ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಫ್‌ ಉಫ್ ಡ್ಯಾಂಡ್ರಫ್‌!

Last Updated 8 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಹೊಟ್ಟಿನ ಸಮಸ್ಯೆಯಿಂದ ಬಳಲದವರು ವಿರಳ. ಇದು ಸೌಂದರ್ಯಬಾಧಕವೂ ಹೌದು ಮತ್ತು ಬಳಲುತ್ತಿರುವವರಿಗೆ ಅಸಹ್ಯ ತುರಿಕೆ, ಪುಡಿ ಉದುರುವಿಕೆಯಿಂದ ಕೀಳರಿಮೆಯನ್ನೂ ತಂದೊಡ್ಡುತ್ತವೆ. ಮೊಟ್ಟೆಯಿಂದ ಹಿಡಿದು ಜಾಹೀರಾತಿನಲ್ಲಿ ಕಾಣ ಬರುವ ಎಲ್ಲ ಶಾಂಪೂಗಳನ್ನೂ ತಮ್ಮ ತಲೆಯ ಮೇಲೆ ಪ್ರಯೋಗಿಸಿ ರೋಸಿ ಹೋಗುತ್ತಾರೆ. ಎಷ್ಟೋ ಸಲ ಸಾಮಾನ್ಯ ಹೊಟ್ಟು ಎಂದು ತಿಳಿದದ್ದು, ಸೋರಿಯಾಸಿಸ್ ಅಥವಾ ಸೆಬೋರಿಕ್ ಡರ್ಮಟೈಟಿಸ್ ಎಂಬ ಗುರುತರ ಚರ್ಮ ವ್ಯಾಧಿಯಾಗಿರುತ್ತದೆ. ಒಟ್ಟಿನಲ್ಲಿ ಏನೀ ತಲೆ ಹೊಟ್ಟು (ಡ್ಯಾಂಡ್ರಫ್‌) ಮಹಿಮೆ?!

ಹೊಟ್ಟಿನ ತೊಂದರೆಯಲ್ಲಿ, ತಲೆಯ ಚರ್ಮ ಶುಷ್ಕವಾಗಿರುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಚರ್ಮ ಒಂದು ತಿಂಗಳಿಗೊಮ್ಮೆ ಹೊಸತಾಗುತ್ತದೆ. ಅಂದರೆ ಹಳೆಯ ಜೀವಕೋಶಗಳು ನಶಿಸಿ ಹೊಸ ಜೀವಕೋಶಗಳು ಜಾಗ ಪಡೆಯುತ್ತವೆ. ಈ ಕೆಲಸ ಅರಿಯದಂತೆ ಸತತವಾಗಿ ನಡೆಯುತ್ತಿರುತ್ತದೆ. ಈ ಕಾರ್ಯದಲ್ಲಿ ಏರುಪೇರಾಗಿ ಅತಿ ಶೀಘ್ರಪ್ರಮಾಣದಲ್ಲಿ ಹಾಗೂ ಅನುಚಿತವಾಗಿ ಜೀವಕೋಶಗಳ ಉತ್ಪಾದನೆಯಾಗಿ ಒಂದರ ಮೇಲೊಂದು ಪೇರಿಸಿಕೊಂಡು ಪದರಗಳಂತಾಗಿ ಉದುರುತ್ತವೆ. ಇದರ ಸುತ್ತ ಪಿ.ಓವೇಲ್ ಎಂಬ ಶಿಲೀಂಧ್ರದ ಸೋಂಕಿನಿಂದ ಕೂಡ ಈ ಪ್ರಕ್ರಿಯೆ ಹೆಚ್ಚಿ, ತುರಿಕೆ, ಹೊಟ್ಟು ಬೀಳುವುದು ಕಂಡು ಬರುತ್ತದೆ. ಆದ್ದರಿಂದ ತಲೆಬುಡದ ಚರ್ಮದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯ.

ಹೊಟ್ಟನ್ನು ಹೋಲುವ ಕೆಲವು ಚರ್ಮವ್ಯಾಧಿಗಳ ಬಗ್ಗೆ ಅರಿವಿರಬೇಕು. ಉದಾ: ತಲೆಬುಡದ ಸೋರಿಯಾಸಿಸ್, ಸೆಬೋರಿಕ್ ಡರ್ಮಟೈಟಿಸ್, ತಲೆಬುಡದ ಶಿಲೀಂಧ್ರ ಸೋಂಕು, ಅಲರ್ಜಿ ಇತ್ಯಾದಿಗಳು. ಪ್ರತಿಯೊಂದಕ್ಕೂ ಇರುವ ತನ್ನದೇ ಆದ ಕೆಲವು ಪ್ರಮುಖ ಲಕ್ಷಣಗಳಿಂದ ವೈದ್ಯರು ರೋಗ ನಿರ್ಧಾರ ಮಾಡುವರು.

ಹೊಟ್ಟಿನ ಪ್ರಮುಖ ಕಾರಣಗಳು
*ದೂಳು, ಪ್ರದೂಷಕ/ಮಲಿನ ವಾಯುವಿಗೊಡ್ಡುವುದು.
* ರಭಸವಾದ ಗಾಳಿ ಅಥವಾ ಚಳಿಗೆ ತಲೆಯೊಡ್ಡುವುದು
* ರಾಸಾಯನಿಕ ಪದಾರ್ಥಗಳು, ಅತಿ ಹೆಚ್ಚು ಸೋಪು ಮತ್ತು ಶಾಂಪುವಿನ ಬಳಕೆ
* ಮಾನಸಿಕ ಒತ್ತಡ
* ಕೆಲವು ಔಷಧಗಳಾದ ಸಿಮೆಟಿಡಿನ್, ಮಿಥೈಲ್ ಡೋಪಾ, ಕ್ಲೋರ್ಪ್ರಾಮಜ಼ಿನ್, ಐಸೋರೆಟಿನಾಯಿನ್, ಆರ್ಸೆನಿಕ್, ಬಿಸ್ಮತ್ ಇತ್ಯಾದಿಗಳೂ ಹೊಟ್ಟನ್ನು ಹೆಚ್ಚಿಸುತ್ತದೆ.

ಚಿಕಿತ್ಸೆ: ಹೊಟ್ಟು ನಿವಾರಕ ಔಷಧಗಳ ಮಹಾಪೂರವನ್ನೇ ಜಾಹಿರಾತುಗಳಲ್ಲಿ ಕಾಣಬಹುದು. ಉದಾ: ಜಿಂಕ್ ಪೈರಿಥಿಯೋನ್, ಕಿಟೋಕೊನಜೋಲ್, ಸ್ಯಾಲಿಸಿಲಿಕ್ ಆಸಿಡ್ ಇತ್ಯಾದಿ. ಇವುಗಳಿಗೆ ತಮ್ಮದೇ ಆದ ಉತ್ತಮ ಹಾಗೂ ದುಷ್ಪರಿಣಾಮಗಳಿವೆ. ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳಲ್ಲಿ ಆ್ಯಂಟಿಡ್ಯಾಂಡ್ರಫ್‌ ಗುಣಗಳನ್ನು ಕಂಡುಹಿಡಿಯಲಾಗಿದೆ. ಹಾಗೆಯೇ ಹೊಟ್ಟನ್ನು ಹೋಲುವ ಬೇರೆ ಯಾವುದೇ ಚರ್ಮವ್ಯಾಧಿಯಿಲ್ಲ ಎಂಬುದನ್ನೂ ಖಾತ್ರಿ ಪಡಿಸಿಕೊಳ್ಳಬೇಕು.

ಬೇವು, ದೂರ್ವೆ, ಧತ್ತೂರ, ವೆಟ್ಪಾಲೆ ಹೀಗೆ ಅನೇಕ ಗಿಡಮೂಲಿಕೆಗಳಲ್ಲಿ ಶಿಲೀಂಧ್ರನಾಶಕ ಹಾಗೂ ಕೆರಟೋಲೈಟಿಕ್ ತತ್ವಗಳನ್ನು ಕಂಡುಹಿಡಿಯಲಾಗಿದೆ. ಇವುಗಳಿಂದ ಮಾಡಿದ ಎಣ್ಣೆ, ಶಾಂಪೂ, ಸೋಪುಗಳ ಬಳಕೆ ಸಹಕಾರಿ ಉದಾ: ದುರ್ದುರಾದಿ ತೈಲ, ನಿಂಬಾದಿ ತೈಲ, ದೂರ್ವಾದಿ ತೈಲ, ಮಾಲತ್ಯಾದಿ ತೈಲ, ಸ್ಕರ್ಫಾಲ್ ಶಾಂಪೂ ಇತ್ಯಾದಿ.  ತೊಂದರೆ ಹೆಚ್ಚಿದ್ದಲ್ಲಿ ಕೆಲವು ಆಂತರಿಕ ಔಷಧಿಗಳೂ ಲಭ್ಯ ಇವೆ.

ತಲೆ ಹೊಟ್ಟಿಗೆ ಮನೆ ಮದ್ದು
* ತ್ರಿಫಲಾ ಚೂರ್ಣವನ್ನು ಮೊಸರಿನಲ್ಲಿ ಕಲಸಿ ತಲೆಬುಡಕ್ಕೆ ಲೇಪಿಸಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯುವುದು.
* ಬೇವು ಹಾಗೂ ಮತ್ತಿ ಎಲೆಗಳನ್ನು ಸೇರಿಸಿ ಅರೆದು ಮಾಡಿದ ಲೇಪನ ಬಹಳ ಗುಣಕಾರಿ.
* ಲೋಳೆಸರ (ಅಲೋವೇರಾ) ರಸದೊಂದಿಗೆ ನಿಂಬೆ ರಸವನ್ನು ಸೇರಿಸಿ ತಲೆಬುಡಕ್ಕೆ ಚೆನ್ನಾಗಿ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆದಲ್ಲಿ ಹೊಟ್ಟು ಕಡಿಮೆಯಾಗುತ್ತದೆ.
ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಂಡು, ರಾಸಾಯನಿಕ ವಸ್ತುಗಳಿಂದ ದೂರವಿದ್ದು, ತಲೆಯ ಚರ್ಮದ ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡಲ್ಲಿ ನಿಮ್ಮ ಹೆಗಲು ಹೊಟ್ಟುಮುಕ್ತವಾಗಿರುವುದು ನಿಶ್ಚಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT