ಇನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿ ಭಾರತ

7
ಭಾರತ–ಇಂಗ್ಲೆಂಡ್‌ ಐದನೇ ಟೆಸ್ಟ್‌ ಕ್ರಿಕೆಟ್‌ ‍ಪಂದ್ಯ: ರವೀಂದ್ರ ಜಡೇಜಗೆ ನಾಲ್ಕು ವಿಕೆಟ್‌: ಬಟ್ಲರ್‌ ಅರ್ಧಶತಕ

ಇನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿ ಭಾರತ

Published:
Updated:

ಲಂಡನ್‌: ಬ್ಯಾಟಿಂಗ್‌ ವೈಫಲ್ಯ ಕಂಡ ಭಾರತ ತಂಡ ಇಂಗ್ಲೆಂಡ್‌ ಎದುರಿನ ಐದನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆಯ ಭೀತಿ ಎದುರಿಸಿದೆ.

ಕೆನ್ನಿಂಗ್ಟನ್‌ ಓವಲ್‌ನಲ್ಲಿ 7 ವಿಕೆಟ್‌ಗೆ 198ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಇಂಗ್ಲೆಂಡ್‌, ಮೊದಲ ಇನಿಂಗ್ಸ್‌ನಲ್ಲಿ 122 ಓವರ್‌ಗಳಲ್ಲಿ 332ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಕೊಹ್ಲಿ ಪಡೆ ದಿನದಾಟದ ಅಂತ್ಯಕ್ಕೆ 51 ಓವರ್‌ಗಳಲ್ಲಿ 6 ವಿಕೆಟ್‌ಗೆ 174ರನ್‌ ಗಳಿಸಿದೆ. ಪ್ರವಾಸಿ ಪಡೆಯು ಆತಿಥೇಯರ ಲೆಕ್ಕ ಚುಕ್ತಾ ಮಾಡಲು ಇನ್ನು 158ರನ್‌ ಕಲೆಹಾಕಬೇಕು.

ನಡೆಯದ ಧವನ್‌ ಆಟ: ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭಿಕ ಸಂಕಷ್ಟ ಎದುರಿಸಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಶಿಖರ್‌ ಧವನ್‌ (3) ಔಟಾದರು. ಸ್ಟುವರ್ಟ್‌ ಬ್ರಾಡ್‌ ಎಸೆತದಲ್ಲಿ ಅವರು ಎಲ್‌ಬಿಡಬ್ಲ್ಯುಆದರು.

ನಂತರ ಕೆ.ಎಲ್‌.ರಾಹುಲ್‌ (37; 53ಎ, 4ಬೌಂ) ಮತ್ತು ಚೇತೇಶ್ವರ್‌ ಪೂಜಾರ (37; 101ಎ, 5ಬೌಂ) ಉತ್ತಮ ಆಟ ಆಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 64ರನ್‌ ಗಳಿಸಿದ್ದರಿಂದ ತಂಡದ ಮೊತ್ತ 100ರ ಗಡಿ ದಾಟಿತು. ಇವರು ಔಟಾದ ನಂತರ ಕ್ರೀಸ್‌ಗೆ ಬಂದ ಅಜಿಂಕ್ಯ ರಹಾನೆ ಸೊನ್ನೆ ಸುತ್ತಿದರು.

ನಾಯಕ ಕೊಹ್ಲಿ (49; 70ಎ, 6ಬೌಂ) ಮತ್ತೊಮ್ಮೆ ಛಲದಿಂದ ಹೋರಾಡಿದರು. ಆದರೆ ಅರ್ಧಶತಕದ ಅಂಚಿನಲ್ಲಿ ಎಡವಿದರು. ಬಳಿಕ ಹನುಮ ವಿಹಾರಿ (ಬ್ಯಾಟಿಂಗ್‌ 25; 50ಎ, 3ಬೌಂ, 1ಸಿ) ತಂಡದ ಮೊತ್ತ ಹೆಚ್ಚಿಸಿದರು.

ಬಟ್ಲರ್‌ ಮಿಂಚು: ಶನಿವಾರ ಆಟ ಮುಂದುವರಿಸಿದ ಇಂಗ್ಲೆಂಡ್‌ ತಂಡಕ್ಕೆ ದಿನದ ಎಂಟನೇ ಓವರ್‌ನಲ್ಲಿ (ಇನಿಂಗ್ಸ್‌ನ 98ನೇ ಓವರ್‌) ಜಸ್‌ಪ್ರೀತ್ ಬೂಮ್ರಾ ಆಘಾತ ನೀಡಿದರು. ಮೊದಲ ಎಸೆತದಲ್ಲಿ ಬೂಮ್ರಾ, ಆದಿಲ್‌ ರಶೀದ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಶುಕ್ರವಾರ ನಾಲ್ಕು ರನ್‌ ಗಳಿಸಿದ್ದ ರಶೀದ್‌ ಈ ಮೊತ್ತಕ್ಕೆ 11ರನ್‌ ಸೇರಿಸಿದರು. 51 ಎಸೆತಗಳನ್ನು ಎದುರಿಸಿದ ಅವರು ಮೂರು ಬೌಂಡರಿಗಳನ್ನು ಸಿಡಿಸಿದರು.

ಬಟ್ಲರ್‌–ಬ್ರಾಡ್‌ ಜೊತೆಯಾಟದ ಸೊಬಗು: ರಶೀದ್‌ ಔಟಾದ ನಂತರ ಜೋಸ್‌ ಬಟ್ಲರ್‌ (89; 133ಎ, 6ಬೌಂ, 2ಸಿ) ಮತ್ತು ಸ್ಟುವರ್ಟ್‌ ಬ್ರಾಡ್‌ ಭಾರತದ ಬೌಲರ್‌ಗಳನ್ನು ಕಾಡಿದರು.

ಈ ಜೋಡಿ ಒಂಬತ್ತನೇ ವಿಕೆಟ್‌ಗೆ 98ರನ್‌ ಗಳಿಸಿ ತಂಡದ ಮೊತ್ತ 300ರ ಗಡಿ ದಾಟುವಂತೆ ಮಾಡಿತು. ಮೊಹಮ್ಮದ್‌ ಶಮಿ ಹಾಕಿದ 109ನೇ ಓವರ್‌ನ ಮೂರನೇ ಎಸೆತದಲ್ಲಿ ಎರಡು ರನ್‌ ಗಳಿಸಿದ ಬಟ್ಲರ್‌ ಟೆಸ್ಟ್‌ನಲ್ಲಿ 10ನೇ ಅರ್ಧಶತಕ ಪೂರೈಸಿದರು. ನಂತರವೂ ಅವರು ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಅವರಿಗೆ ಬ್ರಾಡ್‌ ಸೂಕ್ತ ಬೆಂಬಲ ನೀಡಿದರು.

59 ಎಸೆತಗಳನ್ನು ಎದುರಿಸಿದ ಅವರು 3 ಬೌಂಡರಿ ಸಹಿತ 38ರನ್‌ ಗಳಿಸಿದ್ದ ವೇಳೆ ರವೀಂದ್ರ ಜಡೇಜಗೆ ವಿಕೆಟ್‌ ನೀಡಿದರು. 122ನೇ ಓವರ್‌ನ ಕೊನೆಯ ಎಸೆತದಲ್ಲಿ ಬಟ್ಲರ್‌ ವಿಕೆಟ್‌ ಕೆಡವಿದ ಜಡೇಜ ಆತಿಥೇಯರ ಇನಿಂಗ್ಸ್‌ಗೆ ತೆರೆ ಎಳೆದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !