ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಟೈಗರ್ಸ್‌ ಜಯಭೇರಿ

ಕೆಪಿಎಲ್: ಮಹೇಶ್‌ಗೆ ಮೂರು ವಿಕೆಟ್; ಮೊಹಮ್ಮದ್ ತಾಹ ಅರ್ಧಶತಕ
Last Updated 16 ಆಗಸ್ಟ್ 2018, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪಿನ್‌ ಬೌಲರ್ ಮಹೇಶ್ ಪಟೇಲ್ ಮತ್ತು ಮೊಹಮ್ಮದ್ ತಾಹ ಅವರ ಮಿಂಚಿನ ಬ್ಯಾಟಿಂಗ್ ಬಲ ದಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಗುರುವಾರ ಬಿಜಾಪುರ ಬುಲ್ಸ್‌ ಎದುರು 4 ವಿಕೆಟ್‌ಗಳಿಂದ ಜಯಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬುಲ್ಸ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 128 ರನ್‌ಗಳ ಸಾಧಾರಣ ಮೊತ್ತ ಗಳಿಸಲು ಟೈಗರ್ಸ್‌ ತಂಡದ ಬೌಲರ್ ಮಹೇಶ್ ಪಟೇಲ್ (16ಕ್ಕೆ3) ಕಾರಣರಾದರು. ಎರಡು ಕ್ಯಾಚ್ ಪಡೆದು, ಎರಡು ಸ್ಟಂಪಿಂಗ್ ಮಾಡಿದ ನಿತಿನ್ ಭಿಲ್ಲೆ ಮಿಂಚಿದರು.

ಆದರೆ ಟೈಗರ್ಸ್‌ ಬಳಗವು ಈ ಸಣ್ಣ ಗುರಿ ತಲುಪಲು ಪ್ರಯಾಸಪಡ ಬೇಕಾಯಿತು. ಬುಲ್ಸ್‌ ತಂಡದ ಬೌಲರ್‌ ಗಳು ಕಠಿಣ ಸವಾಲೊಡ್ಡಿದರು. ಆದರೆ, ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ತಾಹ (62; 50ಎಸೆತ; 8ಬೌಂಡರಿ, 1ಸಿಕ್ಸರ್) ಅವರ ಆಟವು ಹುಬ್ಬಳ್ಳಿಗೆ ಜಯಿಸಲು ನೆರವಾಯಿತು. ಇನಿಂಗ್ಸ್ ಆರಂಭಿಸಿದ ತಾಹ ಮತ್ತು ಅಭಿಷೇಕ್ ರೆಡ್ಡಿ (15ರನ್)ಮೊದಲ ವಿಕೆಟ್‌ಗೆ 32 ರನ್‌ ಗಳಿಸಿದರು. ರೋನಿತ್ ಮೋರೆ ಹಾಕಿದ ನಾಲ್ಕನೇ ಓವರ್‌ನಲ್ಲಿ ಆಭಿಷೇಕ್ ಔಟಾದರು. ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ಬುಲ್ಸ್‌ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. 18ನೇ ಓವರ್‌ನಲ್ಲಿ ಹುಬ್ಬಳ್ಳಿಯ ಮೊತ್ತ 117 ರನ್‌ಗಳಾಗಿದ್ದಾಗ ತಾಹ ರನ್‌ ಔಟ್ ಆದರು. ಆದರೆ, ಇನ್ನೊಂದು ಬದಿಯಲ್ಲಿದ್ದ ನಿತಿನ್ (ಔಟಾಗದೆ 15; 9ಎಸೆತ, 1ಬೌಂಡರಿ, 1 ಸಿಕ್ಸರ್) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಬಿಜಾಪುರ ಬುಲ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 128 (ಭರತ್ ಚಿಪ್ಲಿ 29, ಅನುರಾಗ್ ಬಾಜಪೇಯಿ 16, ಕೆ.ಎನ್. ಭರತ್ 19, ಎಂ.ಜಿ.ನವೀನ್ ಔಟಾಗದೆ 44, ಆರ್. ವಿನಯಕುಮಾರ್ 19ಕ್ಕೆ1, ಕ್ರಾಂತಿಕುಮಾರ್ 33ಕ್ಕೆ1, ಐ. ಜಿ. ಅನಿಲ್ 28ಕ್ಕೆ2, ಮಹೇಶ್ ಪಟೇಲ್ 16ಕ್ಕೆ3). ಹುಬ್ಬಳ್ಳಿ ಟೈಗರ್ಸ್: 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 131 (ಮೊಹಮ್ಮದ್ ತಾಹ 62, ಸುನೀಲ್ ರಾಜು 21ಕ್ಕೆ2. ರೋನಿತ್ ಮೋರೆ 21ಕ್ಕೆ1, ಜಹೂರ್ ಫಾರೂಕಿ 31ಕ್ಕೆ1, ಕೆ.ಸಿ. ಕಾರ್ಯಪ್ಪ 17ಕ್ಕೆ1). ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ ತಂಡಕ್ಕೆ 4 ವಿಕೆಟ್‌ಗಳ ಜಯ.

ಇಂದಿನ ಪಂದ್ಯ
‌ಬೆಂಗಳೂರು ಬ್ಲಾಸ್ಟರ್ಸ್‌–ಬಳ್ಳಾರಿ ಟಸ್ಕರ್ಸ್‌ ಆರಂಭ: ಸಂಜೆ 6.40
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT