ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನೇ ಆತ್ಮವಂಚನೆ ಮಾಡಿಕೊಂಡರೆ ಅನುಯಾಯಿ ಇನ್ನೇನು ಮಾಡುತ್ತಾನೆ?

Last Updated 19 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ


 ಇದು ಎಲ್ಲ ಹಂಗುಗಳನ್ನು,ಕಟ್ಟುಗಳನ್ನು ಕಿತ್ತು ಒಗೆದ ರಾಜಕಾರಣ.ಹಂಗುಗಳು, ಕಟ್ಟುಗಳು ಒತ್ತಟ್ಟಿಗಿರಲಿ,ಅವುಗಳನ್ನು ಯಾವಾಗಲೋ ಕಿತ್ತು ಒಗೆದಾಗಿದೆ.ಅಲ್ಲಿ ಇಲ್ಲಿ ಉಳಿದುಕೊಂಡಿದ್ದ ‘ತತ್ವ’, ಸಿದ್ಧಾಂತ’ಗಳೂ ಈಗ ಕೊಚ್ಚಿಕೊಂಡು ಹೋದಂತೆ ಆಗಿದೆ.ಉಳಿದುದು ಬರೀ ವೈಯಕ್ತಿಕ ಹಿತಾಸಕ್ತಿ ಅಥವಾ ದ್ವೇಷಾಸೂಯೆ ಮಾತ್ರ.

ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತು.ದಿನ ಬೆಳಗಾದರೆ ಪರಸ್ಪರರ ಜನ್ಮ ಜಾಲಾಡುವ ಮತ್ತು ಹಾಗೆ ಮಾಡುವ ಬೆದರಿಕೆ ಹಾಕುವ ಬಿಜೆಪಿ ಹಾಗೂ ಜೆ.ಡಿ(ಎಸ್) ಒಂದಾಗಿ ಅಧಿಕಾರ ಗದ್ದುಗೆ ಹಿಡಿದುಕೊಂಡುವು. ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಸಿನ ಪ್ರತಿಕ್ರಿಯೆ ಉಗ್ರವಾಗಿತ್ತು.ಮೈಸೂರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜಿಲ್ಲೆ ಎಂಬ ಕಾರಣಕ್ಕಾಗಿಯೂ ಅದು ದೊಡ್ಡ ಸುದ್ದಿ ಆಗಿರಬಹುದು.

ಕಾಂಗ್ರೆಸ್ ಮತ್ತು ಜೆ.ಡಿ (ಎಸ್) ಮೈತ್ರಿ ಮಾಡಿಕೊಂಡು ಇಲ್ಲಿ ಅಧಿಕಾರ ಹಿಡಿಯಬಹುದಿತ್ತು.ಆದರೆ, ಮೊದಲ ಅವಧಿಗೆ ಜೆ.ಡಿ(ಎಸ್)ಗೆ ಯಾವ ಹುದ್ದೆಯನ್ನೂ ಕೊಡಲು ಕಾಂಗ್ರೆಸ್ ಸಿದ್ಧವಿರಲಿಲ್ಲ.ಹೆಚ್ಚು ಸೀಟು ಪಡೆದ ತನಗೆ ಅಧ್ಯಕ್ಷ ಹುದ್ದೆ ಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು.ಜೆ.ಡಿ (ಎಸ್) ಬಳಿ ಉಪಾಧ್ಯಕ್ಷ ಹುದ್ದೆಗೆ ಅರ್ಹವಾದ ಅಭ್ಯರ್ಥಿ ಇರಲಿಲ್ಲ.ತನಗೇ ಅಧ್ಯಕ್ಷ ಹುದ್ದೆ ಬೇಕು ಎಂದು ಅದು ಕೇಳಿತು. ಜಾತ್ಯತೀತ ಮತಗಳು ವಿಭಜನೆ ಆಗಬಾರದು ಎಂದು ಹೇಳುವ ಕಾಂಗ್ರೆಸ್ ಆ ತತ್ವದ ಪರಿಪಾಲನೆಗಾಗಿ ‘ಯಾವ ತ್ಯಾಗ’ ಮಾಡಲೂ ಸಿದ್ಧವಿರಲಿಲ್ಲ.

ಮೊದಲ ಅವಧಿಗೆ ಎರಡೂ ಹುದ್ದೆಗಳನ್ನೂ ತನಗೇ ಬಿಟ್ಟುಕೊಡಬೇಕು ಎಂದು ಅದು ಪಟ್ಟು ಹಿಡಿಯಿತು.ಅದರ ಪರಿಣಾಮ ಏನಾಯಿತು ಎಂಬುದು ಈಗ ಇತಿಹಾಸ.ಈ ಮೈತ್ರಿ ಆಗಲೇಬಾರದು ಎಂದು ಮೈಸೂರು ಸಂಸದ ಎಚ್.ವಿಶ್ವನಾಥ್ ಅವರಂಥವರು ಪಟ್ಟು ಹಿಡಿದಿದ್ದು ಹಿನ್ನೆಲೆಗೆ ಸರಿಯಿತು.ಅವರು ಹಾಗೆ ಪಟ್ಟು ಹಿಡಿದುದಕ್ಕೆ ತಾತ್ವಿಕ ಕಾರಣಗಳಿಗಿಂತ ವೈಯಕ್ತಿಕ ರಾಗ ಅಸೂಯೆಗಳೇ ಮುಖ್ಯ ಕಾರಣವಾಗಿದ್ದುವು ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ.ಆದರೆ, ಪೆಟ್ಟು ಬಿದ್ದುದು ವಿಧಾನಸಭೆಯ ವಿರೋಧಿ ನಾಯಕ ಸಿದ್ದರಾಮಯ್ಯ ಅವರಿಗೆ. ತಮ್ಮ ಜಿಲ್ಲೆಯಲ್ಲಿಯೇ ಕಾಂಗ್ರೆಸ್ಸಿಗೆ ಅಧಿಕಾರ ದೊರಕಿಸಿ ಕೊಡಲು ಅವರಿಗೆ ಆಗಲಿಲ್ಲ ಎಂಬ ಮಾತು ಉಳಿಯಿತು.

ಬರೀ ಸಿದ್ದರಾಮಯ್ಯ ಅವರಿಗೆ ಮಾತ್ರ ಪೆಟ್ಟು ಬಿತ್ತೇ? ದಿನದ 24 ಗಂಟೆಯೂ ಬಿಜೆಪಿಯನ್ನು, ಮುಖ್ಯಮಂತ್ರಿಯನ್ನು ಹಣಿಯಲು ಹೊಂಚು ಹಾಕುವ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಈ ಹೊಂದಾಣಿಕೆ ಸಮಾಧಾನಕರವೇ? ಅವರು ರಾಜ್ಯದಲ್ಲಿ ಬರೀ ಮುಖ್ಯಮಂತ್ರಿಯನ್ನು ಮಾತ್ರ ವಿರೋಧ ಮಾಡುತ್ತಿದ್ದಾರೆಯೇ? ಅವರಿಗೆ ಬಿಜೆಪಿ ಜತೆಗೆ, ಅವರೇ ಹೇಳುವಂತೆ ಕೋಮುವಾದಿ ಬಿಜೆಪಿ ಜತೆಗೆ ಯಾವ ಜಗಳವೂ, ತಾತ್ವಿಕ ಭಿನ್ನಾಭಿಪ್ರಾಯಗಳೂ ಇಲ್ಲವೇ?

ಸ್ಥಳೀಯವಾಗಿ ಇಂಥ ಹೊಂದಾಣಿಕೆ ಅನಿವಾರ್ಯ ಎಂದರೆ ಏನು ಅರ್ಥ? ಸ್ಥಳೀಯ ತತ್ವ ಸಿದ್ಧಾಂತಗಳಿಗೂ, ರಾಜ್ಯ ಮಟ್ಟದ ತತ್ವ ಸಿದ್ಧಾಂತಗಳಿಗೂ ಸಂಬಂಧ ಇರುವುದಿಲ್ಲವೇ? ಹಾಗಿದ್ದರೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದುದನ್ನೂ ಸ್ಥಳೀಯ ಹೊಂದಾಣಿಕೆ ಎಂದು ದೇವೇಗೌಡರು ಸಹಿಸಬಹುದಿತ್ತಲ್ಲ? ರಾಷ್ಟ್ರಮಟ್ಟದಲ್ಲಿ ತಮ್ಮ ಬಿಂಬಕ್ಕೆ ಏಟು ಬಿತ್ತು ಎಂದು ಅವರು ಏಕೆ ಹಲುಬಿದರು? ಮಗ ಮಾಡಿಕೊಂಡಿದ್ದ ಹೊಂದಾಣಿಕೆ ಮುರಿದು ಬೀಳುವಂತೆ ಏಕೆ ನೋಡಿಕೊಂಡರು?

ಜೆ.ಡಿ (ಎಸ್)ನಂಥ ಪ್ರಾದೇಶಿಕ ಪಕ್ಷಗಳ ಬಗ್ಗೆ ಯಡಿಯೂರಪ್ಪ ಏನು ಹೇಳುತ್ತಿದ್ದಾರೆ ಎಂಬುದು ಗೌಡರ ಕುಟುಂಬಕ್ಕೆ ಗೊತ್ತಿಲ್ಲವೇ? ದೇಶದಲ್ಲಿ ಎರಡು ಪಕ್ಷಗಳ ಆಡಳಿತ ಮಾತ್ರ ಇರಬೇಕು ಎಂದು ಅಲ್ಲವೇ ಅವರು ಹೇಳುತ್ತಿರುವುದು? ಹಾಗೆ ಅಂದರೆ ಏನು? ಜೆ.ಡಿ (ಎಸ್) ನಾಮಾವಶೇಷವಾಗಿ ಹೋಗಬೇಕು ಎಂದು ಅಲ್ಲವೇ? ಮೈಸೂರಿನಲ್ಲಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಜೆ.ಡಿ (ಎಸ್)ಗೆ ಗುಲ್ಬರ್ಗ ಜಿಲ್ಲಾ ಪಂಚಾಯ್ತಿಯಲ್ಲಿ ಏನಾಯಿತು?

ಆ ಪಕ್ಷದಿಂದ ಗೆದ್ದಿದ್ದ ಮೂವರನ್ನೂ ಬಿಜೆಪಿ ಆಪೋಶನ ತೆಗೆದುಕೊಳ್ಳಲಿಲ್ಲವೇ? ಅಷ್ಟರ ಮಟ್ಟಿಗೆ ಜೆ.ಡಿ (ಎಸ್) ಅನ್ನು ಯಡಿಯೂರಪ್ಪ ನಾಮಾವಶೇಷ ಮಾಡಿದಂತೆಯೇ ಆಯಿತಲ್ಲವೇ? ಬಳ್ಳಾರಿಯಲ್ಲಿ ಆಗಿದ್ದೇನು? ಅಲ್ಲಿ ಗೆದ್ದಿದ್ದ ಇಬ್ಬರು ಜೆ.ಡಿ (ಎಸ್) ಅಭ್ಯರ್ಥಿಗಳೂ ರೆಡ್ಡಿಗಳ ತೆಕ್ಕೆಗೆ ಹೋಗಿ ಬೀಳಲಿಲ್ಲವೇ? ಅಲ್ಲಿಯೂ ಜೆ.ಡಿ (ಎಸ್) ನೆಲೆ ಕಳೆದುಕೊಂಡಿತು.ಯಾರೋ ಒಬ್ಬರನ್ನು ಒಂದು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಮಾಡುವುದಕ್ಕಾಗಿ ಜೆ.ಡಿ (ಎಸ್)ಗೆ, ಹೀಗೆ ತನ್ನನ್ನೇ ನುಂಗಿ ಹಾಕಲು ಹೊಂಚು ಹಾಕುವವರ ಹಾಸಿಗೆಯಲ್ಲಿ ಮಲಗುವ ಹುಚ್ಚು ಏಕೆ?

ಗುಲ್ಬರ್ಗದಲ್ಲಿ ಬಿಜೆಪಿ ತೆಕ್ಕೆಗೆ ಹೋದ ಮೂವರು ಸದಸ್ಯರಲ್ಲಿ ಜೆ.ಡಿ (ಎಸ್)ನ ರಾಜ್ಯ ಉಪಾಧ್ಯಕ್ಷ ಸುಭಾಷ್ ಗುತ್ತೇದಾರ್ ಅವರ ಮಗನೂ ಇದ್ದ. ಮಗ ತಂದೆಯ ಮಾತು ಕೇಳುವುದಿಲ್ಲವೇ? ಅಥವಾ ಮಗನಿಗೆ ಉಪಾಧ್ಯಕ್ಷ ಹುದ್ದೆ ಕೊಡಿಸಿದ ತಂದೆಗೆ ಪಕ್ಷ ಅಷ್ಟೇನೂ ಮುಖ್ಯ ಅಲ್ಲವೇ? ಅಥವಾ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಿಗೆ ತತ್ವ ಸಿದ್ಧಾಂತಗಳು ಅಮುಖ್ಯವೇ? ಇದೇ ಉಪಾಧ್ಯಕ್ಷರು ಆಳಂದದಲ್ಲಿಯೂ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಲು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡರು. ಅವರು ಆಳಂದ್‌ನ ಜೆ.ಡಿ (ಎಸ್) ಶಾಸಕರು ಕೂಡ ಆಗಿದ್ದಾರೆ.

ಜೆ.ಡಿ(ಎಸ್)ಜತೆಗೆ ಹೊಂದಾಣಿಕೆಗೆ ಬಹಿರಂಗವಾಗಿಯೇ ಏಕಾಂಗಿಯಾಗಿ ವಿರೋಧಿಸಿ ಸುದ್ದಿ ಮಾಡಿದ ಮಾಜಿ ಉಪಸಭಾಪತಿ ಮತ್ತು ಹಾಲಿ ಕಾಂಗ್ರೆಸ್ ಧುರೀಣ ಬಿ.ಆರ್.ಪಾಟೀಲರನ್ನು ಹೀಗಾದರೂ ಹೊಡೆಯಲು ದೇವೇಗೌಡರು ಮತ್ತು ಕುಮಾರಸ್ವಾಮಿ ಒಪ್ಪಿಕೊಂಡರೇ? ಅಥವಾ ಮೈಸೂರಿನಲ್ಲಿ ವಿಶ್ವನಾಥ್ ಅವರು ಜೆ.ಡಿ (ಎಸ್) ಜತೆಗೆ ಹೊಂದಾಣಿಕೆಗೆ ವಿರೋಧಿಸಿದ ಹಾಗೆಯೇ ಬಿ.ಆರ್.ಪಾಟೀಲರೂ ಮಾಡಿ ತಮ್ಮ ಪಕ್ಷಕ್ಕೇ ನಷ್ಟ ಮಾಡಿದರೇ?

ಈಗಿನ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ಮಟ್ಟದ ಯಾವುದೇ ನಾಯಕರ ಮಾತನ್ನೂ ಸ್ಥಳೀಯವಾಗಿ ಯಾರೂ ಕೇಳುವ ಸ್ಥಿತಿಯಲ್ಲಿ ಇದ್ದಂತೆ ಕಾಣುವುದಿಲ್ಲ.ಇದ್ದಿದ್ದರೆ ಬೀದರ್‌ನ ಕಾಂಗ್ರೆಸ್ ಸಂಸದ ಧರ್ಮಸಿಂಗ್ ಅವರಂಥ ಹಿರಿಯ ನಾಯಕರ ಸಮ್ಮುಖದಲ್ಲಿಯೇ ಬೀದರ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎಲ್ಲ ನಾಲ್ವರು ಕಾಂಗ್ರೆಸ್ ಸದಸ್ಯರು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳುತ್ತಿರಲಿಲ್ಲ. ಅಲ್ಲಿ ಉಪಾಧ್ಯಕ್ಷ ಹುದ್ದೆ ವಹಿಸಿಕೊಂಡವರು ಒಬ್ಬ ಮುಸ್ಲಿಂ ಮಹಿಳೆ.

ಅಲ್ಪಸಂಖ್ಯಾತರ ಹಕ್ಕುಗಳಿಗಾಗಿಯೇ ಅಲ್ಲವೇ ಕಾಂಗ್ರೆಸ್ ಬಡಿದಾಡುತ್ತಿರುವುದು? ಆದರೆ, ಬೀದರ್‌ನಲ್ಲಿ ಅಲ್ಪಸಂಖ್ಯಾತ ಮಹಿಳೆಯೇ ಬಿಜೆಪಿ ಜತೆಗೆ ಏಕೆ ಅಧಿಕಾರ ಹಂಚಿಕೊಂಡರು? ಈ ನಾಲ್ವರು ಕಾಂಗ್ರೆಸ್ ಸದಸ್ಯರು ತಮ್ಮ ಪಕ್ಷ ಕೊಟ್ಟ ವಿಪ್ ಅನ್ನೂ ಉಲ್ಲಂಘಿಸಿದರು.ಮೈಸೂರಿನಲ್ಲಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದ ಜೆ.ಡಿ (ಎಸ್) ತನ್ನ ಹೆಸರಿನ ಮುಂದಿನ ‘ಜಾತ್ಯತೀತ’ ತೆಗೆದು ‘ಕೋಮುವಾದಿ’ ಎಂದು ಹಾಕಿಕೊಳ್ಳಬೇಕು ಎಂದು ಕೂಗಾಡಿದ್ದ ಕಾಂಗ್ರೆಸ್ ನಾಯಕರೆಲ್ಲ ಈಗ ಏನು ಹೇಳುತ್ತಾರೆ?

ಒಂದು ರಾಜಕೀಯ ಪಕ್ಷ ಸದಾ ತನ್ನ ತತ್ವ ಸಿದ್ಧಾಂತಗಳ ಬಗ್ಗೆ ಹೊಗಳಿಕೊಳ್ಳುತ್ತ ಇರುತ್ತದೆ.ಎದುರಾಳಿ ಪಕ್ಷದ ತತ್ವ ಸಿದ್ಧಾಂತಗಳನ್ನು ತೆಗಳುತ್ತಲೂ ಇರುತ್ತದೆ.ಈಚೆಗೆ ನಡೆದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕೋಮುವಾದ ಮತ್ತು ಜಾತ್ಯತೀತ ವಾದದ ಬಗ್ಗೆ ನಡೆದ ಚರ್ಚೆ ಎಲ್ಲರಿಗೂ ನೆನಪು ಇರಬಹುದುಅದು ಆ ಮಟ್ಟದ ಚುನಾವಣೆಗೆ ಎಷ್ಟು ಅಗತ್ಯವಿತ್ತು ಎಂಬುದು ಬೇರೆ ಮಾತು!

ಆ ನೆನಪು ಮರೆಯುವ ಮುನ್ನವೇ ಈಗ ಆಗುತ್ತ ಇರುವುದಾರೂ ಏನು? ಚುನಾವಣೆಗೂ ಆ ತತ್ವ ಸಿದ್ಧಾಂತಗಳಿಗೂ ಯಾವ ಸಂಬಂಧ ಇಲ್ಲದ ಬೆಳವಣಿಗೆಗಳು ಇವು ಅಲ್ಲವೇ? ಎಲ್ಲಿಯೋ ಒಂದು ಕಡೆ ಹೊಂದಾಣಿಕೆ ಮಾಡಿಕೊಂಡರೆ ಏನು ತಪ್ಪು ಎಂದು ಸಮಜಾಯಿಷಿ ಕೊಟ್ಟರೆ ಅಷ್ಟರ ಮಟ್ಟಿಗೆ ತತ್ವ ಸಿದ್ಧಾಂತಗಳು ಸಡಿಲವಾದಂತೆಯೇ ಅಲ್ಲವೇ? ಅಥವಾ ಅಧಿಕಾರದ ಏಣಿಯನ್ನು ಹೇಗಾದರೂ ಮಾಡಿ ಹತ್ತಬೇಕು ಎನ್ನುವ ಆಸೆಯ ಮುಂದೆ ಇದೆಲ್ಲ ನಗಣ್ಯವೇ?

ಎರಡನೇ ಕಾರಣವೇ ನಿಜ ಅನಿಸುತ್ತದೆ.ಅದು ವಾಸ್ತವ ಕೂಡ.ರಾಜ್ಯ ಮಟ್ಟದಲ್ಲಿ ಅಧಿಕಾರ ಹಿಡಿದ ನಾಯಕರು,ಅವರು ಯಾವ ಪಕ್ಷದವರು ಎಂಬುದು ಮುಖ್ಯವಲ್ಲ,ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯದಷ್ಟು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮರಿ ನಾಯಕರು ಅಮಾಯಕರೇನೂ ಅಲ್ಲ. ಅಧಿಕಾರ ತಮ್ಮ ಹೊಸ್ತಿಲಿಗೆ ಬಂದಾಗ ಅದನ್ನು ತ್ಯಾಗ ಮಾಡುವಷ್ಟು ಪಕ್ಷ ಬದ್ಧತೆಯನ್ನು ಕಮ್ಯುನಿಸ್ಟ್ ಪಕ್ಷಗಳನ್ನು ಬಿಟ್ಟು ಬೇರೆ ಯಾವ ಪಕ್ಷಗಳೂ ತಮ್ಮ ಸದಸ್ಯರಲ್ಲಿ ತುಂಬಿಲ್ಲ.

ತತ್ವ, ಸಿದ್ಧಾಂತಗಳು ಹೋಗಲಿ ತನಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ ಪಕ್ಷಕ್ಕೇ ಯಾವ ಬದ್ಧತೆಯೂ ಇಲ್ಲದ ಸದಸ್ಯರು ಜನರಿಗೆ ಬದ್ಧರಾಗಿರುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು,ಆ ಅಧಿಕಾರದ ಮೂಲಕ ದುಡ್ಡು ಮಾಡಬೇಕು ಎಂಬುದೇ ಈಗ ಬಹುತೇಕ ಜನಪ್ರತಿನಿಧಿಗಳ ಉದ್ದೇಶ ಆಗುತ್ತಿದೆ.

ಭ್ರಷ್ಟಾಚಾರಕ್ಕೆ ಮೇಲಿನಿಂದಲೇ ಮದ್ದು ಕಂಡು ಹಿಡಿಯಬೇಕು. ಕೆಳಹಂತದಲ್ಲಿ ಅದಕ್ಕೆ ಮದ್ದು ಹುಡುಕುವುದು ಹುತ್ತವನ್ನು ಹೊಡೆದಂತೆ ಅಷ್ಟೇ. ಕೆಳಹಂತದ ನಾಯಕರು ಹೀಗೆ ಅಧಿಕಾರಕ್ಕಾಗಿ ಪಕ್ಷದ ನಾಯಕರನ್ನೇ ಧಿಕ್ಕರಿಸುವುದಕ್ಕೆ ಏನು ಕಾರಣ ಎಂಬುದಕ್ಕೆ ಮೇಲು ಹಂತದ ನಾಯಕರು ಮೊದಲು ಆತ್ಮ ನಿರೀಕ್ಷೆ ಮಾಡಿಕೊಳ್ಳಬೇಕು.ಅವರಿಗೆ ಅಷ್ಟು ವ್ಯವಧಾನ, ಬದ್ಧತೆ, ಕಾಳಜಿ ಇದೆ ಎಂದು ಅನಿಸುವುದಿಲ್ಲ. ಗಾಳಿ ಬಂದಾಗ ತೂರಿಕೊಳ್ಳುವ, ಬೆಂಕಿ ಕಂಡಲ್ಲಿ ಮೈ ಕಾಯಿಸಿಕೊಳ್ಳುವ ಆತ್ಮವಂಚಕ ನಾಯಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT