ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದ ಹಂಡ್ರೆಂಡ್ ಕ್ರಿಕೆಟ್ ಲೀಗ್‌'ನಲ್ಲಿ ಆಡಲು ಭಾರತದ ಆಟಗಾರರು ಉತ್ಸುಕ: ಮಾರ್ಗನ್‌

Last Updated 2 ಏಪ್ರಿಲ್ 2021, 16:24 IST
ಅಕ್ಷರ ಗಾತ್ರ

ಕೋಲ್ಕತ್ತ: ತಮ್ಮ ದೇಶದಲ್ಲಿ ಆರಂಭವಾಗಲಿರುವ ದ ಹಂಡ್ರೆಂಡ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಆಡಲು ಭಾರತದ ಹಲವು ಆಟಗಾರರು ಉತ್ಸುಕರಾಗಿದ್ದಾರೆ ಎಂದು ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕ ಏಯಾನ್ ಮಾರ್ಗನ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿರುವ ಮಾರ್ಗನ್ ಶುಕ್ರವಾರ ‘ಸ್ಕೈ ಸ್ಪೋರ್ಟ್ಸ್‌‘ ವಾಹಿನಿ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.

‘ನೂರು ಎಸೆತಗಳ ಪಂದ್ಯಗಳಿರುವ ದ ಹಂಡ್ರೆಡ್ ಟೂರ್ನಿಯು ಬಹಳಷ್ಟು ಕ್ರಿಕೆಟಿಗರನ್ನು ಆಕರ್ಷಿಸುತ್ತಿದೆ. ಈ ಟೂರ್ನಿಯ ಕುರಿತು ಭಾರತದ ಹಲವು ಕ್ರಿಕೆಟಿಗರೊಂದಿಗ ನಡೆದ ಮಾತುಕತೆಗಳಲ್ಲಿ ನಾನು ಗಮನಿಸಿದ್ದೇನೆ. ಭಾರತೀಯ ಆಟಗಾರರು ಈ ಟೂರ್ನಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಅಲ್ಲದೇ ಜಗತ್ತಿನ ಬೇರೆ ಬೇರೆ ಕಡೆ ನಡೆಯುತ್ತಿರುವ ಫ್ರ್ಯಾಂಚೈಸಿ ಲೀಗ್ ಟೂರ್ನಿಗಳಲ್ಲಿ ಆಡುವ ಆಸಕ್ತಿಯನ್ನೂ ಹೊಂದಿದ್ದಾರೆ‘ ಎಂದು ಮಾರ್ಗನ್ ಹೇಳಿದ್ದಾರೆ. ಆದರೆ ಅವರು ಯಾವುದೇ ಆಟಗಾರನ ಹೆಸರನ್ನೂ ಬಹಿರಂಗಪಡಿಸಿಲ್ಲ.

‘ಭಾರತೀಯ ಆಟಗಾರರು ಪ್ರವಾಸ, ಪ್ರಯಾಣ ಮಾಡುವುದನ್ನು ಇಷ್ಟಪಡುತ್ತಾರೆ. ಬೇರೆ ಬೇರೆ ದೇಶಗಳ ಸಂಸ್ಕೃತಿ, ವಾತಾವರಣಗಳನ್ನು ತಿಳಿದುಕೊಳ್ಳುವ ಆಸಕ್ತರಾಗಿದ್ದಾರೆ. ಇದರಿಂದಾಗಿ ಆ ಟೂರ್ನಿಗಳ ಗುಣಮಟ್ಟವೂ ವರ್ಧಿಸುತ್ತದೆ‘ ಎಂದರು.

ದ ಹಂಡ್ರೆಡ್ ಟೂರ್ನಿಯು ಹೋದ ವರ್ಷವೇ ಇಂಗ್ಲೆಂಡ್‌ನಲ್ಲಿ ಆರಂಭವಾಗಬೇಕಿತ್ತು. ಆದರೆ ಕೋವಿಡ್ –19 ಕಾರಣದಿಂದ ಮುಂದೂಡಲಾಯಿತು. ಈ ವರ್ಷ ಆಯೋಜನೆಯಾಗಲಿದೆ.

‘ವಿಶ್ವದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಲೀಗ್ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಇದರಿಂದಾಗಿ ಎಲ್ಲ ಆಟಗಾರರು ತಮ್ಮ ದೇಶದ ತಂಡದಲ್ಲಿ ಆಡುವುದರ ಜೊತೆಗೆ ಲೀಗ್‌ನಲ್ಲಿಯೂ ಪಾಲ್ಗೊಳ್ಳಲು ಸಮಯದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಐಸಿಸಿಯು ಈಬಗ್ಗೆ ಸ್ಪಷ್ಟ ಯೋಜನೆಯೊಂದನ್ನು ರೂಪಿಸಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಲೀಗ್ ಟೂರ್ನಿಗಳು ಅಂತರರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಮೀರಿಸಿದರೆ ಅಚ್ಚರಿಪಡಬೇಕಿಲ್ಲ‘ ಎಂದು ಅಭಿಪ್ರಾಯಪಟ್ಟರು.

‘ಕ್ರಿಕೆಟ್ ಆಡುವ ಆಸಕ್ತಿ ಇರುವ ಮಕ್ಕಳ ಪಾಲಿಗೆ ಇವತ್ತು ಟಿ20 ಕ್ರಿಕೆಟ್ ಬಹಳ ದೊಡ್ಡ ಆಕರ್ಷಣೆಯಾಗಿದೆ. ಟಿವಿಯಲ್ಲಿ ಚುಟುಕು ಮಾದರಿಯ ಭರಾಟೆಯನ್ನು ನೋಡಿ ಪುಳಕಿತರಾಗುತ್ತಾರೆ. ತಮ್ಮ ನೆಚ್ಚಿನ ತಾರೆಗಳ ಆಟಕ್ಕೆ ಮನಸೋಲುತ್ತಾರೆ. ಸಿಕ್ಸರ್, ಬೌಂಡರಿಗಳ ಭರಾಟೆ ಅವರನ್ನು ಆಕರ್ಷಿಸುತ್ತದೆ. ಆದರೆ 50 –50 ಕ್ರಿಕೆಟ್ ನ ಗುಣವೇ ಬೇರೆ. ಕ್ರಿಕೆಟ್‌ನ ಎಲ್ಲ ಕೌಶಲಗಳನ್ನು ಸ್ವಲ್ಪ ಸ್ವಲ್ಪವಾಗಿ ಒಂದೇ ದಿನದಲ್ಲಿ ಉಣಬಡಿಸುತ್ತದೆ. ಟೆಸ್ಟ್ ಕ್ರಿಕೆಟ್ ಅತ್ಯಂತ ಪ್ರತಿಷ್ಠಿತವಾದದ್ದು. ಎಲೀಟ್ ಆಟಗಾರರು ಇದನ್ನು ಇಷ್ಟಪಡುತ್ತಾರೆ. ಆಡುತ್ತಾರೆ. ವಿಶ್ವದ ಕೆಲವೇ ದೇಶಗಳು ಟೆಸ್ಟ್ ಮಾದರಿಗೆ ಆದ್ಯತೆ ನೀಡುತ್ತಿವೆ‘ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT