ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಬಣ್ಣದ ಒಳಗೇನಿದೆ?

Last Updated 13 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸುಂದರ ಚರ್ಮದ ವಿಷಯ ಬಂದಾಗ, ಆರೋಗ್ಯದ ಬಗ್ಗೆ ಮಾತನಾಡುವಾಗ, ಡಯೆಟ್‌ ಕುರಿತು ಉಲ್ಲೇಖಿಸುವಾಗ ಮೊದಲಿಗೆ ಕೇಳಿ ಬರುವುದು ‘ಹಸಿರು ಹಣ್ಣು, ತರಕಾರಿ ತಿನ್ನಿ, ಆರೋಗ್ಯದಿಂದಿರಿ’  ಎನ್ನುವ ಮಾತು. ಹಾಗೆಂದು ಆರೋಗ್ಯ , ಸೌಂದರ್ಯವೆಲ್ಲ ಕೇವಲ ಹಸಿರು ಬಣ್ಣಕ್ಕೆ ಸೀಮಿತವಾಗಿಲ್ಲ. ಕೆಂಪು ಬಣ್ಣದ ಮಹಿಮೆಯೂ ಅಪಾರ.

ಹಣ್ಣು, ತರಕಾರಿ ತುಂಬಾ ಕೆಂಪಗೆ ಇದ್ದಷ್ಟೂ ಅದರಲ್ಲಿ ವಿಟಮಿನ್ ಹಾಗೂ ಇತರ ಪೋಷಕಾಂಶಗಳ ಪ್ರಮಾಣ ಹೆಚ್ಚಿರುತ್ತದೆ. ರಕ್ತ ಕಣಗಳ ಉತ್ಪತ್ತಿಗೆ ಸಹಾಯ ಮಾಡುವ ಇದು ಆರೋಗ್ಯ ಕಾಪಿಟ್ಟುಕೊಳ್ಳುವಲ್ಲೂ ಅತ್ಯಂತ ಸಹಕಾರಿ.

ಹಾಗಂತ ಹಣ್ಣುಗಳ ಬಣ್ಣಕ್ಕೆ ಮರುಳಾಗುವ ಮುನ್ನ ಖಂಡಿತ ಯೋಚನೆ ಮಾಡಬೇಕು. ಏಕೆಂದರೆ ಈಗ ರಾಸಾಯನಿಕ ಎನ್ನುವುದು ಯಾವ ತರಕಾರಿ, ಹಣ್ಣುಗಳನ್ನೂ ಬಿಟ್ಟಿಲ್ಲ. ಇಂಥವುಗಳ ಸೇವನೆಯಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಆದ್ದರಿಂದ ಸೇವನೆಗೆ ಮುನ್ನ ಜಾಗ್ರತೆ ಅಗತ್ಯ.

ಕೆಂಪು ಬಣ್ಣದ ಹಣ್ಣುಗಳು ಎಂದರೆ ಕಣ್ಮುಂದೆ ಮೊದಲಿಗೆ ಬರುವುದು ಸೇಬು. ‘ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು’ ಎನ್ನುವ ಮಾತಿದೆ.  ಅದಕ್ಕಾಗಿಯೇ ಇದನ್ನು ಹಣ್ಣುಗಳ ಮಹಾರಾಣಿ ಎಂದು ಕರೆಯುವುದು. ಹಸಿರು, ಬಿಳಿ ಬಣ್ಣಗಳ ಸೇಬು ಇದ್ದರೂ ಕೆಂಪು ಸೇಬಿಗೆ ವಿಶೇಷ ಸ್ಥಾನ. ಇದರ ಸೇವನೆಯಿಂದ ಕೊಬ್ಬಿನಂಶ ಕಡಿಮೆಮಾಡಬಹುದು. ಕ್ಯಾಲ್ಸಿಯ, ಮೆಗ್ನೆಷಿಯಂ ಅಂಶ ಇರುವುದರಿಂದ ಆರೋಗ್ಯ ವರ್ಧಕವಾಗಿದೆ. ಮೂತ್ರಪಿಂಡ ಹಾಗೂ ಯಕೃತ್ತಿನ ತೊಂದರೆಗೆ ಇದೊಂದು ಅದ್ಭುತ ಔಷಧ. ದಿನನಿತ್ಯ ಸೇಬು ರಸವನ್ನು ಕುಡಿಯುವುದರಿಂದ ತ್ವಚೆಗೆ ಹೊಳಪು ಬರುವುದರ ಜೊತೆಗೆ ಸ್ಲಿಮ್‌ ಆಗಬೇಕು ಎಂದುಕೊಳ್ಳುವವರಿಗೂ ಪ್ರಯೋಜನ ಆಗುತ್ತದೆ. ಮಧುಮೇಹ ರೋಗಿಗಳಿಗೆ ಹಲವು ಹಣ್ಣುಗಳ ಸೇವನೆ ನಿಷಿದ್ಧ. ಆದರೆ ಸೇಬನ್ನು ಅವರು ನಿರಾತಂಕವಾಗಿ ತಿನ್ನಬಹುದು.

ಆದರೆ ಬೀಜ ಮಾತ್ರ ಅಪಾಯಕಾರಿ. ನಾಲ್ಕೈದು ಸೇಬಿನ ಬೀಜವನ್ನು ಒಟ್ಟಿಗೇ ತಿಂದರೆ ಪ್ರಾಣವೂ ಹೋಗಬಹುದು ಇಲ್ಲವೇ ವಾಂತಿ, ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ. ಬೀಜವನ್ನಂತೂ ಜಗಿಯಲೇಬಾರದು.

ಹುಳಿ ಇದ್ದರೂ ಸಿಹಿ
ಹುಳಿ ಇದ್ದರೂ ದೇಹಕ್ಕೆ ಸಿಹಿ ನೀಡುವ ಹಣ್ಣೆಂದರೆ ಕೆಂಪುದ್ರಾಕ್ಷಿ ಹಾಗೂ ಟೊಮೆಟೊ. ಕೆಂಪು ದ್ರಾಕ್ಷಿ ಕೆಂಪುರಕ್ತ ಕಣಗಳ ಗೆಳೆಯ ಎಂದೇ ಪ್ರಸಿದ್ಧಿ. ಚೀನಾ ಮತ್ತು ಜಪಾನ್‌ಗಳಲ್ಲಿ ಶತಮಾನಗಳಷ್ಟು ಹಿಂದೆ ಕೆಂಪು ದ್ರಾಕ್ಷಿ ಪ್ರಮುಖ ಔಷಧವಾಗಿತ್ತು. ರಕ್ತಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರೂ ಕೆಂಪು ದ್ರಾಕ್ಷಿಯನ್ನೇ ಅಲ್ಲಿ ಬಳಸಲಾಗುತ್ತಿತ್ತು. ಅದರಲ್ಲಿರುವ ರೆಸ್ವೆರಾಟ್ರೋಲ್ ಎನ್ನುವ ಪದಾರ್ಥ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣ ಹೊಂದಿದೆ ಎನ್ನುವುದನ್ನು ಪತ್ತೆ ಮಾಡಿದವರೂ ಜಪಾನೀಯರೇ. ರಕ್ತದ ಪ್ಲೇಟ್ಲೆಟ್‌ಗಳು ಗುಂಪುಗೂಡುವುದನ್ನು ತಪ್ಪಿಸುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆ ಯುತ್ತದೆ. ಮಾಂಸಾಹಾರಿಗಳು ಇದನ್ನು ಸೇವಿಸುವುದು ಅತ್ಯಗತ್ಯ. ಏಕೆಂದರೆ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಇದರ ಸಿಪ್ಪೆಯಲ್ಲಿ ಕೂಡ ಅಧಿಕ ಪೋಷಕಾಂಶವಿದೆ.

ರಾಸಾಯನಿಕ ಸಿಂಪಡಣೆ ಕೆಂಪು ದ್ರಾಕ್ಷಿಯನ್ನೂ ಬಿಟ್ಟಿಲ್ಲ. ಆದ್ದರಿಂದ ತಿನ್ನುವ ಮುನ್ನ ಅದನ್ನು ತುಸು ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಅದರಲ್ಲಿ ಕೆಲಕಾಲ ನೆನೆಸಿಡಿ.

ಕ್ಯಾನ್ಸರ್ ಬರದಂತೆ ತಡೆಯುವುದರ ಜೊತೆಗೆ ಬೊಜ್ಜು ಬರದಂತೆ ತಡೆಯುವ ಶಕ್ತಿ ಇರುವುದು ಟೊಮೆಟೊಗೆ. ಇದು ಸೌಂದರ್ಯವರ್ಧಕವೂ ಹೌದು. ಆದ್ದರಿಂದಲೇ ಇದರ ಫೇಷಿಯಲ್‌ಗೆ ಭಾರಿ ಬೇಡಿಕೆ. ಆದರೆ ಮೂತ್ರಪಿಂಡದ ಕಲ್ಲಿನ ‌ ಸಮಸ್ಯೆ ಇರುವವರು ಟೊಮೆಟೊದಿಂದ, ಅದರಲ್ಲೂ ಮುಖ್ಯವಾಗಿ ಅದರ ಬೀಜದಿಂದ ದೂರವಿದ್ದರೆ ಒಳ್ಳೆಯದು.

ಈಗ ಬಿರುಬಿಸಿಲು, ಕಲ್ಲಂಗಡಿಗೆ ತುಂಬಾ ಡಿಮಾಂಡ್‌. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೊಲೆಸ್ಟ್ರಾಲ್  ತಗ್ಗಿಸುತ್ತದೆ, ಬೇಸಿಗೆಯಲ್ಲಿ ಆರೋಗ್ಯ ಕಾಪಾಡುತ್ತದೆ, ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ, ಮೂತ್ರಪಿಂಡದಲ್ಲಿ ಕಲ್ಲು ಉಂಟಾಗದಂತೆಯೂ ತಡೆಯುತ್ತದೆ.

ಸಮೃದ್ಧ ಆರೋಗ್ಯ: ದಾಳಿಂಬೆಯ ರುಚಿಗೆ ಮಾರು ಹೋಗದವರಾರು? ಮ್ಯಾಗ್ನಿಷಿಯಂ, ಪೊಟಾಷಿಯಂ ಅಂಶ ಇದರಲ್ಲಿ ಅಧಿಕವಿದೆ. ದಾಳಿಂಬೆ ಮೊಗ್ಗು ಹಾಗೂ ತುಳಸಿ ದಳಗಳನ್ನು ಜಜ್ಜಿ ರಸವನ್ನು ಮೂಗಿಗೆ ಹಾಕಿದರೆ ಬಿಕ್ಕಳಿಕೆ ನಿವಾರಣೆಯಾಗುತ್ತದೆ.

  ಹಣ್ಣಿನ ರಸಕ್ಕೆ ಏಲಕ್ಕಿ, ಲವಂಗ ಹಾಕಿ ಸೇವಿಸಿದರೆ ಭೇದಿ ಕಡಿಮೆಯಾಗುತ್ತದೆ, ಕಲ್ಲು ಸಕ್ಕರೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವಸಡು ಹಾಗೂ ಮೂಗಿನಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ. ಇದರ ಎಲೆಗಳನ್ನು ಜಜ್ಜಿ ಸುಟ್ಟ ಗಾಯಕ್ಕೆ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.

   ದಾಳಿಂಬೆ ಬೇರಿನ ತೊಗಟೆಯ ಕಷಾಯಕ್ಕೆ 2 ಚಮಚ ಜೇನುತುಪ್ಪವನ್ನು  ಹಾಕಿ ದಿನಕ್ಕೆ ನಾಲ್ಕೈದು ಬಾರಿ ಸೇವಿಸಿದರೆ ಹೊಟ್ಟೆ ಹುಳುಗಳು ಕಡಿಮೆಯಾಗುತ್ತವೆ. ದಾಳಿಂಬೆ ಹೂವುಗಳನ್ನು ಜಜ್ಜಿ, ಮಜ್ಜಿಗೆ ಜೊತೆ ಸೇವಿಸಿದರೆ, ರಕ್ತಮಿಶ್ರಿತ ಮಲವನ್ನು ಸರಿಪಡಿಸುತ್ತದೆ. ದಾಳಿಂಬೆಯ ಸಿಪ್ಪೆಯಲ್ಲಿ ಕೂಡ ಅಧಿಕ ಪೋಷಕಾಂಶ ವಿದೆ. ಇದನ್ನು ಒಣಗಿಸಿ ಎಣ್ಣೆಯಲ್ಲಿ ಹುರಿದು ಚಟ್ನಿ ಮಾಡಿ ತಿಂದರೆ ಆರೋಗ್ಯ ಹೆಚ್ಚುತ್ತದೆ.

ಪೋಷಕಾಂಶಗಳ ಆಗರ: ಬೀಟ್‌ರೂಟ್‌ನಲ್ಲಿ ಕಬ್ಬಿಣದಂಶ, ನಾರಿನಂಶ, ಕ್ಯಾಲ್ಸಿಯಂ, ವಿಟಮಿನ್ ಸಿ ಅಧಿಕವಾಗಿದ್ದು, ಪ್ರತಿದಿನ ಇದರ ಜ್ಯೂಸ್ ಕುಡಿದರೆ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಒಣ ಮೆಣಸಿನ ಕಾಯಿ ಅಥವಾ ಹಸಿ ಮೆಣಸಿನ ಕಾಯಿಗಿಂತ ಹಣ್ಣಾದ ಮೆಣಸಿನಲ್ಲಿ ಅಧಿಕ ಪೋಷಕಾಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸ್ಟ್ರಾಬೆರಿ ಹಣ್ಣು ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ಮೂಳೆ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚೆರ್ರಿ ಹಣ್ಣು ಮೈಕೈ ನೋವು ನಿವಾರಿಸುವಲ್ಲಿ ಉಪಕಾರಿ. ನಿದ್ರಾಹೀನತೆ ಸಮಸ್ಯೆ ಇರುವವರು ಇದನ್ನು ತಿಂದರೆ ಬೇಗನೆ ನಿದ್ದೆ ಬರುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹಾಗೂ ವಿಟಮಿನ್ ಆರೋಗ್ಯವನ್ನು ಹೆಚ್ಚಿಸುತ್ತದೆ.

ರಾಸ್‌ಬೆರಿ ಹಣ್ಣುಗಳು ದೇಹದ ತೂಕವನ್ನು ಸಮತೋಲನದಲ್ಲಿಡುವುದರ ಜೊತೆಗೆ ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಾಪಾಡುತ್ತದೆ. ಕೆಂಪು ನೇರಳೆ ಹಣ್ಣು ಸಿಗುವುದು ವಿರಳ. ಆದರೆ ತೋಟಗಳಲ್ಲಿ ಹಾಗೂ ಕಾಡುಗಳಲ್ಲಿ ನೇರಳೆ ಹಣ್ಣು ಹೆಚ್ಚಾಗಿ ದೊರೆಯುವ ಸೀಸನ್‌ನಲ್ಲಿ ಈ ಕೆಂಪು ನೇರಳೆಯೂ  ಕಂಡು ಬರುತ್ತದೆ. ಇದರಲ್ಲಿ ವಿಟಮಿನ್ ಎ ಹಾಗೂ ಕೆ ಅಧಿಕವಾಗಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT