ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ‘ಹೊರೆ’ ಮತ್ತು ನೆರೆ ‘ಕರೆ’

Last Updated 12 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ನಿನ್ನ ನೆರೆಹೊರೆಯವರನ್ನು ಪ್ರೀತಿಸು’ - ಇದರ ಸಹಜಾರ್ಥದಿಂದಲೂ ಹೆಚ್ಚು, ಬಾಯ್ಮಾತಿಗೆ ಸಿಕ್ಕಿ ನಗೆಯುಕ್ಕಿಸುವಂತೆ ಮಾಡುತ್ತಾ ಬಂದಿರುವುದು ಇದರ ಜೊತೆಗೆ ತಳಕು ಹಾಕಿಕೊಂಡಿರುವ ಹಾಸ್ಯಾರ್ಥ. ಆದರೆ, ನಿಜಕ್ಕೂ ನೆರೆಹೊರೆಯವರನ್ನು ಪ್ರೀತಿಸಲು ಸಾಧ್ಯವೇ! ಹೀಗೊಂದು ಪ್ರಶ್ನೆ ಇತ್ತೀಚೆಗೆ ಮೂಡಲಾರಂಭಿಸಿದ್ದು ಸತ್ಯ. ನೆರೆಹೊರೆ ಅನ್ನುವುದು ನಿಜಕ್ಕೂ ಮನ ತುಂಬುವ ವಿಶ್ವಾಸದ ನೆರೆಯೇ! ಅಥವಾ ಬರೀ ಹೊರೆಯೇ! ಎರಡೂ ಅಲ್ಲದ ಕೇವಲ ಮನೆ ಪಕ್ಕದ ಇನ್ನೊಂದು ಮನುಷ್ಯನ ಅಸ್ತಿತ್ವವೇ? ನೆರೆಹೊರೆಯಲ್ಲಿ ಬರೀ ಮನುಜ ಸಂತತಿಯಷ್ಟೇ ಬರುವುದೇ ಅಥವಾ ಹತ್ತಾರು ಹಕ್ಕಿಗಳು ಆಗಾಗ ಕಾಟ ಕೊಡುವ ಬೀದಿನಾಯಿಗಳು ನಮ್ಮ ನೆರೆಹೊರೆಯ ಭಾವನೆಯೊಳಗೆ ಬರುವುದೇ? ಹೀಗೆ ಪ್ರಶ್ನೆಗಳು ಸಹಜ.

ಮಳೆ ಮತ್ತು ಬಿಸಿಲೂರು ಕರಾವಳಿಯ ಮಡಿಲಿಂದ ಬಂದು ಬಿದ್ದದ್ದು ಬೆಂಗಳೂರೆಂಬ ಕೂಲ್ ಸಿಟಿಗೆ. ನದೀ ತೀರದ, ನೋಡಿದರೆ ಹೊಟ್ಟೆ ಕಿಚ್ಚಾಗುವಂತಿದ್ದ ಚೆಂದದ ಚಾವಡಿಯಲ್ಲಿ ಉಯ್ಯಾಲೆ ತೂಗುತ್ತಿದ್ದ ಮನೆ, ಸುತ್ತಲಿದ್ದ ಅಂಗಳದ ತುಂಬ ಆಯಿ ನೆಟ್ಟ ತರಹೇವಾರಿ ಬಣ್ಣಬಣ್ಣದ ಹೂಗಿಡಗಳು, ಹತ್ತು ಹೆಜ್ಜೆ ಇಟ್ಟರೆ ತೋಟ ಮತ್ತದರ ಅನನ್ಯ ಮೌನದ ತೆಕ್ಕೆಯಿಂದ ಬಿಡಿಸಿಕೊಂಡಂತೇ ಬಂದು ಸೇರಿದ್ದು ಒತ್ತೊತ್ತಾಗಿ ಮನೆ ಕಟ್ಟಿ ಬಾಡಿಗೆಗೆ ಕೊಟ್ಟು ಅದರಿಂದಲೂ ಬದುಕಬಹುದು ಎಂದು ಸಾಬೀತು ಮಾಡುತ್ತಿರುವ ಬೆಂಗಳೂರಿಗೆ. ತೋಟದಲ್ಲಿ ಕೆಲಸ ಮಾಡುವ ಕೆಲಸದಾಳುಗಳಿಗೆ ಗಟ್ಟಿಯಾಗಿ ಕೂಕಿಲು ಹಾಕಿ ಕೂಗಿ ಊಟಕ್ಕೆ ಕರೆಯುತ್ತಿದ್ದ ಅಭ್ಯಾಸದವಳು ಗಟ್ಟಿ ಉಸಿರು ಬಿಟ್ಟರೆ ಎಲ್ಲಿ ಪಕ್ಕದ ಮನೆಯವರಿಗೆ ಕೇಳಿಸುತ್ತದೋ ಎಂದು ಬೆಚ್ಚಿ ಬಿದ್ದು ಉಸಿರನ್ನೂ ನಿಧಾನಕ್ಕೆ ತೆಗೆದುಕೊಳ್ಳುವಂತೆ ಆದ ಸ್ಥಿತಿಗೆ ಬಂದಾಗ ಬೀಸಿ ಒಗೆದಂತೇ ಆಗಿದ್ದು ಇನ್ನೂ ನೆನಪಿದೆ. ಆಗ ಇಲ್ಲೇ, ಊರಿನ ಅಪ್ಯಾಯಮಾನ ವಾತಾವರಣವನ್ನು ಸೃಷ್ಟಿಸುವ ಮೊದಲ ಮೆಟ್ಟಿಲಾಗಿ ಕಂಡದ್ದು ಹೂತೋಟದ ಕಲ್ಪನೆ.

ಹಿಂದಿನ ರಸ್ತೆಯ ಮನೆಯೊಂದರ ಸುಂದರ ಟೆರೇಸ್ ಗಾರ್ಡನ್ ನೋಡಿ ನನ್ನ ಮನಸ್ಸೂ ಹೂತೋಟದ ಆಲಾಪನೆ ಆರಂಭಿಸಿತ್ತು. ಇನ್ನು ತಡ ಬೇಡವೆಂದು ಇದ್ದ ಸೂರಿನ ಮಹಡಿ ಮೇಲೆ ಅಂಗಳವನ್ನು ಊಹಿಸಿ ಕುಂಡಗಳಲ್ಲಿ ಗಿಡಗಳನ್ನು ತುಂಬಲು ಆರಂಭಿಸಿದೆ. ನನ್ನ ಪ್ರತಿಯೊಂದು ನ್ಯೂ ವೆಂಚರಿಗೆ ಅಡ್ಡಕಾಲು ಹಾಕುವುದೇ ಜೀವನದ ಪರಮೋದ್ದೇಶವೆಂದು ನಿರ್ಧರಿಸಿರುವ ಮನೆಯ ವಿರೋಧ ಪಕ್ಷದ ನಾಯಕ ಪತಿಯಿಂದ ಸಹಜವಾಗಿ ತೀವ್ರ ವಿರೋಧ ವ್ಯಕ್ತವಾಯಿತು. ಮದುವೆಯ ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಾತಿ ಚರಾಮಿ ಎಂದ ಪುರುಷಪುಂಗವ ‘ಈ ಹುಚ್ಚನ್ನು ನನ್ನನ್ನೆಲ್ಲ ನಂಬಿಕೊಂಡು ಶುರು ಮಾಡಬೇಡ, ಯಾವುದಕ್ಕೂ ನನ್ನ ಕರೀಬೇಡ’ ಎಂದು ಮೊದಲ ಹಂತದಲ್ಲೇ ಕೈಕೊಡವಿದ. ‘ನಂಬಿದೆ ನಿನ್ನ, ಬಾಳದೇವತೆಯೇ’ ಎಂದು ಎಂದೂ ಹಾಡದ ನಾನು ಈ ವಿಷಯದಲ್ಲಿ ನಂಬುತ್ತೇನೆಯೇ, ಅವನನ್ನು ಪೂರ್ತಿ ಕಡೆಗಣಿಸಿಕೊಂಡು ಕುಂಡಗಳಲ್ಲಿ ಮಣ್ಣನ್ನು ತುಂಬಿ ಮಹಡಿಗೆ ಸಾಗಿಸುವ ಭಗೀರಥ ಪ್ರಯತ್ನ ನಡೆಸಿದೆ. ಪತ್ರಿಕೆ ಓದುತ್ತಾ ಕಣ್ಣಂಚಿನಿಂದ ನನ್ನೆಲ್ಲ ಕೆಲಸವನ್ನು ಗಮನಿಸುತ್ತಿದ್ದರೂ ಒಂದೇ ಒಂದು ಕುಂಡವನ್ನು ಮಹಡಿಗೆ ಸಾಗಿಸಲು ಕೊನೇಪಕ್ಷ ಬೆರಳನ್ನೂ ನೀಡದ ಪತಿಯ ಈ ಭಯಂಕರ ಉದಾಸೀನಕ್ಕೆ ಮನದಲ್ಲೇ ಹಿಡಿಶಾಪ ಹಾಕುತ್ತಾ ಮಹಡಿಯ ಮೇಲೆ ಕುಂಡಗಳನ್ನು ಹೊತ್ತು ಸಾಗಿಸಿದೆ. ಕುಂಡಗಳ ಭಾರದ ಜೊತೆಗೆ ಮಣ್ಣಿನ ಭಾರವೂ ಸೇರಿ ಹೈರಾಣಾದರೂ ಗಂಡನ ಮೇಲಿನ ಸಿಟ್ಟಿಂದ ಸ್ವಲ್ಪವೂ ಕಷ್ಟವನ್ನು ತೋರಿಸದೇ ಮಹಡಿ ಹತ್ತಿ ಇಳಿಯುತ್ತಿದ್ದಾಗ ನೆಲದ ಮಹಿಮೆಯ ಅರಿವಾಗಿದ್ದು ಸುಳ್ಳಲ್ಲ. ಒಮ್ಮೊಮ್ಮೆ ಸಿಟ್ಟು, ಎಂಥೆಂಥ ಚೆಂದನೆಯ ಹೂಗಳನ್ನು ಅರಳಿಸುತ್ತದೆ! ಕುಂಡಗಳಲ್ಲಿ, ಹೀಗೆ ಒಂದಷ್ಟು ತಿಂಗಳುಗಳಲ್ಲಿ ಹೂತೋಟದ ಸೃಷ್ಟಿಯಾಯಿತು ಅಲ್ಲಲ್ಲ, ಪಟ್ಟ ಮತ್ತು ನೆಟ್ಟ ಶ್ರಮ ಹೂಬಿಟ್ಟಿತು ಅಷ್ಟೇ!

ಋತುಚಕ್ರ ಊರುಳಿದಾಗ, ಇಲ್ಲಿ ಹೂವರಳಬೇಕು, ಮನಸ್ಸು ಹಿಗ್ಗಬೇಕು! ಋತುಗಳಿಗೆ ಕೆಲಸವೇನು! ಉರುಳುತ್ತಾ ಉರುಳುತ್ತಾ ಒಂದನ್ನೊಂದು ಸೇರಿಸುತ್ತಾ, ಭೂಮಿಗಿಷ್ಟು ಬೀಜ, ಬೀಜಕ್ಕಿಷ್ಟು ತೇವ ಕೊಟ್ಟು ಹೊಸದನ್ನು ಸೃಷ್ಟಿಸುವುದು. ಕುಂಡದ ದಾಸವಾಳ ಮೊಗ್ಗು ಬಿಟ್ಟಿತ್ತು. ಮಗಳು ಹುಟ್ಟಿದಾಗಲೂ ಅಷ್ಟು ಕುಣಿಯದ (ಬಾಣಂತಿಯರಿಗೆ ಕುಣಿಯಲು ಅಸಾಧ್ಯವಾದರೂ, ಮಾನಸಿಕವಾಗಿ ಕುಣಿಯುವ ಸಾಮರ್ಥ್ಯ ಇದ್ದೇ ಇರುತ್ತದೆ) ಅಂದು ನಾನು ಕುಣಿದು ಕುಪ್ಪಳಿಸಿದೆ. ಮಹಡಿ ಮೇಲಿನ ಸಪ್ಪಳ ಕೇಳಿ ಪತಿ, ಓಡಿ ಬಂದರು. ನನ್ನ ಮುಖದಲ್ಲಿದ್ದ ಸಂತಸ ನೋಡಿ ಪೇಲವ ನಗೆ ನಕ್ಕು ಕೆಳ ಹೋದರೆ, ನಾನು ‘ಅಯ್ಯೋ, ಖುಷಿಯನ್ನು ಸಂಭ್ರಮಿಸಲೂ ಮನುಷ್ಯನಿಗೆ ಯೋಗ ಬೇಕು’ ಎಂದು ಅವರ ಕಣ್ಣಿನ ಉಢಾಫೆ ಕಡೆಗಣಿಸಿ ಸಂಭ್ರಮಿಸಿದೆ.

ನಾನಿರುವ ರಸ್ತೆಯಲ್ಲಿ ಸರ್ವಧರ್ಮದವರೂ ಸರ್ವ ರಾಜ್ಯದ ಪ್ರತಿನಿಧಿಗಳು ಸಾಮರಸ್ಯದಿಂದ (ಹಾಗೆಂದುಕೊಳ್ಳೋಣಾ) ಬದುಕುತ್ತಿದ್ದೇವೆ. ಒಮ್ಮೊಮ್ಮೆ ಮಂದ್ರದಲ್ಲಿದ್ದ ಮಾತು ತಾರಕಕ್ಕೇ ಹೋಗಿ ಬಂದರೂ ಪರಸ್ಪರ ಹಲ್ಲು ಕಾಣದಂತೇ ತುಟಿಯಂಚಿನಲ್ಲೇ ‘ಹಲೋ’ ಎಂದು ತುಂಬು ವಿಶ್ವಾಸದಿಂದ ಮಾತಾಡಿಸುವ ಸೌಜನ್ಯ ಉಳಿಸಿಕೊಂಡಿರುವವರ ರಸ್ತೆ. ಪಕ್ಕದ ಮನೆಯ ಭಾಮಿನಿ ಇಷ್ಟುದ್ದದ ಕೂದಲು ಬಾಚಿ ಬಾಚಿ ನಾನಿಷ್ಟ ಪಟ್ಟು ಬೆಳೆಸಿದ ಕುಂಡಗಳ ಮೇಲೆ, ನಾನೆದುರಿಗಿದ್ದರೂ ನೋಡದಂತೇ ರಾಶಿ ಕೂದಲು ಗಾಳಿಯಲ್ಲಿ ಹಾರಿ ಬಿಡುವ ಪರಿಯಂತೂ ಅನನ್ಯ. ನಮ್ಮ ಕಾಂಪೌಂಡಿನ ಗೋಡೆ ಮೇಲೆ ಪುಟ್ಟ ಗಾರ್ಡನ್ ಮಾಡಿಕೊಂಡಿರುವ ಕುಮಾರ್, ಟಿ.ವಿ ಇರುವುದೇ ಫುಲ್ ವ್ಯಾಲ್ಯೂಮ್ ಕೊಟ್ಟು ಕೇಳಲು ಎಂದೇ ಪ್ರತಿಪಾದಿಸುವ ಬಿಹಾರದ ರೂಪ್ ಕುಮಾರ್ ಅಬ್ಬಾ ಅದೆಷ್ಟು ಒಳ್ಳೆಯ ನೆರೆ ‘ಹೊರೆ’ಯವರು!

ಇಷ್ಟೆಲ್ಲ ಅನೂಚಾನವಾಗಿ ನಡೆಯುತ್ತಿದ್ದ ಹೊತ್ತಿನಲ್ಲೇ ನನ್ನವರ ಬೆಳಗಿನ ಕಾಫಿ ಮತ್ತು ಪೇಪರಿನ ಓದು ಟೆರೇಸ್‌ಗೆ ವರ್ಗಾವಣೆಯಾಗಿತ್ತು. ಖಿಲ್ಲೆಂದು ನಕ್ಕ ನನ್ನನ್ನು ಕ್ಷುಲ್ಲಕವಾಗಿ ನೋಡಿ, ‘ಬಿಸಿಲು ಒಳ್ಳೆದು, ಹಾಗೇ ಟೆರೇಸಿನಲ್ಲಿ ಕೂರುತ್ತಿದ್ದೇನೆ’ ಎಂದು ಸಿಕ್ಕಿ ಬಿದ್ದ ಕಳ್ಳನಂತೇ ಹುಳ್ಳನಗೆ ಬೀರುತ್ತಾ ಹೇಳಿದಾಗ ಮೊದಲ ಮಹಾಯುದ್ಧ ಗೆದ್ದವರ ಸಂತಸ ನನ್ನದೂ. ಹೀಗೆ ಮಹಡಿ ಹೂತೋಟದ ಸಂಭ್ರಮದಲ್ಲಿ ಮುಳುಗೇಳುತ್ತಿದ್ದೆ. ಎಷ್ಟೆಂದರೂ ಸಂಭ್ರಮ ಅನ್ನುವುದು ಕ್ಷಣಿಕ ಅಲ್ಲವೇ!

ನನ್ನ ಮಹಡಿ ಹೂತೋಟ, ಹೀಗೂ ಅತಿಕ್ರಮಣಕ್ಕೆ ಒಳಗಾದೀತು ಎನ್ನುವ ಕನಿಷ್ಠ ಸೂಚನೆಯೇನಾದರೂ ಮೊದಲೇ ಸಿಗುತ್ತಿದ್ದರೂ ಅಷ್ಟು ಕಷ್ಟದಿಂದ ಮಣ್ಣು ಹೊರುತ್ತಿರಲಿಲ್ಲ. ಪಕ್ಷಿಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕನೂ ಆಗಿರುವ ನನ್ನವರೇ ಈ ಹೊಂಚು ಮಾಡಿದ್ದರು ಎಂದರೆ ಬಗಲ್ ಮೇ ದುಶ್ಮನ್ ಮಾತು ಸತ್ಯಸ್ಯ ಸತ್ಯ. ಹಕ್ಕಿಗಳಿಗೆ ನೀರಿಡುವ ಆಂದೋಲನ ಶುರುವಾಗಿ ಕಾಲವಾಯಿತು. ನಮ್ಮಲ್ಲೂ ನಡೆದೇ ಇತ್ತು. ರೆಂಜೆ ಮರದ ಮೇಲಿನ ಹಕ್ಕಿಗಳ ದಂಡು ನೋಡಿ ನನ್ನವರ ರೆಕ್ಕೆ ಬಲಿಯತೊಡಗಿತು. ಟೆರೇಸಿನ ಅಂಚಿನ ಗೋಡೆಯ ಮೇಲೆ ಹಕ್ಕಿಗಳಿಗೆಂದು ನೀರಿಡಲು ಆರಂಭಿಸಿದರು. ನಿತ್ಯವೂ ಸುಮಾರು ಮೂರು ತಿಂಗಳ ಕಾಲ ನೀರಿಟ್ಟು ವಾಚ್‍ಮನಿನಂತೇ ಕಾಯುತ್ತಿದ್ದ ನನ್ನವರ ಹಕ್ಕಿಗಳ ಮೇಲಿನ ಪ್ರೀತಿ ನೋಡಿ ಅಸೂಯೆಯಾಗಿದ್ದು ಸತ್ಯ. ನನ್ನನ್ನು ಹತ್ತು ನಿಮಿಷವೂ ಕಾಯದೇ ಕೆಂಡದ ಮೇಲೆ ನಿಂತಂತೇ ಆಡುವ ಮನುಷ್ಯ ತಿಂಗಳಾನುಗಟ್ಟಲೇ ಹಕ್ಕಿಗಳ ಆಗಮನಕ್ಕೆ ಕಾಯುವ ಪರಿ ಹೊಟ್ಟೆಕಿಚ್ಚಿಗೆ ಕಾರಣವಾಗಿದ್ದು ಸತ್ಯ. ಹೀಗೇ ನೀರಿಟ್ಟು ಕಾಯುವಾಗ ‘ಹುಂ, ನೀರಲ್ಲ ಇಟ್ಕೊಳ್ಳಿ’ ಎಂದು ಅಪ್ಪಟ ಭಾರತೀಯಳಂತೆ ಉದಾಸೀನ ಮಾಡಿದೆ ನೋಡಿ, ಅದೇ ತಪ್ಪಾಯಿತು. ಶಬರಿಯಂತೇ ಕಾಯುತ್ತಿದ್ದ ನನ್ನವರ ತಾಳ್ಮೆಗೆ ಹಕ್ಕಿಗಳು ಒಲಿದೇ ಬಿಟ್ಟವು. ನಿಧಾನಕ್ಕೆ ಒಂದೊಂದಾಗಿ ಹಕ್ಕಿಗಳು ನೀರಿನ ಪಾತ್ರೆಗೆ ಬರಲಾರಂಭಿಸಿದವು. ಮೊದಲು ನನ್ನವರನ್ನು ಮೋಹಿಸಿದ್ದು ಬುಲ್ ಬುಲ್. ಟಿನ್ ಟಿನ್ ಎಂದು ಗಂಟೆ ಹೊಡೆದಂತೇ ಬಂದು ತನ್ನ ವೈಯಾರ ಆರಂಭಿಸಿದರೆ ನನ್ನವರು ಪೂರಾ ಶರಣು. ನಂತರ ನೋಡಿ! ಹಕ್ಕಿಗಳ ದಂಡು ನನ್ನ ಟೆರೇಸಿನ ಮೇಲೆ ರಾಣಿಯ ಸ್ನಾನದ ಮನೆ ಮಾಡಿಕೊಂಡು ಬಿಟ್ಟವು. ಬುಲ್ ಬುಲ್, ಅಪರೂಪಕ್ಕೆ ಆಗಮಿಸುವ ಬೆಳ್ಗಣ್ಣ, ಚುಕ್ಕೆ ರಾಟವಾಳ, ಮೈ ತುಂಬ ಚುಕ್ಕಿ ಇರುವ ಸ್ಪಾಟೆಡ್ ಡವ್, ಅಕ್ಕಪಕ್ಕ ಸಿಕ್ಕಿದ ಮಾಂಸ ಮೂಳೆಯ ಜೊತೆಗೆ ನಂಗೆ ಬೇಸರ ಬೇಡವೆಂದು ಬಾಯಿಗೆ ಸಿಕ್ಕಿದ ಇಡ್ಲಿಯನ್ನೂ ತಂದು ನೀರಿನಲ್ಲಿ ಅದ್ದಿ ಅದ್ದಿ ತಿಂದು ಅರ್ಧ ಉಳಿಸಿ ಹೋಗುವ ಕಾಗೆ, ಪಾರಿವಾಳಗಳ ದಂಡು, ದೊಡ್ಡ ರೆಕ್ಕೆಯ ಹದ್ದು ಒಂದೇ ಎರಡೇ ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಜಾತಿಯ ಹಕ್ಕಿಗಳಿಗೆ ನೀರಿನಾಟದ ಭೇಟಿಗೆ ಮತ್ತು ನೀರು ಕುಡಿಯಲು ನನ್ನ ಟೆರೇಸು ಕಾಯಂ ಸ್ಥಳವಾಯಿತು.

ಆರಂಭದಲ್ಲಿ ಬಂದ ಅತಿಥಿಗಳಿಗೆ ಅದನ್ನು ತೋರಿಸಿ ಜಂಬ ಕೊಚ್ಚಿಕೊಳ್ಳುತ್ತಾ ಇದ್ದೆ. ನಂತರ ನನ್ನ ಟೆರೇಸಿಗೆ ಹೋಗಲು ನಾನೇ ಪರ್ಮಿಶನ್ ತೆಗೆದುಕೊಳ್ಳುವ ಸ್ಥಿತಿ ಬಂತು. ಹಕ್ಕಿಗಳ ಆಟ, ಊಟ ಅದನ್ನು ಸೆರೆ ಹಿಡಿಯಲು ನನ್ನವರು ಬಂದೂಕಿನಂತಿರುವ ಅವರ ಅಹಂಕಾರವೇ ಆಗಿರುವ ಇಷ್ಟುದ್ದದ ಲೆನ್ಸ್ ಅನ್ನು ಕ್ಯಾಮೆರಾಗೆ ಜೋಡಿಸಿ ಅಲ್ಲಿ ಸ್ಥಾಪನೆಯಾದರೆ ನಂತರ ಟೆರೇಸಿನಲ್ಲಿ ಉಸಿರು ಬಿಡಲೂ ಅವರ ಪರ್ಮಿಶನ್ ಬೇಕಾಗಿ ಬಂತು. ನೀರಿನ ಪಾತ್ರೆಯ ಪಕ್ಕದ ಬಟ್ಟಲು ತುಂಬ, ತುಂಬಿ ತುಂಬಿ ಇಡುತ್ತಿದ್ದ ನವಣೆಯ ಬಟ್ಟಲಿಗೆ ಚುಕ್ಕೆಯ ಸ್ಪಾಟೆಡ್ ಡವ್ ಬಂದು ತಿಂದು ಹಾಗೇ ನಿದ್ದೆ ಹೋಗುವುದೂ ಇತ್ತಲ್ಲವೇ! ಅದರ ನಿದ್ದೆಗೆ ಭಂಗವಾದೀತೆಂದು ನನ್ನ ಹೆಜ್ಜೆ ಸಪ್ಪಳಕ್ಕೂ ಅಡ್ಡಿ ಬಂತು. ಈ ಸ್ಪಾಟೆಡ್ ಡವ್ವಿಗಂತೂ ಸಿಕ್ಕಾಪಟ್ಟೆ ಮೋಹ. ನನ್ನವರು ನವಣೆಯ ಡಬ್ಬಿ ಹಿಡಿದು ಅಲುಗಾಡಿಸಿದರೆ ಸಾಕು ಮುದ್ದಿನಿಂದ ಬಂದು ಕೂರುತ್ತದೆ. ವಿಧಾನಸೌಧ ಕಟ್ಟಿದವರು ಅದರೊಳಗೆ ಅಧಿಕಾರ ಮಾಡಲಿಲ್ಲ ಅಂದಂತೇ ಹೂತೋಟ ಮಾಡಿದವರು ಹೂತೋಟದ ಆನಂದ ಅನುಭವಿಸುವಂತಿಲ್ಲ! ಎಂದರೆ ಒಳ್ಳೆಯವರಿಗೆ ಕಾಲವಿಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಯಿತು ನೋಡಿ!

ಇಷ್ಟೆಲ್ಲದರ ನಡುವೆ, ನಾನೇ ನೆಟ್ಟ ದಾಸವಾಳದ ಗಿಡದ ಬುಡದಲ್ಲಿ ಇನ್ನೊಂದು ಗಿಡ ಬಂದಿದೆ ಎಂದು ನೀರುಣಿಸುವ ಹೊತ್ತಿನಲ್ಲಿ ಅರಿವಾಯಿತು. ಒಂದೆರಡು ದಿನಗಳ ನಂತರ ನೋಡಿದಾಗ ಅದು ಚೆರ‍್ರಿ ಟೊಮೆಟೊ ಹಣ್ಣಿನ ಗಿಡವೆಂದು ತಿಳಿಯಿತು. ಕಾಗೆ ತಂದು ಹಾಕಿದ ಬೀಜವದು. ಗಂಡ ಒಂದು ಚೂರು ಸಹಾಯ ಮಾಡದಿದ್ದರೂ ಅಜ್ಜ ಮುತ್ತಜ್ಜಂದಿರು ಟೊಮಾಟೊ ಬೀಜ ತಂದು ಹಾಕಿದ್ದರು. ಕಾಗೆಗಳನ್ನು ಪಿತೃಗಳೆಂದು ಪುರಸ್ಕರಿಸುವ ನಮ್ಮ ಸಂಪ್ರದಾಯವಿದೆ ನೋಡಿ, ಹಾಗೇ ಒಮ್ಮೊಮ್ಮೆ ಕಾಗೆಯನ್ನು ತದೇಕಚಿತ್ತದಿಂದ ನೋಡಿ ಅಜ್ಜನಿರಬಹುದೇ ಎಂದು ನೋಡಿದ್ದೂ ಇದೆಯೆನ್ನಿ. ಮತ್ತೊಂದು ಗಿಡದ ಬುಡದಲ್ಲಿ ಮೆಣಸಿನ ಪುಟ್ಟ ಗಿಡ ಮೇಲೆದ್ದಾಗ ನನಗೂ ಹಕ್ಕಿಗಳೆಡೆಗೆ ಇದ್ದ ಸಣ್ಣ ಅಸಹನೆ ಕರಗುತ್ತಾ ಹೋಗಿ ಅಲ್ಲಿ ಸಹಜ ಮೋಹ ಮೂಡಲಾರಂಭಿಸಿತು.

ಮನೆ ಮುಂದಿದ್ದ ಕುಂಡದಿಂದ ದೊಡ್ಡ ಪತ್ರೆಯ ಎಲೆಗಳನ್ನು ‘ಮಗುವಿಗೆ ಕೆಮ್ಮು ಹಾಗೇ ನಾಲ್ಕು ಎಲೆ ಬೇಕಿತ್ತು’ ಎಂದು ಚಿವುಟಿಕೊಂಡು ಸರಸರನೇ ಹೋಗಿದ್ದ ಭಾಮಿನಿಯ ಮಹತ್ಕಾರ್ಯ ನೆನಪಾಯಿತು. ಚಿವುಟುವ ರಭಸಕ್ಕೆ ನಾಜೂಕಿನ ದೊಡ್ಡಪತ್ರೆ ಗಿಡದ ಬುಡವೇ ಮೇಲೆದ್ದಿತ್ತು. ಅಷ್ಟಕ್ಕೂ ನೆರೆಹೊರೆಯಲ್ಲವೇ! ಕಟ್ಟುವ, ಕೆಡಹುವ ಸಂಸ್ಕೃತಿಯನ್ನು ಅದೆಷ್ಟು ಸೊಗಸಾಗಿ ಮನುಜ ಮತ್ತು ಹಕ್ಕಿಗಳು ಅರ್ಥೈಸಿಕೊಂಡಿದ್ದೇವೆ! ತೋರಣ ಬಳ್ಳಿಗೆ ಬರುವ ಸೂರ್ಹಕ್ಕಿ ಗಾಳಿಯಲ್ಲಿ ಗರಗರನೆ ರೆಕ್ಕೆ ಬಡಿಯುತ್ತಾ ಪುಟ್ಟ ಹೂವಿಗೆ ಒಂಚೂರೂ ಘಾಸಿ ಮಾಡದೇ ಚೂಪಾದ ಕೊಕ್ಕನ್ನು ಹೂವಿನೊಳಗೆ ತೂರಿಸಿ ಮಕರಂದ ಹೀರಿ ಹಾಗೇ ಹೋಗಿ ಬಿಡುತ್ತದೆ. ಕಣ್ಣಿಗೆ ಕಂಡ ದಾಸವಾಳದ ಹೂಗಳನ್ನು ಕೊಯ್ಯುವ ಮತ್ತು ಬೇಗನೇ ಅಲ್ಲಿಂದ ಮರೆಯಾಗುವ ಆತುರದಲ್ಲಿ ಗಿಡವನ್ನೂ ಅದರ ಗೆಲ್ಲುಗಳನ್ನು ತುಂಡರಿಸಿ ಹೋಗುವ ಮನುಷ್ಯ! ಒಂದು ನಿಟ್ಟುಸಿರು ಅಷ್ಟೇ!

ಈಗ ಕಿವಿಗೆ ಹಕ್ಕಿಗಳ ರಿಂಗಣ ಸಂಗೀತವಾಗಿದೆ. ನಿತ್ಯವೂ ಮೂರು ಬಾರಿ ಒಮ್ಮೊಮ್ಮೆ ಇನ್ನೂ ಹೆಚ್ಚು ಬಾರಿ ಬಂದು ಹೋಗುವ ಬುಲ್ ಬುಲ್, ಮಧ್ಯಾಹ್ನ ಎಲ್ಲರೂ ಸಣ್ಣ ಕೋಳಿನಿದ್ದೆಗೆ ಜಾರಿದರು ಎನ್ನುವ ಹೊತ್ತಿನಲ್ಲಿ ತೋರಣ ಬಳ್ಳಿಯ ಹೂವಿಗೆ ಮುತ್ತಿಕ್ಕಿ ಹೋಗುವ ಮತ್ತು ಮನೆಯ ಹೊರಗಿನ ಛಾವಣಿಯ ಒಳಭಾಗದಲ್ಲಿ ಇರುವ ಜೇಡರ ಬಲೆಯನ್ನು ಅದರ ಅಂಟನ್ನು ಪುಟ್ಟ ಚೂಪಾದ ಕೊಕ್ಕಿನಲ್ಲಿ ಸುತ್ತಿಕೊಂಡು ಒಯ್ಯುವ ಸೂರ್ಹಕ್ಕಿ ಜೋಡಿ ಮತ್ತು ಆಗಾಗ ಹುಳಹುಪ್ಪಟೆ ಹುಡುಕುತ್ತಾ ಬರುವ ದರ್ಜಿ ಹಕ್ಕಿ, ಬದುಕನ್ನು ಬಹಳಷ್ಟೂ ಸಹನೀಯವಾಗಿಸಿದೆ. ರಸ್ತೆಗೇ ಕಸ ಎಸೆಯುವ ಮನುಜರ ನಡುವೆ ನೀರಿನ ಪಾತ್ರೆಗೆ ಬಿದ್ದ ಬ್ರೆಡ್ ತುಂಡನ್ನೂ ಕೊಕ್ಕಿನಲ್ಲಿ ಎತ್ತಿ ತಿಂದು ಹೋಗುವ ಕಾಗೆ ಹೆಚ್ಚು ಆಪ್ತವೆನಿಸುತ್ತದೆ. ನೆರೆ ‘ಹೊರೆ’ಯ ಮನುಜ ಮಾಡುವ ಕ್ಷುಲ್ಲಕ ಬೇಜವಾಬ್ದಾರಿಯ ಉಪದ್ರವಗಳು, ಇಂಪಾಗಿ ಕರೆಯುವ ನೆರೆ ‘ಕರೆ’ಯ ಈ ಹಕ್ಕಿಗಳ ಸ್ವಚ್ಛಂದ ಪ್ರೀತಿಗೆ ಎಲ್ಲಿದೇ ಹೋಲಿಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT