ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್‌ ಏಕದಿನ ಕ್ರಿಕೆಟ್ ಟೂರ್ನಿ: ಪಾಕ್ ದಾಳಿಗೆ ಬೆದರಿದ ಹಾಂಕಾಂಗ್‌

ಉಸ್ಮಾನ್‌ಗೆ ಮೂರು, ಹಸನ್‌–ಶಾಬಾದ್‌ಗೆ ತಲಾ ಎರಡು ವಿಕೆಟ್‌
Last Updated 16 ಸೆಪ್ಟೆಂಬರ್ 2018, 19:54 IST
ಅಕ್ಷರ ಗಾತ್ರ

ದುಬೈ: ಎದುರಾಳಿ ತಂಡದ ವೇಗ ಮತ್ತು ಸ್ಪಿನ್ ದಾಳಿಗೆ ಹಾಂಕಾಂಗ್ ಬ್ಯಾಟ್ಸ್‌ಮನ್‌ಗಳು ನಲುಗಿದರು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ, ಏಷ್ಯಾ ಕಪ್‌ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸುಲಭ ಜಯ ಸಾಧಿಸಿತು.

ಭಾನುವಾರ ರಾತ್ರಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹಾಂಕಾಂಗ್ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಒಂದು ದಶಕದ ನಂತರ ಏಷ್ಯಾಕಪ್‌ನಲ್ಲಿ ಆಡುತ್ತಿರುವ ಹಾಂಕಾಂಗ್‌ ಆರಂಭದಲ್ಲೇ ನಿರಾಸೆ ಕಂಡಿತು.

117 ರನ್‌ಗಳ ಗುರಿ ಪಾಕಿಸ್ತಾನಕ್ಕೆ ಪ್ರಯಾಸ ಎನಿಸಲಿಲ್ಲ. ಆರಂಭಿಕ ಬ್ಯಾಟ್ಸ್‌ ಮನ್ ಇಮಾಮ್ ಉಲ್ ಹಕ್‌ (50; 69 ಎಸೆತ, 1 ಸಿಕ್ಸರ್‌, 3 ಬೌಂಡರಿ) ಅವರೊಂದಿಗೆ ಉತ್ತಮ ಜೊತೆಯಾಟ ಆಡಿದ ಫಕ್ರ್‌ ಜಮಾನ್ ಮತ್ತು ಬಾಬರ್ ಆಜಮ್‌ ಸುಲಭ ಜಯಕ್ಕೆ ಕಾರಣರಾದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹಾಂಕಾಂಗ್‌ ತಂಡದ ಆರಂಭಿಕ ಬ್ಯಾಟ್ಸ್‌ ಮನ್‌ಗಳು ನಾಲ್ಕು ಓವರ್‌ಗಳ ವರೆಗೆ ಪಾಕಿಸ್ತಾನದ ವೇಗದ ದಾಳಿಯನ್ನು ಎದುರಿಸಿ ನಿಂತರು. ಐದನೇ ಓವರ್‌ನಲ್ಲಿ ನಿಜಾಕತ್ ಖಾನ್ ರನ್‌ ಔಟ್‌ ಆಗಿ ಮರಳಿದರು. ಒಂಬತ್ತನೇ ಓವರ್‌ನಲ್ಲಿ ನಾಯಕ ಅಂಶುಮನ್ ರಾಠ್‌ ಕೂಡ ವಾಪಸಾದರು.

ಬಾಬರ್ ಹಯಾತ್ ಮತ್ತು ಕಾರ್ಟರ್‌ ಜೋಡಿ ನಿಧಾನಗತಿಯಲ್ಲಿ ರನ್‌ ಗಳಿಸಲು ಶ್ರಮಿಸಿದರು. ಆದರೆ 14ನೇ ಓವರ್‌ನಲ್ಲಿ ಕಾರ್ಟರ್‌ ಔಟಾದರು. 16ನೇ ಓವರ್‌ನಲ್ಲಿ ಶಾಬಾದ್ ಖಾನ್‌ ಎರಡು ವಿಕೆಟ್ ಕಬಳಿಸಿ ಹಾಂಕಾಂಗ್‌ನ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದರು.

ಕಿಂಚಿತ್‌ ಶಾ–ಎಜಾಜ್ ಖಾನ್‌ ಜೊತೆಯಾಟ: 44 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡ ತಂಡಕ್ಕೆ ಕಿಂಚಿತ್ ಶಾ ಮತ್ತು ಎಜಾಜ್ ಖಾನ್‌ ಬಲ ತುಂಬಲು ಪ್ರಯತ್ನಿಸಿದರು. ಆರನೇ ವಿಕೆಟ್‌ಗೆ ಇವರು 53 ರನ್‌ ಸೇರಿಸಿದರು.

ಇವರಿಬ್ಬರು ಔಟಾದ ನಂತರ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. 31ನೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದ ಮಧ್ಯಮ ವೇಗಿ ಉಸ್ಮಾನ್ ಖಾನ್‌, ಸವಾಲಿನ ಮೊತ್ತ ಸೇರಿಸುವ ಹಾಂಕಾಂಗ್ ತಂಡದ ಆಸೆಗೆ ತಣ್ಣೀರು ಸುರಿದರು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ಎಹ್ಸಾನ್‌ ನವಾಜ್ ಮತ್ತು ನದೀಮ್ ಅಹಮ್ಮದ್‌ ಸ್ವಲ್ಪ ಪ್ರತಿರೋಧ ಒಡ್ಡು 17 ರನ್ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT