ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್ ಕನಸಿನಲ್ಲಿ ಭಾರತ

19 ವರ್ಷದೊಳಗಿನವರ ವಿಶ್ವಕಪ್‌; ಕ್ವಾರ್ಟರ್‌ನಲ್ಲಿ ಬಾಂಗ್ಲಾ ಎದುರಾಳಿ
Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ಕ್ವೀನ್ಸ್‌ಟೌನ್‌: ಒಂದೂ ಪಂದ್ಯದಲ್ಲಿ ಸೋಲಿಲ್ಲದೆ ಕ್ವಾರ್ಟರ್‌ಫೈನಲ್ ತಲುಪಿರುವ ಭಾರತದ ಯುವ ಪಡೆ ಶುಕ್ರವಾರ ಬಾಂಗ್ಲಾದೇಶ ತಂಡದ ಸವಾಲು ಎದುರಿಸಲಿದೆ.

19 ವರ್ಷದೊಳಗಿನವರ ವಿಶ್ವಕಪ್ ಗೆದ್ದುಕೊಳ್ಳುವ ನೆಚ್ಚಿನ ತಂಡ ಎನಿಸಿರುವ ಪೃಥ್ವಿ ಶಾ ಬಳಗ ಸೆಮಿಫೈನಲ್‌ ಪ್ರವೇಶಿಸುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ.

ಭಾರತ ತಂಡ ಲೀಗ್ ಹಂತದ ‘ಬಿ’ ಗುಂಪಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಪಪುವಾ ನ್ಯೂ ಗಿನಿ, ಜಿಂಬಾಬ್ವೆ ತಂಡಗಳನ್ನು ಮಣಿಸಿದೆ. ‘ಸಿ’ ಗುಂಪಿನಲ್ಲಿ ಬಾಂಗ್ಲಾದೇಶ ತಂಡ ನಮೀಬಿಯಾ ಹಾಗೂ ಕೆನಡಾ ಎದುರು ಗೆದ್ದು ಇಂಗ್ಲೆಂಡ್ ವಿರುದ್ಧ ಸೋತಿದೆ.

ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಹಾಗೂ ಮನ್‌ಜ್ಯೋತ್ ಕಾಲ್ರಾ ಬ್ಯಾಟಿಂಗ್‌ನಲ್ಲಿ ಭಾರತ ತಂಡದ ಪ್ರಮುಖ ಆಧಾರ ಸ್ತಂಭಗಳಾಗಿದ್ದಾರೆ. ಹರ್ವಿಕ್ ದೇಸಾಯಿ (56) ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದಾರೆ. ಶುಭಮನ್‌ ಗಿಲ್‌ ಕೂಡ ಇದೇ ಪಂದ್ಯದಲ್ಲಿ 90ರನ್ ದಾಖಲಿಸಿ ಗಮನಸೆಳೆದಿದ್ದರು.

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಹಿಮಾಂಶು ರಾಣಾ ವಿಫಲರಾಗಿದ್ದರು. ಬಾಂಗ್ಲಾದೇಶ ವಿರುದ್ಧ ಅವರು ಮಿಂಚುವ ವಿಶ್ವಾಸದಲ್ಲಿದ್ದಾರೆ. ಗಾಯಗೊಂಡಿದ್ದ ಇಶಾನ್ ಪೊರೆಲ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಬೌಲಿಂಗ್‌ ವಿಭಾಗದಲ್ಲಿ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ಅರ್ಶದೀಪ್ ಸಿಂಗ್‌, ಅಂಕುಲ್ ಸುಧಾಕರ್ ರಾಯ್‌ ಭರವಸೆ ಉಳಿಸಿಕೊಂಡಿದ್ದಾರೆ.

ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ ಅಂಕುಲ್ ಕೇವಲ 14ರನ್‌ಗಳನ್ನು ನೀಡಿ 5 ವಿಕೆಟ್ ಕಬಳಿಸಿದ್ದರು. ಮೂರು ಪಂದ್ಯಗಳಿಂದ ಅವರು 10 ವಿಕೆಟ್ ಪಡೆದುಕೊಂಡಿದ್ದಾರೆ. ಭಾರತದ ಆರು ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಬಾಂಗ್ಲಾದೇಶದ ಐವರು ಆಟಗಾರರು ನ್ಯಾಷನಲ್ ಕ್ರಿಕೆಟ್ ಲೀಗ್‌ನಲ್ಲಿ ಆಡಿದ್ದಾರೆ.

ಬಾಂಗ್ಲಾದೇಶದ ಮಧ್ಯಮ ವೇಗದ ಬೌಲರ್ ಹಸನ್ ಮಹೌದ್ ಮತ್ತು ಆಫ್‌ ಸ್ಪಿನ್ನರ್‌ ಅಫೀಫ್ ಹೊಸೈನ್ ಮೂರು ಪಂದ್ಯಗಳಿಂದ ಐದು ವಿಕೆಟ್ ಗಿಟ್ಟಿಸಿದ್ದಾರೆ. ಆಲ್‌ರೌಂಡರ್ ಹೊಸೈನ್‌ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಒಟ್ಟು 124ರನ್ ದಾಖಲಿಸಿದ್ದಾರೆ.

ತಂಡ ಇಂತಿದೆ: ಭಾರತ: ಪೃಥ್ವಿ ಶಾ (ನಾಯಕ), ಶುಭಮನ್‌ ಗಿಲ್‌, ಆರ್ಯನ್ ಜುಯಾಲ್‌, ಅಭಿಷೇಕ್ ಶರ್ಮಾ, ಅರ್ಶದೀಪ್‌ ಸಿಂಗ್‌, ಹರ್ವಿಕ್ ದೇಸಾಯಿ, ಮನ್‌ಜ್ಯೋತ್ ಕಾಲ್ರಾ, ಕಮಲೇಶ್‌ ನಾಗರಕೋಟಿ, ಪಂಕಜ್‌ ಯಾದವ್, ರಿಯಾನ್‌ ಪರಾಗ್‌, ಇಶಾನ್ ಪೊರೆಲ್, ಹಿಮಾಂಶು ರಾಣಾ, ಅಂಕುಲ್ ರಾಯ್‌, ಶಿವಂ ಮಾವಿ, ಶಿವ ಸಿಂಗ್‌.

ಪಂದ್ಯ ಆರಂಭ: ಶುಕ್ರವಾರ ಬೆಳಿಗ್ಗೆ 3 ಗಂಟೆ

ಐಪಿಎಲ್ ಹರಾಜ ಪ್ರತಿವರ್ಷ ಬರುತ್ತದೆ ಆದರೆ ವಿಶ್ವಕಪ್‌ ಅಲ್ಲ: ದ್ರಾವಿಡ್‌
‘ಐಪಿಎಲ್ ಆಕರ್ಷಣೆಯಿಂದ ಹೊರಬಂದು ವಿಶ್ವಕಪ್‌ ಪಂದ್ಯಗಳನ್ನು ಗಮನವಹಿಸಿ ಆಡಬೇಕು’ ಎಂದು ಭಾರತದ 19 ವರ್ಷದೊಳಗಿನವರ ಕೋಚ್ ರಾಹುಲ್ ದ್ರಾವಿಡ್  ಆಟಗಾರರಿಗೆ ಬುದ್ದಿಮಾತು ಹೇಳಿದ್ದಾರೆ.

‘ಈ ವಾರಾಂತ್ಯದಲ್ಲಿ ನಡೆಯುವ ಐಪಿಎಲ್‌ ಆಟಗಾರರ ಹರಾಜು ಕಡೆಗೆ ಎಲ್ಲರ ದೃಷ್ಠಿ ನೆಟ್ಟಿದೆ. ಇದು ಸಹಜ ಕೂಡ. ದೀರ್ಘಕಾಲ ಉಳಿಯುವ ಆಟ ಯಾವುದು ಎಂಬುದನ್ನು ಅರಿತುಕೊಳ್ಳಬೇಕು’ ಎಂದು ದ್ರಾವಿಡ್ ಹೇಳಿದ್ದಾರೆ.

‘ಐಪಿಎಲ್ ಹರಾಜು ಪ್ರತೀ ವರ್ಷ ಬರುತ್ತದೆ. ಆದರೆ ವಿಶ್ವಕಪ್‌ ಹಾಗಲ್ಲ. ಎಲ್ಲಾ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಕೂಡ ಸಿಗುವುದಿಲ್ಲ. ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು. ಒಂದೆರಡು ಹರಾಜಿನಲ್ಲಿ ಆಡಲು ಅವಕಾಶ ಸಿಕ್ಕರೆ ವೃತ್ತಿಜೀವನದ ಮೇಲೆ ಅದು ಪರಿಣಾಮ ಬೀರುವುದಿಲ್ಲ. ದೇಶಕ್ಕಾಗಿ ಆಡುವುದು ಸಾಮಾನ್ಯವಾದ ಸಂಗತಿ ಅಲ್ಲ. ಅದರಲ್ಲೂ ಸೆಮಿಫೈನಲ್‌ ಆಡುವ ಕನಸು ಬಹಳ ದೊಡ್ಡದು’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಹರಾಜಿನಲ್ಲಿ 19 ವರ್ಷದೊಳಗಿನವರ ತಂಡದ ಪೃಥ್ವಿ ಶಾ, ಶುಭಮನ್‌ ಗಿಲ್‌, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಅರ್ಶದೀಪ್‌ ಸಿಂಗ್, ಹರ್ವಿಕ್ ದೇಸಾಯಿ ಇದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT