ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನಂಚಿನಲ್ಲಿ ಎಡವಿದ ಭಾರತ

ಟ್ವೆಂಟಿ–20 ಕ್ರಿಕೆಟ್: ಆಸ್ಟ್ರೇಲಿಯಾಗೆ ನಾಲ್ಕು ರನ್‌ಗಳ ರೋಚಕ ಜಯ; ಶಿಖರ್ ಅರ್ಧಶತಕ ವ್ಯರ್ಥ
Last Updated 21 ನವೆಂಬರ್ 2018, 18:49 IST
ಅಕ್ಷರ ಗಾತ್ರ

ಬ್ರಿಸ್ಟೇನ್ : ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮಗೆ ಲಭಿಸಿದ ಎರಡು ಜೀವದಾನಗಳ ಲಾಭ ಪಡೆದು ಮಿಂಚಿನ ಬ್ಯಾಟಿಂಗ್ ಮಾಡಿದರು. ಆದರೆ ಅವರ ಅರ್ಧಶತಕದ ಬಲವನ್ನು ಭಾರತ ತಂಡವು ಗೆಲುವಿಗೆ ಬಳಸಿಕೊಳ್ಳಲಿಲ್ಲ.

ಬುಧವಾರ ಗಾಬಾ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಎದುರು ನಡೆದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ನಡೆದ ರೋಚಕ ಹೋರಾಟದಲ್ಲಿ ಭಾರತ ತಂಡವು ನಾಲ್ಕು ರನ್‌ಗಳಿಂದ ಸೋತಿತು. ಇದರಿಂದಾಗಿ ಆತಿಥೇಯ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ವಿರಾಟ್ ಕೊಹ್ಲಿ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಳೆ ಕಾಡಿದ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 17 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 158 ರನ್‌ ಗಳಿಸಿತು. ಮಳೆಯಿಂದಾಗಿ 45 ನಿಮಿಷಗಳ ಆಟ ನಡೆಯಲಿಲ್ಲ. ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಭಾರತಕ್ಕೆ 17 ಓವರ್‌ಗಳಲ್ಲಿ 174 ರನ್‌ಗಳ ಗೆಲುವಿನ ಗುರಿ ನಿಗದಿಪಡಿಸಲಾಯಿತು.

ಈ ಗುರಿ ಬೆನ್ನತ್ತಿದ ಭಾರತ ತಂಡವು ಬಿರುಸಿನ ಆರಂಭ ಮಾಡಿತು. ಶಿಖರ್ ಧವನ್ ಬೀಸಾಟ ಆರಂಭಿಸಿದರು. ಈಚೆಗೆ ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ರನ್‌ ಹೊಳೆ ಹರಿಸಿದ್ದ ರೋಹಿತ್ ಶರ್ಮಾ ಇಲ್ಲಿ ಮಿಂಚಲಿಲ್ಲ. ಐದನೇ ಓವರ್‌ನಲ್ಲಿ ಔಟಾದರು. ಕೆ.ಎಲ್. ರಾಹುಲ್, ನಾಯಕ ವಿರಾಟ್ ಕೊಹ್ಲಿ ಅವರ ಆಟವೂ ನಡೆಯಲಿಲ್ಲ. ತಂಡದ ಮೊತ್ತವು 105 ರನ್‌ಗಳಾಗಿದ್ದಾಗ ಶಿಖರ್(76; 42ಎಸೆತ, 10ಬೌಂಡರಿ, 2ಸಿಕ್ಸರ್) ಕೂಡ ನಿರ್ಗಮಿಸಿದರು. ಅದರ ನಂತರವೇ ಭಾರತದ ಜಯದ ಆಸೆ ಚಿಗುರಿತು!

ರಿಷಭ್–ಕಾರ್ತಿಕ್ ಮಿಂಚು

ಆಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದಾಗ ಇಬ್ಬರು ‘ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್‌’ಗಳಾದ ರಿಷಭ್ ಪಂತ್ (20; 15ಎಸೆತ, 1ಬೌಂಡರಿ, 1ಸಿಕ್ಸರ್) ಮತ್ತು ದಿನೇಶ್ ಕಾರ್ತಿಕ್ (30; 13ಎಸೆತ, 4ಬೌಂಡರಿ, 1 ಸಿಕ್ಸರ್) ತಂಡವನ್ನು ಜಯದ ಸನಿಹ ತಂದು ನಿಲ್ಲಿಸಿದ್ದರು.

ಐದನೇ ವಿಕೆಟ್‌ ಜೊತೆಯಾಟದಲ್ಲಿ ಇಬ್ಬರೂ ಕೇವಲ 24 ಎಸೆತಗಳಲ್ಲಿ 51 ರನ್‌ಗಳನ್ನು ಗಳಿಸಿದರು. ಗೆಲುವಿಗೆ 18 ರನ್‌ಗಳ ಅಗತ್ಯವಿದ್ದಾಗ ರಿಷಭ್ ಔಟಾದರು. ಕೃಣಾಲ್ ಪಾಂಡ್ಯ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸುವ ದಿನೇಶ್ ಯೋಜನೆ ಕೈಗೂಡಲಿಲ್ಲ. ವೈಡ್, ನೋಬಾಲ್‌ಗಳನ್ನು ಹಾಕಿದ ಆಸ್ಟ್ರೇಲಿಯಾ ಬೌಲರ್‌ಗಳು ವಿಕೆಟ್‌ ಕಬಳಿಸುವಲ್ಲಿ ಹಿಂದೆ ಬೀಳಲಿಲ್ಲ. ಪಾಂಡ್ಯ 17ನೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯಿನಿಸ್‌ ಓವರ್‌ನಲ್ಲಿ ಔಟಾದರು. ನಂತರದ ಎಸೆತದಲ್ಲಿ ದಿನೇಶ್ ಕೂಡ ನಿರ್ಗಮಿಸಿದರು. ಇದರೊಂದಿಗೆ ಆಸೆ ಕಮರಿತು.

ಲಿನ್ –ಮ್ಯಾಕ್ಸ್‌ವೆಲ್ ಮಿಂಚು: ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಆರಂಭದಲ್ಲಿ ಯಶಸ್ಸು ಕಂಡಿತ್ತು.ಐದನೇ ಓವರ್‌ನಲ್ಲಿಯೇ ಖಲೀಲ್ ಅಹಮದ್ ಮೊದಲ ವಿಕೆಟ್ ಕಬಳಿಸಿದರು. ಹತ್ತು ಓವರ್‌ಗಳಾಗುವಷ್ಟರಲ್ಲಿ ಆತಿಥೇಯ ತಂಡವು ಮೂರು ವಿಕೆಟ್‌ಗಳನ್ನು ಕಳೆದುಕೊಂಡು 75 ರನ್‌ ಗಳಿಸಿತ್ತು. ಈ ಹಂತದಲ್ಲಿ ಜೊತೆಗೂಡಿದ ಕ್ರಿಸ್ ಲಿನ್ (37; 20ಎಸೆತ, 1ಬೌಂಡರಿ, 4ಸಿಕ್ಸರ್) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (46;24ಎಸೆತ, 4ಸಿಕ್ಸರ್) ಅವರು 37 ಎಸೆತಗಳಲ್ಲಿ 78 ರನ್‌ಗಳನ್ನು ಸೂರೆ ಮಾಡಿದರು. ಮ್ಯಾಕ್ಸ್‌ವೆಲ್ ಔಟಾದ ನಂತರ ಮಾರ್ಕಸ್ 19 ಎಸೆತಗಳಲ್ಲಿ33 ರನ್‌ಗಳನ್ನು ಗಳಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು ಸವಾಲಿನ ಮೊತ್ತ ಪೇರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT