ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್‌ಬಾಲ್‌ ಅಂಗಳದ ‘ನೀಲಮಣಿ’

Published 16 ಮೇ 2024, 19:51 IST
Last Updated 16 ಮೇ 2024, 19:51 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ ಆಟವನ್ನೇ ಉಂಡುಟ್ಟು ಮಲಗುವ ಭಾರತ ದೇಶದಲ್ಲಿ ಫುಟ್‌ಬಾಲ್ ಕ್ರೀಡೆಗೂ ಅಭಿಮಾನಿಗಳ ದೊಡ್ಡ ಬಳಗವನ್ನು ಸೃಷ್ಟಿಸಿದ ಶ್ರೇಯ ಸುನಿಲ್ ಚೆಟ್ರಿಗೆ ಸಲ್ಲಬೇಕು. 

ಕಳೆದ ಎರಡು ದಶಕಗಳಲ್ಲಿ ಕ್ರಿಕೆಟ್ ಭರಾಟೆ ಹೆಚ್ಚುತ್ತಲೇ ಬಂದಾಗ ಉಳಿದ ಕ್ರೀಡೆಗಳು ದುರ್ಬಲವಾಗುವ ಆತಂಕ ಎದುರಿಸಿದ್ದವು. ಅದರಲ್ಲಿ ಫುಟ್‌ಬಾಲ್ ಕೂಡ ಇತ್ತು. ಆದರೆ, ಇದೇ ಕಾಲಘಟ್ಟದಲ್ಲಿ ಬೇರೆ, ಬೇರೆ ಕ್ರೀಡೆಗಳಲ್ಲಿಯೂ ಕೆಲವು ಕ್ರೀಡಾಪಟುಗಳು ಪ್ರವಾಹದ ವಿರುದ್ಧ ಈಜಿ ಗೆದ್ದರು. ತಾರೆಯರಾಗಿ ಬೆಳಗಿದರು. ಅಂತಹ ಪ್ರತಿಭೆಗಳಲ್ಲಿ ಸುನಿಲ್ ‘ನೀಲಮಣಿ’ಯಂತೆ ಕಂಗೊಳಿಸುತ್ತಾರೆ. 

ಚೆಟ್ರಿ ಫುಟ್‌ಬಾಲ್ ಆಟದ ‘ಗೋಲು ಯಂತ್ರ’ ಎಂದೇ ಖ್ಯಾತರಾಗಿದ್ದಾರೆ. ಅವರ ಮಿಂಚಿನ ವೇಗದ ಓಟ, ಪಾಸ್‌ಗಳನ್ನು ಪಡೆಯುವ ಕೌಶಲ, ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್‌ಗಳನ್ನು ವಂಚಿಸಿ ಚೆಂಡನ್ನು ಗೋಲು ಬಲೆಯೊಳಗೆ ಕಳಿಸುವ ಅವರ ಕಾಲ್ಚಳಕಕ್ಕೆ ಮನಸೋತ ಲಕ್ಷಾಂತರ ಅಭಿಮಾನಿಗಳಿದ್ದಾರೆ. 

ಇದೀಗ ಚೆಟ್ರಿ ಅವರು ತಮ್ಮ ’ಆಟ–ಓಟ’ಕ್ಕೆ ವಿರಾಮ ನೀಡಲು ನಿರ್ಧರಿಸಿದ್ದಾರೆ.  'ಶೀಘ್ರದಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್ ಕ್ರೀಡೆಗೆ ವಿದಾಯ ಹೇಳುತ್ತೇನೆ. ಮುಂದಿನ ತಿಂಗಳು ನಡೆಯಲಿರುವ ಕುವೈತ್ ತಂಡದ ವಿರುದ್ಧ ಪಂದ್ಯದಲ್ಲಿ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸುವೆ‘ ಎಂದು 39 ವರ್ಷದ ಚೆಟ್ರಿ ಗುರುವಾರ ಘೋಷಿಸಿದ್ದಾರೆ. 

ಸುನಿಲ್ ನಿವೃತ್ತಿಯೆಂದರೆ ಭಾರತದ ಫುಟ್‌ಬಾಲ್ ಕ್ರೀಡೆಯ ಒಂದು ಯುಗದ ಅಂತ್ಯವೇ ಸರಿ. ಭರ್ತಿ 19 ವರ್ಷಗಳ ಕಾಲ ಆಡಿದ ಸುನಿಲ್ ಈ ಕ್ರೀಡೆಗೆ ಕೊಟ್ಟ ಕಾಣಿಕೆಗಳು ಹಲವಾರು. 

ಹಾಗೆ ನೋಡಿದರೆ; ಸಿಕಂದರಾಬಾದಿನಲ್ಲಿ ಜನಿಸಿದ್ದ ಸುನಿಲ್‌ಗೆ ಬಾಲ್ಯದಲ್ಲಿ ಫುಟ್‌ಬಾಲ್ ಬಗ್ಗೆ ಅಷ್ಟೇನೂ ಒಲವಿರಲಿಲ್ಲ. ಆದರೆ ಪ್ರತಿಭೆ ಅವರ ರಕ್ತದಲ್ಲಿಯೇ ಇತ್ತು. ಸೇನಾಧಿಕಾರಿಯೂ ಆಗಿದ್ದ ತಂದೆ ಕೆ.ಬಿ. ಚೆಟ್ರಿ ಫುಟ್‌ಬಾಲ್ ಪ್ರೇಮಿಯಾಗಿದ್ದವರು. ಅಲ್ಲದೇ ತಾಯಿ ಸುಶೀಲಾ ಅವರು ನೇಪಾಳ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯಾಗಿದ್ದರು. ಅದರಿಂದಾಗಿ ಸುನಿಲ್ ಅವರನ್ನು ಫುಟ್‌ಬಾಲ್ ಕಲಿಕೆಗೆ ಅಕಾಡೆಮಿಗೆ ಕಳಿಸಿದರು. 

ಅವರ ಸಹೋದರಿಯರಾದ ಸಶಾ ಮತ್ತು ಸುನಂದಾ ಕೂಡ ಫುಟ್‌ಬಾಲ್ ಆಟಗಾರ್ತಿಯರಾಗಿದ್ದರು. ಹೈದರಾಬಾದ್, ದೆಹಲಿ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಫುಟ್‌ಬಾಲ್ ಆಟದ ಪಾಠ ಕಲಿತರು. 

‘ನಾನು ವೃತ್ತಿಪರ ಫುಟ್‌ಬಾಲ್ ಆಟಗಾರನಾಗುತ್ತೇನೆ ಎಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿದ್ದಾಗ ದೆಹಲಿಯ ಕ್ಲಬ್ ಪರವಾಗಿ ಡುರಾಂಡ್‌ ಕಪ್ ಟೂರ್ನಿಯಲ್ಲಿ ಆಡಿದ್ದೆ. ಆಗ ನನ್ನ ಆಟವನ್ನು ನೋಡಿ ಮೋಹನ್ ಬಾಗನ್ ಕ್ಲಬ್ ತನ್ನ ಅಕಾಡೆಮಿಗೆ ಆಹ್ವಾನಿಸಿತು. ಬಳಿಕ ನನ್ನೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿತು. ಅಲ್ಲಿಂದ ಪಯಣ ಆರಂಭವಾಯಿತು’ ಎಂದು ಕೆಲವರ್ಷಗಳ ಹಿಂದೆ ಚೆಟ್ರಿ ಹೇಳಿಕೊಂಡಿದ್ದರು. 

ಆ ಕಾಲಘಟ್ಟದಲ್ಲಿ ಭಾರತದಲ್ಲಿ ಫುಟ್‌ಬಾಲ್ ಪ್ರೇಮಿಗಳ ಕಣ್ಮಣಿಯಾಗಿದ್ದ ಭೈಚುಂಗ್ ಭುಟಿಯಾ ಅವರು ಉತ್ತುಂಗ ಲಯದಲ್ಲಿದ್ದರು. ಯುವ ಆಟಗಾರರ ಪ್ರೇರಣೆಯಾಗಿದ್ದರು. 2011ರಲ್ಲಿ ಅವರು ನಿವೃತ್ತಿಯಾಗುವ ಆರು ವರ್ಷ ಮುನ್ನ ಚೆಟ್ರಿ ಭಾರತ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದರು. ಭೈಚುಂಗ್ ವಿದಾಯ ಹೇಳಿದ ನಂತರ ದೇಶದ ಫುಟ್‌ಬಾಲ್ ಜ್ಯೋತಿಯನ್ನು ತಮ್ಮ ಕೈಗೆತ್ತಿಕೊಂಡು ಇಲ್ಲಿಯವರೆಗೆ ಪ್ರಜ್ವಲಿಸುವಂತೆ ನೋಡಿಕೊಂಡಿದ್ದಾರೆ.  ಅವರ ಆಟದ ಸಾಧನೆಗಳನ್ನು ಅಂಕಿ ಸಂಖ್ಯೆಗಳ ಮೂಲಕ ಗುರುತಿಸಿಬಹುದು. 

ಅಂತರರಾಷ್ಟ್ರೀಯ ಫುಟ್‌ಬಾಲ್‌ ಅತಿ ಹೆಚ್ಚು ಗೋಲು ಗಳಿಸಿರುವವರ ಯಾದಿಯಲ್ಲಿ ಸುನಿಲ್ ಅವರು, ದಿಗ್ಗಜರಾದ ‍ಪೋರ್ಚುಗಲ್‌ ದೇಶದ ಕ್ರಿಸ್ಟಿಯಾನೊ ರೊನಾಲ್ಡೊ, ಇರಾನಿನ ಅಲಿ ದಾಲಿ ಹಾಗೂ  ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿದ್ದಾರೆ.  ಅವರ ನಾಯಕತ್ವದ ಕಾಲಘಟ್ಟದಲ್ಲಿ ಭಾರತ ತಂಡವು ಫಿಫಾ ರ‍್ಯಾಂಕಿಂಗ್‌ನಲ್ಲಿ 100ರೊಳಗೆ ಬಂದು ನಿಂತಿದ್ದು ಸಣ್ಣ ಸಾಧನೆಯಲ್ಲ. ಆದರೆ ಫಿಫಾ ವಿಶ್ವಕಪ್ ಮತ್ತು ಒಲಿಂಪಿಕ್ಸ್‌ ನಲ್ಲಿ ಅವರ ನಾಯಕತ್ವದ ತಂಡ ಆಡುವುದನ್ನು ನೋಡುವ ಭಾರತೀಯರ ಕನಸು ಮಾತ್ರ ನನಸಾಗಲಿಲ್ಲ. ಆದರೆ ಭವಿಷ್ಯದಲ್ಲಿ ಈ ಕನಸನ್ನು ನನಸು ಮಾಡುವಂತ ಸ್ಫೂರ್ತಿದಾಯಕ ವಾತಾವರಣವನ್ನು ಅವರು ನಿರ್ಮಿಸಿರುವುದಂತೂ ಸತ್ಯ. 

'ಗೋಲ್ಡನ್ ಟ್ವೀಟ್’ ಮಾಡಿದ್ದ ಚೆಟ್ರಿ

ಮುಂಬೈನಲ್ಲಿ 2018ರಲ್ಲಿ ಇಂಟರ್‌ಕಾಂಟಿನೆಂಟಲ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ನಡೆದಾಗ ಸುನಿಲ್ ಚೆಟ್ರಿ ಮಾಡಿದ್ದ ಟ್ವೀಟ್‌ (ಈಗ ಎಕ್ಸ್‌) ಸಂದೇಶವೊಂದು ಭಾರಿ ಸಂಚಲನ ಮೂಡಿಸಿತ್ತು. 

‘ಇವತ್ತು ಕ್ರೀಡಾಂಗಣಕ್ಕೆ ಬಂದು ಬೆಂಬಲಿಸಿದವರಿಗೆ ನನ್ನ ಧನ್ಯವಾದಗಳು. ಆದರೆ ಈ ವಿಡಿಯೊ ಮಾಡುತ್ತಿರುವುದು ತಮಗಾಗಿ ಅಲ್ಲ.  ಇಲ್ನಿಗೆ ಬರದೇ ಇರುವವರಿಗಾಗಿ. ನಾನು ಮಾತಾಡುತ್ತಿರುವುದು, ಮನವಿ ಮಾಡುತ್ತಿರುವುದು ಫುಟ್‌ಬಾಲ್ ಅಭಿಮಾನಿಯಲ್ಲದವರಿಗಾಗಿ.  ದಯವಿಟ್ಟು ಬನ್ನಿ. ಎರಡು ಕಾರಣಗಳಿಗಾಗಿ ನಾವು ಆಡುವುದನ್ನು ನೋಡಿ. ಮೊದಲನೆಯದು ಇದು ಜಗತ್ತಿನ ಅಂತ್ಯಂತ ಶ್ರೇಷ್ಠ ಕ್ರೀಡೆ, ಎರಡನೇಯದ್ದು ನಾವು ದೇಶಕ್ಕಾಗಿ ಆಡುತ್ತಿರುವುದು. ಒಮ್ಮೆ ನೀವು ಇಲ್ಲಿ ಬಂದು ನೋಡಿ. ತಾವೆಲ್ಲರೂ ಮರಳುವಾಗ ಮನಪರಿವರ್ತನೆಯೊಂದಿಗೆ ತೆರಳುವುದು ಖಂಡಿತ ಎಂಬ ಭರವಸೆ ನಮಗಿದೆ.  ಯುರೋಪಿಯನ್ ಕ್ಲಬ್ ಫುಟ್‌ಬಾಲ್ ನೋಡುವವರಿಗೂ ಒಂದು ಮಾತು. ಆ ಪಂದ್ಯಗಳಿಗೂ ನಮ್ಮಲ್ಲಿಯ ಆಟಕ್ಕೂ  ಸಾಟಿಯಿಲ್ಲ. ಅವರ ಸಮೀಪಕ್ಕೂ ಇಲ್ಲಿಯ ಆಟವಿಲ್ಲ. ಸರಿ. ಆದರೆ ನಮ್ಮ ಗುರಿ, ಸಮರ್ಪಣೆ ಮತ್ತು ಶ್ರಮ ಕೂಡ ಅದೇ ಮಟ್ಟದ್ದು. ಬನ್ನಿ ನೋಡಿ. ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ ಎಂಬ ಭರವಸೆ ನೀಡುತ್ತೇನೆ. ಭಾರತದ ಫುಟ್‌ಬಾಲ್ ಬಗ್ಗೆ ವಿಶ್ವಾಸ ಕಳೆದುಕೊಂಡವರಲ್ಲೂ ಮನವಿ ಮಾಡುತ್ತೇನೆ. ನಿಮ್ಮಲ್ಲಿ ಮತ್ತೆ ಭರವಸೆ ಹುಟ್ಟಿಸುವ ಪ್ರಯತ್ನ ನಮ್ಮದು’ ಎಂದು ಚೆಟ್ರಿ ಅವರು ವಿಡಿಯೊದಲ್ಲಿ ಭಾವುಕರಾಗಿ ಹೇಳಿದ್ದ ಮಾತುಗಳಿವು. 

ಅವರಿಗೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಆಟಗಾರರೂ ಅಭಿಮಾನಿಗಳಿಗೆ ಮನವಿ ಮಾಡುವ ಸಂದೇಶಗಳನ್ನು ಹಾಕಿದರು. 

ಚೆಟ್ರಿ ಅವರ ಸಂದೇಶಕ್ಕೆ ಟ್ವಿಟರ್‌ ತಾಣವು ‘ಗೋಲ್ಡನ್‌ ಟ್ವೀಟ್’ ಗೌರವ ಕೊಟ್ಟಿತ್ತು.  ಅವರ ಮಾತುಗಳು ಅಭಿಮಾನಿಗಳ ಮನ ತಟ್ಟಿದವು. ನಂತರದ ಪಂದ್ಯಕ್ಕೆ ಮೈದಾನ ಕಿಕ್ಕಿರಿದು ತುಂಬಿತು.  

––

ವಿರಾಟ್ ಜೊತೆಗೆ ಬ್ಯಾಟಿಂಗ್–ಚಾಟಿಂಗ್

ಕ್ರಿಕೆಟ್‌ ಆಟದ ರನ್‌ ಯಂತ್ರ ವಿರಾಟ್ ಕೊಹ್ಲಿ ಮತ್ತು ಸುನಿಲ್ ಚೆಟ್ರಿ ಅವರು ಆಪ್ತಮಿತ್ರರು. 2019ರಲ್ಲಿ ವಿರಾಟ್ ಮತ್ತು ಚೆಟ್ರಿ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ್ದರು. 

ಆ ವರ್ಷ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ತಂಡವು ಚಾಂಪಿಯನ್ ಆಗಿತ್ತು. ಅದೇ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಹುರಿದುಂಬಿಸಲು ಚೆಟ್ರಿ ಕ್ರೀಡಾಂಗಣಕ್ಕೆ ಬಂದಿದ್ದರು. 

ಅವತ್ತು ನೆಟ್ಸ್‌ನಲ್ಲಿ ಕ್ರಿಕೆಟ್ ಆಡುವ ಕೌಶಲಗಳನ್ನು ವಿರಾಟ್ ಅವರು ಚೆಟ್ರಿಗೆ ಕಲಿಸಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ಗಾಢವಾಗಿ ಬೆಳೆಯಿತು. ಅವರು ದೀರ್ಘ ಕಾಲ ಮಾಡಿದ ಚಾಟಿಂಗ್ ವಿಡಿಯೊಗಳು ಕೋವಿಡ್ ಸಂದರ್ಭದಲ್ಲಿ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದವು. 

ಬೆಂಗಳೂರಿನ ‘ಹೃದಯ ಶಿವ’

ಒಂಬತ್ತು ವರ್ಷಗಳಿಂದ ಐಎಸ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡದಲ್ಲಿ ಚೆಟ್ರಿ ಆಡುತ್ತಿದ್ದಾರೆ. ಅವರು ಇಲ್ಲಿಯ ಫುಟ್‌ಬಾಲ್  ಅಭಿಮಾನಿಗಳ ಕಣ್ಮಣಿಯಾಗಿದ್ದಾರೆ. 

ಹಲವಾರು ದಶಕಗಳಿಂದ ಬೆಂಗಳೂರಿನಲ್ಲಿ ಫುಟ್‌ಬಾಲ್ ಆಟದ ಪರಂಪರೆ ಇದೆ. ಒಲಿಂಪಿಯನ್ ಆಟಗಾರರನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆ ಉದ್ಯಾನನಗರಿಯದ್ದು.  

ಫ್ರ್ಯಾಂಚೈಸಿ ಲೀಗ್ ಆರಂಭವಾದಾಗ ಯುವ ಅಭಿಮಾನಿಗಳ ಹೃದಯವನ್ನು ಕದ್ದವರು ಚೆಟ್ರಿ. ಆದ್ದರಿಂದಲೇ ಇಲ್ಲಿ ಪಂದ್ಯ ನಡೆದಾಗಲೆಲ್ಲ ಅಭಿಮಾನಿಗಳ ಕೈಗಳಲ್ಲಿ ‘ಹೃದಯ ಶಿವ’ ಎಂಬ ಫಲಕಗಳು ಮಿಂಚುತ್ತವೆ. ಪ್ರತಿ ಪಂದ್ಯದ ನಂತರವೂ ಚೆಟ್ರಿ ತಮ್ಮ ತಂಡದೊಂದಿಗೆ ಮೈದಾನದಲ್ಲಿ ಒಂದು ಸುತ್ತು ಹಾಕಿ ಅಭಿಮಾನಿಗಳತ್ತ ಕೈಬೀಸಿ ಅಭಿನಂದಿಸುವುದನ್ನು ತಪ್ಪಿಸುವುದಿಲ್ಲ.  ಪಂದ್ಯದ ಫಲಿತಾಂಶ ಏನೇ ಇರಲಿ; ಚೆಟ್ರಿ ಅವರ ಈ ’ಥ್ಯಾಂಕ್‌ ವಾಕ್‌’ ನೋಡಲೆಂದೇ ಅಭಿಮಾನಿಗಳು ಲಗ್ಗೆ ಹಾಕುವ ಸಂಪ್ರದಾಯ ಹಾಸುಹೊಕ್ಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT