ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್ ಪಾಂಡ್ಯ ಅಪಹಾಸ್ಯ: ಅಭಿಮಾನಿಗಳ ಧೋರಣೆಗೆ ಆರ್. ಅಶ್ವಿನ್ ಬೇಸರ

Published 30 ಮಾರ್ಚ್ 2024, 14:45 IST
Last Updated 30 ಮಾರ್ಚ್ 2024, 14:45 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ತಾವು ಟೀಕಿಸುತ್ತಿರುವ ಆಟಗಾರರು ಯಾವ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಇಷ್ಟೊಂದು ಅಹಿತಕರ ಮಟ್ಟಕ್ಕೆ ಯಾವ ಆಟಗಾರನನ್ನೂ ಅಪಹಾಸ್ಯ ಮಾಡಬಾರದು ಎಂದು ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. 

ಅಹಮದಾಬಾದ್ ಮತ್ತು ಹೈದರಾಬಾದ್‌ ನಗರಗಳಲ್ಲಿ ಈಚೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಅವರನ್ನು ಪ್ರೇಕ್ಷಕರು ಅಪಹಾಸ್ಯ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಬಹಳಷ್ಟು ವ್ಯಂಗ್ಯ, ಟೀಕೆಗಳು ವ್ಯಕ್ತವಾಗಿದ್ದವು. 

ಹಾರ್ದಿಕ್, ಹೋದ ಎರಡು ವರ್ಷ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದರು. ಈ ವರ್ಷ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಮುಕ್ತಗೊಳಿಸಲಾಗಿತ್ತು. 

ಇದು ಈಗ ರೋಹಿತ್ ಅಭಿಮಾನಿಗಳು ಮತ್ತು ಹಾರ್ದಿಕ್ ಅಭಿಮಾನಿಗಳ ನಡುವಿನ ‘ಸಮರ’ವಾಗಿ ಮಾರ್ಪಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಹೇಳಿಕೆಗಳು ಹರಿದಾಡುತ್ತಿವೆ.    

‘ಅಭಿಮಾನಿಗಳಿಗೆ ಒಬ್ಬ ಆಟಗಾರ ಇಷ್ಟವಾಗದಿದ್ದರೆ, ಅವರನ್ನೂ ಅಪಹಾಸ್ಯ ಮಾಡಿದರೆ ತಂಡವು ಯಾಕೆ ಸ್ಪಷ್ಟಿಕರಣ ನೀಡಬೇಕೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಇದರಲ್ಲಿ ಫ್ರ್ಯಾಂಚೈಸಿಯ ಪಾತ್ರವಾಗಲಿ, ಆಟಗಾರರ ಪಾತ್ರವಾಗಲಿ ಇರಬೇಕು ಎಂದು ನನಗನಿಸದು. ಇದು ಅಭಿಮಾನಿಗಳದ್ದೇ ಹೊಣೆ’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ಹೇಳಿದ್ದಾರೆ.

‘ಇಂತಹ ಘಟನೆಗಳನ್ನು ಬೇರೆ ದೇಶಗಳಲ್ಲಿ ನೋಡಿಲ್ಲ. ಇಂಗ್ಲೆಂಡ್‌ನಲ್ಲಿ ಜೋ ರೂಟ್ ಮತ್ತು ಜಾಕ್ ಕ್ರಾಲಿ  ಅಥವಾ ಜಾಸ್ ಬಟ್ಲರ್  ಅಭಿಮಾನಿಗಳು ಯಾವಾಗಲಾದರೂ ಪರಸ್ಕರ ಹೊಡೆದಾಡಿದ್ದಾರೆಯೇ?  ಆಸ್ಟ್ರೇಲಿಯಾದಲ್ಲಿ ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮಿನ್ಸ್ ಅಭಿಮಾನಿಗಳ ನಡುವೆ ಗಲಾಟೆಯಾಗುತ್ತದೆಯೇ?‘ ಎಂದು ಅಶ್ವಿನ್ ಹೇಳಿದ್ದಾರೆ.

‘ನಾಯಕತ್ವ ಬದಲಾವಣೆ ಇದೇ ಮೊದಲೇನಲ್ಲ. ಈ ಹಿಂದೆ ಭಾರತ ತಂಡದಲ್ಲಿ ಸೌರವ್ ಗಂಗೂಲಿ ಅವರು ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಆಡಿದ್ದರು. ಕೆಲವು ವರ್ಷಗಳ ನಂತರ ಗಂಗೂಲಿ ನಾಯಕತ್ವದಲ್ಲಿ ಸಚಿನ್ ಆಡಿದರು.  ಸಚಿನ್ ಮತ್ತು ಗಂಗೂಲಿ ಇಬ್ಬರೂ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಆಡಿದರು. ಮೂವರೂ ಅನಿಲ್ ಕುಂಬ್ಳೆಯವರ ಮುಂದಾಳತ್ವದ ತಂಡದಲ್ಲಿದ್ದರು.  ಇವರೆಲ್ಲರೂ ತಮಗಿಂತಲೂ ಬಹಳಷ್ಟು ಚಿಕ್ಕ ವಯಸ್ಸಿನ ಆಟಗಾರ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ್ದರು. ಅಷ್ಟೇ ಅಲ್ಲ; ಧೋನಿಯವರು ಕೊಹ್ಲಿಯ ನಾಯಕತ್ವದಲ್ಲಿ ಆಟವಾಡಿದ್ದರು’ ಎಂದು ಅಶ್ವಿನ್ ಹೇಳಿದ್ದಾರೆ.

‘ಅಭಿಮಾನಿಗಳು ಇಂತಹ ನಡವಳಿಕೆಗಳನ್ನು ಬಿಡಬೇಕು.  ನಮ್ಮೊಳಗೇ ಕಲಹ ಮಾಡಿಕೊಂಡರೆ ಹೊರಗಿನವರು ಲಾಭ ಪಡೆಯುತ್ತಾರೆ. ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ಕ್ರೀಡೆಯನ್ನು ಸಿನಿಮಾದಂತೆ ಹೋಲಿಕೆ ಮಾಡಲಾಗದು’ ಎಂದರು. 

‘ತಾರೆಗಳ ಆರಾಧನೆಯ ಬಗ್ಗೆ ನನಗೆ ತಕರಾರಿಲ್ಲ. ನಿಮ್ಮ ನೆಚ್ಚಿನ ಆಟಗಾರರ ಬಗ್ಗೆ ಸಂಭ್ರಮಿಸಿ. ಸಂತಸ ಪಡಿ. ಆದರೆ ಅದಕ್ಕಾಗಿ ಮತ್ತೊಬ್ಬ ಆಟಗಾರನನ್ನು ಕೀಳಾಗಿ ಕಾಣಬೇಡಿ. ಈ ಮನೋಭಾವ ಮಾಯವಾಗಲೆಂದು ಬಯಸುವೆ’ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT