ಉದ್ಯಾನನಗರಿಯಲ್ಲಿ ಕ್ರಿಕೆಟ್‌ ಸುಗ್ಗಿಯ ಹಿಗ್ಗು

7
’ಟೆಸ್ಟ್’ ಕ್ರಿಕೆಟ್: ಭಾರತ ‘ಎ’ – ದಕ್ಷಿಣ ಆಫ್ರಿಕಾ ‘ಎ’ ನಡುವಣ ಪಂದ್ಯ ಇಂದಿನಿಂದ

ಉದ್ಯಾನನಗರಿಯಲ್ಲಿ ಕ್ರಿಕೆಟ್‌ ಸುಗ್ಗಿಯ ಹಿಗ್ಗು

Published:
Updated:
Deccan Herald

ಬೆಂಗಳೂರು: ಆಗಾಗ ಒಂದಿಷ್ಟು ಮಳೆ, ಅಲ್ಪಸ್ವಲ್ಪ  ಎಳೆಬಿಸಿಲು ಮತ್ತು ತಂಪು ಗಾಳಿಯ ಅಹ್ಲಾದ ಮೈಸೋಕುವ ‘ಉದ್ಯಾನನಗರಿ’ಯಲ್ಲಿ ಈಗ ಕ್ರಿಕೆಟ್ ಸುಗ್ಗಿಯ ಹಿಗ್ಗು ಗರಿಗೆದರಿದೆ.

ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯಗಳು, ಮುಂದಿನ ವಾರ ಆರಂಭವಾಗುವ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟೂರ್ನಿಯ ಪೂರ್ವಭಾವಿ ಸಿದ್ಧತೆಯ ರಂಗು, ಶಾಲಾ ಟೂರ್ನಿಗಳ ಕಲರವ ನಗರದ ಬೇರೆ ಬೇರೆ ಮೈದಾನಗಳಲ್ಲಿದೆ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಭಾರತ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಣ ‘ಟೆಸ್ಟ್’ ಪಂದ್ಯ ಶನಿವಾರ ಆರಂಭವಾಗಲಿದೆ. ಈ ಮೊದಲಿನ ವೇಳಾಪಟ್ಟಿಯ ಪ್ರಕಾರ ಈ ಪಂದ್ಯವು ‌ಬೆಳಗಾವಿಯಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿ ಮಳೆ ಸುರಿಯುತ್ತಿರುವುದರಿಂದಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಇನ್ನೊಂದು ಪಂದ್ಯವು  ಆ.10ರಿಂದ ಆಲೂರು ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.

ಇದರಿಂದಾಗಿ ಅಂತರರಾಷ್ಟ್ರೀಯ ಆಟಗಾರರಾದ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ, ವಿದರ್ಭದ ಮಧ್ಯಮವೇಗಿ ರಜನೀಶ್ ಗುರ್ಬಾನಿ, ಕರ್ನಾಟಕದ ’ರನ್ ಮಷೀನ್’ ಮಯಂಕ್ ಅಗರವಾಲ್, ಆರ್. ಸಮರ್ಥ್ ಅವರ ಆಟ ರಂಗೇರುವ ನಿರೀಕ್ಷೆ ಇದೆ. ‘ಗೋಡೆ’ ಖ್ಯಾತಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಈ ತಂಡವು ಸಿದ್ಧಗೊಂಡಿದೆ.

ಈಚೆಗೆ ಮಂಡಳಿ ಅಧ್ಯಕ್ಷರ ಇಲೆವನ್ ತಂಡದ ಎದುರು ಉತ್ತಮವಾಗಿ ಆಡಿದ್ದ ದಕ್ಷಿಣ ಆಫ್ರಿಕಾದ ಎ ತಂಡವು ಈ ಪಂದ್ಯದಲ್ಲಿಯೂ ಉತ್ತಮವಾಗಿ ಆಡುವ ಭರವಸೆಯಲ್ಲಿದೆ. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜುಬೇರ್ ಹಮ್ಜಾ, ಸೆರೆಲ್ ಇರ್ವಿ ಅವರು ಉತ್ತಮ ಲಯದಲ್ಲಿದ್ದಾರೆ. ಇಲ್ಲಿಗೆ ಬರುವ ಮುನ್ನ ಎರಡು ತಿಂಗಳುಗಳ ಕಾಲ ಸ್ಪಿನ್ ಬೌಲರ್‌ಗಳನ್ನು ಎದುರಿಸುವ ತಂತ್ರಗಳನ್ನು ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಆದರೆ ಚಾಹಲ್ ಮತ್ತು ಅಕ್ಷರ್ ಅವರ ಎಸೆತಗಳನ್ನು ಎದುರಿಸುವ ಕಠಿಣ ಸವಾಲು ಅವರ ಮುಂದಿದೆ.

ನಾಲ್ಕು ದಿನಗಳ ಪಂದ್ಯದ ಫಲಿತಾಂಶದ ಮೇಲೆ ಮಳೆರಾಯನೂ ಪ್ರಭಾವ ಬೀರುವ ಸಾಧ್ಯತೆಯೂ ಹೆಚ್ಚಿದೆ.

ತಂಡಗಳು ಇಂತಿವೆ
ಭಾರತ ‘ಎ’: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಆರ್. ಸಮರ್ಥ್, ಮಯಂಕ್ ಅಗರವಾಲ್, ಅಭಿಮನ್ಯು ಈಶ್ವರನ್, ಶ್ರೀಕರ ಭಾರತ (ವಿಕೆಟ್‌ಕೀಪರ್), ಹನುಮವಿಹಾರಿ, ಅಂಕಿತ್ ಭಾವ್ನೆ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಜಯಂತ್ ಯಾದವ್, ರಜನೀಶ್ ಗುರ್ಬಾನಿ, ನವದೀಪ್ ಸೈನಿ, ಅಂಕಿತ್ ರಜಪೂತ್, ಮೊಹಮ್ಮದ್ ಸಿರಾಜ್.  ಮುಖ್ಯ ಕೋಚ್: ರಾಹುಲ್ ದ್ರಾವಿಡ್. ಸಹಾಯಕ ಕೋಚ್: ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ,

ದಕ್ಷಿಣ ಆಫ್ರಿಕಾ ‘ಎ’: ಖಯಾಯ ಜೊಂಡೊ (ನಾಯಕ), ಜುಬೇರ್ ಹಮ್ಜಾ, ಸೆರೆಲ್ ಎರ್ವಿ, ಪೀಟರ್ ಮೆಲಾನ್, ಸೆನುರನ್ ಮುತುಸಾಮಿ, ರೆಸ್ಸೀ ವ್ಯಾನ್ ಡೆರ್ ದಸ್ಸೆನ್, ರೂಡಿ ಸೆಕಂಡ್ (ವಿಕೆಟ್‌ಕೀಪರ್), ಎಮ್‌ತಿವೆಕಾವಾ ನೆಬೆ, ಡುನ್ ಒಲಿವಿಯರ್, ಡ್ವೈನ್ ಪ್ರಿಟೋರಿಯಸ್, ಮೆಲೂಸಿ ಸಿಬೊಟೊ, ಶಾನ್ ವಾನ್ ಬರ್ಗ್, ಬೇರನ್ ಹೆನ್ರಿಕ್ಸ್, ಅನ್ರಿಚ್ ನಾರ್ಟೀ, ಡೇನ್ ಪಿಯೆಡ್ತ್. ಕೋಚ್: ರಸೆಲ್ ಡೊಮಿಂಗೊ, ಮ್ಯಾನೇಜರ್: ಜೆರೇಮಿ ಫ್ರೆಡರಿಕ್ಸ್,

ಪಂದ್ಯ ರೆಫರಿ: ಸುನಿಲ್ ಚತುರ್ವೆದಿ,  ಅಂಪೈರ್: ಅನಿಲ್ ದಾಂಡೇಕರ್, ಉಲ್ಲಾಸ್ ಗಂಧೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !