ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ಹಾ ತಿಮ್ಮಾಪುರಿ

Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಉರ್ದು ಕಾವ್ಯದ ವಿಶಿಷ್ಟ ಕವಿ ಮಂಜೂರ್ ಅಹ್ಮದ್ ತನ್ಹಾ ತಿಮ್ಮಾಪುರಿ. ತನ್ಹಾ ಅವರದು ಉರ್ದು ನವ್ಯಕಾವ್ಯದಲ್ಲಿ ಮಹತ್ವದ ಹೆಸರು. ಅತ್ಯಂತ ಬಡತನದಲ್ಲಿ ಬೆಳೆದು ಬಂದವರು ತನ್ಹಾ.  ಅವರು ಒಳ್ಳೆಯ ಕತೆಗಾರರು ಹಾಗೂ ವಿಮರ್ಶಕರು ಕೂಡ ಆಗಿದ್ದರು. ‘ತಹರೀಕ್’ ಎಂಬ ಪತ್ರಿಕೆಯಲ್ಲಿ ಅವರ ಪ್ರಸಿದ್ಧ ಕಥೆ ‘ದೋಹೆ ಕೀ ದೀವಾರ್’ ಪ್ರಕಟವಾದಾಗ  ಅದು ಅಪಾರ ಜನಮೆಚ್ಚುಗೆ ಪಡೆದಿತ್ತು. ಆದರೆ ಅವರು ಕತೆಗಳನ್ನು ಹೆಚ್ಚು ಬರೆಯಲಿಲ್ಲ. ಅವರು ಓದುಗರಿಗೆ ಇಡಿಯಾಗಿ ದಕ್ಕಿದ್ದು ಕವಿಯಾಗಿ.

ಮಂಜೂರ್ ಅಹ್ಮದ್ ತನ್ಹಾ ತಿಮ್ಮಾಪುರಿಯವರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರಂಗಂಪೇಟದ -ತಿಮ್ಮಾಪುರದವರು.  ತಮ್ಮ ೭೮ರ ಹರೆಯದಲ್ಲಿ, ಗಾಂಧಿ ಜಯಂತಿಯಂದು ಅಗಲಿದ ತನ್ಹಾ ಇತ್ತೀಚೆಗೆ  ನಿಶ್ಶಕ್ತಿಯಿಂದ ತುಂಬಾ ಬಳಲಿದ್ದರು. ಪವಿತ್ರ ಹಜ್‌ ಯಾತ್ರೆಗೆ ಹೋಗಬೇಕೆಂದು ಹೈದರಾಬಾದ್‌ಗೆ ತೆರಳಿದಾಗ  ಅಲ್ಲಿಯೇ ಹೃದಯಾಘಾತದಿಂದ ನಿಧನರಾದರು.

ಭಾವೈಕ್ಯದ ಹರಿಕಾರ, ಮಾನವೀಯ ಮೌಲ್ಯಗಳನ್ನು ಗೌರವಿಸುತ್ತಿದ್ದ ತನ್ಹಾ ಅವರ ಅಗಲಿಕೆ ಉರ್ದು ಕಾವ್ಯ ಜಗತ್ತಿಗಂತೂ ತುಂಬಲಾಗದ ನಷ್ಟ.   ಜಾತ್ಯತೀತ ಮನೋಭಾವದ ಅವರಿಗೆ ಮುಸ್ಲಿಂ ಗೆಳೆಯರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಗೆಳೆಯರೂ ಇದ್ದರು.

ಭಾರತಕ್ಕಿಂತ ಪಾಕಿಸ್ತಾನದಲ್ಲಿ   ಹೆಚ್ಚಿನ ಸಂಖ್ಯೆಯಲ್ಲಿ ಅವರ ಕಾವ್ಯವನ್ನು ಆಸ್ವಾದಿಸುವವರು ಇದ್ದಾರೆ.  ಭಾರತದಲ್ಲಿಯೂ ಅಭಿಮಾನಿಗಳ ಸಂಖ್ಯೆಗೇನೂ ಕೊರತೆಯಿಲ್ಲ. ‘ಛಲನಿ ಛಲನಿ ಸಾಹೀಬಾನ್’, ‘ಸವೇರಾ’, ‘ಕಾಯೇ ಕಸಾಯೆಂ’, ‘ಬೀಸ್ ಸಾಲ್ ಇಂತಿಕಾಬ್’, ‘ಷಿರಾಜ್’ ಅವರ ಕೃತಿಗಳು. ‘ಸವೇರಾ’ ಅವರ ಅತ್ಯಂತ ಪ್ರಮುಖ ಕೃತಿ. ಉರ್ದು ಭಾಷೆಯಲ್ಲಿ ಡಾ. ಅಂಬೇಡ್ಕರ್  ಬಗ್ಗೆ ಬಂದಿರುವ ಪ್ರಥಮ ಸಂಪಾದಿತ ಕಾವ್ಯಕೃತಿ ಇದಾಗಿದೆ.

ತನ್ಹಾ ಅವರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೧೯೯೪ರಲ್ಲಿ ನಿವೃತ್ತರಾದರು. ಅವರ ಕವನ ಸಂಕಲನ ‘ಛಲನಿ ಛಲನಿ ಸಾಹೀಬಾನ್!’(ಸೋರುತಿರುವ ಮಾಳಿಗೆ). ಇದಕ್ಕೆ ಅನೇಕ ಪ್ರತಿಷ್ಠಿತ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು.

‘ರೂಹೇ ಗಜಲ್’ (ಗಜಲ್‌ನ ಆತ್ಮ) ಎಂಬ ಅಂತರ ರಾಷ್ಟ್ರೀಯ ಖ್ಯಾತಿಯ  ಕೃತಿಯಲ್ಲಿ ಉರ್ದು ಕಾವ್ಯ ಜಗತ್ತಿನ ಒಟ್ಟು ೬೯೩ ಕವಿಗಳ  ಗಜಲ್‌ಗಳಿವೆ. ತನ್ಹಾ ಅವರ ಮೂರು ಅತ್ಯಂತ ಜನಪ್ರಿಯ ಗಜಲ್‌ಗಳು ಇದರಲ್ಲಿ ಸೇರಿವೆ.

ಅವಿಭಕ್ತ ಕುಟುಂಬದ ತನ್ಹಾ  ಎಲ್ಲರಿಗೂ ಬೇಕಾಗುವಂತೆ ಬದುಕಿದರು. ಅವರೊಳಗೆ ಇದ್ದ ಸೂಫಿಸಂತ ಸದಾ ಜಾಗೃತನಾಗಿದ್ದ. ಓದು ಅವರಿಗೆ ತಂದೆಯಿಂದ ಬಂದ ಬಳುವಳಿ.  ಹಿಂದಿಯ ದೋಹೆ ಇದ್ದಂತೆ ಗಜಲ್ ಎಂದು ಹೇಳುತ್ತಿದ್ದ ತನ್ಹಾ, ತಮ್ಮ ಅನೇಕ ಗಜಲ್‌ಗಳಿಗೆ ಹಿಂದೂ ಪುರಾಣದ ಸಂಕೇತಗಳನ್ನು ಬಳಸುತ್ತಿದ್ದರು. ‘ನಾವು ಬದುಕಿದ್ದೇ ಇಲ್ಲಿ. ಅದಕ್ಕಾಗಿ ಇಲ್ಲಿಯ ಸಂಕೇತಗಳನ್ನು ತಗೋತಿವಿ’ ಎನ್ನುತ್ತಿದ್ದರು.

ಗಜಲ್‌ ಒಂದರಲ್ಲಿ ‘ಮನುಷ್ಯರು ನಾವು ಅರ್ಜುನ್ ಇದ್ದಂತಿದ್ದೀವಿ. ಆದರೆ ಕೃಷ್ಣನಿಲ್ಲ !’ ಎಂದು ಬರೆದಿದ್ದರು.
ಅವರ ‘ಸವೇರೆ ಸೆ ಪೆಹಲೆ’ಯಲ್ಲಿ ೨೦೦ ಕವನಗಳಿವೆ. ‘ಇಜಾಫಿತನ್ ಬೀಗ್’ ಅವರ ವಿಮರ್ಶಾ ಸಂಕಲನ. ಕರ್ನಾಟಕ ಉರ್ದು ಅಕಾಡೆಮಿಯ ಗೌರವ ಪ್ರಶಸ್ತಿ ೨೦೦೯ರಲ್ಲಿ ತನ್ಹಾ ಅವರನ್ನು ಅರಸಿಕೊಂಡು ಬಂದಿತು.

ದೊಡ್ಡ ಸಂಸಾರದ ಅವರ ಕಾವ್ಯನಾಮ ‘ತನ್ಹಾ’. ‘ತನ್ಹಾ’ ಎಂದರೆ ಏಕಾಂಗಿ ಎಂದರ್ಥ.  ೨೦೦೩ರಲ್ಲಿ ‘ಅಫ್ಲಾಖ್ ’ ಕವನ ಸಂಕಲನದಲ್ಲಿದ್ದ ಅವರ ಕವನ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲಿಯೂ ಮೋಡಿ ಮಾಡಿತ್ತು. ಅಲಿಗಡ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಜರ್ಮನ್‌ ವಿಶ್ವವಿದ್ಯಾಲಯವೊಂದರ ಸ್ನಾತಕೋತ್ತರ ಪದವಿಯ ಪಠ್ಯಕ್ರಮದಲ್ಲಿ ಅವರ ಗಜಲ್‌ಗಳನ್ನು ಸೇರಿಸಲಾಗಿದೆ. ಅವರ ಸಾಹಿತ್ಯದ  ಮೇಲೆ ಅನೇಕರು ಪಿಎಚ್‌.ಡಿ, ಎಮ್‌ಫಿಲ್ ಮಾಡಿದ್ದಾರೆ.

ಅವರ ೬೮ ಗಜಲ್‌ಗಳನ್ನು ಒಳಗೊಂಡ   ಸಂಕಲನ ಜರ್ಮನಿಯಲ್ಲಿ ಜರ್ಮನ್ ಭಾಷೆಯಲ್ಲಿ ಪ್ರಕಟವಾಗಿದೆ ಎಂದು ಈ ಲೇಖಕನಿಗೆ ಹಿಂದೆ ತಿಳಿಸಿದ್ದರು. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಿಗೂ ಅವರ ಗಜಲ್‌ಗಳು ಅನುವಾದಗೊಂಡಿವೆ. ‘ಸವೇರೆ ಸೆ ಪೆಹಲೆ’ಯನ್ನು ಕಳೆದ ವರ್ಷ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ ಬಿಡುಗಡೆ ಮಾಡಿದ್ದರು. ‘ತನ್ಹಾ ನೀನಲ್ಲ ಒಬ್ಬಂಟಿ ಊರೆಲ್ಲಾ ನಿನ್ನ ನೆಂಟರು’ ಎಂಬ ಕವಿತೆ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಕರ್ನಾಟಕ ಉರ್ದು ಅಕಾಡೆಮಿಯಿಂದ ಪ್ರಕಟವಾದ ಅವರ ಕವನ ಸಂಕಲನ ‘ಕಹಕೇಶಾ’ (ನಕ್ಷತ್ರಗಳ ಸರಮಾಲೆ) ತೀರ ಇತ್ತೀಚೆಗೆ ಬಿಡುಗಡೆಯಾಗಿದೆ.

‘ಹಿಂದೂ ಪುರಾಣಗಳು ತುಂಬಾ ಸಂಪದ್ಭರಿತವಾಗಿವೆ. ಪಾಕಿಸ್ತಾನದಲ್ಲಿ ಕೂಡಾ ಕಾವ್ಯದಲ್ಲಿ ಭಾರತದ  ಪುರಾಣದ ಸಂಕೇತಗಳನ್ನು  ಬಳಸುತ್ತಾರೆ’ ಎಂದು ಹೇಳುತ್ತಿದ್ದರು.

ಓದುವುದೇ ಮುಖ್ಯ ಹವ್ಯಾಸವಾಗಿದ್ದ ತನ್ಹಾ ಅವರ ಮೇಲೆ ಕನ್ನಡದ ವಚನಗಳು ತುಂಬಾ ಪ್ರಭಾವ ಬೀರಿದ್ದವು. ಹಿಂದಿ ದೋಹೆ ತರಹ ವಚನಗಳು ಕನ್ನಡದ ನಿಜವಾದ ಆಸ್ತಿ ಎನ್ನುತ್ತಿದ್ದರು. ಬೆಸಗರಳ್ಳಿ ರಾಮಣ್ಣ ಅವರ ಗಾಂಧೀ ಕತೆಯನ್ನು ಉರ್ದುವಿಗೆ  ಅನುವಾದಿಸಿದ್ದರು.

ಒಮ್ಮೆ ಸುರಪುರಕ್ಕೆ ಜೈನ ಧರ್ಮದ ಗುರುಗಳು ಬಂದಿದ್ದಾಗ, ತನ್ಹಾ ಅವರು ಆ ಸಂದರ್ಭದಲ್ಲಿ ಮಾಡಿದ ಉಪನ್ಯಾಸದಿಂದ ಗುರುಗಳು ತುಂಬಾ ಪ್ರಭಾವಿತರಾದರು. ಅವರು ಮರುದಿನ ತನ್ಹಾ ಬಳಿ ಬಂದು ಅವರ ಕೈಯಿಂದಲೇ ಹಾಲು ಸ್ವೀಕರಿಸಿದ್ದರು. ತನ್ಹಾ, ಗೌತಮ ಬುದ್ಧನನ್ನು ತುಂಬಾ ಮೆಚ್ಚಿದ್ದರು.

‘ಹೆಚ್ಚು ಹೆಚ್ಚು ಓದಬೇಕು, ಹಳಗನ್ನಡ ಕಾವ್ಯ, ವಿಮರ್ಶೆ ಓದಬೇಕು. ಯಾವುದನ್ನೇ ಆದರೂ ಅನುಕರಿಸ ಬಾರದು, ಸ್ವಂತಿಕೆ ಇರಬೇಕು.  ವಿಮರ್ಶೆ ಹೆಚ್ಚು ಓದಬೇಕು. ಅಂದರೆ ಕಾವ್ಯದ ಹರಹು, ಆಳ ಹೆಚ್ಚಾಗುತ್ತಾ ಹೋಗುತ್ತದೆ’ ಎನ್ನುತ್ತಿದ್ದರು. ತನ್ಹಾ ಅವರ ಅಗಲಿಕೆಯಿಂದ ಭಾರತೀಯ ಕಾವ್ಯದ ಭಾವೈಕ್ಯದ  ಕೊಂಡಿ ಕಳಚಿಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT