ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS 3rd ODI| ವಿಶ್ವಕ‍‍ಪ್‌ ಸಿದ್ಧತೆ ಹಾದಿಯಲ್ಲಿ ಹಿನ್ನಡೆ

ಏಕದಿನ ಕ್ರಿಕೆಟ್‌: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಸೋಲು
Last Updated 23 ಮಾರ್ಚ್ 2023, 17:32 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ವಿಶ್ವಕಪ್‌ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದೇ ಬಿಂಬಿತವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತಕ್ಕೆ ನಿರಾಶೆ ಎದುರಾಗಿದೆ.

ಚೆನ್ನೈನಲ್ಲಿ ಬುಧವಾರ ನಡೆದಿದ್ದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ರೋಹಿತ್‌ ಶರ್ಮ ಬಳಗ 21 ರನ್‌ಗಳಿಂದ ಸೋತಿತ್ತು. ಈ ಮೂಲಕ ಸ್ಟೀವ್‌ ಸ್ಮಿತ್‌ ಬಳಗ ಸರಣಿಯನ್ನು 2–1 ರಲ್ಲಿ ಗೆದ್ದುಕೊಂಡಿದೆ. ‘ಈ ಫಲಿತಾಂಶವು ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಸಿದ್ಧತೆಗೆ ಸಂಬಂಧಿಸಿದಂತೆ ಎಚ್ಚರಿಕೆಯ ಗಂಟೆ’ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 270 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ, 248 ರನ್‌ಗಳಿಗೆ ಆಲೌಟಾಯಿತು. ಪ್ರಮುಖ ಬ್ಯಾಟರ್‌ಗಳ ವೈಫಲ್ಯ ತಂಡವನ್ನು ಮತ್ತೆ ಕಾಡಿತು.

ಟಿ20 ಸ್ಪೆಶಲಿಸ್ಟ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರ ‘ಹ್ಯಾಟ್ರಿಕ್‌ ಗೋಲ್ಡನ್‌ ಡಕ್‌’ ಚರ್ಚೆಗೆ ಕಾರಣವಾಗಿದೆ. ಮುಂಬೈನ ಬ್ಯಾಟರ್‌ ಮೂರೂ ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಎರಡು ‍ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಚೆನ್ನೈನಲ್ಲಿ ಆಸ್ಟನ್‌ ಅಗರ್‌ ಎಸೆತದಲ್ಲಿ ಬೌಲ್ಡ್‌ ಆಗಿದ್ದರು.

ಶ್ರೇಯಸ್‌ ಅಯ್ಯರ್‌ ಗಾಯಗೊಂಡದ್ದರಿಂದ, ಸೂರ್ಯಕುಮಾರ್‌ಗೆ ಅಂತಿಮ ಇಲೆವೆನ್‌ನಲ್ಲಿ ಆಡುವ ಅವಕಾಶ ದೊರೆತಿತ್ತು. ಅಯ್ಯರ್‌ ಅವರು ವಿಶ್ವಕಪ್‌ಗೆ ಲಭ್ಯರಾಗದಿದ್ದರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಅವರನ್ನೇ ನೆಚ್ಚಿಕೊಳ್ಳುವ ಅನಿವಾರ್ಯತೆ ತಂಡಕ್ಕಿದೆ.

ನಾಯಕ ರೋಹಿತ್‌ ಅವರು ಸೂರ್ಯಕುಮಾರ್‌ ಬೆಂಬಲಕ್ಕೆ ನಿಂತಿದ್ದು, ತಂಡದ ವ್ಯವಸ್ಥಾಪನ ಮಂಡಳಿಯು ಸೂರ್ಯಕುಮಾರ್‌ ವೈಫಲ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬ ಸೂಚನೆ ನೀಡಿದ್ದಾರೆ.

‘ಅವರು ಈ ಸರಣಿಯಲ್ಲಿ ಕೇವಲ ಮೂರು ಎಸೆತಗಳನ್ನು ಮಾತ್ರ ಎದುರಿಸಿದ್ದಾರೆ. ಆ ಮೂರೂ ಉತ್ತಮ ಎಸೆತಗಳಾಗಿದ್ದವು’ ಎಂದು ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ. ‘ಕೊನೆಯ ಪಂದ್ಯದಲ್ಲಿ ಮಾತ್ರ ಅವರ ಹೊಡೆತದ ಆಯ್ಕೆ ಸರಿಯಾಗಿರಲಿಲ್ಲ’ ಎಂದು ಹೇಳಿದ್ದಾರೆ.

ನಾಲ್ಕು ವರ್ಷಗಳ ಬಳಿಕ ಸೋಲು: ಭಾರತ ತಂಡವು ತವರು ನೆಲದಲ್ಲಿ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಸೋತಿರುವುದು ನಾಲ್ಕು ವರ್ಷಗಳಲ್ಲಿ ಇದೇ ಮೊದಲು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 2–3 ರಲ್ಲಿ ಸೋತಿತ್ತು. ಇದೀಗ ಅದೇ ತಂಡದ ಎದುರು ಮತ್ತೆ ಮುಗ್ಗರಿಸಿದೆ. ತವರು ನೆಲದಲ್ಲಿ ಸತತ ಏಳು ಸರಣಿ ಗೆಲುವಿನ ಓಟಕ್ಕೆ ಇದರೊಂದಿಗೆ ತೆರೆಬಿದ್ದಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 269 (ಟ್ರಾವಿಸ್‌ ಹೆಡ್‌ 33, ಮಿಚೆಲ್‌ ಮಾರ್ಷ್‌ 47, ಡೇವಿಡ್‌ ವಾರ್ನರ್‌ 23, ಮಾರ್ನಸ್‌ ಲಾಬುಷೇನ್‌ 28, ಅಲೆಕ್ಸ್‌ ಕ್ಯಾರಿ 38, ಸೀನ್‌ ಅಬಾಟ್‌ 26, ಹಾರ್ದಿಕ್‌ ಪಾಂಡ್ಯ 44ಕ್ಕೆ 3, ಕುಲದೀಪ್‌ ಯಾದವ್‌ 56ಕ್ಕೆ 3, ಮೊಹಮ್ಮದ್‌ ಸಿರಾಜ್‌ 37ಕ್ಕೆ 2)

ಭಾರತ 49.1 ಓವರ್‌ಗಳಲ್ಲಿ 248 (ರೋಹಿತ್‌ ಶರ್ಮಾ 30, ಶುಭಮನ್‌ ಗಿಲ್‌ 37, ವಿರಾಟ್‌ ಕೊಹ್ಲಿ 54, ಕೆ.ಎಲ್‌.ರಾಹುಲ್‌ 32, ಹಾರ್ದಿಕ್‌ ಪಾಂಡ್ಯ 40, ಆ್ಯಡಂ ಜಂಪಾ 45ಕ್ಕೆ 4, ಆಸ್ಟನ್‌ ಅಗರ್‌ 41ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 21 ರನ್‌ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT