ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಮ್ಯಾಂಚೆಸ್ಟರ್‌ ಟೆಸ್ಟ್‌- ದೂರವಾದ ಕೋವಿಡ್ ಆತಂಕ?

Last Updated 9 ಸೆಪ್ಟೆಂಬರ್ 2021, 23:33 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರ ನಿಗದಿಯಾಗಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ನಡೆಯುವ ಕುರಿತು ಇದ್ದ ಆತಂಕ ಬಹುತೇಕ ದೂರವಾಗಿದೆ.

ಭಾರತ ತಂಡದ ಜೂನಿಯರ್ ಫಿಸಿಯೊ ಯೋಗೇಶ್ ಪರ್ಮಾರ್ ಅವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ಮ್ಯಾಂಚೆಸ್ಟರ್ ಟೆಸ್ಟ್‌ ನಡೆಯುವುದು ಸಂದೇಹ ಎಂದು ಗುರುವಾರ ಸಂಜೆ ವದಂತಿ ಹಬ್ಬಿತ್ತು. ಆದರೆ ಆಟಗಾರರೆಲ್ಲರ ಆರ್‌ಟಿ–ಪಿಸಿಆರ್ ವರದಿ ನೆಗೆಟಿವ್ ಬಂದಿರುವ ಕಾರಣ ಪಂದ್ಯಕ್ಕೆ ಇದ್ದ ಅಡ್ಡಿ ದೂರವಾಗಿದೆ.

ಹೀಗಿದ್ದೂ ಅನುಭವಿ ಆಟಗಾರರೊಬ್ಬರಿಗೆ ಸಂಬಂಧಿಸಿ ಆಕ್ಷೇಪವಿದ್ದು ಇದು ಪಂದ್ಯಕ್ಕೆ ಅಡ್ಡಿಯಾಗುವುದೇ ಎಂಬ ಸಂದೇಹವೂ ಉಳಿದಿದೆ.

ಭಾರತ ತಂಡದ ಕೋಚ್‌ಗಳಿಗೆ ಕೋವಿಡ್ ಸೋಂಕು ತಗುಲಿರುವ ಬೆನ್ನಲ್ಲೇ ಜೂನಿಯರ್ ಫಿಸಿಯೊ ಯೋಗೇಶ್ ಪರ್ಮಾರ್ ಸೋಂಕಿಗೆ ಒಳಗಾಗಿರುವ ವಿಷಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಬಹಿರಂಗಪಡಿಸಿತ್ತು. ಹೀಗಾಗಿ ಭಾರತ ತಂಡ ಅಭ್ಯಾಸ ಕಣಕ್ಕೆ ಇಳಿಯಲಿಲ್ಲ.

ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಬೌಲಿಂಗ್‌ ಕೋಚ್ ಭರತ್ ಅರುಣ್ ಅವರಿಗೆ ಸೋಂಕು ತಗುಲಿತ್ತು. ಹೀಗಾಗಿ ಅವರು ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ತಂಡದ ಜೊತೆ ತೆರಳುವುದಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಅವರಿಬ್ಬರು ಲಂಡನ್‌ನಲ್ಲಿಯೇ ಉಳಿದುಕೊಂ ಡಿದ್ದಾರೆ. ರವಿಶಾಸ್ತ್ರಿ ಅವರ ಸಂಪರ್ಕ ದಲ್ಲಿದ್ದ ಕಾರಣ ಮುಖ್ಯ ಫಿಸಿಯೊ ನಿತಿನ್ ಪಟೇಲ್ ಅವರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ.

‘ಎಲ್ಲ 21 ಆಟಗಾರರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಇದು ಸಂತೋಷದ ಸುದ್ದಿ. ಹೀಗಾಗಿ ಪಂದ್ಯ ನಿಗದಿಯಂತೆ ನಡೆಯಲಿದೆ ಎಂದು ಆಶಿಸೋಣ’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಮ್ಯಾಂಚೆಸ್ಟರ್‌ನಲ್ಲಿ ಫಿಸಿಯೊ ಇಲ್ಲದೇ ವಿರಾಟ್ ಬಳಗ ಆಡಬೇಕಾಗಿದೆ. ಫಿಸಿಯೊ ಒಬ್ಬರನ್ನು ನಿಯೋಜಿಸುವಂತೆ ತಂಡದ ಆಡಳಿತ, ಕೋರಿದೆ. ಸದ್ಯ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮಾತ್ರ ತಂಡದ ಜೊತೆ ಇದ್ದಾರೆ.

ಪಂದ್ಯ ಡ್ರಾ ಆದರೂ ಭಾರತಕ್ಕೆ ಸರಣಿ: ಪಂದ್ಯದಲ್ಲಿ ಭಾರತ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಕಳೆದ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿರುವ ವಿರಾಟ್ ಕೊಹ್ಲಿ ಬಳಗ ಸರಣಿಯಲ್ಲಿ ಈಗಾಗಲೇ 2–1ರಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಕೊನೆಯ ಪಂದ್ಯ ಇಂಗ್ಲೆಂಡ್ ತಂಡಕ್ಕೆ ಮಹತ್ವ
ದ್ದಾಗಿದೆ.

ಓಲ್ಡ್ ಟ್ರಾಫರ್ಡ್‌ಕ್ರೀಡಾಂಗಣದಲ್ಲಿ ಪಂದ್ಯ ಗೆದ್ದರೆ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳುವ ಅವಕಾಶ ಆತಿಥೇಯರಿಗೆ ಇದೆ. ಆದ್ದರಿಂದ ಜೋ ರೂಟ್‌ ಬಳಗ ಗೆಲುವಿಗಾಗಿ ಕಾದಾಡಲಿದೆ. ಆದರೆ ಭಾರತವು ಈ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೂ ಸಾಕು ಸರಣಿ ಗೆಲುವಿನ ಸಂಭ್ರಮ ಆಚರಿಸಬಹುದು. ಗೆದ್ದರಂತೂ 3–1ರಿಂದ ಕಿರೀಟ ಧರಿಸಬಹುದು.

ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಟೂರ್ನಿಯ ಮೊದಲ ಸರಣಿ ಇದಾಗಿರುವುದರಿಂದ ಉಭಯ ತಂಡಗಳಿಗೂ ಇದು ಮಹತ್ವದ್ದೇ ಆಗಿದೆ. ಗೆದ್ದವರಿಗೆ ಅಂಕಗಳು ಸಿಗುವುದರಿಂದ ಡಬ್ಲ್ಯಟಿಸಿ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಈ ಸರಣಿಯಲ್ಲಿ ಗೆದ್ದರೆ ವಿದೇಶಿ ನೆಲದಲ್ಲಿ ಎರಡು ಸರಣಿಗಳನ್ನು ಗೆದ್ದ ಪ್ರಥಮ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗುವರು. 2018–19ರಲ್ಲಿ ವಿರಾಟ್ ನಾಯಕತ್ವದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿತ್ತು.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ).

ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT