ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಲಯ ಉಳಿಸಿಕೊಳ್ಳುವತ್ತ ಗಿಲ್ ಪಡೆ ಚಿತ್ತ

ಗುಜರಾತ್ ಟೈಟನ್ಸ್–ಡೆಲ್ಲಿ ಕ್ಯಾಪಿಟಲ್ಸ್ ಹಣಾಹಣಿ ಇಂದು; ಪಂತ್ ಬಳಗಕ್ಕೆ ಅಂಕಪಟ್ಟಿಯಲ್ಲಿ ಮೇಲೆರುವ ಸವಾಲು
Published 17 ಏಪ್ರಿಲ್ 2024, 0:30 IST
Last Updated 17 ಏಪ್ರಿಲ್ 2024, 2:31 IST
ಅಕ್ಷರ ಗಾತ್ರ

ಅಹಮದಾಬಾದ್: ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಓಟಕ್ಕೆ ತಡೆಯೊಡ್ಡಿದ ಸಂತಸದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. 

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ  ಐಪಿಎಲ್ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಅವಶ್ಯಕ. ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ತನ್ನ ಕಳೆದ ಪಂದ್ಯದಲ್ಲಿ ರಾಜಸ್ಥಾನ ಎದುರು ಜಯಿಸಿತ್ತು.

ಅದೇ ರಿಷಭ್ ಪಂತ್ ನಾಯಕತ್ವೆ ಡೆಲ್ಲಿ ತಂಡವು 9ನೇ ಸ್ಥಾನದಲ್ಲಿದೆ. ಗುಜರಾತ್ ತಂಡವು ಆರು ಪಂದ್ಯಗಳಲ್ಲಿ ಆಡಿದ್ದು, ಮೂರು ಗೆದ್ದು, ಇನ್ನುಳಿದದ್ದರಲ್ಲಿ ಸೋತಿದೆ.  ಡೆಲ್ಲಿ ಬಳಗವು ಎರಡು ಜಯಿಸಿ, ನಾಲ್ಕರಲ್ಲಿ ನಿರಾಶೆ ಅನುಭವಿಸಿದೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ ಗುಜರಾತ್ ತಂಡದ ಪ್ರದರ್ಶನವು ಸ್ಥಿರವಾಗಿಲ್ಲ. ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಿದರೆ ಮತ್ತೊಂದರಲ್ಲಿ ನೆಲಕಚ್ಚುತ್ತಿದೆ. ಮೊಹಮ್ಮದ್ ಶಮಿ ಗೈರುಹಾಜರಿಯಲ್ಲಿ ತಂಡದ ಬೌಲಿಂಗ್ ವಿಭಾಗ ತುಸು ಮಂಕಾಗಿದೆ. ಉಮೇಶ್ ಯಾದವ್ ಒಟ್ಟು ಏಳು ವಿಕೆಟ್ ಗಳಿಸಿದ್ದಾರೆ. ಸ್ಪೆನ್ಸರ್ ಜಾನ್ಸನ್ ಮತ್ತು ಮೋಹಿತ್ ಶರ್ಮಾ ಅವರೂ ಕೆಲ ಸಂದರ್ಭಗಳಲ್ಲಿ ವಿಕೆಟ್ ಗಳಿಸಿದ್ದಾರೆ. ಆದರೆ, ರನ್‌ಗಳನ್ನು ನೀಡುವುದನ್ನು ನಿಯಂತ್ರಿಸಿದರೆ ಇನ್ನೂ ಪರಿಣಾಮಕಾರಿಯಾಗಬಲ್ಲರು. ಸ್ಪಿನ್ನರ್ ರಶೀದ್ ಖಾನ್ ಅವರು ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಸಮರ್ಥ ಹಾಗೂ ಬ್ಯಾಟಿಂಗ್‌ನಲ್ಲಿಯೂ ಮಿಂಚಬಲ್ಲರು. 

ಡೆಲ್ಲಿ ತಂಡದ ಬೌಲರ್‌ಗಳು ಕಳೆದ ಪಂದ್ಯದಲ್ಲಿ ಲಖನೌ ವಿರುದ್ಧ ಜಯಕ್ಕೆ ಕಾರಣರಾಗಿದ್ದರು. ಖಲೀಲ್ ಅಹಮದ್,  ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮಾ ಅವರು ಗುಜರಾತ್ ಬ್ಯಾಟರ್‌ಗಳಿಗೆ ಸವಾಲಾಗಬಲ್ಲರು. ಆದ್ದರಿಂದ ಗುಜರಾತ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಮ್ಯಾಥ್ಯೂ ವೇಡ್, ರಾಹುಲ್ ತೆವಾಟಿಯಾ, ಕನ್ನಡಿಗ ಅಭಿನವ್ ಮನೋಹರ್, ವಿಜಯಶಂಕರ್ ಹಾಗೂ ಶಾರೂಕ್ ಖಾನ್ ಅವರು ತಮ್ಮ ನೈಜ ಲಯಕ್ಕೆ ಮರಳುವುದು ಅನಿವಾರ್ಯ. 

ಡೆಲ್ಲಿ ಬ್ಯಾಟಿಂಗ್ ಪಡೆಯಲ್ಲಿಯೂ ಸ್ಥಿರ ಪ್ರದರ್ಶನ ತೋರುವ ಸವಾಲು ಇದೆ. ನಾಯಕ ರಿಷಭ್ ಉತ್ತಮ ಲಯದಲ್ಲಿದ್ದಾರೆ. ಟ್ರಿಸ್ಟನ್ ಸ್ಟಬ್ಸ್‌, ಶಾಯ್ ಹೋಪ್ ಅವರು ಅಂತಿಮ ಹಂತದ ಓವರ್‌ಗಳಲ್ಲಿ ಪ್ರಹಾರ ನಡೆಸುವ ಸಮರ್ಥರು. ಆದರೆ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಅವರು ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.  ಪ್ಲೇ ಆಫ್‌ ಹಾದಿಗೆ ಮರಳಬೇಕಾದರೆ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿನ ಗೆಲುವುಗಳು ಮುಖ್ಯವಾಗಲಿವೆ.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಪಪ್

ಪಂದ್ಯ ಆರಂಭ: ರಾತ್ರಿ 7.30

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್  –ಪಿಟಿಐ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT