ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಗೆ ಬಿದ್ದೋರ ಪಾಡು

ವಿನೋದ
Last Updated 6 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಿ ಪ್ಪಾರಳ್ಳಿಯ ಕಟ್ಟೇಲಿ ಬೆಳ್ಳಂಬೆಳಿಗ್ಗೆ ಬಾವಿಗೆ ಬಿದ್ದೋರದೇ ಮಾತು ಕಥೆ ಎಲ್ಲ. ಶೀನಣ್ಣ ಓಡಿ ಬಂದು ‘ಇನ್ನೊಂದು ವಿಕೆಟ್ ಬಿತ್ತು ಅಂತ ಕಾಣುತ್ತೆ’ ಅಂತ ದೂರದೂರಿನಲ್ಲಿ ಬಾವಿಗೆ ಬಿದ್ದ ಹುಡುಗನ ಬಗ್ಗೆ ಹೇಳಿದ. ಎಲ್ಲರೂ ಒಮ್ಮತದಿಂದ ಲೊಚ ಲೊಚ ಅಂದರು. ಸೋಮು ‘ನನ್ನ ಕೈಗೆ ಅವರಪ್ಪ ಸಿಕ್ಕಿದರೆ ರಪ್ಪಂತ ಕಪಾಲಕ್ಕೆ ಹೊಡೀತೀನಿ’ ಅಂದ. ‘ಪಾಪ ಮಗೂನ ಕಳ್ಕೊಂಡು ಅವರಪ್ಪ ಸಂಕಟ ಪಡ್ತಿರುವಾಗ ನೀನು ಹೋಗಿ ಕಪಾಲಕ್ಕೆ ಹೊಡೆದು ನೋವುಂಟುಮಾಡ್ತೀಯಾ’ ಅಂತ ಕೇಳಿದ್ದಕ್ಕೆ ಸೋಮು ‘ಇನ್ನೇನು ಮತ್ತೆ ಮಗೂ ಬೀಳ್ಲಿ ಅಂತಾನೇ ಬೋರ್ ವೆಲ್ ತೋಡಿಸಿದ ಅನ್ನೊ ಹಾಗಾಗಿದೆಯಲ್ಲ. ಹಿಂದಿನ ಕಾಲ್ದಲ್ಲಿ ಎಲ್ಲರ ಮನೇಲೂ ಒಂದು ಬಾವಿ ಇದ್ದೇ ಇರೋದು. ನೀರಿನ ಅನುಕೂಲಕ್ಕೆ ಅಂತ ಒಂದು ಕಾರಣವಾದರೆ, ಅತ್ತೆಗೋ ಸೊಸೆಗೋ ಜೀವನದಲ್ಲಿ ಜಿಗುಪ್ಸೆ ಬಂದರೆ ಸಾಯೋಕೆ ಅದೂ ಒಂದು  ದಾರಿಯಾಗಿತ್ತು.

ಯಾಕೇಂದ್ರೆ ರೈಲಿಗೆ ಸಿಕ್ಕು ಸಾಯಬೇಕು ಅಂದ್ರೆ ತುಂಬಾ ದೂರ ಹೋಗಬೇಕಾಗಿತ್ತು. ಅಷ್ಟು ದೂರ ಹೋಗೋದ್ರಲ್ಲಿ ಸಾಯೋ ಮನಸ್ಸು ಬದಲಾಗಿ ಬಿಡೋದು. ಇನ್ನು ವಿಷ ಅಷ್ಟು ಸುಲಭವಾಗಿ ಸಿಕ್ಕುತ್ತಿರಲಿಲ್ಲ. ಹೀಗಾಗಿ ಮನೆ ಬಾವಿನೇ ಗತಿ ಆಗಿರೋದು. ಇನ್ನು ಅತ್ತೆಗೆ ಸೊಸೆಗೆ ಆಗಲಿಲ್ಲ, ಸೊಸೆಗೆ ಅತ್ತೆ ಆಗಲಿಲ್ಲ ಅಂದ್ರೆ ಇಬ್ಬರಿಗೂ ಇಂಥಾ ಬಾವಿ ಒಂದು ಅವಕಾಶ ಕಲ್ಪಿಸಿಕೊಟ್ಟಿತ್ತು. ಬೋರ್‌ವೆಲ್ ಶುರುವಾದ ಹೊಸದರಲ್ಲಿ ನೀನು ಬೋರ್‌ವೆಲ್‌ಗೆ ಬಿದ್ದು ಸಾಯ, ನಿನ್ನನ್ನು ಬೋರ್‌ವೆಲ್‌ಗೆ ನೂಕಿ ಸಾಯಿಸಿಬಿಡ್ತೀನಿ ಅನ್ನೋ ಮಾತು ತೀರಾ ಹುಸಿಯಾಗಿ, ತಮಾಷೆಯಾಗಿ ವಿತರಣೆಯಾಗುತ್ತಿತ್ತು. ಆದರೆ ಬೋರ್‌ವೆಲ್‌ಗೆ ಬಿದ್ದು ಸಾಯೋದು ಈಗ ಸರ್ವೇ ಸಾಮಾನ್ಯವಾಗಿದೆ’ ಎಂದ.

ಈ ರೀತಿಯ ಅನಾಹುತಗಳು ಮತ್ತೆ ಪುನರಾವರ್ತನೆಯಾಗದೇ ಇರಬೇಕಾದರೆ ಏನು ಮಾಡಬೇಕು ಅಂತ ಚರ್ಚೆ ಶುರುವಾಗೋ ಮೊದಲೇ ಸೋಮು, ‘ಇಂಥಾ ವಿಚಾರದಲ್ಲಿ ಚರ್ಚೆ ಅನವಶ್ಯಕ. ನಾನು ಹೇಳ್ತೀನಿ ಕೇಳಿ, ಈಗ ನಮ್ಮ ರಾಜ್ಯದಲ್ಲಿ ಇರುವ ಎಲ್ಲಾ ಅನುಪಯೋಗಿ ಬೋರ್‌ವೆಲ್‌ಗಳನ್ನು ಮುಚ್ಚಬೇಕು. ಇದು ತಕ್ಷಣಕ್ಕೆ ಆಗಬೇಕು. ಮತ್ತೆ ಬೋರ್‌ವೆಲ್ ತೆಗೆದು ಅದಕ್ಕೆ ಮೋಟರು ಜೋಡಿಸೋ ನಡುವಿನ ಸಮಯದಲ್ಲಿ ಬೋರ್‌ವೆಲ್ ತೋಡಿದ ಜಾಗಕ್ಕೆ ಒಂದು ಬೇಲಿ ಕಟ್ಟಿಬಿಡಬೇಕು. ಯಾರೂ ಹತ್ತಿರ ಹೋಗಬಾರದು.

ಬೇಕಾದರೆ ಹಾಗೊಂದು ಬೋರ್ಡ್ ಕೂಡಾ ಹಾಕಬೇಕು. ಇನ್ನು ಬೋರ್‌ವೆಲ್ ತೆಗಿಸೋ ಕುಟುಂಬಗಳು ತಮ್ಮ ತಮ್ಮ ಮಕ್ಕಳನ್ನು ಹದ್ದಿನ ಕಣ್ಣಿನಿಂದ ನೋಡ್ಕೊಬೇಕು. ಸಾಧ್ಯವಾದಷ್ಟೂ ಮಕ್ಕಳಿಗೆ ಚೆನ್ನಾಗಿ ತಿನ್ನಿಸಿ ತಿನ್ನಿಸಿ ಸಖತ್ ದಪ್ಪವಾಗಿ ಬೆಳೆಸಿಬಿಡಬೇಕು. ಒಂದು ವೇಳೆ ಮಕ್ಕಳು ಆಯತಪ್ಪಿ ಬಿದ್ದರೂ ಬೋರ್‌ವೆಲ್ ಪೈಪ್ ಒಳಗೆ ಹೋಗೋಕೆ ಆಗಲೇಬಾರದು ಹಾಗೆ. ಇಂಥಾ ಅನಾಹುತ ಆದಾಗ ಯಾರನ್ನು ಸಸ್ಪೆಂಡ್ ಮಾಡಿದರೂ ಏನೂ ಪ್ರಯೋಜನವಿಲ್ಲ. ಏಕೆಂದರೆ ಕೆಲವೇ ದಿನಗಳಲ್ಲಿ ಅವರು ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ಸಮಸ್ಯೆ ಅಲ್ಲೇ ಇರುತ್ತೆ’ ಅಂದ. ಸೋಮು ಮಾತು ಎಲ್ಲರಿಗೂ ಇದೇ ಸರಿ ಅನ್ನೊ ಹಾಗಾಗಿತ್ತು.

ರವಿ ತಲೆ ಕೆರಕೊಂಡು ‘ಇದೇನೋ ಸರಿ, ಎಂಥಾ ಬಾವಿಗೆ ಬಿದ್ದೋರನ್ನೂ ಮೇಲೆತ್ತಬಹುದು, ಸಜೀವವಾಗಿ ಇಲ್ಲಾ ಶವವಾಗಿ. ಆದರೆ ಬದುಕಿದ್ದೂ ಬಾವಿಗೆ ಬಿದ್ದವರಂತೆ ಇರೋರ್‍್ನಾ, ಅವರು ಬಾವಿಗೆ ಬಿದ್ದವರಂತೆಯೂ ಅಲ್ಲದೇ, ಬಾವಿಯಿಂದ ಮೇಲೆ ಬಂದವರಂತೆಯೂ ಇಲ್ಲದೇ ಬದುಕಿರುವವರನ್ನು ಹೇಗೆ ಬದುಕಿನಲ್ಲಿ ಮೇಲೆತ್ತೋದು’ ಅಂತ ಕೇಳಿದ. ಎಲ್ಲರೂ ಹುಬ್ಬೇರಿಸಿದರು. ಎಲ್ಲರಿಗಿಂತ ಸೋಮು ಬುದ್ಧಿವಂತ. ಅವನು ಜೋರಾಗಿ ನಕ್ಕ. ‘ಇದಕ್ಕೆ ಪರಿಹಾರ ಇದೆಯೋ ಇಲ್ವೋ ಗೊತ್ತಿಲ್ಲ.

ಪರಿಹಾರ ಇದೆ ಅಂದ್ಕೊಂಡು ಜನ ಕಾಯ್ತಾ ಇರ್ತಾರೆ’ ಅಂದ. ಸೋಮು ಮಾತು ತಕ್ಷಣ ಎಲ್ಲರಿಗೂ ಅರ್ಥವಾಗಲಿಲ್ಲ. ಅವನು ಎಲ್ಲರನ್ನೂ ಸುತ್ತ ಕೂರಿಸಿಕೊಂಡು ‘ಬಾವಿಗೆ ಬಿದ್ದೋರ ಭವಿಷ್ಯ ಹೀಗೇ ಅಂತ ಹೇಳೋಕೆ ಆಗಲ್ಲ. ಬಿದ್ದೋರು ಮೇಲೆದ್ದು ಬರಲೂಬಹುದು ಇಲ್ಲ ಅಲ್ಲೇ ಕೊನೆಯುಸಿರೆಳೆಯಲೂ ಬಹುದು. ಈಗ ಬೋರ್‌ವೆಲ್‌ಗೆ ಬಿದ್ದ ಬಹುತೇಕ ಮಕ್ಕಳ ಗತಿ ಇದೇ ಆಗಿದೆ. ಕಳೇಬರವನ್ನು ಹೂತಿದ್ದ ಮಣ್ಣಿನಿಂದ ಮೇಲೆತ್ತಿ ಮರಳಿ ಮಣ್ಣಿಗೇ ಹೂಳೋ ಕೆಲಸ ಆಗಿದೆ. ಆದರೆ ಮುಂದೆ ನಮಗೆ ಅನುಕೂಲವಾಗುತ್ತೆ, ನಮ್ಮನ್ನು ಮೇಲೆತ್ತುತ್ತಾರೆ ಅಂತ ದಿನಾ ಬಂದು ವಿಧಾನಸಭೆಯಲ್ಲಿ ತಾವೇ ಸದನದ ಬಾವಿಗೆ ಬೀಳ್ತಾ ಇರೋರ ಗತಿ ಏನು. ಇತ್ಲಾಗೆ ಮಂತ್ರಿಗಿರಿಯೂ ಇಲ್ಲ, ಅತ್ಲಾಗೆ ಬೋರ್ಡ್, ಕಾರ್ಪೊರೇಷನ್ ಅಧ್ಯಕ್ಷಗಿರಿಯೂ ಇಲ್ಲ, ಅಂತ ಬೇಜಾರು ಮಾಡ್ಕೊಂಡ್ರೂ ಸದನ ಇರುವಾಗಲೆಲ್ಲ ಬಂದು ಬಾವಿಗೆ ಬಿದ್ದು ಎದ್ದು ಹೋಗ್ತಾ ಇರೋರ ಪರವಾಗಿ ಕಾರ್ಯಾಚರಣೆ ಮಾಡೋರ್‌ ಯಾರು?’ ಅಂದಾಗ ಎಲ್ಲರೂ ಹೌದಲ್ವ ಅಂದರು ಒಕ್ಕೊರಲಿನಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT