ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024, MI vs LSG|ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ–ಲಖನೌ

ಗೆಲುವಿನೊಡನೆ ನಿರಾಶೆ ಮರೆಯುವ ಯತ್ನ
Published 17 ಮೇ 2024, 0:20 IST
Last Updated 17 ಮೇ 2024, 0:20 IST
ಅಕ್ಷರ ಗಾತ್ರ

ಮುಂಬೈ: ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ತಾಂತ್ರಿಕವಾಗಿಯಷ್ಟೇ ರೇಸ್‌ನಲ್ಲಿರುವ ಲಖನೌ ಸೂಪರ್‌ ಜೈಂಟ್ಸ್ ತಂಡಗಳು ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌ನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳ ಗುರಿ– ನಿರಾಶಾದಾಯಕ ಅಭಿಯಾನವನ್ನು ಗೆಲುವಿನೊಡನೆ ಮುಗಿಸುವುದಾಗಿದೆ.

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ಹಾಲಿ ಆವೃತ್ತಿಯಲ್ಲಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿತ್ತು. ಲಖನೌ ತಂಡಕ್ಕೆ ಕ್ಷೀಣ ಅವಕಾಶವಿದೆ. ಇದಕ್ಕಾಗಿ ಅದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭಾರಿ ಅಂತರದಿಂದ ಗೆಲ್ಲಬೇಕು. ಜೊತೆಗೆ  ಉಳಿದ ಪಂದ್ಯಗಳ ಫಲಿತಾಂಶ ಅದು ಅಂದುಕೊಂಡ ರೀತಿ ಆಗಬೇಕಷ್ಟೇ.

ಸತತ ಮೂರು ಸೋಲುಗಳಿಂದ ಕಂಗಾಲಾಗಿರುವ ಲಖನೌ ತಂಡ ಅಮೂಲ್ಯ ಪಾಯಿಂಟ್‌ಗಳನ್ನು ಕಳೆದುಕೊಂಡಿದೆಯಷ್ಟೇ ಅಲ್ಲ, ಅದರ ರನ್‌ ರೇಟ್‌ ಕೂಡ ಗಣನೀಯವಾಗಿ ಕುಸಿದಿದೆ.

ಏಳನೇ ಸ್ಥಾನದಲ್ಲಿರುವ ಲಖನೌ ನಿವ್ವಳ ರನ್ ದರ –0.787. ಆರನೇ ಸ್ಥಾನದಲ್ಲಿರುವ ಆರ್‌ಸಿಬಿ ರನ್‌ ದರ (0.387) ಸಾಕಷ್ಟು ಉತ್ತಮವಾಗಿದೆ.

13 ಪಂದ್ಯಗಳಲ್ಲಿ ನಾಲ್ಕನ್ನು ಮಾತ್ರ ಗೆದ್ದಿರುವ ಮುಂಬೈ ಶುಕ್ರವಾರದ ಪಂದ್ಯ ಗೆದ್ದಲ್ಲಿ 10 ಪಾಯಿಂಟ್ಸ್‌ ತಲುಪಬಹುದು. ಇದರಿಂದ ಕೊನೆಯ ಸ್ಥಾನದ ಮುಖಭಂಗ ತಪ್ಪಿಸಬಹುದು.

ಮುಂಬೈ ಬ್ಯಾಟರ್‌ಗಳಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಬೌಲಿಂಗ್‌ನಲ್ಲಿ ಬೂಮ್ರಾ (13 ಪಂದ್ಯಗಳಿಂದ 20 ವಿಕೆಟ್‌) ಪರಿಣಾಮಕಾರಿ ಎನಿಸಿದ್ದಾರೆ. ಆದರೆ ಇತರ ಬೌಲರ್‌ಗಳ ನಿರ್ವಹಣೆ ನಿರಾಸೆ ಮೂಡಿಸಿದೆ. ಈ ಹಿಂದಿನ ಆರು ಇನಿಂಗ್ಸ್‌ಗಳಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಗರಿಷ್ಠ ಗಳಿಕೆ ಎಂದರೆ 19! ನಾಯಕ ಪಾಂಡ್ಯ ಅವರೂ ತಂಡದಲ್ಲಿ ಸ್ಫೂರ್ತಿ ಮೂಡಿಸಲು ಶಕ್ತರಾಗಿಲ್ಲ.

ಇದ್ದುದರಲ್ಲಿ ಸೂರ್ಯಕುಮಾರ್ ಯಾದವ್‌ ಮೂರು ಅರ್ಧ ಶತಕ ಗಳಿಸಿ ಸ್ವಲ್ಪ ವಿಶ್ವಾಸ ಸಂಪಾದಿಸಿದ್ದಾರೆ.

ಎಲ್‌ಎಸ್‌ಜಿ ಪರ ಕೆ.ಎಲ್‌.ರಾಹುಲ್ ಮೂರು ಅರ್ಧ ಶತಕಗಳಿರುವ 465 ರನ್ ಗಳಿಸಿದ್ದಾರೆ. ಆದರೆ ಅವರ ಸ್ಟ್ರೈಕ್‌ರೇಟ್‌ (136.36) ಹೇಳಿಕೊಳ್ಳುವ ಹಾಗಿಲ್ಲ. ಇತರ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ನಿಕೋಲಸ್ ಪೂರನ್ (168.92 ಸ್ಟ್ರೈಕ್‌ರೇಟ್‌ನಲ್ಲಿ 424 ರನ್) ಕೆಲವು ಪಂದ್ಯಗಳಲ್ಲಷ್ಟೇ ತಂಡದ ನೆರವಿಗೆ ಬಂದಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT