ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತ ಹಾವೇರಿ, ಇತ್ತ ಕಾವೇರಿ...

Last Updated 8 ಡಿಸೆಂಬರ್ 2012, 20:06 IST
ಅಕ್ಷರ ಗಾತ್ರ

ಅತ್ತ ಹಾವೇರಿ, ಇತ್ತ ಕಾವೇರಿ
ಅತ್ತ ಬೆಂಕಿ, ಇತ್ತ ನೀರು
ನಡುವೆ ನಮ್ಮ ಜಗದೀಶ ಶೆಟ್ಟರು
ಎತ್ತ ಹಾರುವುದು ಎಂದು ತಿಳಿಯದೆ
ಕಣ್ಣು ಕಣ್ಣು ಬಿಟ್ಟರು!

`ಪಾಪ, ನಮ್ ಜಗದೀಶ್ ಶೆಟ್ಟರ ಸ್ಥಿತಿ ಯಾರಿಗೂ ಬರಬಾರ್ದು ಸಾ, ಈ ಕಡೆ ಕಾವೇರಿ ಗದ್ದಲ, ಆ ಕಡೆ ಹಾವೇರೀಲಿ ಯಡ್ಯೂರಪ್ಪನೋರ ಆರ್ಭಟ, ಎರಡರ ನಡುವೆ ಶೆಟ್ಟರು ಏನೂ ಮಾಡೋಕಾಗದೆ `ಮೂಕ ಹಕ್ಕಿಯು ಹಾಡುತಿದೇ...' ಅನ್ನೋತರ ಆಗಿಬಿಟ್ಟಿದಾರಂತೆ. ಯಾರತ್ರನೂ ಜಾಸ್ತಿ ಮಾತಾಡಲ್ಲಂತೆ. ಪೇಪರ್‌ನೋರು, ಟೀವಿಯೋರು `ಏನ್ಸಾರ್ ಚೆನ್ನಾಗಿದೀರಾ?' ಅಂತ ಸುಮ್ನೆ ಮಾತಾಡಿಸಿದ್ರೂ `ನೋ ಪಾಲಿಟಿಕ್ಸ್, ನೋ ಕಮೆಂಟ್ಸ್' ಅಂತ ಹೊರಟೇ ಬಿಡ್ತಾರಂತೆ...' ಪರಮೇಶಿ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತ ಮುಖ್ಯಮಂತ್ರಿಗಳ ಬಗ್ಗೆ ಕನಿಕರ ವ್ಯಕ್ತಪಡಿಸಿದ.

ನನಗೂ ಪರಮೇಶಿಯ ಮಾತು ನಿಜ ಅನ್ನಿಸಿತು. `ಏನ್ಮಾಡ್ತಿ ಪರಮೇಶಿ, ನಮ್ಮೊರ‌್ನ ಮುಟ್ಟಿದ್ರೆ ಸರ‌್ಕಾರ ಬೀಳಿಸ್ತೀನಿ ಅಂತ ಯಡ್ಯೂರಪ್ಪ, ತಾಕತ್ತಿದ್ರೆ ಬೀಳಿಸ್ರಿ ನೋಡಾಣ ಅಂತ ಈಶ್ವರಪ್ಪ, ಇವರ ಗದ್ಲದಲ್ಲಿ ಪಾಪ ಶೆಟ್ಟರು ಈಗ್ಲೋ ಆಗ್ಲೋ ಬೀಳೋ ಮೂರು ಕಾಲಿನ ಮುಖ್ಯಮಂತ್ರಿ ಕುರ್ಚಿ ಹಿಡ್ಕಂಡು ಕಣ್ ಕಣ್ ಬಿಟ್ಕಂಡು ಕೂತಿದಾರೆ ಅನ್ಸುತ್ತೆ, ಏನ್ಮಾಡಾಕಾಗುತ್ತೆ?' ಎಂದೆ.

`ಅವರು ಸರ್ಕಾರ ನಡೆಸ್ತಿಲ್ಲ ಸಾ, ಸರ್ಕಸ್ ಮಾಡ್ತಿದಾರೆ ಅನ್ಸುತ್ತೆ. ತೆಲಿ ತುಂಬ ಕಾವೇರಿ-ಹಾವೇರಿಯದ್ದೇ ಚಿಂತೆ. ಮೊನ್ನೆ ಯಾರೋ `ಊಟ ಆಯ್ತೊ ಸಾರ್?' ಅಂತ ಕೇಳಿದ್ದಕ್ಕೆ `ನಮಗೇ ನೀರಿಲ್ಲ, ನೀವೊಳ್ಳೆ...' ಅಂತ ರೇಗಿದ್ರಂತೆ. ಮನೇಲಿ ಶೆಟ್ಟರ ಹೆಂಡ್ತಿ ಊಟ ಬಡಿಸ್ತಾ `ರೀ... ಯಡ್ಯೂರಪ್ಪ ಸಂಗಡ ಎಪ್ಪತ್ ಮಂದಿ ಎಮ್ಮೆಲ್ಲೆಗಳು ಹೋಗೂದು ಖರೆ ಏನು?' ಅಂತ ಕೇಳಿದ್ದಕ್ಕೆ `ನಮಗೇ ನೀರಿಲ್ಲ, ಅವರಿಗೆಲ್ಲಿಂದ ಬಿಡೋದು?' ಅಂದ್ರಂತೆ. `ರೀ... ರೊಟ್ಟಿ ಜೊತಿಗೆ ಅನ್ನ ಸೇರಿಸ್ಕೊಂಡು ತಿಂತಿದೀರಲ್ಲ, ಪಲ್ಯ ತಿನ್ರೀ...' ಅಂದಿದ್ದಕ್ಕೆ `ನೋ ಪಾಲಿಟಿಕ್ಸ್, ನೋ ಕಮೆಂಟ್ಸ್...' ಅಂತ ಎದ್ದೇಬಿಟ್ರಂತೆ!' ಎಂದ ಪರಮೇಶಿ.

ನನಗೆ ನಗು ಬಂತು. `ಅಲ್ಲೋ ಪರಮೇಶಿ, ಎಲ್ಲ ನೀನೇ ಕಣ್ಣಾರೆ ನೋಡಿರೋನ ತರ ಹೇಳ್ತೀಯಲ್ಲ, ನಿಜವಾಗ್ಲೂ ನೋಡಿದ್ರೆ ಇನ್ನೆಂಗೆ ಹೇಳ್ತಿದ್ಯೊ? ಹೋಗ್ಲಿ ಇವತ್ತು ಡಿಸೆಂಬರ್ ಒಂಭತ್ತಲ್ವಾ? ಯಡ್ಯೂರಪ್ಪ ಅವರ ಹಾವೇರಿ ಸಮಾವೇಶ ಜೋರಿರಬೇಕು?' ಎಂದೆ.
`ಸಖತ್ ಜೋರೈತಂತೆ ಸಾ, `ಒಂಭತ್ತು ಒಂಭತ್ತು ಒಂಭತ್ತು ಕಮಲ ಹಳ್ಳಕ್ಕೆ ಬಿತ್ತು' ಅಂತ ರೇಣುಕಾಚಾರ‌್ಯ, ಬೀಪಿ ಹರೀಶು ಆಗ್ಲೇ ಡ್ಯಾನ್ಸ್ ಶುರು ಹಚ್ಕಂಡಿದಾರಂತೆ. ನಮ್ ಈಶ್ವರಪ್ಪೋರು ಏನ್ ಕಮ್ಮಿನಾ? ಕೈಯಾಗೆ ನೋಟೀಸ್‌ಗಳ ಕಂತೆ ಹಿಡ್ಕಂಡು ಮಾರುವೇಷ ಹಾಕ್ಕಂಡು ಸಮಾವೇಶದ ಬಾಗಿಲಲ್ಲೇ ಕೂತಿದಾರಂತೆ. `ಎಮ್ಮೆಲ್ಲೆಗಳು ಯಾರ‌್ಯಾರು ಬರ‌್ತೀರೋ ಬರ‌್ರೆಲೇ, ಒಬ್ಬೊಬ್ರಿಗು ನೋಟಿಸ್ ಹರಿದು ಮೂಗಿನ ಮೇಲೆ ಅಂಟಿಸಿಬಿಡ್ತೀನಿ' ಅಂತ ದುಸಬುಸ ಕೂಗಾಡ್ತಿದಾರಂತೆ...'
`ಮಾರುವೇಷನಾ? ಏನಪ್ಪಾ ಅದು?' ನನಗೆ ಕುತೂಹಲ.

`ಈಶ್ವರಪ್ಪೋರು ಸರ್ದಾರ್ಜಿ ವೇಷ ಹಾಕ್ಕೊಂಡು ಸಮಾವೇಶಕ್ಕೆ ಯಾರ‌್ಯಾರು ಎಮ್ಮೆಲ್ಲೆ ಬರ‌್ತಾರೆ ನೋಡಾಣ ಅಂತ ಹೋಗಿದ್ರಂತೆ. ಈಶ್ವರಪ್ಪ ಬಾಗಿಲಲ್ಲೇ ಕೂತಿದ್ರೂ ಅವರ ಮುಂದೇನೇ ಎಪ್ಪತ್ತು ಶಾಸಕರೂ ಸಮಾವೇಶದ ಒಳಕ್ಕೆ ಹೋದ್ರಂತೆ...' ಪರಮೇಶಿ ಕತೆ ಹೊಸೆದ.

`ಹೌದಾ? ಮತ್ತೆ ಈಶ್ವರಪ್ಪ ನೋಡಿಯೂ ಸುಮ್ನಿದ್ರಂತಾ?'

`ಅವರಿಗೆ ಗೊತ್ತೇ ಆಗ್ಲಿಲ್ಲಂತೆ. ಈಶ್ವರಪ್ಪೋರ ತರ ಆ ಶಾಸಕರೂ ಬೇರೆ ಬೇರೆ ವೇಷ ಹಾಕ್ಕಂಡು ಸಮಾವೇಶಕ್ಕೆ ಬಂದಿದ್ರಂತೆ!' ಪರಮೇಶಿ ಸತ್ಯದ ತಲೆ ಮೇಲೆ ಹೊಡೆದಂಗೆ ಹೇಳಿದಾಗ ನನಗೆ ನಗು ತಡೆಯಲಾಗಲಿಲ್ಲ.

`ಅಲ್ಲೋ ಪರಮೇಶಿ, ಈ ಕತೆ-ಕಂತೆ ಪುರಾಣ ಎಲ್ಲ ಯಾರು ಹೇಳ್ತಾರೆ ನಿಂಗೆ? ನಿಜ ಅನ್ನಂಗೇ ಹೇಳಿಬಿಡ್ತೀಯಲ್ಲ? ಈಶ್ವರಪ್ಪಂಗೂ ವೇಷ ಹಾಕಿ ಸಿಬಿಟ್ಯೆಲ್ಲೊ?' ಎಂದೆ ನಗುತ್ತ.

`ಏನೋ ಅವರಿವರು ಮಾತಾಡೋದನ್ನ ಕೇಳಿ, ಅದಕ್ಕೊಂದಿಷ್ಟು ಮಸಾಲೆ ಸೇರ‌್ಸಿ ಹೇಳ್ತೀನಿ ಬಿಡಿ ಸಾ. ಯಾವ ರಾಜಕೀಯ ತಗಂಡು ನಮಗೇನಾಗಬೇಕು ಹೇಳಿ. ಬೈಟೂ ಚಾ ಕುಡಿದು ಸ್ವಲ್ಪ ಮಜಾ ತಗೊಂಡು ಹೋಗೋದಪ್ಪ. ಆದ್ರೆ ಈ ರಾಜಕಾರಣಿಗಳನ್ನ ನೋಡಿದ್ರೆ ಯಾರಿಗೆ ತಾನೇ ನಗು ಬರಲ್ಲ? ಈಗ ನೀವೇ ಹೇಳಿ, ಕಾವೇರಿ ನೀರು ಕೇಳೋಕೆ ಜಯಲಲಿತಾ ತಮಿಳ್ನಾಡಿಂದ ಕರ್ನಾಟಕಕ್ಕೆ ಬಂದಿದ್ರಲ್ಲ, ತಾವು ಕೂತ್ಕೊಳೋ ಕುರ್ಚಿನೂ ಅಲ್ಲಿಂದ ತರ‌್ಬೇಕಿತ್ತಾ?'

`ಅರೆ ಹೌದಲ್ವಾ? ಯಾಕೆ ನಮ್ ಸಿಎಮ್ಮು ಆವಮ್ಮಂಗೆ ಕುರ್ಚಿ ಹಾಕಲ್ಲ ಅಂದಿದ್ರಾ?'

`ಅದೆಂಗೆ ಅಂತಾರೆ ಸಾ, ನಾವು ಕನ್ನಡಿಗರು ಧಾರಾಳಿಗಳು, ಏನ್ ಬೇಕಾದ್ರು ಕೊಟ್‌ಬಿಡ್ತೀವಿ. ಈಗ ನೋಡಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿಲ್ವಾ?'

`ಅದೇ ತಪ್ಪು, ಜಗದೀಶ್ ಶೆಟ್ಟರು ನೀರು ಬಿಡಬಾರದಿತ್ತು. ಮನಸ್ಸು ಮಾಡಿದ್ರೆ ಅವರು ಒಂದೇ ಕಲ್ಲಿನಿಂದ ಎರಡು ಸಮಸ್ಯೆ ಹೊಡೀಬಹುದಿತ್ತು. ಕಾವೇರಿ ನೀರಿನಿಂದ್ಲೇ ಹಾವೇರಿ ಬೆಂಕಿನೂ ಆರಿಸಬಹುದಿತ್ತು' ಎಂದೆ ನಾನು.

`ಹೌದಾ? ಅದೆಂಗೆ ಸಾ?' ಪರಮೇಶಿಗೆ ಕುತೂಹಲ.

`ಈಗ ಕಾವೇರಿ ನೀರು ಬಿಡೋಕಾಗಲ್ಲ ಅಂತ ಶೆಟ್ಟರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಿಸಾಕಿಬಿಟ್ಟಿದ್ರೆ ಜನರ ಕಣ್ಣಲ್ಲಿ ಹೀರೊ ಆಗಿರೋರು. ಹಾವೇರಿ ಸಮಾವೇಶದಿಂದಾಗಿ ಬಿಜೆಪಿ ಮನೆ ಒಡೆದು ಸರ‌್ಕಾರ ಬಿತ್ತು ಅನ್ನೋ ಕಳಂಕನೂ ದೂರ ಆಗಿರೋದು. ಜೊತೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಶೆಟ್ಟರೂ ಮುಂದುವರಿದಿರೋರು ಹೆಂಗೆ?' ಎಂದೆ.

`ಸೂಪರ್ ಸಾರ್, ನಿಮಗೂ ತಲೆ ಐತೆ ಅಂತ ಇವತ್ತು ಗೊತ್ತಾಯ್ತು ನೋಡಿ' ಎಂದ ಪರಮೇಶಿ ನಗುತ್ತ.

`ಲೇ ತರ‌್ಲೆ, ಅದಿರ‌್ಲಿ, ಜಯಲಲಿತ ತಮ್ಮ ಕುರ್ಚಿನ ತಾವೇ ಏಕೆ ತಂದಿದ್ರು ಅದನ್ನು ಹೇಳು ಮೊದ್ಲು' ಎಂದೆ ನಾನು .
`ನಂಗೇನ್ ಗೊತ್ತು ಸಾ, ಅಂಥ ದೊಡ್ಡ ವಿಷಯ ಮಾತಾಡೋಕೆ ನಾನಂಥ `ತೂಕದ' ವ್ಯಕ್ತೀನಾ ಸಾ?'

`ನಿನ್ತೆಲಿ, ಹೋಗ್ಲಿ ನಾನೇ ಹೇಳ್ತೀನಿ ಕೇಳು. ಕರ್ನಾಟಕದ ಮುಖ್ಯಮಂತ್ರಿ ಕುರ್ಚಿನೇ ಗಟ್ಟಿ ಇಲ್ಲ, ಇನ್ನು ಅವರು ನಂಗೆ ಇನ್ನೆಂಥ ಕುರ್ಚಿ ಕೊಡಬಹುದು ಅಂತ ಯೋಚಿಸಿ ಜಯಲಲಿತ ತಮ್ಮ ಕುರ್ಚಿ ತಾವೇ ತಂದಿದಾರೆ. ಸರಿನಾ?'

`ಹೌದಾ ಸಾ? ನಾ ಬೇರೇನೋ ಅಂದ್ಕೊಂಡಿದ್ದೆ' ಎಂದು ನಕ್ಕ ಪರಮೇಶಿ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT