್ಟು ದಮ್ಮು ಎಳೆಯಬೇಕಾಗುತ್ತದೆ. ಇದು ಶ್ವಾಸಕೋಶಗಳ ಮೇಲೆ ಹೆಚ್ಚು ಒತ್ತಡ ಬೀಳಲು ಕಾರಣವಾಗುತ್ತದೆ.

ಬೀಡಿ ಹೊರಸೂಸುವ ಟಾರ್‌ನ (ಸುಟ್ಟಾಗ ಬರುವ ವಸ್ತು) ಪ್ರಮಾಣವೂ ಹೆಚ್ಚು. ಇಷ್ಟೇ ಅಲ್ಲ, ಸಿಗರೇಟಿನಿಂದ ಹೊರಬರುವ ಮೂರು ಪಟ್ಟು ಹೆಚ್ಚು ಇಂಗಾಲದ ಮಾನಾಕ್ಸೈಡ್, ನಿಕೋಟಿನ್ ಬೀಡಿಯಿಂದ ಬರುತ್ತದೆ. ಕರ್ನಾಟಕದಲ್ಲಿ ಬೀಡಿಯ ಮೇಲೆ ಶೂನ್ಯ ಪ್ರಮಾಣದ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುತ್ತಿದೆ. ಆದರೆ ನಮ್ಮ ನೆರೆಯ ಕೇರಳ, ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡು ಸರ್ಕಾರಗಳು ಶೇ 12.5ರಿಂದ ಶೇ 22ರವರೆಗೆ ಮೌಲ್ಯವರ್ಧಿತ ತೆರಿಗೆ ವಿಧಿಸುತ್ತಿವೆ.

ಜೀವ ಉಳಿಸಲು ಬೇಕು ತೆರಿಗೆ: ತಂಬಾಕು ವ್ಯಸನಿಗಳು ಆ ಚಟದಿಂದ ಹೊರಬರುವಂತೆ ಮಾಡಲು, ಮಕ್ಕಳು ಧೂಮಪಾನದ ದಾಸರಾಗದಂತೆ ತಡೆಯಲು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ ಅವು ದುಬಾರಿಯಾಗುವಂತೆ ಮಾಡುವುದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ತಂಬಾಕು ಉತ್ಪನ್ನಗಳ ಮೇಲೆ ಶೇ 65–  80ರವರೆಗೆ ತೆರಿಗೆ ವಿಧಿಸಬೇಕು ಎಂದು ವಿಶ್ವಬ್ಯಾಂಕ್ ಶಿಫಾರಸು ಮಾಡಿದೆ.

ಈ ಶಿಫಾರಸನ್ನು ಅನುಸರಿಸಿರುವ ರಾಜಸ್ತಾನ ಶೇ 65ರಷ್ಟು ತೆರಿಗೆ ವಿಧಿಸಿ 900 ಕೋಟಿ ರೂಪಾಯಿ ಗಳಿಸುತ್ತಿದೆ. ಬೀಡಿಯ ಮೇಲೆ ಶೇ 10ರಷ್ಟು ತೆರಿಗೆ ವಿಧಿಸಿದರೂ ಗ್ರಾಮೀಣ ಭಾಗದಲ್ಲಿ ಅದರ ಸೇವನೆ ಶೇ 9.2ರಷ್ಟು, ನಗರ ಭಾಗದಲ್ಲಿ ಶೇ 8.5ರಷ್ಟು ಕಡಿಮೆ ಆಗುತ್ತದೆ ಎಂಬುದು ಅಧ್ಯಯನಗಳಿಂದ ಗೊತ್ತಾಗಿದೆ. ಬಡವರಿಗೆ ಸಾವಿನ ಸಬ್ಸಿಡಿ ನೀಡಬಾರದಲ್ಲವೇ? ಬಳಕೆದಾರರು ಬೆಲೆ ಏರಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಬದಲಿಸದಂತೆ ಮಾಡಲು ತಂಬಾಕಿನ ಎಲ್ಲ ಉತ್ಪನ್ನಗಳ ಮೇಲೂ ಏಕರೂಪದಲ್ಲಿ ತೆರಿಗೆ ಹೆಚ್ಚಿಸಬೇಕೆಂಬ ಒತ್ತಾಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದಿದೆ. 

ಸಮಸ್ಯೆ ಸಣ್ಣದಲ್ಲ
ಉತ್ತರ ಕರ್ನಾಟಕ ಭಾಗದ 32 ವರ್ಷದ ಕಾರ್ಮಿಕರೊಬ್ಬರಿಗೆ ಕ್ಯಾನ್ಸರ್ ಇರುವುದು ಎರಡು ವರ್ಷಗಳ ಹಿಂದೆ ಪತ್ತೆಯಾಯಿತು. ಅವರಿಗೆ ತಂಬಾಕು ಅಗಿಯುವ ಅಭ್ಯಾಸ ಇದೆ. ಈಗ ಅವರಿಗೆ ಸರಾಗವಾಗಿ  ಬಾಯಿ ತೆರೆಯಲು ಆಗುತ್ತಿಲ್ಲ. ಸರಿಯಾಗಿ ಮಾತನಾಡಲು, ಆಹಾರ ಸೇವಿಸಲೂ ಸಾಧ್ಯವಿಲ್ಲ.

ಬಾಯಿಯಿಂದ ರಕ್ತ ಒಸರುವುದು, ರಕ್ತ ವಾಂತಿಯಾಗುವುದು ತೀವ್ರವಾದ ಕಾರಣ ಇದೇ ಏಪ್ರಿಲ್‌ನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕ್ಯಾನ್ಸರ್ ಈಗ ಶ್ವಾಸಕೋಶಗಳಿಗೂ ಹರಡಿದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಮೂವರು ಮಕ್ಕಳ ತಂದೆಯಾದ ಅವರು ಇನ್ನು ಆರು ತಿಂಗಳು ಬದುಕಬಹುದು.

ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ವ್ಯಕ್ತಿಯೊಬ್ಬರಿಗೆ ನಾಲಿಗೆ ಕ್ಯಾನ್ಸರ್‌ ಪತ್ತೆಯಾಯಿತು. ಶಸ್ತ್ರಚಿಕಿತ್ಸೆ ನಡೆಸಿ ಅವರ ಇಡೀ ನಾಲಿಗೆಯನ್ನೇ ತೆಗೆಯಲಾಗಿದೆ. ಬಾಯಿಯಿಂದ ಏನನ್ನೂ ತಿನ್ನಲಾಗದ ಅವರಿಗೆ ಹೊಟ್ಟೆಗೆ ಪೈಪ್‌ ಅಳವಡಿಸಿ ಬರೀ ದ್ರವ ಆಹಾರವನ್ನಷ್ಟೇ ಕೊಡಲಾಗುತ್ತಿದೆ. ಮಾತನಾಡಲೂ ಸಾಧ್ಯವಾಗದ ಅವರು ಕೆಲಸ ಕಳೆದುಕೊಂಡಿದ್ದಾರೆ.

ಕೂಲಿ ಮಾಡಿಕೊಂಡಿರುವ ಇನ್ನೊಬ್ಬ ವ್ಯಕ್ತಿಗೆ ಕೆಳ ತುಟಿ ಮತ್ತು ವಸಡಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 38 ವರ್ಷ ವಯಸ್ಸಿನ ಆತನಿಗೆ ತಂಬಾಕು ಜಗಿಯುವ ಮತ್ತು ಬೀದಿ ಸೇದುವ ಚಟ ಇತ್ತು. ಚಿಕಿತ್ಸೆಯ ಭಾಗವಾಗಿ ಅವರ ದವಡೆಯ ಮೂಳೆಯನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದರು. ಅದಕ್ಕಾಗುವ ಖರ್ಚು ಭರಿಸುವ ಶಕ್ತಿ ಅವರಿಗಿಲ್ಲ. ಇವರೆಲ್ಲರೂ ಕರ್ನಾಟಕದವರೇ. ದೊಡ್ಡ ಪ್ರಮಾಣದಲ್ಲಿರುವ ಇಂತಹ ಸಮಸ್ಯೆಗಳಿಗೆ ಈ ಪ್ರಕರಣಗಳು ಕೇವಲ ಸಣ್ಣ ಉದಾಹರಣೆಗಳಷ್ಟೇ.

(ಲೇಖಕ ರಾಜ್ಯ ತಂಬಾಕು ನಿಯಂತ್ರಣ ಉನ್ನತ ಸಮಿತಿಯ ಸದಸ್ಯ, ತಲೆ ಮತ್ತು ಕುತ್ತಿಗೆ ರೋಗ ಚಿಕಿತ್ಸಾ ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT