ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್‌ಬ್ಯಾಡ್ಮಿಂಟನ್‌ ತಾರೆ ಜಗದೀಶ ಬಿಜಾಪುರ

ಪ್ರೌಢಶಾಲೆಯಲ್ಲಿ ವಾಲಿಬಾಲ್‌; ಪದವಿಯಲ್ಲಿ ಬಾಲ್‌ಬ್ಯಾಡ್ಮಿಂಟನ್‌ ಕ್ರೀಡೆ ಕರಗತ
Last Updated 8 ಜನವರಿ 2019, 19:45 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಶಾಲಾ ಆವರಣದಲ್ಲಿ ಹಿರಿಯ ಆಟಗಾರರು ವಾಲಿಬಾಲ್‌ ಆಡುವುದನ್ನೇ ನೋಡಿ, ಕ್ರೀಡಾಸಕ್ತಿ ಬೆಳೆಸಿಕೊಂಡು, ಕ್ರೀಡೆಯಲ್ಲಿ ಮಿಂಚಿದ ಇಲ್ಲಿನ ಜಗದೀಶ ಬಿಜಾಪುರ ಇತರರಿಗೆ ಪ್ರೇರಣೆಯಾಗಿದ್ದಾರೆ.

ಎಂಟನೇ ತರಗತಿ ಓದುವಾಗ, ಪ್ರೌಢಶಾಲಾ ಆವರಣದಲ್ಲಿ ವಾಲಿಬಾಲ್‌ ಅಂಕಣದಿಂದ ಹೊರ ಚಿಮ್ಮುತ್ತಿದ್ದ ಚೆಂಡನ್ನು, ಓಡಿ ಹೋಗಿ ಹಿಡಿದು, ಆಟಗಾರರ ಕೈಗೆ ತಂದಿಡುವುದರಲ್ಲೇ ಸಂತಸ ಪಡುತ್ತಿದ್ದ ಜಗದೀಶ, ವಾಲಿಬಾಲ್‌ ಪರಿಣಿತ ತರಬೇತುದಾರ ಬಸನಗೌಡ ಪಾಟೀಲ ಗರಡಿಯಲ್ಲಿ ಪಳಗಿದವರು.

ಬಸನಗೌಡ ಪ್ರೋತ್ಸಾಹದಿಂದ ಶಾಲಾ ಕ್ರೀಡಾಕೂಟಗಳಲ್ಲಿ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಹಲವೆಡೆ ಭಾಗವಹಿಸಿ, ಪ್ರಶಸ್ತಿ ಗೆದ್ದವರು ಜಗದೀಶ ಬಿಜಾಪುರ. ಇವರ ಕ್ರೀಡಾಸಕ್ತಿ ಗುರುತಿಸಿ, ಶಾಲೆಯ ಶಿಕ್ಷಕ ಸಮೂಹ ಸೂಕ್ತ ಮಾರ್ಗದರ್ಶನ ನೀಡಿದ್ದರಿಂದ ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಲವು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿಗೆ ಪ್ರವೇಶ ಪಡೆದ ನಂತರ, ಡಾ.ರಾಜಶೇಖರ ಬೆನಕನಹಳ್ಳಿ, ವಿಶ್ವನಾಥ ನಡಕಟ್ಟಿ ಪ್ರೋತ್ಸಾಹದ ಫಲವಾಗಿ ಬಾಲ್‌ಬ್ಯಾಡ್ಮಿಂಟನ್‌ ಆಟದಲ್ಲಿ ಸಾಧನೆಗೈಯಲು ಹಲವು ತಿಂಗಳು ಕಠಿಣ ತರಬೇತಿ ಪಡೆದರು.

2010–11ನೇ ಸಾಲಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಜಗದೀಶ ಪ್ರದರ್ಶಿಸಿದ್ದಾರೆ.

ನಿತ್ಯ ಬೆಳಿಗ್ಗೆ ಕಾಲೇಜು ಆವರಣದಲ್ಲಿ ಬಾಲ್‌ಬ್ಯಾಡ್ಮಿಂಟನ್ ಸೇರಿದಂತೆ, ವಿವಿಧ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಹಿರಿಯ ಆಟಗಾರರಿಂದ ತಿಳಿದುಕೊಂಡಿರುವ ಜಗದೀಶ, ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

ಪದವಿ ಪೂರ್ಣಗೊಳಿಸಿದ ನಂತರ ಪಟ್ಟಣದ ಬಸವ ಟಿ.ವಿ.ಎಸ್. ಶೋ ರೂಂನಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಗದೀಶ ಬಿಜಾಪುರ, ಕ್ರೀಡಾಸಕ್ತರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಆಸಕ್ತ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ವಿವಿಧೆಡೆ ಕ್ರೀಡಾಕೂಟ ಆಯೋಜನೆಗೊಳ್ಳುತ್ತವೆ ಎಂಬ ಸುದ್ದಿ ತಿಳಿದೊಡನೆ, ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸುವಂತೆ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದಾರೆ.

‘ಶಾಲೆ, ಕಾಲೇಜು ಕಲಿಯುವಾಗ ಮಾತ್ರ ನಮ್ಮಲ್ಲಿರುವ ಕ್ರೀಡಾಸಕ್ತಿ ಪ್ರದರ್ಶಿಸಿ, ಪದವಿ ನಂತರ ಅದನ್ನು ಮರೆಯುಂತಾಗಬಾರದು. ನಾವು ಇಷ್ಟಪಟ್ಟ ಆಟದಲ್ಲಿ ನಿಯಮಿತವಾಗಿ ತಾಲೀಮು ಮಾಡಿದರೆ ಅದರಿಂದ ಉತ್ತಮ ವ್ಯಾಯಾಮ ಮಾಡಿದಂತಾಗುತ್ತದೆ.

ನಿತ್ಯದ ಕೆಲಸ ಕಾರ್ಯಗಳಲ್ಲಿ ಸಂತಸದಿಂದ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ. ಪಟ್ಟಣ ಸೇರಿದಂತೆ ವಿವಿಧೆಡೆ ಜರುಗುವ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಜಗದೀಶ ಬಿಜಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT