ಕೊಹ್ಲಿ–ಕೇನ್ ಮುಖಾಮುಖಿ

7
ಭಾರತ–ನ್ಯೂಜಿಲೆಂಡ್ ನಡುವಣ ಏಕದಿನ ಕ್ರಿಕೆಟ್ ಇಂದು

ಕೊಹ್ಲಿ–ಕೇನ್ ಮುಖಾಮುಖಿ

Published:
Updated:
Prajavani

ನೇಪಿಯರ್: ಆಸ್ಟ್ರೇಲಿಯಾ ತಂಡವನ್ನು ಅದರ ತವರಿನಲ್ಲಿಯೇ ಟೆಸ್ಟ್‌ ಮತ್ತುಏಕದಿನ ಸರಣಿಗಳಲ್ಲಿ ಮಣಿಸಿರುವ ಭಾರತ ತಂಡ ಈಗ ಆತ್ಮವಿಶ್ವಾಸದ ಶಿಖರದಲ್ಲಿ ಮೆರೆಯುತ್ತಿದೆ. ಗೆಲುವಿನ ಓಟವನ್ನು ಮುಂದುವರಿಸುವ ಛಲದಲ್ಲಿ ನ್ಯೂಜಿಲೆಂಡ್‌ಗೆ ಬಂದಿಳಿದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಬುಧವಾರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‌ ಪಡೆಯನ್ನು ಎದುರಿಸಲಿದೆ. ಇದೇ ವರ್ಷದ ಮೇ ತಿಂಗಳಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಂಡವನ್ನು ಸಜ್ಜುಗೊಳಿಸುತ್ತಿರುವ ಭಾರತಕ್ಕೆ ಐದು ಪಂದ್ಯಗಳ ಈ ಸರಣಿ ಮಹತ್ವದ್ದಾಗಿದೆ. ಈ ಸರಣಿಯ ನಂತರ ಭಾರತಕ್ಕೆ ಮರಳಲಿರುವ ತಂಡವು ಆಸ್ಟ್ರೇಲಿಯಾ ಎದುರು ಏಕದಿನ ಮತ್ತು ಟ್ವೆಂಟಿ –20 ಸರಣಿ ಆಡುವುದು. ನಂತರ ಐಪಿಎಲ್ ಮುಗಿಸಿ ವಿಶ್ವಕಪ್‌ಗೆ ತೆರಳಲಿದೆ.

ಈಚೆಗೆ ಆಸ್ಟ್ರೇಲಿಯಾದಲ್ಲಿ 2–1ರಿಂದ ಸರಣಿ ಗೆದ್ದ ಭಾರತ ತಂಡದ ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಶಕತಗಳನ್ನು ಸಿಡಿಸಿದ್ದರು. ‘ವಿಂಟೇಜ್ ಬ್ಯಾಟ್ಸ್‌ಮನ್’ ಮಹೇಂದ್ರಸಿಂಗ್ ಧೋನಿ ಮೂರು ಪಂದ್ಯಗಳಲ್ಲಿಯೂ ಅರ್ಧಶತಕಗಳನ್ನು ಸಿಡಿಸಿ ‘ಸರಣಿ ಶ್ರೇಷ್ಠ’ ಗೌರವಕ್ಕೆ ಪಾತ್ರರಾಗಿದ್ದರು.  ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಕೂಡ ಮಿಂಚಿದ್ದರು. ಶಿಖರ್ ಧವನ್ ಮಾತ್ರ ಲಯಕ್ಕೆ ಮರಳುವ ಅಗತ್ಯವಿದೆ. ಕೆ.ಎಲ್. ರಾಹುಲ್ ಬದಲಿಗೆ ಸ್ಥಾನ ಪಡೆದಿರುವ ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಪದಾರ್ಪಣೆಯ ಅವಕಾಶ ಸಿಗುವ ಸಾಧ್ಯತೆ ಇದೆ.

ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಉತ್ತಮವಾಗಿ ಆಡುತ್ತಿದ್ದಾರೆ. ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಮೂರನೇ ವೇಗದ ಬೌಲರ್ ಆಗತ್ಯ ಬಿದ್ದರೆ ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಅಥವಾ ಮೊಹಮ್ಮದ್ ಸಿರಾಜ್ ಅವರಲ್ಲಿ ಒಬ್ಬರು ಸ್ಥಾನ ಪಡೆಯಲಿದ್ದಾರೆ. ಸ್ಪಿನ್‌–ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್  ತಮ್ಮ ಖಾತೆಯಲ್ಲಿ ವಿಕೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಉತ್ಸುಕರಾಗಿದ್ದಾರೆ.

ಆತಿಥೇಯ ‘ಬ್ಲ್ಯಾಕ್‌ ಕ್ಯಾಪ್ಸ್‌’ ಬಳಗವು ತನ್ನ ನಾಯಕ ಕೇನ್‌ ವಿಲಿಯಮ್ಸನ್, ರಾಸ್ ಟೇಲರ್ ಮತ್ತು ಟಾಮ್ ಲಥಾಮ್ ಅವರ ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಾರ್ಟಿನ್ ಗಪ್ಟಿಲ್ ಗರ್ಜಿಸಿದರೆ ತಂಡಕ್ಕೆ ತಲೆ ಎತ್ತಿ ನಿಲ್ಲುವ ಅವಕಾಶ ಹೆಚ್ಚಲಿದೆ. ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್‌,  ಕಾಲಿನ್ ಮನ್ರೊ, ಈಶ ಸೋಧಿ ಮತ್ತು ಮಿಚೆಲ್ ಸ್ಯಾಂಟನರ್ ಅವರು ಭಾರತದ ಬ್ಯಾಟಿಂಗ್‌ಗೆ ಸವಾಲೊಡ್ಡಬಲ್ಲರು.

2018ರ ಸಾಲಿನಲ್ಲಿ ಐಸಿಸಿ ನೀಡಿದ ಶ್ರೇಷ್ಠ ಪ್ರಶಸ್ತಿಗಳೆಲ್ಲವನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡು ಬೀಗುತ್ತಿರುವ ವಿರಾಟ್ ತಮ್ಮ ಛಾಪನ್ನು ಕಿವೀಸ್ ನೆಲದಲ್ಲಿಯೂ ಮುಂದುವರಿಸುವ ಕಾತರದಲ್ಲಿದ್ಧಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಶುಭಮನ್ ಗಿಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹಮದ್, ರವೀಂದ್ರ ಜಡೇಜ,

ನ್ಯೂಜಿಲೆಂಡ್ : ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಥಾಮ್, ಮಾರ್ಟಿನ್ ಗಪ್ಟಿಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟ್ರೆಂಟ್ ಬೌಲ್ಟ್, ಹೆನ್ರಿ ನಿಕೊಲ್ಸ್, ಡಫ್ ಬ್ರೇಸ್‌ವೆಲ್, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಕಾಲಿನ್ ಮನ್ರೊ, ಈಶ್  ಸೋಧಿ, ಮಿಚೆಲ್ ಸ್ಯಾಂಟನರ್, ಟಿಮ್ ಸೌಧಿ.

ಪಂದ್ಯ ಆರಂಭ:  ಬೆಳಿಗ್ಗೆ 7.30.

ನೇರಪ್ರಸಾರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !