ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA | ನ್ಯೂಲ್ಯಾಂಡ್ಸ್‌ನಲ್ಲಿ ‘ಫೈನಲ್‌’: ಭಾರತಕ್ಕೆ ಐತಿಹಾಸಿಕ ಜಯದ ಕಸನು

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ; ಮೊಹಮ್ಮದ್ ಸಿರಾಜ್‌ ಅಲಭ್ಯ
Last Updated 11 ಜನವರಿ 2022, 1:58 IST
ಅಕ್ಷರ ಗಾತ್ರ

ಕೇಪ್‌ಟೌನ್‌, ದಕ್ಷಿಣ ಆಫ್ರಿಕಾ: ಮೊದಲ ಪಂದ್ಯದಲ್ಲಿ ಅಧಿಕಾರಯುತ ಜಯ ಗಳಿಸಿ ಎರಡನೇ ಹಣಾಹಣಿಯಲ್ಲಿ ಮುಗ್ಗರಿಸಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ತಿರುಗೇಟು ನೀಡುವ ನಿರೀಕ್ಷೆಯೊಂದಿಗೆ ಮಂಗಳವಾರ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಮೊದಲ ಸರಣಿ ಜಯ ತಂದುಕೊಟ್ಟ ಶ್ರೇಯಸ್ಸು ವಿರಾಟ್ ಕೊಹ್ಲಿ ಪಡೆಗೆ ಸಿಗಲಿದೆ.

ಬೆನ್ನುನೋವಿನಿಂದಾಗಿ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ವೃತ್ತಿಜೀವನದ 99ನೇ ಟೆಸ್ಟ್ ಆಡಲು ಈಗ ಆವರು ಸಿದ್ಧವಾಗಿದ್ದಾರೆ. 1–1ರಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿರುವ ‘ಫೈನಲ್‌’ ಪಂದ್ಯದಲ್ಲಿ ಜಿದ್ದಾಜಿದ್ದಿಯ ಪೈಪೋಟಿಗೆ ಸಜ್ಜಾಗಿವೆ. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ನಿರೀಕ್ಷಿತ ಮಟ್ಟಕ್ಕೇರಲಾಗದ ಭಾರತ ತಂಡ ಈಗ ಹೊಸ ಹುಮ್ಮಸ್ಸಿನಲ್ಲಿ ಆಡಬೇಕಾಗಿದೆ. ವಿರಾಟ್ ಕೊಹ್ಲಿ ಈ ಹುಮ್ಮಸ್ಸಿಗೆ ಬಲ ತುಂಬಲಿದ್ದಾರೆ.

ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕಳೆದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕಗಳನ್ನು ಸಿಡಿಸಿರುವುದು ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಭರವಸೆ ಮೂಡಿಸಿದೆ. ಅವಕಾಶ ಪಡೆಯುವ ಹನುಮ ವಿಹಾರಿ ಅವರ ಆಸೆಗೆ ಕಮರಿದೆ. ರಿಷಭ್ ಪಂತ್ ಕೂಡ ತಂಡದ ಭರವಸೆ ಎನಿಸಿದ್ದಾರೆ. ಆದರೆ ಚೆಂಡು ಬೌನ್ಸ್‌ ಆಗುವ ನ್ಯೂಲ್ಯಾಂಡ್ಸ್ ಪಿಚ್‌ನಲ್ಲಿ ಕಗಿಸೊ ರಬಾಡ, ಲುಂಗಿ ಗಿಡಿ, ಡ್ವಾನೆ ಒಲಿವಿಯರ್‌ ಹಾಗೂ ಮಾರ್ಕೊ ಜ್ಯಾನ್ಸೆನ್ ಅವರ ಎಸೆತಗಳನ್ನು ಎದುರಿಸಲು ಭಾರತದ ಬ್ಯಾಟರ್‌ಗಳು ಯಾವ ತಂತ್ರ ಬಳಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಕೆ.ಎಲ್‌.ರಾಹುಲ್ ಮತ್ತು ಮಯಂಕ್‌ ಅಗರವಾಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುವರೇ ಎಂಬುದು ಕೂಡ ಕೂತೂಹ ಕೆರಳಿಸಿರುವ ಮತ್ತೊಂದು ಪ್ರಶ್ನೆ.

ಸಿರಾಜ್‌ಗಿಲ್ಲ ಸ್ಥಾನ; ಇಶಾಂತ್‌ ಮೇಲೆ ನಿರೀಕ್ಷೆ
ಅಂತರರಾಷ್ಟ್ರೀಯ ಕ್ರಿಕೆಟ್‌ನ ನಿರ್ಣಾಯಕ ಘಟ್ಟದಲ್ಲಿರುವ ವೇಗಿ ಇಶಾಂತ್ ಶರ್ಮಾ ಅವರಿಗೆ ಈ ಪಂದ್ಯದಲ್ಲಿ ಮರುಪ್ರವೇಶಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಹಿಂದಿನ ಪಂದ್ಯದಲ್ಲಿ ಮಿಂಚಲು ವಿಫಲರಾಗಿರುವ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ಗೆ ಮೊನಚು ತುಂಬಲು ಪ್ರಯತ್ನಿಸಲಿದ್ದಾರೆ. ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವಿಭಾಗದಲ್ಲಿ ಡೀನ್ ಎಲ್ಗರ್‌, ರಸೀ ವ್ಯಾನ್ ಡೆರ್ ಸಸೆನ್ ಹಾಗೂ ತೆಂಬಾ ಬವುಮಾ ಅವರು ದಕ್ಷಿಣ ಆಫ್ರಿಕಾ ತಂಡದಲ್ಲಿ ಮಿಚುತ್ತಿದ್ದಾರೆ.

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್‌, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್‌, ರಿಷಭ್ ಪಂತ್‌ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್‌, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಜಯಂತ್ ಯಾದವ್‌, ಪ್ರಿಯಾಂಕ್ ಪಾಂಚಾಲ್, ಉಮೇಶ್ ಯಾದವ್‌, ಹನುಮ ವಿಹಾರಿ, ಇಶಾಂತ್ ಶರ್ಮಾ.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್‌ (ನಾಯಕ), ತೆಂಬಾ ಬವುಮಾ, ಕಗಿಸೊ ರಬಾಡ, ಸರೆಲ್ ಎರ್ವಿ, ಬ್ಯೂರನ್ ಹೆನ್ರಿಕ್ಸ್‌, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್‌, ಲುಂಗಿ ಗಿಡಿ, ಏಡನ್ ಮರ್ಕರಮ್, ವಿಯಾನ್ ಮುಲ್ದರ್‌, ಕೀಗನ್ ಪೀಟರ್ಸನ್‌, ರಸಿ ವ್ಯಾನ್ ಡೆರ್ ಡುಸೆನ್‌, ಕೈಲ್ ವೆರೇನಿ, ಮಾರ್ಕೊ ಜ್ಯಾನ್ಸೆನ್‌, ಗ್ಲೆಂಟೆನ್ ಸ್ಟರ್‌ಮ್ಯಾನ್, ಪ್ರೆಣೆಲನ್ ಸುಬ್ರಯೆನ್‌, ಸಿಸಾಂಡ ಮಗಲ, ರಿಯಾನ್ ರಿಕೆಲ್ಟನ್‌, ಡ್ವಾನೆ ಒಲಿವಿಯರ್.

ಪಂದ್ಯ ಆರಂಭ: ಮಧ್ಯಾಹ್ನ 1.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT