ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಚೊಚ್ಚಲ ಪ್ರಶಸ್ತಿಗೆ ಕರ್ನಾಟಕ ಸಜ್ಜು

Published 12 ಮಾರ್ಚ್ 2024, 14:42 IST
Last Updated 12 ಮಾರ್ಚ್ 2024, 14:42 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ವಿ. ಅನೀಶ್‌ (ಔಟಾಗದೆ 171, 221 ಎಸೆತ, 4x18, 6x3) ಅವರ ಭರ್ಜರಿ ಶತಕದ ಬಲದಿಂದ ಕರ್ನಾಟಕ ತಂಡ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ಮಂಗಳವಾರ 663 ರನ್‌ಗಳ ಬೃಹತ್‌ ಮುನ್ನಡೆ ಪಡೆದಿದೆ. ಚೊಚ್ಚಲ ಪ್ರಶಸ್ತಿ ಮುಡಿಗೇರಿಸಲು ಸಜ್ಜಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ 219 ರನ್‌ಗಳ ಮುನ್ನಡೆ ಪಡೆದಿದ್ದ ಆತಿಥೇಯ ತಂಡವು ಮೂರನೇ ದಿನದಾಟ ಮುಕ್ತಾಯಗೊಂಡಾಗ ಎರಡನೇ ಇನಿಂಗ್ಸ್‌ನಲ್ಲಿ 121 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 444 ರನ್‌ ಗಳಿಸಿದೆ. ಬುಧವಾರ ಪಂದ್ಯದ ಕೊನೆಯ ದಿನವಾಗಿದ್ದು, ಉತ್ತರ ಪ್ರದೇಶ ತಂಡ ‘ಡ್ರಾ’ ಮಾಡಿಕೊಳ್ಳಲು ಶಕ್ತವಾಗಲಿದೆಯೇ ಎಂಬ ಕುತೂಹಲವಷ್ಟೇ ಇದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ ವಿಕೆಟ್‌ ನಷ್ಟವಿಲ್ಲದೆ 91 ಗಳಿಸಿದ್ದ ಕರ್ನಾಟಕ ತಂಡವು  ಆಟ ಮುಂದುವರಿಸಿ, ದಿನವಿಡೀ ಉತ್ತರ ಪ್ರದೇಶದ ಬೌಲರ್‌ಗಳನ್ನು ದಂಡಿಸಿತು. ದಿನದಾಟದಲ್ಲಿ 353 ರನ್‌ ಹರಿದುಬಂತು. ಉರಿ ಬಿಸಿಲಿನಲ್ಲಿ ಬಸವಳಿದ ಎದುರಾಳಿ ತಂಡದ ಬೌಲರ್‌ಗಳು ಕೇವಲ ಐದು ವಿಕೆಟ್‌ಗಳನ್ನು ಪಡೆಯಲು ಯಶಸ್ವಿಯಾದರು. 

ಆರಂಭಿಕ ಆಟಗಾರರಾದ ಮೆಕ್ನೀಲ್‌ ಎಚ್‌.ಎನ್‌. (79, 213ಎ; 4x6, 6x4) ಮತ್ತು ಪ್ರಖರ್‌ ಚತುರ್ವೇದಿ (86, 143ಎ, 4x9, 6x3) ಅರ್ಧಶತಕದೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಒದಗಿಸಿದರು. ಅವರಿಬ್ಬರು ಮೊದಲ ವಿಕೆಟ್‌ ಜತೆಯಾಟಕ್ಕೆ 144 ರನ್‌ ಕಲೆಹಾಕಿದರು. ಶತಕಕ್ಕೆ 14 ರನ್‌ ದೂರದಲ್ಲಿದ್ದ ಪ್ರಖರ್‌ ಅವರು ಶುಭಂ ಮಿಶ್ರಾ ಎಸೆತದಲ್ಲಿ ವೈಭವ್ ಚೌಧರಿ (ಬದಲಿ ಆಟಗಾರ) ಅವರಿಗೆ ಕ್ಯಾಚಿತ್ತರು. ನಂತರ ಆಡಲಿಳಿದ ಅನೀಶ್‌, ಎದುರಾಳಿ ತಂಡದ ಸ್ಪಿನ್ನರ್‌ಗಳನ್ನು ಕಾಡಿದರು. ಚೆಂದದ ಡ್ರೈವ್‌ ಮತ್ತು ಸ್ವೀಪ್‌ಗಳ ಮೂಲಕ 18 ಬೌಂಡರಿ ಗಳಿಸಿದರು.

ಮೆಕ್ನೀಲ್‌ ಜತೆ ಎರಡನೇ ವಿಕೆಟ್‌ಗೆ ಅವರು 62 ರನ್‌ ಸೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ರಿತುರಾಜ್‌ ಶರ್ಮಾ ಅವರು ಮೆಕ್ನೀಲ್‌ ಅವರನ್ನು ಬೌಲ್ಡ್‌ ಮಾಡಿದರು. ನಂತರ ನಾಯಕ ಸ್ಮರಣ್‌ ಆರ್‌. (40, 66ಎ, 4x3) ಅವರು ಅನೀಶ್‌ ಜತೆ ಮೂರನೇ ವಿಕೆಟ್‌ಗೆ 120 ರನ್‌ ಸೇರಿಸಿ ತಂಡದ ಮೊತ್ತವನ್ನು ಮತ್ತಷ್ಟು ಬೆಳೆಸಿದರು.

ಸ್ಮರಣ್‌ ವಿಕೆಟ್‌ ಒಪ್ಪಿಸಿದ ಬಳಿಕ, ಅನೀಶ್ವರ್‌ ಗೌತಮ್‌, ಯಶೋವರ್ಧನ್ ಪರಂತಾಪ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ನಂತರ ಅನೀಶ್‌ ಅವರನ್ನು ಸೇರಿಕೊಂಡ ವಿಕೆಟ್‌ ಕೀಪರ್ ಕೃತಿಕ್‌ ಕೃಷ್ಣ (ಔಟಾಗದೆ 34, 53ಎ, 4x5) ಅವರು ಮುರಿಯದ ಆರನೇ ವಿಕೆಟ್‌ಗೆ 69 ರನ್‌ ಸೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಕರ್ನಾಟಕ: 358. ಉತ್ತರ ಪ್ರದೇಶ: 139. ಎರಡನೇ ಇನಿಂಗ್ಸ್‌: ಕರ್ನಾಟಕ 121 ಓವರ್‌ಗಳಲ್ಲಿ 5 ವಿಕೆಟ್‌ಗೆ 444 (ಮೆಕ್ನೀಲ್‌ ಎಚ್‌.ಎನ್‌. 79, ಪ್ರಖರ್‌ ಚತುರ್ವೇದಿ 86, ಅನೀಶ್‌ ಕೆ.ವಿ. ಔಟಾಗದೆ 171, ಸ್ಮರಣ್‌ ಆರ್‌. 40, ಕೃತಿಕ್‌ ಕೃಷ್ಣ ಔಟಾಗದೆ 34).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT